ಹೆಚ್ಚಾಗ್ತಿರೋ ಹಾರ್ಟ್ ಅಟ್ಯಾಕ್, ಜಿಮ್ ಸೇರುವ ಮುನ್ನ ಈ ಟೆಸ್ಟ್ ಅಗತ್ಯ
ಜಿಮ್ ನಲ್ಲಿ ಹೃದಯಾಘಾತ ಹೆಚ್ಚಾಗ್ತಿದೆ ಎನ್ನುವ ಆರೋಪ ಒಂದಿದೆ. ಇದಕ್ಕೆ ಕಾರಣ ನೀವೇ ಆಗಿರ್ತೀರಿ. ಜಿಮ್ ಸೇರುವ ಮುನ್ನ ಕೆಲ ಎಚ್ಚರಿಕೆ ತೆಗೆದುಕೊಂಡ್ರೆ ನಿಮ್ಮ ಜೀವ ಕಾಪಾಡಿಕೊಳ್ಬಹುದು.

ಫಿಟ್ ಕಾಣಿಸೋರಿಗೂ ಹಾರ್ಟ್ ಅಟ್ಯಾಕ್
ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗ್ತಿದ್ದಂತೆ ಜನರು ಆಹಾರದ ಜೊತೆ ಫಿಟ್ನೆಸ್ ಗೆ ಮಹತ್ವ ನೀಡ್ತಿದ್ದಾರೆ. ಜಿಮ್ ಗೆ ಹೋಗೋರ ಸಂಖ್ಯೆ ಗಣನೀಯವಾಗಿ ಏರಿದೆ. ಆದ್ರೆ ಜಿಮ್ ಗೆ ಹೋಗಿ ಫಿಟ್ ಆಗಿರೋರು ಕೂಡ ಹಠಾತ್ ಹೃದಯಾಘಾತಕ್ಕೆ ಒಳಗಾಗ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಿಮ್ ನಲ್ಲಿ ಅಥವಾ ಜಿಮ್ ಮುಗಿಸಿ ಬರ್ತಿದ್ದಂತೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಭಯ ಪಡ್ತಿದ್ದಾರೆ ಜನ
ಫಿಟ್ ಆಗಿರೋಕೆ ಜನ ಜಿಮ್ ಗೆ ಹೋಗ್ತಾರೆ. ಆದ್ರೆ ಜಿಮ್ ನಲ್ಲೇ ಹೃದಯಾಘಾತವಾದ್ರೆ ಭಯ ಸಾಮಾನ್ಯ. ಇದೇ ಕಾರಣಕ್ಕೆ ಅನೇಕರಲ್ಲಿ ಜಿಮ್ ಬಗ್ಗೆ ತಪ್ಪು ಅಭಿಪ್ರಾಯ ಹುಟ್ಕೊಂಡಿದೆ. ಮಕ್ಕಳು ಜಿಮ್ ಗೆ ಹೋಗ್ತಾರೆ ಅಂದ್ರೆ ಪಾಲಕರು ಆತಂಕಪಡುವ ಸ್ಥಿತಿ ಎದುರಾಗಿದೆ.
ಜಿಮ್ ಗೆ ಹೋಗೋ ಮುನ್ನ ಏನು ಮಾಡ್ಬೇಕು?
ಜಿಮ್ ನಿಮ್ಮ ಆರೋಗ್ಯ ವೃದ್ಧಿಸಿ, ಫಿಟ್ನೆಸ್ ಕಾಪಾಡೋಕೆ ಸಹಾಯ ಮಾಡುತ್ತದೆ. ಆದ್ರೆ ಜಿಮ್ ಗೆ ಸೇರುವ ಮುನ್ನ ಕೆಲವೊಂದು ವಿಷ್ಯವನ್ನು ನೀವು ತಿಳಿದಿರಬೇಕಾಗುತ್ತದೆ. 30 ವರ್ಷ ಮೇಲ್ಪಟ್ಟ ಹಾಗೂ ಅನೇಕ ದಿನಗಳಿಂದ ದೈಹಿಕ ಅದ್ರಲ್ಲೂ ಕಠಿಣ ವ್ಯಾಯಾಮಗಳನ್ನು ಮಾಡದ ಜನರು ಕೆಲವೊಂದು ಪರೀಕ್ಷೆಗಳನ್ನು ಮಾಡಿಸಿಕೊಳ್ಬೇಕು.
ಪರೀಕ್ಷೆ ಎಷ್ಟು ಮುಖ್ಯ
ನೀವು ಜಿಮ್ ಸೇರುವ ಪ್ಲಾನ್ ನಲ್ಲಿದ್ದರೆ ಮೊದಲು ಕೆಲ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಅದ್ರಲ್ಲಿ ನಿಮ್ಮ ಹೃದಯ ಗಟ್ಟಿಯಾಗಿದ್ಯಾ, ಕಠಿಣ ವ್ಯಾಯಾಮಕ್ಕೆ ಸಿದ್ಧವಾಗಿದ್ಯ ಎಂಬುದು ತಿಳಿಯುತ್ತದೆ. ನಿಮ್ಮ ಹೃದಯದ ಗುಪ್ತ ಸಮಸ್ಯೆ ಕೂಡ ಇದ್ರಲ್ಲಿ ತಿಳಿಯುತ್ತದೆ.
