ಡೈಮಂಡ್ ಪ್ರಿನ್ಸೆಸ್ ಎಂಬ ಮೃತ್ಯು ನೌಕೆ ಈಗ ಭೂತಬಂಗಲೆ!
ಡೈಮಂಡ್ ಪ್ರಿನ್ಸೆಸ್ ಎಂಬ ಐಷಾರಾಮಿ ಹಡಗು, ಕೊರೋನಾ ವೈರಸ್‌ನಿಂದಾಗಿ ಇದ್ದಕ್ಕಿದ್ದಂತೆ ಸಾವಿನ ಅರಮನೆಯಾದ ಕತೆ ನಿಮಗೆ ಗೊತ್ತಾ? ಈಗ ಆ ಹಡಗಿನಿಂದ ಪ್ರಯಾಣಿಕರನ್ನೆಲ್ಲ ಖಾಲಿ ಮಾಡಲಾಗಿದೆ. ಆದರೆ ಮಾರಕ ವೈರಸ್‌ಗಳು ಅದರಲ್ಲಿ ಕಾದು ಕುಳಿತಿವೆ.
ಡೈಮಂಡ್ ಪ್ರಿನ್ಸೆಸ್ ಎಂಬ ಐಷಾರಾಮಿ ಹಡಗು, ಕೊರೋನಾ ವೈರಸ್‌ನಿಂದಾಗಿ ಇದ್ದಕ್ಕಿದ್ದಂತೆ ಸಾವಿನ ಅರಮನೆಯಾದ ಕತೆ ನಿಮಗೆ ಗೊತ್ತಾ? ಈಗ ಆ ಹಡಗಿನಿಂದ ಪ್ರಯಾಣಿಕರನ್ನೆಲ್ಲ ಖಾಲಿ ಮಾಡಲಾಗಿದೆ. ಆದರೆ ಮಾರಕ ವೈರಸ್‌ಗಳು ಅದರಲ್ಲಿ ಕಾದು ಕುಳಿತಿವೆ. ಕೊರೋನಾ ವೈರಸ್ ಹಬ್ಬಿ ಹರಡುತ್ತಿದ್ದ ಹೊತ್ತಿನಲ್ಲಿ ಸುಮಾರು 3700 ಮಂದಿಯನ್ನು ಹೊತ್ತುಕೊಂಡಿದ್ದ ಭಾರಿ ಪ್ರಯಾಣಿಕ ಹಡಗು ಅದು. ಇದರಲ್ಲಿದ್ದ ಸುಮಾರು 800 ಮಂದಿಯನ್ನು ಕೊರೋನಾ ಆಕ್ರಮಿಸಿಕೊಂಡಿತು. ಹತ್ತು ಜನರು ಹಡಗಿನಲ್ಲೇ ಯಾವ ವೈದ್ಯಕೀಯ ನೆರವೂ ಇಲ್ಲದೆ ಸತ್ತುಹೋದರು. ಉಳಿದವರು ಭಯಭೀತಿಯಲ್ಲಿ, ತಮ್ಮ ಸರದಿ ಯಾವಾಗ ಬರುತ್ತದೋ ಎಂಬ ಆತಂಕದಲ್ಲಿ ದಿನ ಕಳೆದರು.
ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಪ್ರಯಾಣಿಸಿದ ಪ್ರವಾಸಿಗನೊಬ್ಬ ಹಾಂಕಾಂಗ್ ಬಂದರಿನಲ್ಲಿ ಇಳಿದುಕೊಂಡ. ಫೆಬ್ರವರಿ ಒಂದರಂದು ಈತನಲ್ಲಿ ಕೋವಿಡ್ ವೈರಸ್ ಪತ್ತೆಯಾಯಿತು. ತಕ್ಷಣವೇ ಬೆಚ್ಚಿಬಿದ್ದು ಅಧಿಕಾರಿಗಳು ಅದರ ಮೂಲವನ್ನು ಶೋಧಿಸ ತೊಡಗಿದಾಗ, ಅದು ಹಡಗಿಗೆ ತಳುಕು ಹಾಕಿಕೊಂಡಿರುವುದು ಗೊತ್ತಾಯಿತು. ಕೂಡಲೇ ಹಡಗಿನ ಸಿಬ್ಬಂದಿಯನ್ನು ಎಚ್ಚರಿಸಲಾಯಿತು. ಎಚ್ಚೆತ್ತ ಸಿಬ್ಬಂದಿ, ಹಡಗಿನಲ್ಲಿದ್ದ ಅಷ್ಟೂ ಮಂದಿಯನ್ನು ತಮ್ಮ ತಮ್ಮ ರೂಮುಗಳ ಹೊರಗೆ ಬರದಂತೆ ನಿರ್ಬಂಧಿಸಿದರು. ಆಗ ಅದು ಜಪಾನ್‌ನ ಸಮುದ್ರ ತೀರದಲ್ಲಿ ತೇಲುತ್ತಾ ಇತ್ತು. ಜಪಾನ್ ಸರಕಾರ ಹಡಗನ್ನು ಟೋಕಿಯೋ ಸಮೀಪದ ಯೊಕೊಹಾಮ ಬಂದರಿನ ಬಳಿ ತಡೆದು ನಿಲ್ಲಿಸಿತು. ಹಡಗಿಗೆ ಯಾರೂ ಹೋಗದಂತೆ ಬರದಂತೆ ನಿರ್ಬಂಧಿಸಿತು. ಪ್ರಯಾಣಿಕರು ರೂಮುಗಳಲ್ಲೇ ಉಳಿದರು, ಆದರೆ ಅಷ್ಟರಲ್ಲಾಗಲೇ ತಡವಾಗಿತ್ತು. ನೌಕೆಯ ಸಿಬ್ಬಂದಿ ಪ್ರಯಾಣಿಕರಿಗೆ ಅಗತ್ಯ ಸೇವೆ ನೀಡಲು ಓಡಾಡಬೇಕಾಗಿತ್ತು. ಅವರಿಂದ ವೈರಸ್‌ಗಳು ಹಡಗಿನ ತುಂಬ ಹರಡಿದವು ಎಂದು ಅಂದಾಜು. ಸಿಬ್ಬಂದಿ ಕಿಚನ್, ಬಾತ್‌ರೂಮು, ಬೆಡ್‌ರೂಮುಗಳನ್ನು ಹಂಚಿಕೊಳ್ಳುತ್ತಿದ್ದ ಪರಿಣಾಮ ವೈರಸ್ ಇನ್ನಷ್ಟು ಉಲ್ಬಣಿಸಿತು. ಒಂದು ಹಂತದಲ್ಲಿ ಸಿಬ್ಬಂದಿಯೂ ಸೇರಿ 800 ಮಂದಿಗೆ ವೈರಸ್ ಹರಡಿತು. ಅದನ್ನು ಟ್ರೀಟ್ ಮಾಡಲು ಅಗತ್ಯ ವೈದ್ಯಕೀಯ ಸೌಲಭ್ಯ ಸಲಕರಣೆಗಳು ಹಡಗಿನಲ್ಲಿ ಇರಲಿಲ್ಲ.
ಪ್ರಯಾಣಿಕರೆಲ್ಲ ಭಯಭೀತಿಗಳಿಂದ ದಿನ ದೂಡತೊಡಗಿದರು. ಅದರಲ್ಲಿ ಭಾರತೀಯರೂ ಇದ್ದರು. ಎಲ್ಲರೂ ತಮ್ಮ ತಮ್ಮ ಸರಕಾರಗಳಿಗೆ ವಿನಂತಿ ಮಾಡಿಕೊಂಡು, ತಮ್ಮನ್ನು ಇಲ್ಲಿಂದ ಹೇಗಾದರೂ ಪಾರು ಮಾಡುವಂತೆ ಬೇಡಿ ಕೊಳ್ಳತೊಡಗಿದರು. ಎಲ್ಲ ಸರಕಾರಗಳೂ ವಿಷಯವನ್ನು ಗಂಭೀರವಾಗಿಯೇ ಪರಿಗಣಿಸಿದವಾದರೂ, ಪ್ರಯಾಣಿಕರನ್ನು ಸೂಕ್ತ ಮುನ್ನೆಚ್ಚರಿಕೆಗಳಿಲ್ಲದೆ ಕರೆ ತರುವುದು ಸವಾಲಾಗಿತ್ತು. ದೊಡ್ಡದೊಂದು ಗ್ಯಾಸ್ ಚೇಂಬರ್‌ನಲ್ಲಿ ತಮ್ಮನ್ನು ಹಾಕಿಟ್ಟುಕೊಂಡು ಅನುಭವ ಆಗುತ್ತಿದೆ ಎಂದು ಪ್ರಯಾಣಿಕರು ಟ್ವೀಟ್ ಮಾಡಿದರು. ತಮ್ಮ ಆಯುಷ್ಯ ಇಲ್ಲಿಗೇ ಮುಗಿಯಿತು ಅಂದುಕೊಂಡವರು ಬಹಳ ಮಂದಿ. ಎಲ್ಲರಲ್ಲೂ ಪ್ರಳಯಕಾಲದ ಆತಂಕ.
ಕೊರೋನಾ ಸಮರಕ್ಕೆ 20000 ಎನ್‌ಆರ್‌ಐ ವೈದ್ಯರ ಬಳಕೆ ಸಾಧ್ಯತೆ!
