ಎದೆ ನೋವು, ಎದೆಯುರಿ ಮಾತ್ರವಲ್ಲದೇ ಗಂಟಲು ಮತ್ತು ದವಡೆ ನೋವುಗಳೂ ಹೃದಯಾಘಾತದ ಮುನ್ಸೂಚನೆಯಾಗಿದೆ. ಆದರೆ ಇದು ಯಾವ ಸಮಯದಲ್ಲಿ ಆಗುವ ನೋವು? ಈ ಬಗ್ಗೆ ಹೃದಯ ತಜ್ಞ ಡಾ. ಸಿ.ಎನ್​. ಮಂಜುನಾಥ್​ ಹೇಳಿದ್ದಾರೆ ಕೇಳಿ... 

ಈಗ ದಿನಬೆಳಗಾದರೆ ಯಾರೋ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿಯೇ ಹೆಚ್ಚಾಗಿಬಿಟ್ಟಿದೆ. ಅದರಲ್ಲಿಯೂ ಹದಿಹರೆಯದವರೇ ಹಾರ್ಟ್​ ಎಟ್ಯಾಕ್​ಗೆ ಬಲಿಯಾಗುತ್ತಿದ್ದಾರೆ. ಕೆಲವೊಮ್ಮೆ ಯಾವುದೇ ಸೂಚನೆ ನೀಡದೆಯೇ ಈ ಮಹಾಮಾರಿ ಹೃದಯವನ್ನು ಆವರಿಸಿಕೊಳ್ಳುತ್ತಿದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಮುಂಚೆಯೇ ಎಷ್ಟೋ ಬಾರಿ ಬೇರೆ ಬೇರೆ ರೀತಿಯಲ್ಲಿ ಹೃದಯ ತನ್ನನ್ನು ಜೋಪಾನ ಮಾಡು ಎಂದು ಹೇಳುತ್ತಿದ್ದರೂ, ಧಾವಂತದ ಈ ಜಮಾನಾದಲ್ಲಿ ಅದನ್ನು ಕಡೆಗಣಿಸುವವರೇ ಹೆಚ್ಚು. ಏನಾದ್ರೂ ಸ್ವಲ್ಪ ಸಮಸ್ಯೆ ಆಯಿತು ಎಂದರೆ, ಡಾಕ್ಟರ್​ ಬಳಿ ನಾಳೆ ಹೋಗೋಣ ಬಿಡು ಎನ್ನುವ ಮಾತೇ. ಆ ನಾಳೆ ಬರುವುದೇ ಇಲ್ಲ. ನಾಳೆ ನಾಳೆ ಎನ್ನುತ್ತಲೇ ಇಹಲೋಕ ತ್ಯಜಿಸಿ ಹೋಗುವವರೇ ಹೆಚ್ಚಾಗಿದ್ದಾರೆ. ಇನ್ನು ಹೃದಯದಲ್ಲಿ ಸಮಸ್ಯೆ ಕಾಣಿಸಿದಾಗ ಆ್ಯಸಿಡಿಟಿ ಇದ್ದಿರಬಹುದು, ನಿನ್ನೆ ಅದನ್ನು ತಿಂದೆ, ಹಸಿವೆಯಿಂದ ಇದ್ದೆ... ಹೀಗೆ ಏನೇನೋ ನಮಗೆ ನಾವೇ ನೆಪ ಕೊಟ್ಟುಕೊಂಡು ಸಾವನ್ನು ಬರಮಾಡಿಕೊಳ್ಳುತ್ತಿದ್ದೇವೆ ಎಂದು ಇದಾಗಲೇ ಕೆಲವು ವೈದ್ಯರೂ ಹೇಳಿದ್ದಾರೆ.

