Asianet Suvarna News

ಯೋಗ ಮತ್ತು ಮಹಿಳೆಯ ಆರೋಗ್ಯ; ಗಮನದಲ್ಲಿಡಬೇಕಾದ ಅಂಶಗಳು!

ಕೇಕ್ ಯಾರಿಗೆ ಇಷ್ಟವಿಲ್ಲ ಹೇಳಿ! ಈಗಿನ ಹಾಟ್ ಕೇಕ್ ಎಂದರದು ಯೋಗ. ಎಲ್ಲರಿಗೂ ಬೇಕು. ಅದರಲ್ಲೂ ಯೋಗದತ್ತ ಹೆಚ್ಚು ಸೆಳೆತವಿರುವುದು ಹೆಣ್ಣುಮಕ್ಕಳಿಗೆ. ಯೋಗಾಭ್ಯಾಸದ ಪ್ರಯೋಜನ ಗಂಡು ಹೆಣ್ಣು ಇಬ್ಬರಿಗೂ ಇದೆಯಾದರೂ ಅದೇಕೋ ಗಂಡಸರು ಇದರಲ್ಲಿ ಹಿಂದೆಯೇ ಉಳಿದಿದ್ದಾರೆ. ಹಿಂದುಳಿದವರು ಮುಂದೆ ಬರಲಿ ಎಂದು ಆಶಿಸುತ್ತಾ ಯೋಗಾಸನ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವ ಮಹಿಳೆಯರು ಪಡೆಯುವ ಪ್ರಯೋಜನಗಳ ಕಡೆಗೆ ಒಂದಿಷ್ಟು ಬೆಳಕು ಹರಿಸೋಣ.

Dr Suvarnini Konale talks about the importance of Yoga in women health  vcs
Author
Bangalore, First Published Jun 21, 2021, 9:29 AM IST
  • Facebook
  • Twitter
  • Whatsapp

-ಡಾ. ಸುವರ್ಣಿನೀ ಕೊಣಲೆ

ಯೋಗಕ್ಕೆ ಎಂಟು ಅಂಗಗಳು. ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-ಧಾರಣ-ಧ್ಯಾನ-ಸಮಾಧಿ. ಇದು ಅಷ್ಟಾಂಗ ಯೋಗ. ಮೊದಲೆರಡು ಅಂಗಗಳಾದ ಯಮ ನಿಯಮಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯ ಹಾಗೂ ಶಿಸ್ತಿನ ಬಗ್ಗೆ ಹೇಳುತ್ತವೆ. ಮುಂದಿನ ಅಂಗ ಆಸನ. ಇದನ್ನೇ ನಾವು ‘ಯೋಗ’ ಎಂದು ತಪ್ಪಾಗಿ ಗ್ರಹಿಸುತ್ತೇವೆ. ಅದಕ್ಕೆ ಕಾರಣ ಸಾಮಾನ್ಯವಾಗಿ ಯೋಗಾಭ್ಯಾಸ ಎಂದು ಮಾಡುವುದು ಆಸನ ಹಾಗೂ ಪ್ರಾಣಾಯಾಮಗಳ ಅಭ್ಯಾಸವನ್ನೇ. ಈ ಅಭ್ಯಾಸಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಗಳ ಮೇಲೆ ಪರಿಣಾಮ ಬೀರುತ್ತವೆ. ನಮ್ಮ ಶರೀರದ ಸಹಜ ಕ್ರಿಯೆಗಳನ್ನು ಉತ್ತಮಗೊಳಿಸುತ್ತವೆ. ಮನಸ್ಸಿನ ಏರಿಳಿತಗಳನ್ನು ಹತೋಟಿಗೆ ತರುತ್ತವೆ. ಈ ಅಭ್ಯಾಸಗಳ ಈ ಗುಣಗಳನ್ನೇ ಬಳಸಿ ನಾವು ಯೋಗವನ್ನು ಚಿಕಿತ್ಸೆಯಾಗಿ ಅಭ್ಯಾಸ ಮಾಡುತ್ತೇವೆ.

ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದೇನು ಪ್ರಯೋಜನ? 

