ಉತ್ತರ ಪ್ರದೇಶದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಲಿವರ್ ನಲ್ಲಿ ಭ್ರೂಣ ನೋಡಿ ವೈದ್ಯರು ದಂಗಾಗಿದ್ದಾರೆ. 

ವೈದ್ಯಕೀಯ (medical) ಜಗತ್ತು ಬೆರಗಾಗುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮೀರತ್ ನ ಬುಲಂದ್ಶಹರ್ನಲ್ಲಿ ನಡೆದ ಮೆಡಿಕಲ್ ಪ್ರಕರಣ ನೋಡಿ ವೈದ್ಯರೇ ದಂಗಾಗಿದ್ದಾರೆ. ಇಲ್ಲಿನ 30 ವರ್ಷದ ಮಹಿಳೆ ಹೊಟ್ಟೆ ನೋವು (Stomach ache) ಹಾಗೂ ವಾಂತಿ (vomiting) ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆ ಮೀರತ್ಗೆ ಚಿಕಿತ್ಸೆಗಾಗಿ ಬಂದಿದ್ದಳು. ಇಲ್ಲಿ ಮಹಿಳೆಗೆ ಎಂಆರ್ಐ ಸ್ಕ್ಯಾನ್ (MRI Scan) ಮಾಡಲಾಗಿದೆ. ಸ್ಕ್ಯಾನ್ ವರದಿ ನೋಡಿ ವೈದ್ಯರು ದಿಗ್ಭ್ರಮೆಗೊಂಡಿದ್ದಾರೆ.

ಅಷ್ಟಕ್ಕೂ ಮಹಿಳೆಗೆ ಆಗಿದ್ದು ಏನು? : 30 ವರ್ಷದ ಮಹಿಳೆ 12 ವಾರಗಳ ಗರ್ಭಿಣಿ. ಆದ್ರೆ ಭ್ರೂಣ ಆಕೆ ಗರ್ಭಾಶಯದಲ್ಲಿ ಬೆಳೆಯುತ್ತಿರಲಿಲ್ಲ. ಬದಲಾಗಿ ಮಹಿಳೆ ಯಕೃತ್ತಿ (liver)ನಲ್ಲಿ ಬೆಳೆಯುತ್ತಿತ್ತು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಇಂಟ್ರಾಹೆಪಾಟಿಕ್ ಎಕ್ಟೋಪಿಕ್ ಗರ್ಭಧಾರಣೆ ಎಂದು ಕರೆಯಲಾಗುತ್ತದೆ. ಇದು ವಿಶ್ವದ ಅತ್ಯಂತ ಅಪರೂಪದ ಪ್ರಕರಣ ಎಂದು ಪರಿಗಣಿಸಲಾಗಿದೆ.

ತೀವ್ರ ಹೊಟ್ಟೆ ನೋವು- ವಾಂತಿ : ಕಳೆದ ಎರಡು ತಿಂಗಳಿನಿಂದ ಮಹಿಳೆ ನಿರಂತರವಾಗಿ ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದಳು. ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಇದ್ರಿಂದ ಯಾವುದೇ ಪರಿಣಾಮ ಕಂಡು ಬಂದಿರಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಎಂಆರ್ ಐ ಸ್ಕ್ಯಾನ್ ಮಾಡುವಂತೆ ಸೂಚನೆ ನೀಡಿದ್ದರು.

ಎಂಆರ್ ಐ ಸ್ಕ್ಯಾನ್ ವರದಿಯಲ್ಲಿ ಏನಿತ್ತು? : ಮೀರತ್ನ ರೇಡಿಯಾಲಜಿಸ್ಟ್ ಡಾ. ಕೆ.ಕೆ. ಗುಪ್ತಾ ಈ ಅಪರೂಪದ ಗರ್ಭಧಾರಣೆಯನ್ನು ದೃಢಪಡಿಸಿದ್ದಾರೆ. ಮಹಿಳೆ ಪರೀಕ್ಷೆ ನಡೆಸಿದ ಅವರು ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ಅಚ್ಚರಿಗೊಳಗಾಗಿದ್ದರು. ಮಹಿಳೆ ಗರ್ಭದಲ್ಲಿ ಯಾವುದೇ ಭ್ರೂಣ ಇರಲಿಲ್ಲ. ಭ್ರೂಣವು ಯಕೃತ್ತಿನ ಬಲ ಭಾಗದಲ್ಲಿ ಬೆಳೆಯುತ್ತಿರುವುದು ಕಂಡು ಬಂದಿತ್ತು. ಭ್ರೂಣದ ಹೃದಯ ಬಡಿತವೂ ಕೇಳಿಸ್ತಾ ಇತ್ತು.

