ವಾರಪೂರ್ತಿ ಕೆಲ್ಸದಲ್ಲಿ ಬ್ಯುಸಿ ಇರೋರಿಗೆ ವ್ಯಾಯಾಮ, ವಾಕಿಂಗ್‌ ಸೇರಿದಂತೆ ವರ್ಕ್‌ ಔಟ್‌ ಮಾಡೋಕೆ ಟೈಂ ಸಿಗೋದಿಲ್ಲ. ಕೆಲವರು ವೀಕೆಂಡ್‌ ನಲ್ಲಿ ಎರಡು ದಿನ ವರ್ಕ್‌ ಔಟ್‌ ಮಾಡೋಕೆ ಇಷ್ಟಪಡ್ತಾರೆ. ಅಂಥವರು ನೀವಾಗಿದ್ದರೆ ನಿಮಗೊಂದು ನೆಮ್ಮದಿ ಸುದ್ದಿ ಇದೆ.

ಅದೆಷ್ಟೇ ಸಮಯ ಹೊಂದಿಸಿಕೊಳ್ಳುವ ಪ್ರಯತ್ನ ನಡೆಸಿದ್ರೂ ಅನೇಕರಿಗೆ ವ್ಯಾಯಮ, ವಾಕಿಂಗ್ ಮಾಡೋಕೆ ಟೈಂ ಸಿಗೋದಿಲ್ಲ. ಕೆಲವರು ಇದ್ರಿಂದ ಬೇಸರಗೊಂಡ್ರೆ ಮತ್ತೆ ಕೆಲವರು ಸಿಗುವ ವೀಕೆಂಡ್‌ ನಲ್ಲಿ ವರ್ಕ್‌ ಔಟ್‌ ಮಾಡುವ ಪ್ರಯತ್ನ ಮಾಡ್ತಾರೆ. ವಾರಪೂರ್ತಿ ಸುಮ್ಮನಿದ್ದು, ವೀಕೆಂಡ್‌ ನಲ್ಲಿ ವರ್ಕ್‌ ಔಟ್‌ ಮಾಡುವವರಿಗೆ ವೀಕೆಂಡ್‌ ವಾರಿಯರ್ಸ್‌ ಅಂತ ಕರೀತಾರೆ. ಇದ್ರ ಪ್ರಯೋಜನ ಏನು, ಈ ಬಗ್ಗೆ ತಜ್ಞರು ಏನು ಹೇಳ್ತಾರೆ ಎನ್ನುವ ಮಾಹಿತಿ ಇಲ್ಲಿದೆ.

ವೀಕೆಂಡ್ ವಾರಿಯರ್ಸ್ (Weekend Warriors)

ವಾರದಲ್ಲಿ ಒಂದು ಅಥವಾ ಎರಡು ದಿನ ವ್ಯಾಯಾಮ ಮಾಡಿದ್ರೆ, ವಾರಪೂರ್ತಿ ವ್ಯಾಯಾಮ ಮಾಡಿದ ಪ್ರಯೋಜನ ಸಿಗುತ್ತದ ಎಂದು ಕೆಲ ಅಧ್ಯಯನ ಹೇಳಿದೆ. ಎನ್‌ ಎಹ್‌ ಎಸ್ (NHS) ಮಾರ್ಗಸೂಚಿಯ ಪ್ರಕಾರ ವಾರಕ್ಕೆ ಕನಿಷ್ಠ 150 ನಿಮಿಷಗಳ ದೈಹಿಕ ಚಟುವಟಿಕೆ ಅಗತ್ಯ. ಇದನ್ನು ಪ್ರತಿದಿನ ಸ್ವಲ್ಪ ಸಮಯ ವ್ಯಾಯಾಮ ಮಾಡುವ ಮೂಲಕ ಅಥವಾ ವಾರಾಂತ್ಯದಲ್ಲಿ ಹೆಚ್ಚು ಸಮಯ ಮೀಸಲಿಡುವ ಮೂಲಕ ಪೂರ್ಣಗೊಳಿಸಬಹುದು. ವಾರಾಂತ್ಯದಲ್ಲಿ ವ್ಯಾಯಾಮ ಮಾಡುವವರಿಗೆ ವೀಕೆಂಡ್‌‌ ವಾರಿಯರ್ಸ್‌ ಅಂತ ಕರೀತಾರೆ.

ದಿನವಿಡೀ ಕೆಲಸದ ಒತ್ತಡ ಮತ್ತು ಓಡಾಟದಿಂದಾಗಿ ವಾರಾಂತ್ಯ ಬಂದಾಗ ಸುಸ್ತಾಗುವುದು ಸಹಜ. ಆದರೆ ಶನಿವಾರ ಮತ್ತು ಭಾನುವಾರ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಟ್ಟರೆ ದೈಹಿಕ ಚಟುವಟಿಕೆಯನ್ನು ಮುಂದುವರಿಸಲು ಅನುಕೂಲವಾಗುತ್ತದೆ. ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದ ಪ್ರಕಾರ, ವಾರದಲ್ಲಿ ಒಂದು ಅಥವಾ ಎರಡು ದಿನ ವ್ಯಾಯಾಮ ಮಾಡುವವರಿಗೂ ಹಲವು ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ. ರಜಾದಿನಗಳಲ್ಲಿ ವ್ಯಾಯಾಮ ಮಾಡುವುದರಿಂದ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

ವಾರಕ್ಕೆ 80 ನಿಮಿಷ ವ್ಯಾಯಾಮ ಮಾಡಿದರೆ ಏನೆಲ್ಲಾ ಪ್ರಯೋಜನ?