ಮಹಿಳೆಯರಿಗೂ ಯೋಗಕ್ಕೂ ಹೆಚ್ಚು ಆಪ್ತತೆ ಉಂಟಾಗಲು ಮುಖ್ಯ ಕಾರಣ ಯೋಗ ದೇಹವನ್ನು ತೆಳ್ಳಗಾಗಿಸುತ್ತದೆ ಎನ್ನುವ ಗ್ರಹಿಕೆ. ಆದರೆ ಬಳುಕುವ ಬಳ್ಳಿಯಾಗಿಸುವ ಸಣ್ಣ ಆಸೆಗಾಗಿ ಮಾಡುವ ಈ ಅಭ್ಯಾಸಗಳು ಅದಕ್ಕಿಂತ ತುಂಬ ಹೆಚ್ಚಿನ ಪ್ರಯೋಜನಗಳನ್ನು ಮಹಿಳೆಯರಿಗೆ ನೀಡುತ್ತದೆ.

ಗರ್ಭಕೋಶ, ಅಂಡಾಶಯಗಳ ಸಮಸ್ಯೆ

ಈ ಕಾಲದಲ್ಲಿ ಹದಿಹರೆಯದವರನ್ನೂ ಸೇರಿಸಿ ಎಲ್ಲ ವಯಸ್ಸಿನ ಹೆಣ್ಣುಮಕ್ಕಳನ್ನು ಒಂದಿಲ್ಲೊಂದು ವಿಧದಿಂದ ಕಾಡುತ್ತಿರುವುದು ಗರ್ಭಕೋಶ ಹಾಗೂ ಅಂಡಾಶಯಕ್ಕೆ ಸಂಬಂಧಿಸಿದ ಸಮಸ್ಯೆ. ಕೆಲವರಿಗೆ ಋತುಸ್ರಾವದ ಸಂದರ್ಭದಲ್ಲಿ ಹೆಚ್ಚು ಸ್ರಾವವಾದರೆ, ಕೆಲವರಿಗೆ ಕಡಿಮೆ, ಹಲವರಿಗೆ ಆ ಸ್ರಾವದೊಂದಿಗೆ ಅತೀವ ನೋವು, ಕೆಲವರಿಗೆ ಸ್ರಾವವೇ ಆಗುವುದಿಲ್ಲ. ಇತ್ತೀಚೆಗೆ ಹೆಚ್ಚು ಮಹಿಳೆಯರನ್ನು ಕಾಡುತ್ತಿರುವ ಇನ್ನೊಂದು ಸಮಸ್ಯೆ ಎಂದರದು ವಿವಿಧ ರೀತಿಯ ಸಿಸ್ಟ್‌ಗಳು. ಇವು ಅಂಡಾಶಯದಲ್ಲಿ ಕಂಡುಬರುತ್ತವೆ. ಹಲವು ಮಹಿಳೆಯರಲ್ಲಿ ಬಂಜೆತನವೂ ಕೂಡ ಹೆಚ್ಚಾಗುತ್ತಿದೆ. ಇವುಗಳಿಗೆ ವಿವಿಧ ವೈದ್ಯ ಪದ್ಧತಿಯಲ್ಲಿ ಹಲವು ಚಿಕಿತ್ಸೆಗಳಿವೆ. ಆದರೆ ಆ ಎಲ್ಲ ಚಿಕಿತ್ಸೆಗಳಿಗೂ ಪೂರಕವಾಗಿ ಬೇಕಾಗಿರುವುದು ಬದಲಾದ ಉತ್ತಮ ಜೀವನ ಶೈಲಿ. ಅದರಲ್ಲಿ ಮುಖ್ಯವಾದುದು ನಿರಂತರವಾದ ಯೋಗಾಭ್ಯಾಸ.

ಸೂರ್ಯ ನಮಸ್ಕಾರ, ತ್ರಿಕೋನಾಸನ, ಪಾರ್ಶ್ವ ಕೋನಾಸನ, ವೀರಭದ್ರಾಸನ, ಉತ್ಥಾನ ಪಾದಾಸನ, ಸರ್ವಾಂಗಾಸನ, ಹಲಾಸನ, ನೌಕಾಸನ, ಮತ್ಸ್ಯಾಸನ, ಭುಜಂಗಾಸನ, ಧನುರಾಸನ, ನಾವಾಸನ, ಬದ್ಧಕೋನಾಸನ, ಪದ್ಮಾಸನ ಮುಂತಾದ ಆಸನಗಳ ಜೊತೆಗೆ ನಾಡಿಶುದ್ಧಿ ಪ್ರಾಣಾಯಾಮದ ನಿಯಮಿತವಾದ ನಿರಂತರ ಅಭ್ಯಾಸ ಋತುಸ್ರಾವದ ಹಲವು ಸಮಸ್ಯೆಗಳನ್ನು ಇಲ್ಲವಾಗಿಸುತ್ತದೆ.

