108 ಆಂಬ್ಯುಲೆನ್ಸ್, ಡಯಾಲಿಸಿಸ್ ಕೇಂದ್ರ ಗುತ್ತಿಗೆ ರದ್ದು: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ 108 ಆಂಬ್ಯುಲೆನ್ಸ್ ಸೇವೆಯಲ್ಲಿ ಬದಲಾವಣೆ ತರಲು ಹಾಗೂ ಡಯಾಲಿಸಿಸ್ ಕೇಂದ್ರಗಳ ಅವ್ಯವಸ್ಥೆ ಸರಿಪಡಿಸಲು ಸದ್ಯ ಇರುವ ಗುತ್ತಿಗೆಯನ್ನು ರದ್ದು ಮಾಡಿ, ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರು (ಜೂ.10): ರಾಜ್ಯದ 108 ಆಂಬ್ಯುಲೆನ್ಸ್ ಸೇವೆಯಲ್ಲಿ ಬದಲಾವಣೆ ತರಲು ಹಾಗೂ ಡಯಾಲಿಸಿಸ್ ಕೇಂದ್ರಗಳ ಅವ್ಯವಸ್ಥೆ ಸರಿಪಡಿಸಲು ಸದ್ಯ ಇರುವ ಗುತ್ತಿಗೆಯನ್ನು ರದ್ದು ಮಾಡಿ, ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ. 108 ಆಂಬ್ಯುಲೆನ್ಸ್ ಸೇವೆಯ ಗುತ್ತಿಗೆಯನ್ನು ರದ್ದು ಮಾಡಲಾಗಿದೆ. ಶೀಘ್ರದಲ್ಲಿ ಹೊಸ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ಅದೇ ರೀತಿ ಸರ್ಕಾರಿ ಡಯಾಲಿಸಿಸ್ ಕೇಂದ್ರಗಳಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ.
ಅವುಗಳ ನಿರ್ವಹಣೆಗಾಗಿ ಹೊಸ ಗುತ್ತಿಗೆದಾರರನ್ನು ನೇಮಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಎಲ್ಲ ವ್ಯವಸ್ಥೆಗಳನ್ನು ಸರಿಯಾದ ದಾರಿಗೆ ತರಬೇಕಿದ್ದು, ಆ ಕೆಲಸ ಮಾಡಲಾಗುವುದು ಎಂದರು. ಆರೋಗ್ಯ ಇಲಾಖೆ ಅಡಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು, ವೈದ್ಯರ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ತರಬೇಕಿದೆ. ರೋಗ ಹರಡುವುದಕ್ಕೆ ಮುನ್ನವೇ ಅದಕ್ಕೆ ಚಿಕಿತ್ಸೆ ನೀಡುವ ಕ್ರಮ ಜಾರಿಗೆ ಬರಬೇಕು. ಅದಕ್ಕಾಗಿ ಹೊಸ ನೀತಿ, ನಿಯಮ ರೂಪಿಸಬೇಕಿದೆ. ಇಲಾಖೆ ಕಾರ್ಯವೈಖರಿ ಸುಧಾರಣೆಗೆ ತಜ್ಞರೊಂದಿಗೆ ಚರ್ಚಿಸಲಾಗುತ್ತದೆ. ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಆ.1ರಿಂದ ಗೃಹಜ್ಯೋತಿ ಯೋಜನೆ ಆರಂಭಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
ದ.ಕ.ಜಿಲ್ಲೆಗೆ ದಿನೇಶ್ ಗೂಂಡೂ ರಾವ್ ಉಸ್ತುವಾರಿ ಸಚಿವ: ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ 2004ರ ಬಳಿಕ ಎರಡನೇ ಬಾರಿಗೆ ಹೊರ ಜಿಲ್ಲೆಯವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಿದಂತಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೊರಗಿನವರಾದ ಜಬ್ಬಾರ್‌ಖಾನ್ ಹೊನ್ನಳ್ಳಿ ಅವರಿಗೆ ಇಲ್ಲಿನ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿತ್ತು. ಆ ಬಳಿಕ ಈಗ ದಿನೇಶ್ ಗುಂಡೂರಾವ್ ಅವರಿಗೆ ಇಲ್ಲಿನ ಉಸ್ತುವಾರಿ ಪಟ್ಟನೀಡಲಾಗಿದೆ. ಇಲ್ಲಿ ಒಟ್ಟು ಎಂಟು ಸ್ಥಾನಗಳ ಪೈಕಿ ಆರರಲ್ಲಿ ಬಿಜೆಪಿ ಹಾಗೂ ಎರಡರಲ್ಲಿ ಕಾಂಗ್ರೆಸ್ ಗೆದ್ದಿತ್ತು.
ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ, ಹೀಗಾಗಿ ಹೊರಗಿನವರನ್ನು ಉಸ್ತುವಾರಿ ಸಚಿವ ಸ್ಥಾನಕ್ಕೆ ನೇಮಕಗೊಳಿಸುವುದು ಅನಿವಾರ್ಯವಾಗಿತ್ತು. ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾಗ, ಅದಕ್ಕೂ ಮೊದಲು ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಪಕ್ಷ ಸಂಘಟನೆಗೆ ಪದೇ ಪದೇ ಮಂಗಳೂರಿಗೆ ಆಗಮಿಸಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಲೇ ದಿನೇಶ್ ಗುಂಡೂರಾವ್ ಅವರು ಬೆಂಗಳೂರಿನ ಗಾಂಧಿ ನಗರದ ಕ್ಷೇತ್ರದ ಶಾಸಕರಾಗಿದ್ದರು. ಈಗ ಆರನೇ ಬಾರಿ ಗೆದ್ದು ಸಚಿವರಾಗಿದ್ದಾರೆ.
ಆ.17/18ಕ್ಕೆ ಬೆಳಗಾವಿಯಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ: ಸಿಎಂ ಸಿದ್ದರಾಮಯ್ಯ
ದ.ಕ.ದಲ್ಲಿ ನೈತಿಕ ಪೊಲೀಸ್‌ಗಿರಿ ಅಂತ್ಯ: ‘ದ.ಕ. ಜಿಲ್ಲೆಯಲ್ಲಿನ ನೈತಿಕ ಪೊಲೀಸ್‌ಗಿರಿಗೆ ಅಂತ್ಯ ಹಾಡುತ್ತೇನೆ. ದ.ಕ. ಜನತೆ ಸಹೋದರತೆಯಿಂದ ಬದುಕಿ ಬಾಳಬೇಕು. ಅಲ್ಲಿನ ಜನ ಶಾಂತಿ ಸೌಹಾರ್ದತೆಯಿಂದ ಬಾಳಬೇಕು’. ಇದು ದ.ಕ.ಜಿಲ್ಲೆಯ ನೂತನ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಖಡಕ್ ಮಾತು. ಕನ್ನಡಪ್ರಭದ ಸಹಸಂಸ್ಥೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ದ.ಕ. ಪ್ರಜ್ಞಾವಂತ ಜಿಲ್ಲೆ. ಅಲ್ಲಿ ಜನ ಸಹೋದರತೆಯಿಂದ ಬದುಕಿ ಬಾಳಬೇಕು . ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ನಾನೇನು ಯಾವ ಜಿಲ್ಲೆಗೂ ಬೇಡಿಕೆ ಇಟ್ಟಿರಲಿಲ್ಲ, ಇದು ಮುಖ್ಯಮಂತ್ರಿಗಳ ನಿರ್ಧಾರವಾಗಿದೆ. ಯಾವ ಜಿಲ್ಲೆಗೆ ಹೋದರೂ ಕೆಲಸ ಮಾಡಬೇಕು ಎಂದು ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.