ಬೊಜ್ಜು ಕರಗಿಸಲು ವ್ಯಾಯಾಮದ ಜೊತೆಗೆ ಅಮೃತಬಳ್ಳಿ, ಭದ್ರಮುಷ್ಠಿ, ತ್ರಿಫಲ ಚೂರ್ಣಗಳ ಕಷಾಯ ಸೇವಿಸಿ ಎನ್ನುತ್ತಾರೆ ಡಾ. ವಿನಾಯಕ ಹೆಬ್ಬಾರ. ಆಹಾರ ಪದ್ಧತಿ, ಗರ್ಭದೋಷಗಳಿಂದ ಬೊಜ್ಜು ಬರುತ್ತದೆ. ಗರ್ಭಧಾರಣೆಗೆ ಮುನ್ನ ಪಂಚಕರ್ಮ ಚಿಕಿತ್ಸೆ ಪಡೆದರೆ ಮಕ್ಕಳು ಆನುವಂಶಿಕ ಬೊಜ್ಜಿನಿಂದ ಮುಕ್ತರಾಗುತ್ತಾರೆ. ಕಷಾಯಕ್ಕೆ ಜೇನುತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಶುಂಠಿ, ನೆಲ್ಲಿಕಾಯಿ ಆಹಾರದಲ್ಲಿ ಹೆಚ್ಚು ಬಳಸಿ.
ಬೊಜ್ಜು ಎನ್ನುವುದು ಈಗ ಬಹುತೇಕ ಮಂದಿಗೆ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಇಂದಿನ ಜೀವನ ಕ್ರಮ, ಆಹಾರ ಪದ್ಧತಿ, ವ್ಯಾಯಾಮ ಇಲ್ಲದ ದೇಹ, ಕುಳಿತಲ್ಲಿಯೇ ಕೆಲಸ... ಹೀಗೆ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಬೊಜ್ಜು ಬರುತ್ತಿದೆ. ಬೊಜ್ಜು ಬರಿಸಿಕೊಂಡು ಅದನ್ನು ಕರಗಿಸಲು ವ್ಯಾಯಾಮ ಇತ್ಯಾದಿಗಳನ್ನು ಮಾಡಲು ಸೋಮಾರಿಯಾಗಿರುವವರೇ ಹಲವರು ಇರುವುದನ್ನು ಮನಗಂಡು, ಇದೀಗ ಕೆಲವು ಕಂಪೆನಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಜನರ ಜೀವನದ ಮೇಲೆ ಚೆಲ್ಲಾಟ ಆಡುವುದು ಹಲವರಿಗೆ ತಿಳಿದಿರುವ ವಿಷಯವೇ ಆಗಿದೆ. ಆಯುರ್ವೇದ ಎನ್ನುವುದು ಇಂದಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿರುವುದರಿಂದ ಹಾಗೂ ಅದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಎಂದು ಅರಿತಿರುವ ಕಾರಣದಿಂದ, ಆಯುರ್ವೇದ, ಹರ್ಬಲ್ ಹೆಸರು ಹೇಳಿಕೊಂಡು ದೊಡ್ಡ ದಂಧೆಯನ್ನೇ ಶುರು ಮಾಡಿಕೊಳ್ಳಲಾಗಿದೆ. ಈ ಪಾನೀಯ ಸೇವಿಸಿ ಸಣ್ಣಗಾಗುವುದನ್ನು ನೋಡಿ ಖುಷಿಪಟ್ಟುಕೊಂಡವರು, ಕಾಲ ಕ್ರಮೇಣ ಎದುರಿಸುತ್ತಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ.
