ಬಾಗಲಕೋಟೆ: ದಂತ ವೈದ್ಯ ಮಹಾವಿದ್ಯಾಲಯದಲ್ಲಿ ಡಿಜಿಟಲ್ ಚಿಕಿತ್ಸಾ ಸೌಲಭ್ಯ
ಬಾಗಲಕೋಟೆ ನಗರದ ಬಿವಿವಿ ಸಂಘದ ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸುಲಭ ಮತ್ತು ಶೀಘ್ರ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಬಾಗಲಕೋಟೆ(ಮಾ.15): ನಗರದ ಬಿವಿವಿ ಸಂಘದ ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸುಲಭ ಮತ್ತು ಶೀಘ್ರ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಈ ಸಂಬಂಧ ಐದು ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳನ್ನು ಒಟ್ಟು ₹1.60 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದೆ.
₹25 ಲಕ್ಷ ಮೌಲ್ಯದ ಎಂಡೋ ಮೈಕ್ರೋಸ್ಕೋಪ್ ಯಂತ್ರ ದಂತ ರಕ್ಷಣಾ ವಿಭಾಗದಲ್ಲಿ ಹುಳುಕು ಹಲ್ಲಿನ ರೂಟ್ ಕೆನಾಲ್‌ನ ಪರಿಣಾಮಕಾರಿ ಚಿಕಿತ್ಸೆಗೆ ಬಳಸಲಾಗುವುದು. ನೂತನ ತಂತ್ರಜ್ಞಾನದ ಈ ಯಂತ್ರದಿಂದ ಸುಲಭವಾಗಿ ಚಿಕಿತ್ಸೆ ಮಾಡಲು ಸಾಧ್ಯವಾಗಲಿದೆ. ₹20 ಲಕ್ಷ ವೆಚ್ಚದಲ್ಲಿ ಖರೀದಿಸಲಾದ ಇಂಟ್ರಾ ಓರಲ್ ಸ್ಕ್ಯಾನರ್ ಯಂತ್ರ ಪ್ರೊಸ್ಥೊಡಾಂಟಿಕ್ಸ್ ವಿಭಾಗದಲ್ಲಿ ಬಾಯಿಯ ಸಂಪೂರ್ಣ ಡಿಜಿಟಲ್ ಸ್ಕ್ಯಾನ್ ಮಾಡಲು ಪ್ರಯೋಜನಕಾರಿಯಾಗಿದೆ. ಕ್ಷ - ಕಿರಣ ವಿಭಾಗದಲ್ಲಿ ಲಭ್ಯವಿರುವ ₹10 ಲಕ್ಷ ಮೌಲ್ಯದ ಆರ್‌ವಿಜಿ ಆ್ಯಂಡ್ ಒಪಿಜಿ ಯಂತ್ರವು ನೂತನ ತಂತ್ರಜ್ಞಾನದ ಕ್ಷ-ಕಿರಣ ಯಂತ್ರವಾಗಿದ್ದು, ಇದು ಬಾಯಿಯ ವಸಡು ಮತ್ತು ಹಲ್ಲುಗಳ ಕಾಯಿಲೆಗಳನ್ನು ಶೀಘ್ರ ಗುರುತಿಸಿ ಚಿಕಿತ್ಸೆಗೆ ಮಾಹಿತಿ ನೀಡುತ್ತದೆ.
ಮದರಸಾಗಳು ಭಯೋತ್ಪಾದಕರನ್ನು ತಯಾರು ಮಾಡುವ ಕಾರ್ಖಾನೆಗಳಾಗಿವೆ: ಪ್ರಮೋದ್ ಮುತಾಲಿಕ್ ಕಿಡಿ
₹5 ಲಕ್ಷ ವೆಚ್ಚದಲ್ಲಿ ಖರೀದಿಸಲಾದ ಲೇಜರ್ ಯಂತ್ರ ದಂತ ಕಾಯಿಲೆಯ ವಿವಿಧ ಶಸ್ತ್ರಚಿಕಿತ್ಸೆಗಳಿಗೆ ಬಹುಪಯೋಗಿಯಾಗಿದೆ. ಇವುಗಳ ಜೊತೆಗೆ ಸುಮಾರು ₹1ಕೋಟಿ ವೆಚ್ಚದಲ್ಲಿ ಖರೀದಿಸಲಾದ ಸಿಬಿಸಿಟಿ ಯಂತ್ರ ಅತೀ ಶೀಘ್ರದಲ್ಲಿ ಆಸ್ಪತ್ರೆಗೆ ಬರಲಿದ್ದು, ದಂತ ಕ್ಷೇತ್ರದಲ್ಲಿ ಇದೊಂದು ಅತ್ಯಾಧುನಿಕ ಕ್ಷ-ಕಿರಣ ಯಂತ್ರವಾಗಿದೆ. ಈ ಯಂತ್ರದ ಸಹಾಯದಿಂದ 3ಡಿ ಆಯಾಮದಲ್ಲಿ ಸಂಪೂರ್ಣವಾಗಿ ಬಾಯಿಯ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ದಂತ ವೈದ್ಯರು ಪರಿಣಾಮಕಾರಿ ಚಿಕಿತ್ಸೆ ನೀಡಲು ಇದು ಅನುಕೂಲಕರ. ಈ ಎಲ್ಲ ಆಧುನಿಕ ಯಂತ್ರಗಳು ಪಿಎಂಎನ್ಎಂ ದಂತ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಬಾಗಲಕೋಟೆ ಜಿಲ್ಲೆಯ ಎಲ್ಲ ದಂತ ವೈದ್ಯರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಶೀಘ್ರದಲ್ಲೇ ಸುಪರ್ ಸ್ಪೆಷಾಲಿಟಿ ದಂತ ಚಿಕಿತ್ಸಾ ವಿಭಾಗ ಆರಂಭವಾಗಲಿದೆ. ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸುಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಎಲ್ಲ ಸೌಲಭ್ಯಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಎಂ.ಸಜ್ಜನ(ಬೇವೂರ) ಮತ್ತು ಪ್ರಾಚಾರ್ಯ ಡಾ.ಶ್ರೀನಿವಾಸ ವನಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.