Health Tips: ವೃದ್ಧಾಪ್ಯದಲ್ಲಿ ಕಾಡೋ ಒಂಟಿತನದ ಸಮಸ್ಯೆಯಿಂದ ಹೊರ ಬರೋದು ಹೇಗೆ?
ಒಂಟಿತನ ಮನುಷ್ಯನಿಗೆ ಶತ್ರು. ಕೆಲ ಗಂಟೆ, ಕೆಲ ಸಮಯ ಮನುಷ್ಯ ಒಂಟಿಯಾಗಿರಬಲ್ಲ. ಜೀವನದ ಕೊನೆ ಘಟ್ಟದಲ್ಲಿ ಏಕಾಂಗಿ ವಾಸ ಬಹಳ ಕಷ್ಟ. ಇದು ಆತನ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ.
ಒಂಟಿತನ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ಮಾತನ್ನು ಮಾನಸಿಕ ತಜ್ಞರು ಒಪ್ಪಿಕೊಳ್ತಾರೆ. ಒಂಟಿಯಾಗಿರುವ ಜನರು ಖಿನ್ನತೆ, ಆತಂಕ ಮತ್ತು ಮಾನಸಿಕ ಕಾಯಿಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಒಳಗಾಗ್ತಾರೆ. ಮಕ್ಕಳಾದ್ಮೇಲೆ ಪಾಲಕರಿಗೆ ಅವರೇ ಪ್ರಪಂಚವಾಗಿರ್ತಾರೆ. ಮಕ್ಕಳ ಪಾಲನೆ, ಅವರ ಓದಿನಲ್ಲಿಯೇ ಪಾಲಕರು ದಿನ ಕಳೆದಿರುತ್ತಾರೆ. ಆದ್ರೆ ಮಕ್ಕಳು ದೊಡ್ಡವರಾಗ್ತಿದ್ದಂತೆ ಸ್ವತಂತ್ರರಾಗಲು ಬಯಸ್ತಾರೆ. ಓದು ಮುಗಿದ ನಂತ್ರ ತಮ್ಮ ಜೀವನದಲ್ಲಿ ಬ್ಯುಸಿಯಾಗುವ ಮಕ್ಕಳು ಕೆಲಸದ ಕಾರಣ ಪಾಲಕರಿಂದ ದೂರವಾಗ್ತಾರೆ. ಎಷ್ಟೋ ಮಕ್ಕಳು ವಿದೇಶಕ್ಕೆ ಹೋಗಿ ಅಲ್ಲಿಯೇ ವಾಸ ಮುಂದುವರೆಸುತ್ತಾರೆ. ಇದೇ ದೇಶದಲ್ಲಿರುವ ಅಥವಾ ಇದೇ ಊರಿನಲ್ಲಿರುವ ಮಕ್ಕಳು ಕೂಡ ಮದುವೆಯಾದ್ಮೇಲೆ ಪಾಲಕರಿಂದ ದೂರವಿರ್ತಾರೆ.
ವೃತ್ತಿ (Career), ಮನೆ, ಮಕ್ಕಳು ಎಂದು ಬ್ಯುಸಿಯಾಗಿದ್ದ ಪಾಲಕರು ವಯಸ್ಸಾಗ್ತಿದ್ದಂತೆ ಕೆಲಸ (Work) ವಿಲ್ಲದೆ ಕುಳಿತುಕೊಳ್ಳುವಂತಾಗುತ್ತದೆ. ಈಗಿನ ದಿನಗಳಲ್ಲಿ ಬಹುತೇಕ ಹಳ್ಳಿಗಳು ವೃದ್ಧಾಶ್ರಮದಂತಾಗಿವೆ. ಮಗ ಪಟ್ಟಣ ಸೇರಿದ್ರೆ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗಿರ್ತಾಳೆ. ಸದಾ ಇಬ್ಬರೇ ಇರುವ ಪಾಲಕರಿಗೆ ಸಮಯ ಕಳೆಯೋದು ಕಷ್ಟವಾಗ್ತಿದೆ. ಅಪರೂಪಕ್ಕೆ ಮಕ್ಕಳು ಮಾಡುವ ಫೋನ್ ಗೆ ಪಾಲಕರು ಕಾಯ್ತಿರುತ್ತಾರೆ. ಮತ್ತೆ ಕೆಲ ಪಾಲಕರು ವೃದ್ಧಾಶ್ರಮ ಸೇರಿಯಾಗಿದೆ. ಒಂಟಿಯಾಗಿರುವ ವೃದ್ಧರು ಒಂದು ರೀತಿಯ ವಿಚಿತ್ರ ಸಿಂಡ್ರೋಮಕ್ಕೆ ಒಳಗಾಗ್ತಾರೆ. ಆ ಸಿಂಡ್ರೋಮ ಯಾವುದು ಎನ್ನುವ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.
