Covid-19 ಆತಂಕ: ಅಯ್ಯಪ್ಪಸ್ವಾಮಿ ಭಕ್ತರು, ಹೊಸ ವರ್ಷದ ಸಂಭ್ರಮಾಚರಣೆಗೆ ಕಡಿವಾಣ ಹಾಕಲು ಸರ್ಕಾರದ ಪ್ಲ್ಯಾನ್!
ಮೂರ್ನಾಲ್ಕು ವರ್ಷಗಳಿಂದ ಹೊಸ ವರ್ಷಾಚರಣೆ ಹಾಗೂ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಕಡಿವಾಣ ಹಾಕಿದ್ದ ಕೋವಿಡ್ ವೈರಸ್ ಮತ್ತೆ ವಕ್ಕರಿಸಿದ್ದು, ಸರ್ಕಾರ ಸಂಭ್ರಮಕ್ಕೆ ನಿರ್ಬಂಧ ವಿಧಿಸಲು ಮುಂದಾಗಿದೆ.
ಬೆಂಗಳೂರು (ಡಿ.19): ಕಳೆದ ಮೂರ್ನಾಲ್ಕು ವರ್ಷಗಳಿಂದ ಕೋವಿಡ್ ಎನ್ನುವ ಮಹಾಮಾರಿ ಸೋಂಕು ಹೊಸ ವರ್ಷದ ಅದ್ಧೂರಿ ಸಂಭ್ರಮಾಚರಣೆಯನ್ನು ಕಿತ್ತುಕೊಂಡಿತ್ತು. ಈ ವರ್ಷ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ ಎನ್ನುವಷ್ಟರಲಿ ಪುನಃ ಮತ್ತೊಂದು ಕೋವಿಡ್ ವೈರಸ್ ರೂಪಾಂತರವಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಕ್ರಿಸ್‌ಮಸ್ ಹಬ್ಬ, ಹೊಸ ವರ್ಷಾಚರಣೆ ಹಾಗೂ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕೇರಳದ ಶಬರಿಮಲೆಗೆ ಹೋಗಿಬರುವವರಿಗೆ ಕೋವಿಡ್ ಮಾರ್ಗಸೂಚಿ ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಇಲಾಖೆ ಮುಖ್ಯ ಆಯುಕ್ತ ಡಿ. ರಂದೀಪ್ ಅವರು, ಕ್ರಿಸ್‌ಮಸ್ ಹಬ್ಬ ಹಾಗೂ ಅದ್ಧೂರಿ 2024 ಹೊಸ ವರ್ಷದ ಸಂಭ್ರಮಾಚರಣೆಗೆ ಈವರೆಗೆ ನಿರ್ಬಂಧ ವಿಧಿಸಿಲ್ಲ. ಆದರೆ, ಕೋವಿಡ್ ಹೊಸ ಸೋಂಕಿನ ಪರಿಸ್ಥಿತಿಯನ್ನು ಇನ್ನೆರಡು ದಿನಗಳಲ್ಲಿ ಅಧ್ಯಯನ ಮಾಡಿ ಶುಕ್ರವಾರ ಮತ್ತೊಂದು ಸುತ್ತಿನ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಲಾಗುತ್ತದೆ. ಈ ವೇಳೆ ಹೊಸ ವರ್ಷಾಚರಣೆಗೆ ಕೆಲವು ನಿರ್ಬಂಧಗಳನ್ನು ವಿಧಿಸಬೇಕೇ, ಬೇಡವೇ? ಎಂಬುದರ ಬಗ್ಗೆ ಆರೋಗ್ಯ ಇಲಾಖೆ ನಿರ್ಧಾರ ಕೈಗೊಳ್ಳಲಿದೆ. ಇನ್ನು ಕೇಂದ್ರ ಆರೋಗ್ಯ ಇಲಾಖೆಯ ಸಭೆ ಬಳಿಕ ರಾಜ್ಯದಲ್ಲಿ ಶುಕ್ರವಾರ ಸಭೆ ಮಾಡಲಾಗುತ್ತಿದ್ದು, ಈ ವೇಳೆ ನ್ಯೂಇಯರ್ ಹಾಗೂ ಅಯ್ಯಪ್ಪ ಭಕ್ತರ ಕೊವಿಡ್ ಟೆಸ್ಟಿಂಗ್ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸುವ ಸಾಧ್ಯತೆಯಿದೆ.
