ಒತ್ತಡರಹಿತ ಶಾಂತ ಮನಸ್ಸು ಪಡೆಯಬೇಕೆ? 5-7-5 ನಿಯಮ ಪಾಲಿಸಿ!

Synopsis
ಒತ್ತಡ ನಿಮ್ಮ ಬದುಕನ್ನು ತಿನ್ನುತ್ತಿರಬಹುದು. ಆದರೆ 5-7-5 ಎಂಬ ಗೋಲ್ಡನ್ ರೂಲ್ ಒಂದಿದೆ. ದಿನದ ಕೇವಲ 20 ನಿಮಿಷಗಳನ್ನು ಈ ಸೂತ್ರದ ಆಚರಣೆಯ ದಿನಚರಿಗೆ ಮೀಸಲಿಟ್ಟರೆ, ನಿಮ್ಮ ನೆಮ್ಮದಿ, ಶಾಂತಿ ಆಧ್ಯಾತ್ಮಿಕತೆ ಸುಧಾರಿಸುವುದನ್ನು ನೀವೇ ನೋಡುತ್ತೀರಿ.
ʼಆಧ್ಯಾತ್ಮಿಕತೆʼ ಎಂಬ ಪದ ಕೇಳಿದರೆ ಇದು ಯಾವುದೋ ನಮಗಲ್ಲದ ಗಂಭೀರ ವಿಷಯ ಎಂದುಕೊಂಡು ತುಂಬಾ ಮಂದಿ ಆಚೆ ಹೋಗಿಬಿಡುತ್ತಾರೆ. ಆದರೆ ಸರಳವಾಗಿ ಹೇಳೋದಾದರೆ ಆಧ್ಯಾತ್ಮಿಕತೆ ಅಂದರೆ ಶಾಂತಿ- ನೆಮ್ಮದಿಯಿಂದ ಇರೋದು. ಆಧ್ಯಾತ್ಮಿಕತೆ ಅಂದರೆ ಜೀವನದಲ್ಲಿ ಸರಳವಾದ ಆನಂದವಾದ ದಿನಚರಿ ಇರಬಹುದು; ಧ್ಯಾನ ಮತ್ತು ಸಾಧನೆಯಂತಹ ಆಳವಾದ ವಿಷಯ ಇರಬಹುದು; ಅಥವಾ ನಿಮ್ಮ ಜೀವನದಲ್ಲಿ ನೀವು ಎಷ್ಟು ದೂರ ಹೇಗೆ ಬಂದಿದ್ದೀರಿ ಎಂದು ಯೋಚಿಸುವುದಿರಬಹುದು. ಎಲ್ಲದರ ಅಂತಿಮ ಫಲಿತಾಂಶ ಅಂದರೆ ನೀವು ನಿಮ್ಮನ್ನು ಶಾಂತಗೊಳಿಸಿಕೊಳ್ಳಬೇಕು- ನೆಮ್ಮದಿ ಕಾಣಬೇಕು. ಇಂದಿನ ಬ್ಯುಸಿ ಬದುಕಿನಲ್ಲಿ ಇದೇ ಇಲ್ಲ. ಹಾಗಾದರೆ, ಧ್ಯಾನ- ಜಪ- ತಪ ಮುಂತಾದ ಭಾರಿ ಭಾರಿ ಶಬ್ದಗಳ ಭಾರವಿಲ್ಲದೆ, ಸರಳವಾಗಿ ಆಧ್ಯಾತ್ಮಿಕ ನೆಮ್ಮದಿ ಅನುಭವಿಸಲು, ಶಾಂತರಾಗಿರಲು ಸಾಧ್ಯವಿಲ್ಲವೆ? ಇದೆ. ಅದಕ್ಕೆ ನೀವು 5-7-5 ನಿಯಮವನ್ನು ಪಾಲಿಸಬೇಕು.
ಇದು ಹೇಗೆ? ಇದಕ್ಕೆ ನಿಮ್ಮ ದಿನಚರಿಯ ನಡುವೆ ಸುಮಾರು 20 ನಿಮಿಷಗಳು ಮಾತ್ರ ಬೇಕಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ, ಎಲ್ಲದಕ್ಕಿಂತ ಮೊದಲು ಇದನ್ನು ಮಾಡಬೇಕು ಮತ್ತು ಪ್ರತಿದಿನ ಇದನ್ನು ಮಾಡಬೇಕು. ನಿಮ್ಮ ದಿನದ ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುವ ಈ ದಿನಚರಿ, ದಿನದಲ್ಲಿ ನಿಮಗೆ ಉಳಿದಿರುವ ಸಂಪೂರ್ಣ 24 ಗಂಟೆಗಳ ಕಾಲ ನಿಮ್ಮ ಮಾನಸಿಕ ಸ್ಥಿತಿಯನ್ನು ಬದಲಾಯಿಸುತ್ತದೆ. ಇದು ಹೇಗೆ ಅಂತ ನೋಡೋಣ.