ವಾರದಲ್ಲಿ ಎರಡು ದಿನ ತಲಾ 40 ನಿಮಿಷ ವ್ಯಾಯಾಮ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.

• ನಿಯಮಿತ ವ್ಯಾಯಾಮದಿಂದ ಸ್ನಾಯುಗಳ ಸಾಮರ್ಥ್ಯ ಹೆಚ್ಚುತ್ತದೆ.

• ದೇಹದ ಮೆಟಾಬಾಲಿಸಂ ಸುಧಾರಿಸಲು ವ್ಯಾಯಾಮ ನೆರವಾಗುತ್ತದೆ.

• ದೈಹಿಕ ಚಟುವಟಿಕೆಯಿಂದ ಜೀರ್ಣಕ್ರಿಯೆ ಉತ್ತಮವಾಗಲು ನೆರವಾಗಬಹುದು.

• ಲಿವರ್, ಕಿಡ್ನಿ ಮತ್ತು ಮೇದೋಜೀರಕ ಗ್ರಂಥಿಯ ಆರೋಗ್ಯ ಕಾಪಾಡಿಕೊಳ್ಳಲು ಒಟ್ಟಾರೆ ಆರೋಗ್ಯಕರ ಜೀವನಶೈಲಿ ಮುಖ್ಯ.

• ನಿಯಮಿತ ವ್ಯಾಯಾಮದಿಂದ ಶ್ವಾಸಕೋಶದ ಕಾರ್ಯಕ್ಷಮತೆ ಸುಧಾರಿಸಲು ಸಹಾಯವಾಗುತ್ತದೆ.

• ನಿಯಮಿತವಾಗಿ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೂ ಸಹ, ಎರಡು ದಿನಗಳ ವ್ಯಾಯಾಮಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.

• ವಾರದಲ್ಲಿ ಎರಡು ದಿನ ವ್ಯಾಯಾಮ ಮಾಡುವ ಮೂಲಕವೂ ನೀವು ತೂಕವನ್ನು ಕಳೆದುಕೊಳ್ಳಬಹುದು. ಈ ಎರಡು ದಿನ ನೀವು ತಪ್ಪದೆ ವ್ಯಾಯಾಮ ಮಾಡಬೇಕು. ಆಹಾರಕ್ರಮದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹೆಚ್ಚು ಪ್ರೋಟೀನ್ ಅಥವಾ ಸಮತೋಲಿತ ಆಹಾರವನ್ನು ಸೇವಿಸಿದರೆ, ನೀವು ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ವಾರದಲ್ಲಿ ಎರಡು ದಿನ ವ್ಯಾಯಾಮ ಮಾಡುವುದಾದರೆ ಆ ಎರಡು ದಿನ ಮಾತ್ರ ಅತಿಯಾದ ವ್ಯಾಯಾಮ ಮಾಡಬೇಡಿ. ನಿಮ್ಮ ದೇಹದ ಸಾಮರ್ಥ್ಯಕ್ಕೆ ತಕ್ಕಂತೆ ವ್ಯಾಯಾಮ ಮಾಡಿ. ವಾರದ ಉಳಿದ ದಿನಗಳಲ್ಲೂ ಸಾಧ್ಯವಾದಷ್ಟು ವಾಕಿಂಗ್ ಮತ್ತು ಚಲನವಲನ ಇರಲಿ. 150 ನಿಮಿಷಗಳ ವಾರದ ದೈಹಿಕ ಚಟುವಟಿಕೆಯ ಗುರಿಯನ್ನು ತಲುಪಲು ಪ್ರಯತ್ನಿಸಿ.

ವ್ಯಾಯಾಮವನ್ನು ಸರಿಯಾಗಿ ಪ್ಲಾನ್

ತೂಕ ಇಳಿಸಿಕೊಳ್ಳಲು ಕಾರ್ಡಿಯೋ ಉತ್ತಮ ಆಯ್ಕೆ. ಆದರೆ ಅದೊಂದನ್ನೇ ಪ್ರತಿದಿನ ಮಾಡುವ ಬದಲು ಬೇರೆ ಬೇರೆ ವ್ಯಾಯಾಮಗಳನ್ನು ಸೇರಿಸಿಕೊಳ್ಳುವುದು ಒಳ್ಳೆಯದು. ವಾರದಲ್ಲಿ ಎರಡು ದಿನ ಜಿಮ್ಗೆ ಹೋಗಿ ಟ್ರೈನರ್ ಸಹಾಯದಿಂದ ವ್ಯಾಯಾಮದ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಬಹುದು. ನಿಮ್ಮ ದೇಹದ ಸಾಮರ್ಥ್ಯಕ್ಕೆ ತಕ್ಕಂತೆ ವ್ಯಾಯಾಮ ಮಾಡಿ. ನಿಧಾನವಾಗಿ ಅದರ ಪ್ರಮಾಣ ಮತ್ತು ತೀವ್ರತೆಯನ್ನು ಹೆಚ್ಚಿಸಿಕೊಳ್ಳಿ. ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಲು ಪ್ರಯತ್ನಿಸಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಯವನ್ನು ಹೆಚ್ಚಿಸಬಹುದು. ಮಾನಸಿಕ ಆರೋಗ್ಯಕ್ಕಾಗಿ ಯೋಗ ಮತ್ತು ಧ್ಯಾನವನ್ನೂ ಅಭ್ಯಾಸ ಮಾಡಿಕೊಳ್ಳಿ.