National Doctor's Day: ಕರ್ನಾಟಕದ ಆರೋಗ್ಯ ಕ್ಷೇತ್ರ ಸುಧಾರಣೆಗೆ ಸಂಕಲ್ಪ, ಸಚಿವ ಗುಂಡೂರಾವ್‌

ವೈದ್ಯ ಸಮೂಹಕ್ಕೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು. ವೈದ್ಯಕೀಯ ಕ್ಷೇತ್ರ ಸೇವಾ ಮನೋಭಾವದ್ದು ಎಂಬ ಮೂಲ ಉದ್ದೇಶ ಮರೆತಂತಿರುವ ಈ ಕಾಲದಲ್ಲೂ ಅನೇಕಾನೇಕ ಅಂತಃಕರಣದ ವೈದ್ಯರಿದ್ದಾರೆ. ನಿಷ್ಕಲ್ಮಶ ಮತ್ತು ನಿಸ್ವಾರ್ಥತೆಯಿಂದ ನಮ್ಮ ನಡುವೆ ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರ ಸೇವೆ, ಅವಿರತ ಶ್ರಮಕ್ಕೆ ರಾಜ್ಯದ ಆರೋಗ್ಯ ಸಚಿವನಾಗಿ ನನ್ನ ನಮನಗಳನ್ನ ಸಲ್ಲಿಸುತ್ತೇನೆ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌

Determination to Improve the Health Sector of Karnataka Says Minister Dinesh Gundu Rao grg

ಬೆಂಗಳೂರು(ಜು.01):  ಮೊದಲು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಪಾಲಿಸಿಗಳಿಗಿಂತ ಇರುವುದರಲ್ಲಿ ಜನರಿಗೆ ನಿಟ್ಟುಸಿರುವ ಬಿಡುವ ವ್ಯವಸ್ಥೆ ಕಲ್ಪಿಸಬೇಕಿದೆ. ನಗರ ಪ್ರದೇಶದ ಬಡಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ರಾತ್ರಿ 8ರವರೆಗೆ ಕಾರ್ಯ ನಿರ್ವಹಿಸುವ ಸಂಜೆ ಕ್ಲಿನಿಕ್‌ಗಳ ವ್ಯವಸ್ಥೆ ಕಲ್ಪಿಸಲು ಆಲೋಚಿಸಿದ್ದೇವೆ.

ವೈದ್ಯ ಸಮೂಹಕ್ಕೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು. ವೈದ್ಯಕೀಯ ಕ್ಷೇತ್ರ ಸೇವಾ ಮನೋಭಾವದ್ದು ಎಂಬ ಮೂಲ ಉದ್ದೇಶ ಮರೆತಂತಿರುವ ಈ ಕಾಲದಲ್ಲೂ ಅನೇಕಾನೇಕ ಅಂತಃಕರಣದ ವೈದ್ಯರಿದ್ದಾರೆ. ನಿಷ್ಕಲ್ಮಶ ಮತ್ತು ನಿಸ್ವಾರ್ಥತೆಯಿಂದ ನಮ್ಮ ನಡುವೆ ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರ ಸೇವೆ, ಅವಿರತ ಶ್ರಮಕ್ಕೆ ರಾಜ್ಯದ ಆರೋಗ್ಯ ಸಚಿವನಾಗಿ ನನ್ನ ನಮನಗಳನ್ನ ಸಲ್ಲಿಸುತ್ತೇನೆ.

ಆರೋಗ್ಯ ಇಲಾಖೆ ಚೆನ್ನಾಗಿದ್ದರೆ ಸರ್ಕಾರಕ್ಕೆ ಒಳ್ಳೆಯ ಹೆಸರು: ಸಚಿವ ದಿನೇಶ್‌ ಗುಂಡೂರಾವ್‌

ಬಹುಶಃ ಸೇವಾ ಮನೋಭಾವದ ವೈದ್ಯರನ್ನು ಅಭಿನಂದಿಸಲು ವೈದ್ಯರ ದಿನಾಚರಣೆಯೇ ಬರಬೇಕು ಅಂತೇನಿಲ್ಲ. ಜನಸಾಮಾನ್ಯರು, ಬಡವರ ಮನಸಲ್ಲಿ ಆ ಹೆಸರುಗಳು ಸದಾ ಸ್ಮರಣೆಯಲ್ಲಿರುತ್ತವೆ. ಅಂತಹವರಲ್ಲಿ ಮರೆಯಲಾಗದ ಹೆಸರು ಡಾ.ಬಿಧಾನ್‌ ಚಂದ್ರ ರಾಯ್‌ ಅವರ ಸ್ಮರಣಾರ್ಥವಾಗಿಯೇ ಭಾರತದಲ್ಲಿ ಜುಲೈ 1ರಂದು ವೈದ್ಯರ ದಿನಾಚರಣೆ ಮಾಡಲಾಗುತ್ತದೆ.