ಎಕ್ಟೋಪಿಕ್ ಗರ್ಭಧಾರಣೆ ಅಂದ್ರೇನು? : ಮಹಿಳೆ ಗರ್ಭದಲ್ಲಿ ಭ್ರೂಣದ ಬೆಳವಣಿಗೆ ಆಗುತ್ತದೆ. ಆದ್ರೆ ಎಕ್ಟೋಪಿಕ್ ಗರ್ಭಧಾರಣೆಯಲ್ಲಿ ಗರ್ಭದ ಬದಲು ದೇಹದ ಬೇರೆ ಜಾಗದಲ್ಲಿ ಭ್ರೂಣ ಬೆಳೆಯಲು ಶುರುವಾಗುತ್ತದೆ. ಎಕ್ಟೋಪಿಕ್ ಗರ್ಭಧಾರಣೆಯು ಅಂಡಾಶಯ, ಫಾಲೋಪಿಯನ್ ಟ್ಯೂಬ್ ಅಥವಾ ಕಿಬ್ಬೊಟ್ಟೆಯ ಪೊರೆಯಲ್ಲಿ ಕಂಡುಬರುತ್ತದೆ. ಆದ್ರೆ ಯಕೃತ್ತಿನಲ್ಲಿ ಭ್ರೂಣದ ಈ ಸ್ಥಿತಿ ಎಕ್ಟೋಪಿಕ್ ಪ್ರಕರಣಗಳಲ್ಲಿ ಶೇಕಡಾ 0.03ರಷ್ಟು ಮಾತ್ರ ಕಂಡುಬರುತ್ತದೆ. ಅತ್ಯಂತ ಅಸಾಧಾರಣ ಪ್ರಕರಣಗಳಲ್ಲಿ ಇದು ಒಂದಾಗಿದೆ.

ಇಲ್ಲಿ ಮಗು ಬೆಳವಣಿಗೆಗೆ ಅವಕಾಶ ಇದ್ಯಾ? : ತಜ್ಞರ ಪ್ರಕಾರ, ಯಕೃತ್ತಿನಲ್ಲಿ ಭ್ರೂಣ ಬೆಳವಣಿಗೆ ಸೂಕ್ತವಲ್ಲ. ಇಂಥ ಕೇಸ್ ನಲ್ಲಿ ಭ್ರೂಣವನ್ನು ತೆಗೆದುಹಾಕುವುದು ಕಡ್ಡಾಯವಾಗಿದೆ. ಇದು ಮಹಿಳೆಯ ಜೀವಕ್ಕೆ ಗಂಭೀರ ಅಪಾಯವನ್ನುಂಟು ಮಾಡುವ ಸಾಧ್ಯತೆ ದಟ್ಟವಾಗಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಯಕೃತ್ತಿನ ಒಂದು ಭಾಗವನ್ನು ಸಹ ತೆಗೆದುಹಾಕಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಚಿಕಿತ್ಸೆ, ಸಮಯಕ್ಕೆ ಸರಿಯಾಗಿ ನಡೆಯುವುದು ಕೂಡ ಇಲ್ಲಿ ಮುಖ್ಯ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನಡೆಯದೆ ಹೋದ್ರೆ ರೋಗಿ ಸಾವನ್ನಪ್ಪುವ ಅಪಾಯವಿದೆ. ವಿಶ್ವದಲ್ಲಿ ಅಪರೂಪಕ್ಕೆ ಬೆಳಕಿಗೆ ಬರುವ ಈ ಪ್ರಕರಣ, ಭಾರತದಲ್ಲಿ ಮೊದಲು ಎಂದು ಅಂದಾಜಿಸಲಾಗಿದೆ. ವಿಶ್ವದಲ್ಲಿ ಈವರೆಗೆ ಕೇವಲ 8 ಪ್ರಕರಣ ವರದಿಯಾಗಿರುವ ದಾಖಲೆ ಇದೆ.