ಇಂದಿನ ದಿನಗಳಲ್ಲಿ ಮನೆಯಲ್ಲಿ ನಾಯಿ, ಬೆಕ್ಕು ಸೇರಿದಂತೆ ಸಾಕುಪ್ರಾಣಿಗಳನ್ನು ಸಾಕುವುದು ಟ್ರೆಂಡ್ ಆಗಿದೆ. ಆದರೆ.. ಒಂದು ಪುಟ್ಟ ನಿರ್ಲಕ್ಷ್ಯವು ಪ್ರಾಣಕ್ಕೇ ಕಂಟಕವಾಗಬಹುದು ಎಂಬುದಕ್ಕೆ ಕೋಲ್ಕತ್ತಾದಲ್ಲಿ ನಡೆದ ಘಟನೆಯೇ ಸಾಕ್ಷಿ. ಬೆಕ್ಕು ಗೀರಿದ್ದರಿಂದ ಎಂಟು ವರ್ಷದ ಬಾಲಕನೊಬ್ಬ ಐಸಿಯು (ICU) ಸೇರಿದ್ದಾನೆ.

ಕೋಲ್ಕತ್ತಾ: ಮಕ್ಕಳಿಗೆ ಸಾಕುಪ್ರಾಣಿಗಳ ಜೊತೆ ಆಟವಾಡುವುದು ಮನಸ್ಸಿಗೆ ಖುಷಿ ನೀಡುತ್ತದೆ ನಿಜ. ಆದರೆ, ಆಟದ ವೇಳೆ ಅವು ಗೀರುವುದು ಅಥವಾ ಕಚ್ಚುವುದನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ದಕ್ಷಿಣ ಕೋಲ್ಕತ್ತಾದ ಎಂಟು ವರ್ಷದ ಬಾಲಕನ ವಿಷಯದಲ್ಲಿ ಇದೇ ನಿರ್ಲಕ್ಷ್ಯ ಪ್ರಾಣಾಪಾಯ ತಂದೊಡ್ಡಿತ್ತು. ಬೆಕ್ಕು ಗೀರಿದ್ದರಿಂದ ಉಂಟಾದ ಸೋಂಕು ಆತನ ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಮೂರ್ಛೆ ರೋಗದಿಂದ ವೆಂಟಿಲೇಟರ್‌ವರೆಗೆ..

ಜುಲೈ 10 ರಂದು ಬಾಲಕನಿಗೆ ಹಠಾತ್ತನೆ ತೀವ್ರವಾದ ಮೂರ್ಛೆ (Fits) ಕಾಣಿಸಿಕೊಂಡಿದೆ. ಗಾಬರಿಗೊಂಡ ಪೋಷಕರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನಿಗೆ ಪ್ರಜ್ಞೆ ಬರದೇ ಸತತವಾಗಿ ಫಿಟ್ಸ್ ಬರುತ್ತಿದ್ದರಿಂದ ವೈದ್ಯರು ಇದನ್ನು 'ಸ್ಟೇಟಸ್ ಎಪಿಲೆಪ್ಟಿಕಸ್' ಎಂದು ಕರೆದರು. ಔಷಧಿ ನೀಡಿದರೂ ಪರಿಸ್ಥಿತಿ ಹತೋಟಿಗೆ ಬಾರದಿದ್ದಾಗ ಆತನನ್ನು ಪೀಡಿಯಾಟ್ರಿಕ್ ಐಸಿಯುಗೆ ಸ್ಥಳಾಂತರಿಸಿ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟ ನೀಡಲಾಯಿತು.