ಪ್ರಾಣಾಯಾಣ ಹೆಚ್ಚಿಸುತ್ತೆ ಎನರ್ಜಿ ಲೆವೆಲ್, ಇದೊಂದು ಹೆಲ್ದೀ ಲೈಫ್‌ಸ್ಟೈಲ್! 

ಸಣ್ಣ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ, ಎಲ್ಲ ಮಹಿಳೆಯರನ್ನೂ ಕಾಡುವ ಋತುಸ್ರಾವದ ಸಂದರ್ಭದ ಹೊಟ್ಟೆನೋವು ಈ ಅಭ್ಯಾಸಗಳಿಂದ ಕಡಿಮೆಯಾಗುತ್ತದೆ. ಅನಿಯಮಿತವಾದ ಋತುಚಕ್ರವನ್ನು ನಿಯಮಿತಗೊಳಿಸುವುದಕ್ಕೂ ಕೂಡ ಈ ಅಭ್ಯಾಸಗಳು ಸಹಕಾರಿ.

ಅಂಡಾಶಯದಲ್ಲಿನ ಸಿಸ್ಟ್‌ಆರಂಭಿಕ ಹಂತದಲ್ಲಿದ್ದರೆ, ಆಹಾರದ ಬದಲಾವಣೆಗಳೊಂದಿಗೆ ಈ ಮೇಲಿನ ಅಭ್ಯಾಸಗಳನ್ನು ತಜ್ಞರ ಸಲಹೆಯಂತೆ ಅಭ್ಯಾಸ ಮಾಡುವುದರಿಂದ ಸಿಸ್ಟಿನಿಂದ ಮುಕ್ತಿ ಪಡೆಯಬಹುದು. ಸಿಸ್ಟ್‌ ದೊಡ್ಡದಾಗಿದ್ದರೂ ಕೂಡ ಇತರ ಚಿಕಿತ್ಸೆಗಳೊಂದಿಗೆ ಈ ಅಭ್ಯಾಸಗಳು ಅವುಗಳ ನಿವಾರಣೆಯಲ್ಲಿ ಪೂರಕವಾಗಿ ಕೆಲಸ ಮಾಡುತ್ತವೆ.

ಸೊಂಟ ಹಾಗೂ ಮೈ ಕೈ ನೋವು

ಹೆಚ್ಚಿನ ಮಹಿಳೆಯರನ್ನು ಜೀವನದ ಒಂದಲ್ಲ ಒಂದು ಹಂತದಲ್ಲಿ ಕಾಡುವುದು ಸೊಂಟನೋವು. ಇದು ಸಾಮಾನ್ಯವಾಗಿ ಸ್ನಾಯುಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಅದಕ್ಕೆ ಯೋಗದಷ್ಟು ಉತ್ತಮ ಚಿಕಿತ್ಸೆ ಬೇರೊಂದಿಲ್ಲ.

ಅದೇ ರೀತಿ ಮೈ ಕೈ ನೋವು ಕೂಡ ಮಹಿಳೆಯರನ್ನು ಆಗಾಗ ಕಾಡುತ್ತದೆ. ಪರೀಕ್ಷಿಸುವಾಗ ಯಾವುದೇ ಸಮಸ್ಯೆ ಕಂಡುಬರದಿದ್ದರೂ ಕೂಡ ನೋವು ಕಾಡುತ್ತಿರುತ್ತದೆ. ಇದಕ್ಕೆ ನೋವಿನ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಅಲ್ಲಿ ಪ್ರಯೋಜನಕ್ಕೆ ಬರುವುದು ಯೋಗಾಭ್ಯಾಸ.

#Yoga ಬೆಳೆಯೋ ಮಕ್ಕಳ ಎತ್ತರ ಹೆಚ್ಚಿಸೋ ಯೋಗ ತಾಡಾಸನ 

ಸೂರ್ಯ ನಮಸ್ಕಾರ, ತಾಡಾಸನ, ತ್ರಿಕೋನಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ಅರ್ಧಕಟಿಚಕ್ರಾಸನ, ಕಟಿಚಕ್ರಾಸನ, ಸೇತುಬಂಧಾಸನ, ಪವನಮುಕ್ತಾಸನ, ಮತ್ಸ್ಯಾಸನ, ಭುಜಂಗಾಸನ, ಶಲಭಾಸನ, ನಾವಾಸನ, ವಕ್ರಾಸನ, ಜಾನುಶೀರ್ಷಾಸನ, ಗೋಮುಖಾಸನ ಮುಂತಾದ ಆಸನಗಳು. ನಾಡಿಶುದ್ಧಿ, ಭಸ್ತ್ರಿಕಾ ಇತ್ಯಾದಿ ಪ್ರಾಣಾಯಾಮಗಳು ಈ ಸಂದರ್ಭಗಳಲ್ಲಿ ಉಪಕಾರಿ.