ಕೋವಿಡ್-19 ಓಮಿಕ್ರಾನ್ ಉಪತಳಿ ಆರ್ಭಟ ಪುನಾರಂಭ: 356 ಮಂದಿಗೆ ಕೊರೊನಾ ಪಾಸಿಟಿವ್!
ಕೋವಿಡ್ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಈಗ ರಾಜ್ಯದಲ್ಲಿ ಮಾರ್ಗಸೂಚಿ ನೀಡಿದ್ದೇವೆ. ಅಧಿಕಾರಿಗಳಿಗೂ ಸಭೆಯಲ್ಲಿ ಸೂಚನೆ ನೀಡಿದ್ದೇವೆ. ಆಕ್ಸಿಜನ್, ಬೆಡ್, ಮೆಡಿಸನ್ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದ್ದೇವೆ. ಕೊವಿಡ್ ಟೆಸ್ಟಿಂಗ್ ಹೆಚ್ಚಿಗೆ ಮಾಡ್ತಾ ಇದ್ದೀವಿ. ಕೊವಿಡ್ ಟೆಸ್ಟಿಂಗ್ ಕಿಟ್ ಖರೀದಿಗೂ ಸೂಚನೆ ನೀಡಲಾಗಿದೆ. ರಾಜ್ಯಕ್ಕೆ ಅಂತಾರಾಷ್ಟ್ರೀಯ ಪ್ರಯಾಣಿಕರೇ ಆತಂಕವಾಗಿದ್ದಾರೆ. ಹೀಗಾಗಿ, ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ ಎಂದರು.
ದೇಶದಲ್ಲಿ ಮತ್ತೆ ಕೊವಿಡ್ ಪ್ರಕರಣ ಹೆಚ್ಚಳ; ಆರೋಗ್ಯ; ಆರೋಗ್ಯ ಇಲಾಖೆ ಹೈ ಅಲರ್ಟ್!
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೊವಿಡ್ ಪಾಸಿಟಿವ್ ಬಂದರೆ (RTPCR Positive) ಅವರ ಮಾದರಿಯನ್ನು ಪುನಃ ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳಿಸಬೇಕು. ಇನ್ನು ವಿವಿಧ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವ ಪ್ರಯಾಣಿಕರ ಮೇಲೆಯೂ ಆರೋಗ್ಯ ಇಲಾಖೆ ನಿಗಾವಹಿಸುತ್ತಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಸಿಟಿ ವ್ಯಾಲ್ಯೂ ಹೆಚ್ಚಿದ್ರು ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಮಾದರಿಯನ್ನು ಕಳಿಸಲಾಗುತ್ತದೆ. ಜೊತೆಗೆ, ರಾಜ್ಯದಲ್ಲಿ ಕೊವಿಡ್ ಟೆಸ್ಟಿಂಗ್ ಏರಿಕೆ ಮಾಡಲಾಗುತ್ತದೆ. ನಾಳೆಯಿಂದ ಕೊವಿಡ್ ಟೆಸ್ಟಿಂಗ್ ಏರಿಕೆ ಮಾಡಲಾಗುತ್ತಿದ್ದು, ಬೆಂಗಳೂರಿಗೆ ಹಾಗೂ ರಾಜ್ಯಕ್ಕೆ ಪ್ರತ್ಯೇಕ ಕೊವಿಡ್ ಟೆಸ್ಟಿಂಗ್ ಮಾಡಲಾಗುತ್ತದೆ. ಆರಂಭದಲ್ಲಿ 500 ರಿಂದ 1000 ಕೊವಿಡ್ ಟೆಸ್ಟಿಂಗ್ ಮಾಡಲಾಗುತ್ತದೆ. ಒಂದು ವಾರದ ಬಳಿಕ 5000 ಕೊವಿಡ್ ಟೆಸ್ಟಿಂಗ್ ಮಾಡಲಾಗುತ್ತದೆ. ಟೆಸ್ಟಿಂಗ್ ಹೆಚ್ಚಳದ ಬಳಿಕ ಕೊವಿಡ್ ಸ್ಪಷ್ಟತೆ ಸಿಗಲಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಮಾಹಿತಿ ನೀಡಿದರು.