ಭಾರತ ರತ್ನ ಪಡೆದ ವೈದ್ಯ ಡಾ.ಬಿಧಾನ್‌ ಚಂದ್ರ ರಾಯ್‌. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನಾಯಕರಲ್ಲಿ ಒಬ್ಬರಾಗಿ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದವರು. ರಾಜಕೀಯದಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದರೂ, ತಮ್ಮ ವೈದ್ಯ ವೃತ್ತಿಯನ್ನು ಮರೆತಿರಲಿಲ್ಲ. ಸಿಎಂ ಸ್ಥಾನದಲ್ಲಿದ್ದಾಗಲೂ ಕೊಳೆಗೇರಿ ಜನರಿಗೆ ಸಂಜೆ ಒಂದು ಗಂಟೆ ಚಿಕಿತ್ಸೆ ನೀಡುತ್ತಿದ್ದರು. ವೈದ್ಯ ವೃತ್ತಿಯ ಪಾವಿತ್ರ್ಯತೆಯನ್ನು ಅವರು ತಮ್ಮ ಕಾರ್ಯದ ಮೂಲಕ ದೇಶಕ್ಕೆ ಸಾರಿ ಹೋಗಿದ್ದಾರೆ.
ಗಾಂಧಿಜೀಯವರ ಮನವೊಲಿಸಿ ಚಿಕಿತ್ಸೆ ನೀಡಿದ್ದ ರಾಯ್‌ ಅವರ ಒಂದು ಮಾತು ನಮ್ಮೆಲ್ಲ ಯುವಕರು, ಜನಸಾಮಾನ್ಯರು ಅರಿಯುವುದು ಅತಿ ಮುಖ್ಯ. ಸ್ವರಾಜ್‌ ಭಾರತ ನಿರ್ಮಾಣ ಯುವಕರ ಉತ್ತಮ ಆರೋಗ್ಯದಿಂದ ಮಾತ್ರ ಸಾಧ್ಯ. ಆರೋಗ್ಯವಿಲ್ಲ ಅಂದರೆ ಸ್ವರಾಜ್‌ ಭಾರತದ ಕನಸು ಕನಸಾಗಿಯೇ ಉಳಿಯಲಿದೆ ಎಂಬ ಅವರ ಮಾತುಗಳನ್ನು ನಾವು ಆಳವಾಗಿ ಅರಿಯಬೇಕಿದೆ.

ಮಾನವೀಯತೆಯ ಡಾಕ್ಟರ್‌ಗಳು ಬೇಕು

ಕಾಲರಾದಿಂದ ಕೋವಿಡ್‌ ಸೊಂಕಿನವರೆಗೆ ಬೇರೆ ಬೇರೆ ರೋಗಗಳ ಹಾವಳಿಯ ಸಂದರ್ಭದಲ್ಲಿ ವೈದ್ಯಲೋಕದ ಪರಿಶ್ರಮ ಅಪಾರವಾದದ್ದು. ಜಗತ್ತನ್ನು ವಿವಿಧ ಸೋಂಕುಗಳು ಕಾಡಿದಾಗ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರ ಸೇವೆ ಶ್ಲಾಘನೀಯ. ವೈದ್ಯರು ದೇವರಿಗೆ ಸಮಾನ ಎಂಬ ಸಂಸ್ಕೃತಿ ಹಾಕಿಕೊಟ್ಟಿರುವ ನಮ್ಮ ದೇಶದಲ್ಲಿ ಇಂದು ಹಣದ ಜೊತೆಗೆ ವೈದ್ಯ ಪ್ರಾಣವನ್ನು ಕಸಿಯುತ್ತಾನೆ ಎನ್ನುವ ಮಾತುಗಳು ಕೇಳಿಬರುತ್ತಿರುವುದು ದುರದೃಷ್ಟಕರ. ವೈದ್ಯಕೀಯ ಕ್ಷೇತ್ರ ವಾಣಿಜ್ಯಮಯಗೊಂಡ ಪರಿಣಾಮ ಹಲವು ಕಾನೂನುಗಳು ಜಾರಿಗೆ ಬಂದವು. ವೈದ್ಯಕೀಯ ಉದಾಸೀನತೆಗಳಿಂದ ವೈದ್ಯ ಮತ್ತು ರೋಗಿಯ ನಡುವೆ ಅಪನಂಬಿಕೆಗಳು ಮೂಡುವಂತಾಯಿತು.