ಡೈಮಂಡ್ ಪ್ರಿನ್ಸೆಸ್ ಹಡಗು ಬ್ರಿಟನ್ ಮೂಲದ್ದು. ಇದರಲ್ಲಿ ಸಿಬ್ಬಂದಿಯಾಗಿ ಇರುವ ಹೆಚ್ಚಿನ ಮಂದಿ ಫಿಲಿಪ್ಪೀನ್ಸ್‌ನವರು. 138 ಮಂದಿ ಭಾರತೀಯರು ಈ ಹಡಗಿನಲ್ಲಿದ್ದರು. ಇವರಲ್ಲಿ 132 ಮಂದಿ ಸಿಬ್ಬಂದಿ ಹಾಗೂ 6 ಮಂದಿ ಪ್ರಯಾಣಿಕರಾಗಿದ್ದರು. ಇವರಲ್ಲಿ ಇಪ್ಪತ್ತು ಮಂದಿಗೆ ಕೋವಿಡ್ ಕಾಯಿಲೆ ಅಮರಿಕೊಂಡಿತು. ಎಲ್ಲ ಪ್ರಯಾಣಿಕರನ್ನೂ ಕ್ವಾರಂಟೈನ್‌ನಲ್ಲಿ ಇಟ್ಟ ಜಪಾನ್ ಸರಕಾರ, ಕಾಯಿಲೆ ಲಕ್ಷಣಗಳನ್ನು ತೋರಿಸದ ಪ್ರಯಾಣಿಕರನ್ನು ಪ್ರತ್ಯೇಕವಾಗಿ ಹಡಗಿನಿಂದ ಖಾಲಿ ಮಾಡಿತು. ಕ್ವಾರಂಟೈನ್‌ನಲ್ಲಿದ್ದವರನ್ನು ಪ್ರತ್ಯೇಕವಾಗಿ ಚಿಕಿತ್ಸೆಗೆ ಕರೆದೊಯ್ದಿತು. ಭಾರತೀಯರನ್ನು ಕರೆತರಲು ಭಾರತ ಸರಕಾರ ವಿಶೇಷ ವಿಮಾನ ಕಳುಹಿಸಿತು. ಇದೆಲ್ಲ ಆಗುವವರೆಗೂ ಹಡಗಿನಲ್ಲಿ ಆತಂಕ ಹರಡಿಕೊಂಡಿತ್ತು.
ಮನೆಯಲ್ಲೇ ಕೊರೋನಾ ಔಷಧಿ ಮಾಡಿಕೊಂಡು ಪತಿ ಸಾವು, ಪತ್ನಿ ಆಸ್ಪತ್ರೆಗೆ!
ಸದ್ಯ ಈ ಭವ್ಯವಾದ, ಐಷಾರಾಮಿ ಹಡಗು ಜಪಾನಿನ ಯೊಕೊಹಾಮ ಬಂದರು ತೀರದಲ್ಲಿ ಲಂಗರು ಹಾಕಿ ನಿಂತುಕೊಂಡಿದೆ. ಅದರೊಳಗೆ ಯಾರೂ ಇಲ್ಲ. ವಿಲಾಸಿ ಕೋಣೆಗಳು, ಭವ್ಯವಾದ ಊಟದ ಕೋಣೆಗಳು, ವಿಶಾಲವಾದ ಡೆಕ್‌ಗಳು, ಕಿಚನ್‌ಗಳು, ಸ್ವಿಮ್ಮಿಂಗ್ ಪೂಲುಗಳು- ಎಲ್ಲವೂ ಖಾಲಿ ಹೊಡೆಯುತ್ತಿವೆ. ಇತ್ತೀಚೆಗೆ ಪರೀಕ್ಷೆಗಾಗಿ ಅದರ ಒಳಗೆ ಹೋದ ತಜ್ಞರು, ತಂದ ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಿ ಹಡಗಿನೊಳಗೆ ವೈರಸ್ ಇನ್ನೂ ಉಳಿದುಕೊಂಡಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಅದನ್ನು ಪೂರ್ತಿ ನಿರ್ಮೂಲನ ಮಾಡಲು ಮುಂದಾಗಿದ್ದಾರೆ. ಅಲ್ಲಿಯವರೆಗೂ ಈ ವಿಲಾಸಿ ಹಡಗು ಭೂತ ಬಂಗಲೆಯೇ ಸರಿ. ಅಲ್ಲಿಯ ಗಾಳಿಯಲ್ಲೇ ಒಂದು ಬಗೆಯ ವಿಚಿತ್ರ ಆತಂಕ, ಆತ್ಮಗಳು ಸುಳಿದಾಡುತ್ತಿರುವಂತೆ ಭಾಸವಾಗುತ್ತಿದೆ ಅಂತಲೂ ಭೇಟಿ ನೀಡಿದವರು ಹೇಳಿದ್ದಾರೆ.