ಮೊದಲ 5 ನಿಮಿಷಗಳು
ದಿನದ ಮೊದಲ 5 ನಿಮಿಷಗಳು ನಿಮಗೆ ನೀವು ಕೊಟ್ಟುಕೊಳ್ಳುವ ಪಾಸಿಟಿವ್ ಎನರ್ಜಿಗೆ ಮೀಸಲು. ಸುಮ್ಮನೆ ಕಣ್ಣು ಮುಚ್ಚಿ ಕುಳಿತುಕೊಂಡು, ನೀವು ನಿಮಗಾಗಿ ಕೆಲವು ಸಕಾರಾತ್ಮಕ, ಶಕ್ತಿಯುತ ವಾಕ್ಯಗಳನ್ನು ಹೇಳಿಕೊಳ್ಳಿ. ನಾನು ಇಂದು ಈ ಕೆಲಸ ಮುಗಿಸುತ್ತೇನೆ, ನಾನು ಚೆನ್ನಾಗಿ ಭಾಷಣ ಮಾಡುತ್ತೇನೆ, ನಾನು ಆ ಕೆಲಸದಲ್ಲಿ ಪರಿಣಿತ- ಇಂಥ ಮಾತುಗಳು. ಇದು ನಿಮ್ಮ ಮೆದುಳನ್ನು ನಿಮ್ಮ ಪರವಾಗಿಯೇ ಕೆಲಸ ಮಾಡುವಂತೆ ನಿರ್ದೇಶಿಸುತ್ತವೆ. ಈ ವಾಕ್ಯಗಳು ನಿಮ್ಮ ಪ್ರಜ್ಞೆಯ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ನಾವು ನಮ್ಮ ಬಗ್ಗೆ ಪಾಸಿಟಿವ್ ಆಗಿ ಮಾತನಾಡುವಾಗ ನಾವು ಅದೇ ರೀತಿ ಯೋಚಿಸುತ್ತೇವೆ. ಅದರಿಂದ ನಮ್ಮ ಮನಸ್ಥಿತಿ ಸಮೃದ್ಧಿಯತ್ತ, ಗೆಲುವಿನತ್ತ ತಿರುಗುತ್ತದೆ.
7 ನಿಮಿಷಗಳ ಧ್ಯಾನ
ಮೊದಲ 5 ನಿಮಿಷಗಳ ನಂತರ, ಮುಂದಿನ 7 ನಿಮಿಷಗಳು ಧ್ಯಾನಕ್ಕೆ ಮೀಸಲಾಗಿರಬೇಕು. ಕೇವಲ 7 ನಿಮಿಷಗಳಲ್ಲಿ, ನೀವು ನಿಮ್ಮ ಮನಸ್ಸನ್ನು ನಿಧಾನಗೊಳಿಸಿ ಮತ್ತು ವಿಶ್ರಾಂತಿ ಪಡೆಯಿರಿ. ನಿಮ್ಮ ಆಲೋಚನೆಗಳು ಬರಲು ಮತ್ತು ಹೋಗಲು ಬಿಡಿ. ಅವುಗಳನ್ನು ನಿಯಂತ್ರಿಸದೆ, ಸಮಯದ ಕ್ಷಣಗಳಂತೆ ನೋಡುತ್ತಿರಿ. ಈ 7 ನಿಮಿಷಗಳಲ್ಲಿ, ನಿಮ್ಮ ಮನಸ್ಸು ಇಲ್ಲಿ ಅಲ್ಲಿ ಅಲೆದಾಡುತ್ತಿದ್ದರೆ ಪರವಾಗಿಲ್ಲ. ನೀವು ಮಾಡಬೇಕಾಗಿರುವುದು ಅದನ್ನು ನಿಧಾನವಾಗಿ ಹಿಂದಕ್ಕೆ ತಂದು ನಿಮ್ಮೊಳಗಿನ ಯಾವುದನ್ನಾದರೂ ಕೇಂದ್ರೀಕರಿಸುವುದು. ಸುತ್ತಲಿನ ಕಂಪನಗಳು, ನಿಮ್ಮ ಉಸಿರಾಟದ ಶಬ್ದ, ಕತ್ತಲೆಯ ನಡುವಿನ ಕೇಂದ್ರ ಹೀಗೆ ಏನಾದರೂ.
5 ನಿಮಿಷಗಳ ಚಲನೆ
7 ನಿಮಿಷಗಳ ಧ್ಯಾನದ ನಂತರ, 5 ನಿಮಿಷಗಳ (ಅಥವಾ ಹೆಚ್ಚಿರಲೂಬಹುದು) ಚಟುವಟಿಕೆ ಮಾಡಬೇಕು. ಇದು ಯೋಗ, ಉಸಿರಾಟದ ವ್ಯಾಯಾಮ, ದೇಹ ಹಿಗ್ಗಿಸುವಿಕೆ ಅಥವಾ 5 ನಿಮಿಷಗಳಲ್ಲಿ ನೀವು ಮಾಡಬಹುದಾದಷ್ಟು ಸೂರ್ಯ ನಮಸ್ಕಾರ ಆಗಿರಬಹುದು. ಈ 5 ನಿಮಿಷಗಳ ಗುರಿ ಬೆವರು ಬರುವಂತೆ ವ್ಯಾಯಾಮ ಮಾಡುವುದಲ್ಲ. ಅದು ಕೇವಲ ಚಲಿಸುವುದು ಮತ್ತು ಧ್ಯಾನದ ಸಮಯದಲ್ಲಿ ಅದು ಇದ್ದ ವಿಶ್ರಾಂತಿ ಸ್ಥಿತಿಯಿಂದ ನಿಮ್ಮ ದೇಹ ಮತ್ತು ಮನಸ್ಸನ್ನು ಮತ್ತೆ ಕಾರ್ಯರೂಪಕ್ಕೆ ತರುವುದು.
ಮೆದುಳು ಶಾರ್ಪ್ ಆಗಿರ್ಬೇಕು ಅಂದ್ರೆ ಪ್ರತಿದಿನ ಈ ಕೆಲಸಗಳನ್ನು ಮಾಡಿ
5-7-5 ನಿಯಮದಿಂದ ಏನಾಗುತ್ತದೆ?
5-7-5 ನಿಯಮ ಇರುವುದು ಕೇವಲ ನಿಮಗಾಗಿ. ನಿಮ್ಮ ದೇಹ ಮತ್ತು ಮನಸ್ಸಿಗೆ ದಿನದ 17 ನಿಮಿಷಗಳ ಸಮಯವನ್ನು ಮೀಸಲಿಡುವುದು. ದೀರ್ಘಾವಧಿಯಲ್ಲಿ ಉತ್ತಮ ಜೀವನ ನಡೆಸಲು ನಿಮಗೆ ಸಹಾಯ ಮಾಡುತ್ತದೆ. ಇದರಿಂದಲೇ ದೇಹ ಮತ್ತು ಮನಸ್ಸಿಗೆ ಅದ್ಭುತಗಳನ್ನು ಮಾಡಬಹುದು. ಈ ಅಭ್ಯಾಸದಿಂದ ನೀವು ಎದ್ದ ತಕ್ಷಣ ಮೊಬೈಲ್ ಸ್ಕ್ರೀನ್ ಅಥವಾ ಅಡುಗೆ ಮನೆಗೆ ಧಾವಿಸುವ ಬದಲು, ನಿಮ್ಮೊಳಗಿನ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸಮಯವನ್ನು ನೀಡುತ್ತೀರಿ. ನೀವು ಪ್ರತಿದಿನ ನಿಮ್ಮೊಂದಿಗೆ ನಿರಂತರವಾಗಿ ಸ್ವಲ್ಪ ಸಮಯವನ್ನು ಕಳೆದಾಗ, ನಿಮ್ಮ ಜೀವನದಲ್ಲಿನ ಆತಂಕ, ಕಿರಿಕಿರಿ ಅಥವಾ ಒತ್ತಡ ಕಡಿಮೆಯಾದುದನ್ನು ನೋಡುತ್ತೀರಿ. ನಿಮ್ಮ ಮನಸ್ಥಿತಿ ಮತ್ತು ದೇಹದ ಮೇಲೆ ಉತ್ತಮ ನಿಯಂತ್ರಣವನ್ನು ಸಾಧಿಸುವಿರಿ. ಇದೇ ನಿರಂತರ ನೆಮ್ಮದಿಗೆ ಅಡಿಪಾಯ.
ತಲೆ ಸುತ್ತುತ್ತೆ ಅಂದ್ರೂ ಮಕ್ಕಳು ರೌಂಡ್ ಹೊಡೆಯೋದು ಏಕೆ?