ವೈದ್ಯರಿಗೆ ಸವಾಲಾಗಿದ್ದ ರೋಗ ಪತ್ತೆ

ಆರಂಭದಲ್ಲಿ ಮೆದುಳು ಮತ್ತು ಬೆನ್ನುಹುರಿಯ ಪರೀಕ್ಷೆ ನಡೆಸಿದರೂ ಕಾಯಿಲೆಗೆ ಸರಿಯಾದ ಕಾರಣ ತಿಳಿಯಲಿಲ್ಲ. ವೈದ್ಯರು ಇದನ್ನು 'ನಾರ್ಸ್' (NORSE - New-Onset Refractory Status Epilepticus) ಎಂಬ ಅಪರೂಪದ ನರಗಳ ಕಾಯಿಲೆ ಎಂದು ಶಂಕಿಸಿದ್ದರು. ಆದರೆ ಬಾಲಕನಿಗೆ ಜ್ವರ ಇರುವುದನ್ನು ಗಮನಿಸಿದ ವೈದ್ಯರು ಪೋಷಕರನ್ನು ಆಳವಾಗಿ ವಿಚಾರಿಸಿದಾಗ ಅಸಲಿ ವಿಷಯ ಬಯಲಾಗಿದೆ.

ಬಾಲಕ ಪ್ರತಿದಿನ ತನ್ನ ಮುದ್ದಿನ ಬೆಕ್ಕಿನೊಂದಿಗೆ ಮಲಗುತ್ತಿದ್ದ. ಮೂರ್ಛೆ ಬರುವ 10 ದಿನಗಳ ಮೊದಲು ಆತನ ಚರ್ಮದ ಮೇಲೆ ಕೆಂಪು ಗುರುತು ಹಾಗೂ ಊತ ಕಾಣಿಸಿಕೊಂಡಿತ್ತು. ತಕ್ಷಣವೇ ಆಂಟಿಬಾಡಿ ಪರೀಕ್ಷೆ ನಡೆಸಿದಾಗ ಅದು 'ಬಾರ್ಟೋನೆಲ್ಲಾ' (Bartonella) ಎಂಬ ಬ್ಯಾಕ್ಟೀರಿಯಾದಿಂದ ಬರುವ 'ಕ್ಯಾಟ್ ಸ್ಕ್ರ್ಯಾಚ್ ಡಿಸೀಸ್' (Cat Scratch Disease) ಎಂದು ದೃಢಪಟ್ಟಿದೆ.

ಚೇತರಿಸಿಕೊಂಡ ಬಾಲಕ

ಸಾಮಾನ್ಯವಾಗಿ ಈ ಸೋಂಕು ಸಣ್ಣ ಜ್ವರದೊಂದಿಗೆ ಮುಗಿಯುತ್ತದೆ. ಆದರೆ ಅಪರೂಪದ ಸಂದರ್ಭಗಳಲ್ಲಿ ಇದು ಮೆದುಳು ಮತ್ತು ನರಮಂಡಲದ ಮೇಲೆ ದಾಳಿ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಸೂಕ್ತ ಆಂಟಿಬಯೋಟಿಕ್ ಚಿಕಿತ್ಸೆ ನೀಡಿದ ನಂತರ ಬಾಲಕ ಚೇತರಿಸಿಕೊಂಡಿದ್ದು 10 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ. ಬೆಕ್ಕು ಅಥವಾ ನಾಯಿ ಗೀರಿದರೆ ಅಥವಾ ಕಚ್ಚಿದರೆ ಆ ಜಾಗವನ್ನು ತಕ್ಷಣವೇ ಸೋಪು ಮತ್ತು ಹರಿಯುವ ನೀರಿನಿಂದ ಚೆನ್ನಾಗಿ ತೊಳೆಯಿರಿ. ಸಾಕುಪ್ರಾಣಿಗಳೊಂದಿಗೆ ಆಟವಾಡಿದ ನಂತರ ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ಸ್ವಚ್ಛಗೊಳಿಸಿಕೊಳ್ಳಿ. ಸಾಕುಪ್ರಾಣಿಗಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಿ ಮತ್ತು ಅವುಗಳ ಮೈಮೇಲೆ ಉಣ್ಣೆ/ಪರೋಪಜೀವಿಗಳು ಇರದಂತೆ ನೋಡಿಕೊಳ್ಳಿ. ಮಕ್ಕಳು ಪ್ರಾಣಿಗಳ ಜೊತೆ ಆಡುವಾಗ ಪೋಷಕರ ನಿಗಾ ಇರಲಿ.