ಆದ್ದರಿಂದ ಇಂಥ ಹೆಸರಿನ ಪ್ರಾಡಕ್ಟ್ಗಳನ್ನು ಸೇವಿಸುವ ಮುನ್ನ ಮೈಯೆಲ್ಲಾ ಕಣ್ಣಾಗಿರುವುದು ಒಳ್ಳೆಯದು. ಅದನ್ನು ಸೇವಿಸಿ ಮಾರಣಾಂತಿಕ ಸಮಸ್ಯೆಯಿಂದ ಬಳಲುತ್ತಿರುವವರನ್ನು ಒಮ್ಮೆ ಹುಡುಕಿ ಅವರ ಅನುಭವ ಕೇಳಿದರೆ ಹರ್ಬಲ್ ಹೆಸರಿನಲ್ಲಿ ವಿದೇಶಿ ಕಂಪೆನಿಗಳು ಭಾರತದವರ ಮನೆಯ ಮೇಲೆ ನಡೆಸುತ್ತಿರುವ ಘನಘೋರ ಕೃತ್ಯಗಳು ಬೆಳಕಿಗೆ ಬರುತ್ತವೆ. ಮತ್ತೊಂದಿಷ್ಟು ಮಂದಿಯನ್ನು ಸೇರಿಸಿದರೆ, ನಿಮಗೂ ದುಡ್ಡು ಸಿಗುತ್ತದೆ ಎನ್ನುವ ಆಮಿಷ ಒಡ್ಡಿ ಭಾರತೀಯರ ಮನಸ್ಥಿತಿಯನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದೂ ತಿಳಿಯುತ್ತದೆ.
ಹೇರ್ಡೈನಿಂದ ಹೆಚ್ಚುವ ಕ್ಯಾನ್ಸರ್! ಕೂದಲು ಶಾಶ್ವತ ಕಪ್ಪಾಗಿಸಲು ಯೋಗ ಗುರು ಸಿಂಪಲ್ ಟಿಪ್ಸ್ ಕೇಳಿ...
ಅದೇನೇ ಇರಲಿ. ಇದೀಗ ಖ್ಯಾತ ಆಯುರ್ವೇದ ವೈದ್ಯರಾಗಿರುವ ಡಾ.ವಿನಾಯಕ ಹೆಬ್ಬಾರ ಅವರು ನೀಡಿರುವ ಸುಲಭದ ಉಪಾಯ ಇಲ್ಲಿದೆ. ದೇಹಕ್ಕೆ ಒಂದಿಷ್ಟು ವ್ಯಾಯಾಮದ ಜೊತೆ, ಮನಸ್ಸಿಗೂ ವ್ಯಾಯಾಮ ನೀಡಬೇಕು. ಇದರ ಜೊತೆಗೆ, ಈ ಕಷಾಯವನ್ನು ಸೇವಿಸಿದರೆ ಬೊಜ್ಜನ್ನು ಕರಗಿಸಬಹುದು ಎಂದು ಹೇಳಿದ್ದಾರೆ ವೈದ್ಯರು. ಇಂದಿನ ಆಹಾರ ಪದ್ಧತಿ ಒಂದು ಕಾರಣವಾದರೆ, ಗರ್ಭದ ಸಮಯದಲ್ಲಿ ಬರುವ ಬೀಜ ದೋಷದಿಂದ ಹೆರಿಡಿಟರಿ ಆಗಿ ಬೊಜ್ಜು ಬರುತ್ತದೆ ಎನ್ನುತ್ತಾರೆ. ಗರ್ಭ ಧರಿಸಲು ಪ್ಲ್ಯಾನ್ ಮಾಡುವ ಮುನ್ನ ಮಹಿಳೆಯರು ಪಂಚಕರ್ಮ ಚಿಕಿತ್ಸೆಯಂಥ ಆಯುರ್ವೇದ ಚಿಕಿತ್ಸೆ ಪಡೆದುಕೊಂಡರೆ ಈ ಗರ್ಭ ದೋಷದಿಂದ ಮುಕ್ತರಾಗಬಹುದು. ಅವರಿಗೆ ಹುಟ್ಟುವ ಮಕ್ಕಳು ಆನುವಂಶಿಕವಾಗಿ ಬೊಜ್ಜು ಮಾತ್ರವಲ್ಲದೇ ಕೆಲವೊಂದು ಸಮಸ್ಯೆಗಳಿಂದಲೂ ಮುಕ್ತರಾಗುತ್ತಾರೆ ಎನ್ನುತ್ತಾರೆ ಅವರು.
ಇನ್ನು ಡಾ.ವಿನಾಯಕ ಹೆಬ್ಬಾರ ಅವರು ಚರಕ ಸಂಹಿತೆಯಲ್ಲಿ ಉಲ್ಲೇಖಿಸಿರುವ ಕಷಾಯದ ಕುರಿತು ಹೇಳಿದ್ದಾರೆ. ಈ ಕಷಾಯ ಎಂದರೆ, ಅಮೃತಬಳ್ಳಿ, ಭದ್ರಮುಷ್ಠಿ, ತ್ರಿಫಲಾ ಚೂರ್ಣದ ಪೌಡರ್ಗಳು. ಇವು ಯಾವುದೇ ಗ್ರಂಥಿಕೆ ಅಂಗಡಿಯಲ್ಲಿ ಲಭ್ಯ. ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಎಲ್ಲವನ್ನೂ ಅರ್ಧರ್ಧ ಚಮಚ ಎಂದುಕೊಂಡರೆ, ಎರಡು ಲೋಟ ನೀರಿಗೆ ಇದನ್ನು ಹಾಕಿ ಕುದಿಸಿ, ಅರ್ಧ ಲೋಟಕ್ಕೆ ಇಳಿಸಬೇಕು. ನೀರು ಉಗುರು ಬೆಚ್ಚಗೆ ಆದ ಬಳಿಕ ಜೇನುತುಪ್ಪ ಹಾಕಿ ಸೇವನೆ ಮಾಡಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಹೆಚ್ಚು ಪ್ರಶಸ್ತ್ಯ. ಸಂಜೆನೂ ತೆಗೆದುಕೊಳ್ಳಬಹುದು. ಅಮೃತಬಳ್ಳಿ ಉಷ್ಣ, ವಾತ, ಪಿತ್ತ, ಕಫ ದೋಷ ಕಡಿಮೆ ಮಾಡುತ್ತದೆ. ಅಮೃತಬಳ್ಳಿಯು ಉಷ್ಣ ಪ್ರವೃತ್ತಿಯದ್ದಾಗಿರುವ ಹಿನ್ನೆಲೆಯಲ್ಲಿ, ಭದ್ರಮುಷ್ಠಿ ಅದನ್ನು ಕಡಿಮೆ ಮಾಡುತ್ತದೆ. ತ್ರಿಫಲಾ ಚೂರ್ಣದಲ್ಲಿ ನೆಲ್ಲಿಕಾಯಿ, ಅಳಲೆಕಾಯಿ ಮತ್ತು ತಾರಿಕಾಯಿ ಮಾಡಿರುವಂಥದ್ದು. ಇದಕ್ಕೆ ಒಣಗಿಸುವ ಗುಣವಿದೆ. ಬೊಜ್ಜನ್ನು ಕಡಿಮೆ ಮಾಡುತ್ತದೆ. ಇವುಗಳ ಸೇವನೆ ಮಾಡಿದರೆ ಬೊಜ್ಜನ್ನು ಕರಗಿಸಬಹುದು. ಕನಿಷ್ಠ ಒಂದು ವರ್ಷವಾದರೂ ಇದರ ಸೇವನೆ ಮಾಡಬೇಕು ಎನ್ನುತ್ತಾರೆ ವೈದ್ಯರು. ದೇಹವು ತುಂಬಾ ಒಣಗಿರುವ ಪ್ರಕೃತಿಯಾಗಿದ್ದರೆ, ತ್ರಿಫಲ ಚೂರ್ಣವನ್ನು ಸ್ವಲ್ಪ ಕಡಿಮೆ ಬಳಸಬೇಕು. ಉಷ್ಣ ಪ್ರವೃತ್ತಿಯಾಗಿದ್ದರೆ ಜೇನುತುಪ್ಪನ್ನು ಸ್ವಲ್ಪ ಕಡಿಮೆ ಮಾಡಬೇಕು ಎನ್ನುವ ಮಾಹಿತಿಯನ್ನೂ ವೈದ್ಯರು ನೀಡಿದ್ದಾರೆ. ಇದರ ಹೊರತಾಗಿ ಅಡುಗೆಯಲ್ಲಿ ಶುಂಠಿ ಹಾಗೂ ನೆಲ್ಲಿಕಾಯಿ ಹೆಚ್ಚು ಮಾಡಿದರೆ ಒಳ್ಳೆಯದು ಎನ್ನುವುದು ಅವರ ಮಾತು.
ಉರಿ ಮೂತ್ರಕ್ಕೆ ಐದೇ ನಿಮಿಷಗಳಲ್ಲಿ ಪರಿಹಾರ: ಸದ್ಗುರು ಜಗ್ಗಿ ವಾಸುದೇವ ಟಿಪ್ಸ್ ಕೇಳಿ...