Health Tips: ಕಿಟಕಿ ಗಾಜಿನಿಂದ ಬರೋ ಸೂರ್ಯನ ಕಿರಣ ನೀಡುತ್ತಾ ವಿಟಮಿನ್ ಡಿ?
ಏನಿದು ಎಂಪ್ಟಿ ನೆಸ್ಟ್ ಸಿಂಡ್ರೋಮ್ (Empty Nest Syndrome) : ಮೊದಲೇ ಹೇಳಿದಂತೆ ಒಂಟಿತನ ಎನ್ನುವುದು ಬರೀ ಯುವಕರನ್ನು ಮಾತ್ರ ಕಾಡೋದಿಲ್ಲ. ತಂದೆ-ತಾಯಿಯನ್ನು ಕೂಡ ಒಂಟಿತನದ ನೋವು ಕಾಡುತ್ತದೆ. ಹಿರಿಯ ವಯಸ್ಕರಿಗೆ ಕಾಡುವ ಒಂಟಿತನವನ್ನು ಎಂಪ್ಟಿ ನೆಸ್ಟ್ ಸಿಂಡ್ರೋಮ ಎಂದು ಕರೆಯಲಾಗುತ್ತದೆ. ಇದು ವೃದ್ಧಾಪ್ಯದಲ್ಲಿ ಬರುವ ರೋಗ. ಈ ರೋಗವನ್ನು ಆದಷ್ಟು ಬೇಗ ಪತ್ತೆ ಮಾಡಿ ಅದಕ್ಕೆ ಚಿಕಿತ್ಸೆ ನೀಡುವುದು ಬಹಳ ಮುಖ್ಯ.
ಎಂಪ್ಟಿ ನೆಸ್ಟ್ ಸಿಂಡೋಮ ಲಕ್ಷಣಗಳು : ಮನೆಯಲ್ಲಿ ಇಬ್ಬರೇ ಇರುವ ವೃದ್ಧರು ಖಾಲಿತನವನ್ನು ಎದುರಿಸುತ್ತಾರೆ. ಅವರ ಮುಖದಲ್ಲಿ ಸದಾ ಉದ್ವೇಗವನ್ನು ನೀವು ಕಾಣಬಹುದು. ಏಕಾಏಕಿ ಅವರಿಗೆ ಕೋಪ ಬರ್ತಿರುತ್ತದೆ. ನಿದ್ರೆಯ ಸಮಸ್ಯೆಯನ್ನು ಅವರು ಅನುಭವಿಸುತ್ತಾರೆ. ತಮ್ಮ ಜೀವಕ್ಕೆ ಹಾನಿ ಮಾಡಿಕೊಳ್ಳುವ ಅಪಾಯವೂ ಇರುತ್ತದೆ. ಎದೆ ಭಾರವಾದ ಅನುಭವ ಅವರಿಗೆ ಆಗುತ್ತದೆ. ಎಂಪ್ಟಿ ನೆಸ್ಟ್ ಸಿಂಡ್ರೋಮ ಲಕ್ಷಣದಿಂದ ಅವರಿಗೆ ಹೃದಯಾಘಾತವಾಗುವ ಸಾಧ್ಯತೆಯಿರುತ್ತದೆ.
ಮಗು ಬಾಯಿ ತೆರೆದು ಮಲಗ್ತಿದ್ಯಾ, ನಗ್ಬೇಡಿ, ಇದು ದೊಡ್ಡ ಸಮಸ್ಯೆ !