ಇಸಿಜಿ
ಜಿಮ್ ಗೆ ಹೋಗುವ ಮುನ್ನ ಇಸಿಜಿ ಮಾಡಿಸ್ಕೊಳ್ಳಿ. ಈ ಪರೀಕ್ಷೆ ಹೃದಯದ ಚಟುವಟಿಕೆಯನ್ನು ರೆಕಾರ್ಡ್ ಮಾಡುತ್ತದೆ. ಹೃದಯ ಬಡಿತ, ಹೃದಯದಲ್ಲಾಗ್ತಿರುವ ಅಡೆತಡೆ ಅಥವಾ ಹಿಂದೆ ಆಗಿದ್ದ ಸೈಲೆಂಟ್ ಹೃದಯಾಘಾತದ ಚಿಹ್ನೆಗಳನ್ನು ಪತ್ತೆ ಮಾಡುತ್ತದೆ. ಇದು ನಿರ್ಣಾಯಕ ಪರೀಕ್ಷೆ ಅಲ್ದೆ ಇದ್ರೂ ಇದರಿಂದ ಹೃದಯದ ಸಮಸ್ಯೆಯನ್ನು ಪತ್ತೆ ಮಾಡ್ಬಹುದು.
2D ಎಕೋ
ಈ ಪರೀಕ್ಷೆಯು ಹೃದಯದ ರಚನೆ ಮತ್ತು ಕಾರ್ಯವನ್ನು ಪರೀಕ್ಷಿಸಲು ಅಲ್ಟ್ರಾಸೌಂಡ್ ಬಳಸುತ್ತದೆ. ಇದು ಹೈಪರ್ಟ್ರೋಫಿಕ್ ಕಾರ್ಡಿಯೊಮಿಯೋಪತಿಯಂತಹ ಗಂಭೀರ ಪರಿಸ್ಥಿತಿಗಳನ್ನು ಪತ್ತೆ ಮಾಡುತ್ತದೆ. ಹೈಪರ್ಟ್ರೋಫಿಕ್ ಕಾರ್ಡಿಯೊಮಿಯೋಪತಿ ಕೆಲವೊಮ್ಮೆ ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.
ಟಿಎಂಟಿ
ನಿಯಂತ್ರಿತ ವಾತಾವರಣದಲ್ಲಿ ವ್ಯಾಯಾಮದ ಸಮಯದಲ್ಲಿ ಹೃದಯದ ಕಾರ್ಯಕ್ಷಮತೆಯನ್ನು ಈ ಪರೀಕ್ಷೆ ನಿರ್ಣಯಿಸುತ್ತದೆ. ಹೆಚ್ಚಿನ ತೀವ್ರತೆಯ ವ್ಯಾಯಾಮಗಳಲ್ಲಿ ತೊಡಗಿರುವ ಜನರಿಗೆ ಇದು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.
ಕಾರ್ಡಿಯೋ ಬಯೋಮಾರ್ಕರ್
ಇದು ರಕ್ತ ಪರೀಕ್ಷೆ. ಹೃದಯ ಸ್ನಾಯುವಿಗೆ ಒತ್ತಡ ಅಥವಾ ಸಣ್ಣ ಹಾನಿಯನ್ನು ಪತ್ತೆ ಮಾಡುತ್ತದೆ. ಇದು ಯಾವುದೇ ಲಕ್ಷಣಗಳಿಲ್ಲದೆ ಸಂಭವಿಸಬಹುದು.
ಲಿಪಿಡ್ ಪ್ರೊಫೈಲ್ ಮತ್ತು HbA1c
ಈ ಪರೀಕ್ಷೆಯು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಹಾಗೂ ಕಳೆದ ಮೂರು ತಿಂಗಳುಗಳಲ್ಲಿ ಸರಾಸರಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಳೆಯುತ್ತದೆ. ಈ ಪರೀಕ್ಷೆಯು ಮಧುಮೇಹ ಮತ್ತು ಮೆಟಾಬಾಲಿಕ್ ಸಿಂಡ್ರೋಮ್ ಅಪಾಯವನ್ನು ನಿರ್ಣಯಿಸುವಲ್ಲಿ ಸಹ ಸಹಾಯಕವಾಗಿದೆ.
ವಿಟಮಿನ್ ಪರೀಕ್ಷೆ
ವಿಟಮಿನ್ ಡಿ ಮತ್ತು ಬಿ 12 ಕೊರತೆಗಳು ಶಕ್ತಿಯ ಮಟ್ಟ, ಮೂಳೆ ಆರೋಗ್ಯ ಮತ್ತು ಸ್ನಾಯುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಇವುಗಳಿಗೆ ಪರೀಕ್ಷೆ ಅತ್ಯಗತ್ಯ.
ಇದು ನೆನಪಿರಲಿ
ಈ ಪರೀಕ್ಷೆಗಳನ್ನು ಐಷಾರಾಮಿ ಎಂದು ಪರಿಗಣಿಸಬೇಡಿ. ಬದಲಿಗೆ ಜೀವ ಉಳಿಸುವ ಕ್ರಮವೆಂದು ಪರಿಗಣಿಸಬೇಡಿ. ಈ ಪರೀಕ್ಷೆಗಳನ್ನು ಮಾಡಿಸಿ ನಿಮ್ಮ ವೈದ್ಯರಿಂದ ಒಪ್ಪಿಗೆ ಪಡೆದ ಮೇಲೆ ನೀವು ಜಿಮ್ ದಿನಚರಿಯನ್ನು ಪುನರಾರಂಭಿಸಿ. ಸಕಾಲಿಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಹಠಾತ್ ಹೃದಯ ಸ್ತಂಭನ ತಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