ಅನವಶ್ಯಕವಾಗಿ ವೈದ್ಯರು ನನ್ನನ್ನು ಯಾವ ದುಬಾರಿ ಪರೀಕ್ಷೆಗೆ ಒಳಪಡಿಸುತ್ತಾರೋ ಎಂಬ ಶಂಕೆ ರೋಗಿಯಲ್ಲಿದೆ. ರೋಗಿ ನನ್ನನ್ನು ಯಾವ ನ್ಯಾಯಾಂಗದ ಕಟಕಟೆಗೆ ನಿಲ್ಲಿಸುತ್ತಾನೋ ಎಂಬ ಆತಂಕ ವೈದ್ಯರಲ್ಲಿದೆ. ಈ ಅಂತರವನ್ನು ಸರಿಪಡಿಸುವ ಅಗತ್ಯತೆ ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ್ದಾಗಿದೆ. ರೋಗಿಯ ಆತ್ಮವಿಶ್ವಾಸವನ್ನು ಹೆಚ್ಚಿಸುವಂಥ ಮಾನವೀಯ ನಡವಳಿಕೆಯುಳ್ಳ ವೈದ್ಯರು ಇಂದು ಸಮಾಜಕ್ಕೆ ಹತ್ತಿರವಾಗಿದ್ದಾರೆ.

ಸ್ಪೆಷಲಿಸ್ಟ್‌ಗಳ ಈ ಯುಗದಲ್ಲಿ

2021ರ ವೈದ್ಯರ ದಿನಾಚರಣೆಯ ಘೋಷವಾಕ್ಯ ‘ಬದುಕಿಸುವವರನ್ನು ರಕ್ಷಿಸಿ’ ಎಂಬುದಾಗಿತ್ತು. 2022ರಲ್ಲಿ ‘ಕೌಟುಂಬಿಕ ವೈದ್ಯರು ಮುಂದಿನ ಸಾಲಿಗೆ ಬರಲಿ’ ಎಂಬ ಥೀಮ… ಬಗ್ಗೆ ಅರಿವು ಮೂಡಿಸಲಾಯಿತು. ಎಲ್ಲ ಕಾಯಿಲೆಗಳನ್ನು ಒಬ್ಬನೇ ವೈದ್ಯ ನಿರ್ವಹಿಸಿ, ರೋಗಿಯನ್ನು ಸಮಗ್ರ ದೃಷ್ಟಿಕೋನದಿಂದ ಅರ್ಥೈಸಿಕೊಂಡು ಸಮಗ್ರ ಚಿಕಿತ್ಸೆ ನೀಡುತ್ತಿದ್ದ ವೈದ್ಯರುಗಳಿದ್ದ ಕಾಲ ಈಗಿಲ್ಲ. ಸೇವಾ ಮನೋಭಾವದವರಿಗೆ ಅಪಾರವಾದ ತಾಳ್ಮೆ ಜ್ಞಾನ, ಶ್ರದ್ಧೆ, ಸಮಯದ ಅರಿವಿದೆ. ವೈದ್ಯ ವೃತ್ತಿ ಎಲ್ಲರಿಗೂ ಒಲಿಯದು. ಕೆಲವೊಬ್ಬರು ರೋಗವನ್ನು ಸುಲಭವಾಗಿ ಗುರುತಿಸಿ ಯಾವ ಚಿಕಿತ್ಸೆ ನೀಡುವುದು ಸೂಕ್ತವೆಂದು ಹೇಳಬಲ್ಲರು. ಇನ್ನೂ ಕೆಲವರು ಶಸ್ತ್ರಚಿಕಿತ್ಸೆಯಲ್ಲಿ ಪರಿಣತರು.