ಎಂಪ್ಟಿ ನೆಸ್ಟ್ ಸಿಂಡ್ರೋಮದಿಂದ ಹೊರಗೆ ಬರೋದು ಹೇಗೆ? :
ತಂದೆ – ತಾಯಿ ಒಂಟಿಯಾಗಿ ವಾಸಿಸುತ್ತಿದ್ದಾರೆಂದ್ರೆ ಮಕ್ಕಳಾದವರು ಮೊದಲು ಅವರ ಸ್ವಭಾವವನ್ನು ಗಮನಿಸಬೇಕಿದೆ. ಪಾಲಕರಲ್ಲಿ ಈ ರೋಗ ಲಕ್ಷಣ ಕಾಣಿಸಿದ್ರೆ ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ.
• ಮಕ್ಕಳಾದವರು ಪಾಲಕರನ್ನು ಒಂಟಿಯಾಗಿರಲು ಬಿಡಬಾರದು. ಆಗಾಗ ಪಾಲಕರನ್ನು ಭೇಟಿಯಾಗಬೇಕು. ಅವರಿಗೆ ದಿನಕ್ಕೆ ಎರಡು ಬಾರಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಬೇಕು. ಪಾಲಕರಿಗೆ ವಿಡಿಯೋ ಕರೆ ಮಾಡುವುದು ಬಹಳ ಒಳ್ಳೆಯದು.
• ಮೊಮ್ಮಕ್ಕಳು ಜೊತೆಗಿದ್ದರೆ ಅಥವಾ ಅವರ ಮಾತು ಕೇಳಿದ್ರೆ ಹಿರಿಯ ಜೀವಕ್ಕೆ ಖುಷಿ, ನೆಮ್ಮದಿ ಸಿಗುತ್ತದೆ. ಹಾಗಾಗಿ ಮೊಮ್ಮಕ್ಕಳ ಜೊತೆ ಬೆರೆಯಲು ಅವಕಾಶ ಮಾಡಿಕೊಡಬೇಕು.
• ಪಾಲಕರಿಂದ ನೀವು ದೂರವಿದ್ರೆ ಸಂಬಂಧಿಕರ ಜೊತೆ ಪಾಲಕರು ಬೆರೆಯುವಂತೆ ನೋಡಿಕೊಳ್ಳಬೇಕು.
• ಪಾಲಕರ ಪ್ರತಿಯೊಂದು ಮಾತು, ಸಮಸ್ಯೆಯನ್ನು ಮಕ್ಕಳಾದವರು ಆಲಿಸಬೇಕಾಗುತ್ತದೆ. ಅಗತ್ಯವೆನ್ನಿಸಿದ್ರೆ ಅವರನ್ನು ತಜ್ಞರ ಬಳಿ ಕರೆದುಕೊಂಡು ಹೋಗಬೇಕು.
• ಪಾಲಕರಿಗೆ ಸಣ್ಣಪುಟ್ಟ ಮನೆಯ ಕೆಲಸ ಮಾಡುವಂತೆ ಸಲಹೆ ನೀಡಬೇಕು. ಕೆಲವೊಮ್ಮೆ ಎಲ್ಲ ಕೆಲಸವನ್ನು ಪಾಲಕರು ಮಾಡ್ತಿದ್ದರೂ ಅವರಿಗೆ ಒಂಟಿತನ ಕಾಡುತ್ತದೆ. ಅಂಥ ಸಂದರ್ಭದಲ್ಲಿ ಅವರ ಹವ್ಯಾಸಕ್ಕೆ ಪ್ರೋತ್ಸಾಹ ನೀಡಬೇಕಾಗುತ್ತದೆ.
• ಅವರ ವಯಸ್ಸಿನ ಜನರ ಜೊತೆ, ಅವರ ಸ್ನೇಹಿತರ ಜೊತೆ ಬೆರೆಯುವಂತೆ ಪಾಲಕರಿಗೆ ಸಲಹೆ ನೀಡಬೇಕು.
• ನಕಾರಾತ್ಮಕ ಆಲೋಚನೆಯಿಂದ ಹೊರಬರಲು ನೆರವಾಗಬೇಕು.