ಆದರೆ ಇದೀಗ, ಹೃದಯಾಘಾತದ ಮುನ್ಸೂಚನೆಯ ಬಗ್ಗೆ ಮಾಹಿತಿ ಕೊಟ್ಟಿರುವ ಖ್ಯಾತ ಹೃದಯ ತಜ್ಞ ಡಾ.ಮಂಜುನಾಥ್​ ಅವರು, ಹೃದಯಾಘಾತದ ಮುನ್ಸೂಚನೆ ಕೇವಲ ಎದೆ ನೋವು, ಎದೆಯುರಿ ಮಾತ್ರವಲ್ಲದೇ ದವಡೆ, ಗಂಟಲು ನೋವುಗಳೂ ಅದಕ್ಕೆ ಕಾರಣವಾಗಿರಬಹುದು ಎಂದಿದ್ದಾರೆ. ಹಾಗೆಂದು ಎಲ್ಲಾ ಬಾರಿ ಬರುವ ದವಡೆ, ಗಂಟಲು ನೋವಿನ ಬಗ್ಗೆ ಅವರು ಹೇಳಿದ್ದಲ್ಲ. ಪಾಲಿಟಿಕಲ್​ಟಿವಿಕನ್ನಡ ಇನ್ಸ್​ಟಾಗ್ರಾಮ್​ನಲ್ಲಿ ಡಾ.ಮಂಜುನಾಥ್​ ಅವರ ಈ ಸಂದರ್ಶವನ್ನು ಶೇರ್​ ಮಾಡಲಾಗಿದೆ. ಅದರಲ್ಲಿ ವೈದ್ಯರು ಹೇಳಿದ್ದೇನೆಂದರೆ, 'ಹೃದಯ ಮತ್ತು ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಗಳು ನಿಖರವಾಗಿರುತ್ತವೆ. ನಡೆದಾಗ, ಓಡಾಡಿದಾಗ ಎದೆ ನೋವು ಇದ್ದರೆ ಇಲ್ಲವೇ ಎದೆ ಉರಿ ಇದ್ದರೆ ಅದರಲ್ಲಿಯೂ ಊಟ ಮಾಡಿದ ಬಳಿಕ ಅಪ್​ನಲ್ಲಿ ನಡೆಯುವಾಗ ನಿಮಗೆ ಏನಾದ್ರೂ ಎದೆನೋವು, ಎದೆ ಉರಿ, ಗಂಟಲು ನೋವು ಅಥವಾ ದವಡೆ ನೋವು... ಈ ರೀತಿ ಸಮಸ್ಯೆ ಕಾಣಿಸಿಕೊಂಡರೆ ಅದು ಹೃದಯಕ್ಕೆ ಸಂಬಂಧಪಟ್ಟಿದ್ದಾಗಿದ್ದು, ಅದು ಹೃದಯಾಘಾತದ ಮುನ್ಸೂಚನೆ ಆಗಿರುತ್ತದೆ' ಎಂದಿದ್ದಾರೆ.

'ಆರೋಗ್ಯ ಪರೀಕ್ಷೆಯನ್ನು ಈ ವರ್ಷ ಮಾಡಿಸಿಕೊಂಡಿದ್ದೇನೆ. ಇನ್ನೊಂದೈದು- ಹತ್ತು ವರ್ಷ ಪರೀಕ್ಷೆಯನ್ನು ಮುಂದೂಡುತ್ತಾ ಹೋಗಬೇಡಿ. 35 ವರ್ಷ ಆದ ಪುರುಷರು, 45 ವರ್ಷ ಆದ ಮಹಿಳೆಯರು ವಾರ್ಷಿಕವಾಗಿ ಸಿಂಪಲ್​ ಒಂದು ಟೆಸ್ಟ್​ ಮಾಡಿಸಿಕೊಳ್ಳಿ. ಬಿಪಿ, ಶುಗರ್​, ಕೊಲೆಸ್ಟ್ರಾಲ್​ ಚೆಕ್​ ಮಾಡಿಸಿಕೊಳ್ಳಿ. ಥ್ರೆಡ್​ಮಿಲ್​ ಇಸಿಜಿ ಮಾಡಿಸಿಕೊಳ್ಳಿ ಎಂದಿದ್ದಾರೆ ವೈದ್ಯರು. ಮುನ್ನೆಚ್ಚರಿಕೆ ವಹಿಸಿ ಅಷ್ಟೇ, ಇದಕ್ಕೆ ಆತಂಕ ಪಡುವ ಅವಶ್ಯಕತೆ ಇಲ್ಲ' ಎನ್ನುವ ಮೂಲಕ ಆರೋಗ್ಯ ತಪಾಸಣೆಯು ಎಷ್ಟು ಮುಖ್ಯ ಎನ್ನುವುದನ್ನು ವೈದ್ಯರು ಹೇಳಿದ್ದಾರೆ.

ಅದೇ ಇನ್ನೊಂದೆಡೆ ರಾಜ್ಯದಲ್ಲಿ ಸ್ಟೆಮಿ ಯೋಜನೆ ಜಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಯೋಜನೆ ಇದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಡಿ ಇದನ್ನು ಜಾರಿಗೆ ತರಲಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಹೃದಯಾಘಾತಕ್ಕೆ ತ್ವರಿತ ಚಿಕಿತ್ಸೆಗೆ ಸ್ಟೆಮಿ ಸಹಾಯಕವಾಗಲಿದೆ. ರೋಗಿಗಳು ಎದೆನೋವು ಎಂದು ಆಸ್ಪತ್ರೆಗೆ ಬಂದಾಗ ಅವರಿಗೆ ಮೊದಲು ಇಸಿಜಿ ಮಾಡಿ ಮಾಹಿತಿಯನ್ನು ಜಯದೇವ ಹೃದ್ರೋಗ ಹಬ್‌ಗೆ ರವಾನಿಸಲಾಗುತ್ತದೆ. ಅಲ್ಲಿನ ನುರಿತ ವೈದ್ಯರು ಕಾಯಿಲೆ ಗುರುತಿಸಿ ಚಿಕಿತ್ಸೆ ಕುರಿತು ತಾಲೂಕು ಆಸ್ಪತ್ರೆ ವೈದ್ಯರಿಗೆ ಮಾರ್ಗದರ್ಶನ ನೀಡುತ್ತಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಹೃದ್ರೋಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.

View post on Instagram