ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ 25 ವರ್ಷದ ಯುವಕ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೈದರಾಬಾದ್: ಇತ್ತೀಚೆಗೆ ಹೃದಯಾಘಾತಕ್ಕೀಡಾಗಿ ಸಣ್ಣ ಸಣ್ಣ ಪ್ರಾಯದ ಮಕ್ಕಳು ಯುವತಿಯರು ಹುಡುಗರು ಸಾವನ್ನಪ್ಪುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಮತ್ತೊಬ್ಬ ಆರೋಗ್ಯವಂತ ಯುವಕ, ಕ್ರೀಡಾಪಟು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಇಂಡೋರ್ ಕ್ರೀಡಾಂಗಣದಲ್ಲಿ ದುರಂತ:
ತೆಲಂಗಾಣದ ಹೈದರಾಬಾದ್‌ನ ಉಪ್ಪಲ್‌ನ ನಂಗೊಲ್ ಪ್ರದೇಶದಲ್ಲಿ ಘಟನೆ ನಡೆದಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ 25ರ ಹರೆಯದ ಆರೋಗ್ಯವಂತ ತರುಣ ಇದ್ದಕ್ಕಿದ್ದಂತೆ ಇಂಡೋರ್ ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಕೂಡಲೇ ಜೊತೆಯಲ್ಲಿದ್ದ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಿಲ್ಲ, ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಣೆ ಮಾಡಿದ್ದಾರೆ.
ಮೃತ ಯುವಕನನ್ನು 25ರ ಹರೆಯದ ರಾಕೇಶ್ ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ಖಮ್ಮಂ ಜಿಲ್ಲೆಯ ಥಲ್ಲಡ ಗ್ರಾಮದ ಯುವಕನಾಗಿದ್ದು, ಹೈದರಾಬಾದ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಾಜಿ ಉಪ ಸರಪಂಚ ಆಗಿ ಕೆಲಸ ಮಾಡುತ್ತಿದ್ದ ಗುಂಡ್ಲ ವೆಂಕಟೇಶ್ವರಲು ಎಂಬುವವರ ಪುತ್ರನಾಗಿರುವ ರಾಕೇಶ್ ಹೈದರಾಬಾದ್‌ನ ನಾಗೋಲ್‌ನಲ್ಲಿ ವಾಸವಿದ್ದ.
ಸಿಪಿಆರ್ ಮಾಡಿದ್ರು ಬದುಕುಳಿಯಲಿಲ್ಲ:
ಭಾನುವಾರ ಸಂಜೆ 8 ಗಂಟೆ ಸುಮಾರಿಗೆ ನಾಗೋಲ್ ಒಳಾಂಗಣ ಕ್ರೀಡಾಂಗಣದಲ್ಲಿ ರಾಕೇಶ್ ತನ್ನ ಸ್ನೇಹಿತರ ಜೊತೆ ಶೆಟ್ಲ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಅಲ್ಲಿದ್ದ ಇತರ ಆಟಗಾರರು ಕೂಡಲೇ ಅವನತ್ತ ಓಡಿ ಬಂದಿದ್ದು, ಆತನಿಗೆ ಸಿಪಿಆರ್ ಕೂಡ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನ ಕಾಣಿಸದೇ ಹೋದಾಗ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆತನ ತಪಾಸಣೆ ಮಾಡಿದ ವೈದ್ಯರು ಆತ ಈಗಾಗಲೇ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ.
ಘಟನೆಯ ವೀಡಿಯೋ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಯುವಕನ ಕೊನೆಕ್ಷಣವನ್ನು ತೋರಿಸಿದೆ. ಆತ ಕುಸಿದು ಬೀಳುತ್ತಿದ್ದಂತೆ ಅಲ್ಲಿದ್ದ ಇತರರು ಆತನ ಬಳಿ ಓಡಿ ಬಂದಿದ್ದಾರೆ. ಈ ಘಟನೆ ಆತನ ಕುಟುಂಬದವರು ಸ್ನೇಹಿತರು ಮಾತ್ರವಲ್ಲದೇ ಅಲ್ಲಿನ ಸ್ಥಳೀಯ ಸಮುದಾಯವನ್ನು ಆಘಾತಕ್ಕೀಡು ಮಾಡಿದೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ಅನೇಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
