mental depression : ಗಾಜಿಯಾಬಾದ್‌ ನಲ್ಲಿ ಮನೋವೈದ್ಯರು ತಮ್ಮ ಜೀವ ಕೊನೆಗೊಳಿಸಿಕೊಂಡಿದ್ದಾರೆ. ಇದು ಎಲ್ಲರನ್ನು ಅಚ್ಚರಿಗೊಳಿಸಿದೆ. ಮನೋವೈದ್ಯೆಗೇ ಮಾನಸಿಕ ಖಾಯಿಲೆಯಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ಮನಸ್ಸನ್ನು ನಿಯಂತ್ರಿಸೋದು ಹೇಗೆ ಅಂತ ಪಾಠ ಹೇಳುವ ಪ್ರತಿಯೊಬ್ಬ ವ್ಯಕ್ತಿ ಖುಷಿಯಾಗಿರ್ತಾನೆ ಎಂದಲ್ಲ. ಮನೋವೈದ್ಯರಿಗೂ ಮನಸ್ಸಿದೆ. ನೋವಿದೆ. ಡಿಗ್ರಿ ಪಡೆದು ಸಮಾಜ ಸೇವೆ ಮಾಡುವ ಮನೋವೈದ್ಯರು, ಸಂಪೂರ್ಣವಾಗಿ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಗಾಜಿಯಾಬಾದ್‌ ನಲ್ಲಿ ನಡೆದ ಘಟನೆಯೊಂದು ಎಲ್ಲರನ್ನು ಅಚ್ಚರಿಗೊಳಿಸಿದೆ. ಮಾನಸಿಕ ಸಮಸ್ಯೆಯಿಂದ ಮನೋವೈದ್ಯೆ ಒಬ್ಬರು ಪ್ರಾಣ ಕಳೆದುಕೊಂಡಿದ್ದು ಈಗ ಆಘಾತವುಂಟು ಮಾಡಿದೆ.

ಮನೋವೈದ್ಯೆಗೆ ಖಿನ್ನತೆ ! 

ಭಾರತದಲ್ಲಿ ವೈದ್ಯರೆಂದ್ರೆ ದೇವರಂತೆ ನೋಡ್ತಾರೆ. ದೇವರಿಗೆ ಯಾವುದೇ ಖಾಯಿಲೆ ಬರೋದಿಲ್ಲ ಎಂಬ ಭಾವನೆ ಇದೆ. ಅದ್ರಲ್ಲೂ ಮನೋವೈದ್ಯರು, ಸಂಪೂರ್ಣ ಮನಸ್ಸನ್ನು ಅರ್ಥ ಮಾಡ್ಕೊಂಡಿರ್ತಾರೆ. ಬದುಕುವ ಧೈರ್ಯ ತುಂಬ್ತಾರೆ. ಅವರ ಮನಸ್ಸೇ ಸರಿ ಇಲ್ಲ ಅನ್ನೋದನ್ನು ಜನರು ನಂಬಲು ಸಿದ್ಧ ಇರೋದಿಲ್ಲ. ಆದ್ರೆ ಮನೋವೈದ್ಯರೂ ಮನುಷ್ಯರೆ. ಅವರಿಗೂ ಜೀವನವಿದೆ, ನೋವಿದೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಬೇಕು.

ಇತ್ತೀಚೆಗೆ ಮನೋವೈದ್ಯರೊಬ್ಬರು ಪ್ರಾಣ ಕಳೆದುಕೊಂಡ ಸುದ್ದಿ ಅನೇಕರನ್ನು ಬೆಚ್ಚಿಬೀಳಿಸಿತು. ಪ್ರತಿದಿನ ಆತಂಕ, ಖಿನ್ನತೆ ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಧೈರ್ಯ ತುಂಬುತ್ತಿದ್ದ ವ್ಯಕ್ತಿಯೇ ಕೊನೆಗೆ ತನ್ನ ನೋವನ್ನು ಯಾರೊಂದಿಗೂ ಹಂಚಿಕೊಳ್ಳಲಾಗದೆ ಬದುಕಿಗೆ ವಿದಾಯ ಹೇಳಿರುವುದು ನಿಜಕ್ಕೂ ನೋವಿನ ಸಂಗತಿ.

ಪ್ರತಿದಿನ ರೋಗಿಗಳ ದುಃಖ, ಆತಂಕ ಮತ್ತು ಕಣ್ಣೀರನ್ನು ಕೇಳುತ್ತಾ ಬದುಕುವ ವೈದ್ಯರ ಮನಸ್ಸಿನ ಮೇಲೂ ಅದರ ಪರಿಣಾಮ ಬೀಳುತ್ತದೆ. ಇದನ್ನೇ ಮಾನಸಿಕ ಆರೋಗ್ಯ ತಜ್ಞರು ಬರ್ನೌಟ್ ಮತ್ತು ವಿಕೇರಿಯಸ್ ಟ್ರಾಮಾ ಎಂದು ಕರೆಯುತ್ತಾರೆ. ಅಂದರೆ, ಇತರರ ನೋವನ್ನು ನಿರಂತರವಾಗಿ ಹೊತ್ತುಕೊಳ್ಳುವುದರಿಂದ ಅವರದೇ ಮನಸ್ಸು ದಣಿದುಹೋಗುತ್ತದೆ.