ಇವತ್ತಿನ ಕಾಲಘಟ್ಟದಲ್ಲಿ ಮಾನವನ ಒಂದೊಂದು ಅಂಗಾಂಗಕ್ಕೆ ಒಬ್ಬೊಬ್ಬ ವೈದ್ಯರಿದ್ದಾರೆ. ಒಂದು ಅಂಗಾಂಗದ ತಜ್ಞ ವೈದ್ಯ ತಾನು ಕೊಡುವ ಔಷಧಿಯಿಂದ ಮತ್ತೊಂದು ಅಂಗಾಂಗದ ಮೇಲೆ ಯಾವ ಪರಿಣಾಮ ಬೀರಬಲ್ಲದು ಎಂಬುದರ ಬಗ್ಗೆ ಮುತವರ್ಜಿ ವಹಿಸಿ ಆರೈಕೆ ಮಾಡುವುದು ಅವಶ್ಯಕವಾಗಿದೆ. ವಿಶೇಷ ತಜ್ಞರಿಂದಾಗಿ ರೋಗಿಯನ್ನು ಸಮಗ್ರ ದೃಷ್ಟಿಕೋನದಲ್ಲಿ ಅರ್ಥೈಸಿ ಚಿಕಿತ್ಸೆ ನೀಡುವ ಪದ್ಧತಿ ಮರೆಯಾಗುತ್ತಿದೆ. ಮಾನವ ದೇಹದ ಅಂಗಾಂಗಗಳ ನಡುವೆ ಒಂದಕ್ಕೊಂದು ಕ್ರಿಯಾತ್ಮಕವಾದ ಸಂಬಂಧವಿದೆ. ಒಂದು ಅಂಗಾಂಗವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಚಿಕಿತ್ಸೆ ನೀಡುವ ಇಂದಿನ ಮನೋವೃತ್ತಿ ದೇಹದ ಒಟ್ಟಾರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದನ್ನು ವೈದ್ಯಲೋಕ ಗಮನಿಸಿದೆ ಎಂದುಕೊಂಡಿದ್ದೇನೆ.

ದುಬಾರಿಯಾದ ವೈದ್ಯಕೀಯ ಕ್ಷೇತ್ರ

ಯಾವುದೇ ಒಂದು ದೇಶದ ಅಭಿವೃದ್ಧಿ ಪಥಕ್ಕೆ ಆರೋಗ್ಯ ಮತ್ತು ಶಿಕ್ಷಣ ಎರಡು ಚಕ್ರಗಳಿದ್ದಂತೆ. ನಮ್ಮ ಸಮಾಜಕ್ಕೆ ಈ ಎರಡು ಕ್ಷೇತ್ರಗಳೇ ಆರ್ಥಿಕವಾಗಿ ಹೊರೆಯಾದಂತಿದೆ. ಅದರಲ್ಲೂ ಮಧ್ಯಮ ವರ್ಗದ ಜನರನ್ನು ಗಂಭೀರ ಅನಾರೋಗ್ಯ ಸಮಸ್ಯೆಗಳು ಆರ್ಥಿಕ ಸಂಕಷ್ಟಕ್ಕೆ ತಳ್ಳುವಂತೆ ಮಾಡಿಬಿಟ್ಟಿವೆ. ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ, ಅತ್ಯಾಧುನಿಕ ಉಪಕರಣಗಳು ಮತ್ತು ಮೂಲಭೂತ ಸೌಕರ್ಯಗಳು ಅತ್ಯಂತ ದುಬಾರಿಯಾಗಿದ್ದು, ಸಾಮಾನ್ಯರಿಗೆ ಸುಲಭವಾಗಿ ಎಟುಕದಂತಾಗಿದೆ.