ಬೆನ್ನಿನ ಮೂಳೆಯ ಸಮಸ್ಯೆ ಇದ್ದಂತಹ ಸಂದರ್ಭದಲ್ಲಿ ಕೆಲವು ಅಭ್ಯಾಸಗಳನ್ನಷ್ಟೇ ಮಾಡಬಹುದಾಗಿದ್ದು ತಜ್ಞರ ಉಪಸ್ಥಿತಿಯಲ್ಲಿಯೇ ಅಭ್ಯಾಸ ಮಾಡಬೇಕು.

ಮಾನಸಿಕ ಕಿರಿಕಿರಿ ಹಾಗೂ ಒತ್ತಡ

ಆಕೆ ಮನೆಯೊಳಗಿರಲಿ ಹೊರಗಿರಲಿ ಮಾನಸಿಕ ಕಿರಿಕಿರಿ ಹಾಗೂ ಒತ್ತಡ ಅವಳ ಸಂಗಾತಿಗಳು. ಆಕೆಯ ದೇಹದಲ್ಲಿನ ರಸದೂತಗಳು ಒಂದು ಹಂತದಲ್ಲಿ ಆಕೆಯ ಮಾನಸಿಕ ಸ್ಥಿತಿಯನ್ನು ಏರುಪೇರು ಮಾಡುತ್ತವೆ. ಇವುಗಳಲ್ಲಿ ಹಲವನ್ನು ಅವಳು ನಿಯಂತ್ರಿಸಲಾರಳು. ಆದರೆ ಆಕೆಯ ಮನಸ್ಸನ್ನು ಸಮಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ಆಕೆ ಯೋಗವನ್ನು ಆಶ್ರಯಿಸಬಹುದು. ಯೋಗಾಭ್ಯಾಸವು ಮುಖ್ಯವಾಗಿ ಕೆಲಸ ಮಾಡುವುದೇ ಮನಸ್ಸಿನ ಮೇಲೆ. ಅದನ್ನೇ ’ಯೋಗಶ್ಚಿತ್ತವೃತ್ತಿ ನಿರೋಧಃ’ ಎಂದು ಎರಡನೆಯ ಸೂತ್ರದಲ್ಲಿ ಪತಂಜಲಿ ಮಹರ್ಷಿಗಳು ಹೇಳಿರುವುದು.

ಯೋಗಾಸನಗಳ ಜೊತೆಗೇ ದೀರ್ಘಕಾಲ ನಾಡಿಶುದ್ಧಿ, ಭ್ರಾಮರೀ, ಶೀತಲೀ ಮುಂತಾದ ಪ್ರಾಣಾಯಾಮಗಳನ್ನೂ ಧ್ಯಾನವನ್ನೂ ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಹೊರಗಿನ ಈ ಎಲ್ಲ ಪ್ರಚೋದಕಗಳ ಪ್ರಭಾವ ಆಕೆಯ ಮನಸ್ಸಿನ ಮೇಲೆ ಆಗದಂತೆ ತಡೆಯಬಹುದು.

ಮಲಬದ್ಧತೆ, ಅಜೀರ್ಣ, ತಲೆನೋವು, ಗಂಟುನೋವು ಮುಂತಾದವುಗಳಿಗೂ ಯೋಗ ಉತ್ತಮ ಪರಿಹಾರ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ ಮಹಿಳೆಯರೂ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಲು ಸರಿಯಾದ ಆಹಾರಕ್ರಮದೊಂದಿಗೆ ನಿಯಮಿತವಾಗಿ ಮಾಡುವ ಯೋಗಾಭ್ಯಾಸಕ್ಕಿಂತ ಹೆಚ್ಚಿನ ಉತ್ತಮ ವಿಷಯ ಬೇರಾವುದೂ ಇಲ್ಲ ಎನ್ನುವುದನ್ನು ನಾವು ಅರಿತುಕೊಳ್ಳಬೇಕಿದೆ. ಇದು ಗುಣಪಡಿಸುವ ಚಿಕಿತ್ಸೆಯೂ ಹೌದು, ಸಮಸ್ಯೆಗಳನ್ನು ತಡೆಯುವ ಸಾಧನವೂ ಹೌದು. ಯೋಗಾಸನ ಪ್ರಾಣಾಯಾಮಗಳು ಶಾಸ್ತ್ರೀಯವಾದವೂ ಹೌದು, ಆಧುನಿಕ ವಿಜ್ಞಾನದ ಪ್ರಯೋಗಾಲಯದಲ್ಲಿ ಪ್ರಮಾಣೀಕೃತವಾದವೂ ಹೌದು.