ಅತ್ಯಂತ ದುಃಖದ ಸಂಗತಿ ಏನೆಂದರೆ, ಒಬ್ಬ ಸಾಮಾನ್ಯ ವ್ಯಕ್ತಿ ನನಗೆ ಸಹಾಯ ಬೇಕು ಎಂದು ಹೇಳಬಹುದು. ಆದರೆ ಮನೋವೈದ್ಯ ಅಥವಾ ಕೌನ್ಸಿಲರ್ ಅದೇ ಮಾತನ್ನು ಹೇಳಲು ಹಿಂಜರಿಯುತ್ತಾರೆ. ನಾನೇ ಮಾನಸಿಕವಾಗಿ ಕುಗ್ಗಿದ್ದರೆ, ಜನರು ನನ್ನನ್ನು ಹೇಗೆ ನಂಬುತ್ತಾರೆ? ಎಂಬ ಭಯ ಅವರನ್ನು ಮೌನವಾಗಿ ಕಾಡುತ್ತದೆ.

ಅಧ್ಯಯನ ಹೇಳೋದೇನು?

ಭಾರತದಲ್ಲಿ ವೈದ್ಯರಲ್ಲಿ ಖಿನ್ನತೆ, ಆತಂಕ ಮತ್ತು ಆತ್ಮಹತ್ಯಾ ಆಲೋಚನೆಗಳ ಪ್ರಮಾಣವು ಸಾಮಾನ್ಯ ಜನರಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಹಲವಾರು ಅಧ್ಯಯನಗಳು ತೋರಿಸುತ್ತವೆ. ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ (NIMH) ಮತ್ತು ಗಾರ್ಡಿಯನ್ನ ವರದಿ, ಮಾನಸಿಕ ಆರೋಗ್ಯ ವೃತ್ತಿಪರರು, ಪ್ರೇರಕ ಭಾಷಣಕಾರರು ಮತ್ತು ವೈದ್ಯರಲ್ಲಿ ಹೆಚ್ಚಾಗಿದೆ. ಇತರರ ನೋವನ್ನು ಕೇಳುವುದರಿಂದ ಅವರಿಗೆ ಆಘಾತವಾಗುವ ಪ್ರಮಾಣ 40 ರಿಂದ 50 ಪ್ರತಿಶತ ತಲುಪಿವೆ. ಜಾಗತಿಕವಾಗಿ, ಸರಾಸರಿ ಖಿನ್ನತೆಯಿಂದಾಗಿ ಪ್ರತಿದಿನ ಒಬ್ಬ ವೈದ್ಯರು ಸಾಯುತ್ತಿದ್ದಾರೆ. ಆದ್ರೆ ಇದು ಸಾಮಾನ್ಯ ಫೈಲ್ ನಲ್ಲಿ ಕಾಣಸಿಗೋದಿಲ್ಲ.

ಸಮಾಜ ನಾವು ಯಾವಾಗಲೂ ಕಬ್ಬಿಣದ ಗುರಾಣಿಯಂತೆ ನಿಲ್ಲಬೇಕೆಂದು ನಿರೀಕ್ಷಿಸುತ್ತದೆ. ಆದರೆ ಆ ಗುರಾಣಿಯ ಹಿಂದಿನ ವ್ಯಕ್ತಿಯ ಹೃದಯ ಎಷ್ಟು ಬಾರಿ ಮುರಿದಿದೆ ಎಂದು ಯಾರೂ ಕೇಳುವುದಿಲ್ಲ. ನಾವು ಪ್ರತಿದಿನ ಇತರರ ವ್ಯರ್ಥ ಮತ್ತು ನೋವನ್ನು ಹೀರಿಕೊಳ್ಳುತ್ತೇವೆ, ಆದರೆ ನಮ್ಮನ್ನು ನಾವು ಖಾಲಿ ಮಾಡಿಕೊಳ್ಳುವ ವಿಷಯಕ್ಕೆ ಬಂದಾಗ, ನಮಗೆ ಆಸರೆಯಾಗಲು ಭುಜವಿರೋದಿಲ್ಲ ಅಂತ ವೈದ್ಯರೊಬ್ಬರು ತಮ್ಮ ದುಃಖ ತೋಡಿಕೊಂಡಿದ್ದಾರೆ. ಖಿನ್ನತೆ, ಪದವಿ, ಸ್ಥಾನ ಅಥವಾ ಬ್ಯಾಂಕ್ ಬ್ಯಾಲೆನ್ಸ್ ಆಧರಿಸಿ ಬರೋದಿಲ್ಲ. ಅದು ಯಾರನ್ನ ಬೇಕಾದ್ರೂ ಆವರಿಸಬಹುದು.