ಹೀಗಾಗಿ ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಹಾಗೂ ಸರ್ಕಾರಿ ವೈದ್ಯಕೀಯ ಸೇವೆಯ ನಡುವಿನ ಅಂತರವನ್ನು ನಾವು ಸರಿದೂಗಿಸಬೇಕಿದೆ. ಈ ನಿಟ್ಟಿನಲ್ಲಿ ಉಳ್ಳವರು ಇಲ್ಲದವರ ನೆರವಿಗೆ ಧಾವಿಸುವುದು ಅನಿವಾರ್ಯವಾಗಿದೆ. ಒಂದು ಒಳ್ಳೆಯ ಸರ್ಕಾರಿ ಆಸ್ಪತ್ರೆಗೆ ನೆರವಾದರೆ ಬಹುಶಃ ಅದೇ ಉಳ್ಳವರು ಶಿವಾಲಯ ಮಾಡಿದಂತೆ ಎಂದು ನನಗನಿಸುತ್ತಿದೆ.

ಸರ್ಕಾರಿ ಆಸ್ಪತ್ರೆ ದತ್ತು ಪಡೆಯಿರಿ

ಒಬ್ಬ ಆರೋಗ್ಯ ಸಚಿವನಾಗಿ ನನಗೆ ಜನರ ಆರೋಗ್ಯ ಎಷ್ಟುಮುಖ್ಯವೋ ವೈದ್ಯರು ಕೂಡ ಅಷ್ಟೇ ಮುಖ್ಯ. ಸರ್ಕಾರವಾಗಿ ಜನರ ಆರೋಗ್ಯಕ್ಕೆ ಸಹಾಯ ಹಸ್ತ ಚಾಚಲು ನಾವು ಸಿದ್ಧರಾಗಿದ್ದೇವೆ. ಈ ಕಾರ್ಯಕ್ಕೆ ಖಾಸಗಿ ವಲಯದವರ ಸೇವಾ ಮನೋಭಾವವು ಬೇಕು ಎಂಬುದು ನನ್ನ ಮನವಿ.

ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಿಕ್ಷಣಕ್ಕೆ ಮಹತ್ವ ನೀಡುತ್ತಿರುವ ಗಣ್ಯಮಾನ್ಯರು ಸರ್ಕಾರಿ ಆಸ್ಪತ್ರೆಗಳತ್ತ ಕೂಡ ಮುಖ ಮಾಡಬೇಕು. ಸರ್ಕಾರ ಈಗಾಗಲೇ ಪಿಪಿಪಿ ಮಾಡೆಲ…ನಲ್ಲಿ ಹಲವು ಮಹತ್ವದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಆದರೆ ಇದರಲ್ಲಿ ಸೇವಾ ಮನೋಭಾವ ಕಡಿಮೆಯಾದಂತೆ ಕಾಣುತ್ತಿದೆ. ಇದನ್ನು ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಾಮಾಜಿಕ ಕಳಕಳಿ ಅಡಿಯಲ್ಲಿ ಯಾರೇ ಮುಂದೆ ಬಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ವಾತಾವರಣ ರೂಪಿಸುವ ಆಶಯ ವ್ಯಕ್ತಪಡಿಸಿದರೂ, ಅವರೊಂದಿಗೆ ಚರ್ಚಿಸಲು ನಾನು ಮುಕ್ತ ಮನಸ್ಸು ಹೊಂದಿದ್ದೇನೆ.

ನನ್ನ ಮುಂದಿರುವ ಸವಾಲುಗಳು

ರಾಜ್ಯದ ಆರೋಗ್ಯ ಇಲಾಖೆಯ ಜವಾಬ್ದಾರಿ ಹೊತ್ತ ಮೇಲೆ ನಾನು ಹಲವು ತಜ್ಞರೊಂದಿಗೆ ಚರ್ಚಿಸಿದ್ದೇನೆ. ವಿಶೇಷವಾಗಿ ಗ್ರಾಮೀಣ ಮಟ್ಟದ ವೈದ್ಯರ ಅಹವಾಲುಗಳನ್ನು ಆಲಿಸಿದ್ದೇನೆ. ವೈದ್ಯಕೀಯ ಕ್ಷೇತ್ರದ ವ್ಯಾಪ್ತಿ ಸಾಗರದಷ್ಟೇ ದೊಡ್ಡದು ಎಂಬುದನ್ನು ಮನಗಂಡಿದ್ದೇನೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟುಸಮಸ್ಯೆಗಳಿರುವುದು ನಿಜ. ಅದಕ್ಕೆ ಆದ್ಯತೆ ಮೇಲೆ ಪರಿಹಾರಗಳನ್ನು ಕಂಡುಕೊಳ್ಳುವತ್ತ ನಮ್ಮ ಗಮನವಿದೆ.