ಯೋಗಾಭ್ಯಾಸ ಮಾಡುವ ಮಹಿಳೆಯರು ಗಮನದಲ್ಲಿಡಬೇಕಾದ ಅಂಶಗಳು:

- ಋತುಸ್ರಾವದ ಸಂದರ್ಭದಲ್ಲಿ ಅಭ್ಯಾಸಗಳನ್ನು ಮಾಡದಿರುವುದು. ವಿಶ್ರಾಂತಿ ಪಡೆಯುವುದು.

- ಗರ್ಭ ಧರಿಸಿರುವ ಮಹಿಳೆಯರು ಯೋಗಾಭ್ಯಾಸವನ್ನು ಮಾಡುವುದು ಯೋಗ್ಯವಲ್ಲ. ವೈದ್ಯರ ಅನುಮತಿಯೊಂದಿಗೆ, ತಜ್ಞರ ಉಪಸ್ಥಿತಿಯಲ್ಲಿ ಕೆಲವೇ ಅಭ್ಯಾಸಗಳನ್ನಷ್ಟೇ ಮಾಡಬಹುದು.

- ಹಾಲುಣಿಸುವ ತಾಯಂದಿರು ಮಿತಿಯಲ್ಲಿ ಅಭ್ಯಾಸ ಮಾಡುವುದು.

- ಯಾವುದೇ ರೀತಿಯ ನೋವು ಇದ್ದ ಸಂದರ್ಭದಲ್ಲಿ ಕೆಲವೊಂದಷ್ಟು ಅಭ್ಯಾಸಗಳನ್ನು ನಿಲ್ಲಿಸುವುದು.

- ಯಾವುದೇ ಅಭ್ಯಾಸವನ್ನು ಪುಸ್ತಕ, ಟಿವಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಅಭ್ಯಾಸ ಮಾಡದಿರುವುದು. ತಜ್ಞರ ಉಪಸ್ಥಿತಿಯಲ್ಲಿಯೇ ಯೋಗಾಸನ ಪ್ರಾಣಾಯಾಮಗಳನ್ನು ಕಲಿತು ಅಭ್ಯಸಿಸುವುದು.

- ತೂಕ ಕಳೆದುಕೊಳ್ಳಬೇಕು ಎಂಬ ಆಸೆಯಿಂದ ಅಥವಾ ಇನ್ಯಾವುದೇ ಕಾರಣದಿಂದ ಮಿತಿಮೀರಿ ಅಭ್ಯಾಸ ಮಾಡದಿರುವುದು.

- ನಿಮ್ಮ ದೇಹಕ್ಕೆ ಎಷ್ಟು ಹೊತ್ತು, ಯಾವೆಲ್ಲ ಸರಳ ಅಭ್ಯಾಸಗಳನ್ನು ಮಾಡುವ ಸಾಮರ್ಥ್ಯವಿದೆಯೋ ಅದನ್ನಷ್ಟೇ ಮಾಡುವುದು.

- ಇವುಗಳಲ್ಲದೇ, ಯೋಗಾಭ್ಯಾಸದ ಸಾಮಾನ್ಯ ನಿಯಮಗಳಾದ ಸ್ವಚ್ಛ ಪ್ರದೇಶದಲ್ಲಿ ಅಭ್ಯಾಸ ಮಾಡುವುದು, ಸ್ವಚ್ಛ ಹಾಗೂ ಸಡಿಲ ಹತ್ತಿಯ ಬಟ್ಟೆಗಳನ್ನು ಧರಿಸುವುದು, ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡುವುದು ಇತ್ಯಾದಿ ನಿಯಮಗಳನ್ನು ಪಾಲಿಸಬೇಕು.

Follow Us:
Download App:
  • android
  • ios