ಮೊದಲು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಪಾಲಿಸಿಗಳಿಗಿಂತ ಇರುವುದರಲ್ಲಿ ಜನರಿಗೆ ನಿಟ್ಟುಸಿರುವ ಬಿಡುವ ವ್ಯವಸ್ಥೆ ಕಲ್ಪಿಸಬೇಕಿದೆ. ಮುಂಜಾಗ್ರತೆ ಮತ್ತು ಚಿಕಿತ್ಸೆ- ಇವು ಸಾರ್ವಜನಿಕ ಆರೋಗ್ಯದ ಎರಡು ಹಂತಗಳು. ರೋಗ ಬಂದ ಬಳಿಕ ಗುಣಪಡಿಸುವುದಕ್ಕಿಂತ, ರೋಗ ಬರದಂತೆ ಮುಂಜಾಗ್ರತೆ ವಹಿಸುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು.

108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಕೇಂದ್ರ ಗುತ್ತಿಗೆ ರದ್ದು: ಸಚಿವ ದಿನೇಶ್‌ ಗುಂಡೂರಾವ್‌

ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಔಷಧಿಗಳು ತಲುಪಬೇಕಿದೆ. ಡಯಾಲಿಸಿಸ್‌ ಕೇಂದ್ರಗಳು ಸಕ್ರಿಯವಾಗಿ ಕಾರ್ಯ ನಡೆಸಬೇಕು. ಸಾರ್ವಜನಿಕರ ತುರ್ತು ಆರೋಗ್ಯ ಸೇವೆಗೆ 108 ಆರೋಗ್ಯ ವಾಹಿನಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ರೂಪ ನೀಡಬೇಕಿದೆ. ಇದೆಲ್ಲದರ ಕಡೆ ಆರೋಗ್ಯ ಸಚಿವನಾಗಿ ನಾನು ಮುತುವರ್ಜಿಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ.

ಸಂಜೆ ಕ್ಲಿನಿಕ್‌ ಆರಂಭಕ್ಕೆ ಚಿಂತನೆ

ನರ್ಸಿಂಗ್‌ಗೆ ಶಕ್ತಿ ತುಂಬುವುದರ ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳತ್ತವೂ ಗಮನ ಹರಿಸಿದ್ದೇವೆ. ನಮ್ಮ ನಗರ ಪ್ರದೇಶಗಳಲ್ಲಿ ಮಧ್ಯಮ ವರ್ಗದ ಜನರ ಆರೋಗ್ಯ ರಕ್ಷಣೆಗೆ ಅಗತ್ಯ ಮೂಲಸೌಕರ್ಯ, ಮಾನವ ಸಂಪನ್ಮೂಲ ಒದಗಿಸುವುದು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ವೈದ್ಯರ ಸೇವೆಯನ್ನು ನಗರ ಪ್ರದೇಶಗಳಲ್ಲೂ ಬಳಸಿಕೊಳ್ಳಲು ಕಾಯ್ದೆಗೆ ತಿದ್ದುಪಡಿ ತರುವ ಚಿಂತನೆಯಿದೆ. ನಗರ ಪ್ರದೇಶದ ಬಡಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ರಾತ್ರಿ 8ರವರೆಗೆ ಕಾರ್ಯ ನಿರ್ವಹಿಸುವ ಸಂಜೆ ಕ್ಲಿನಿಕ್‌ಗಳ ವ್ಯವಸ್ಥೆ ಕಲ್ಪಿಸಲು ಆಲೋಚಿಸಿದ್ದೇವೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿಗಳಿಂದ ದೊಡ್ಡ ದೊಡ್ಡ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳ ಜೊತೆ ಸರ್ಕಾರ ಇರಲಿದೆ. ಪೂರಕ ಯೋಜನೆಗಳು ಜಾರಿಗೆ ಬರಲಿವೆ. ನಿಮ್ಮನ್ನು ನಂಬಿರುವ ಜನರ ವಿಶ್ವಾಸ ಉಳಿಸಿಕೊಳ್ಳುವಿರಿ ಎಂಬ ಆಶಯದೊಂದಿಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭ ಹಾರೈಸುವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios