ಕೊರೋನಾ ವೈರಸ್: ಫೇಸ್ ಮಾಸ್ಕ್‌ನಿಂದ ರಕ್ಷಣೆ ಅಸಾಧ್ಯವೇ?
ಕೊರೋನಾ ವೈರಸ್ ಹಬ್ಬಿದ್ದೇ ಹಬ್ಬಿದ್ದು, 10ರಿಂದ 50 ರುಪಾಯಿಗೆ ಸಿಗುತ್ತಿದ್ದ ಫೇಸ್ ಮಾಸ್ಕ್‌ಗಳ ಬೆಲೆ ಸಾವಿರದತ್ತ ಕಾಲಿಟ್ಟಿದೆ. ಜನರ ಭಯ, ಅಜ್ಞಾನವನ್ನೇ ಬಂಡವಾಳವಾಗಿಸಿಕೊಳ್ಳುತ್ತಿದ್ದಾರೆ ಹಲವರು. ಇಷ್ಟಕ್ಕೂ ಫೇಸ್ ಮಾಸ್ಕ್ ಇದ್ದ ಕೂಡಲೇ ಕೊರೋನಾ ವೈರಸ್ ತಾಕೋದಿಲ್ಲ ಎಂಬುದು ಭ್ರಮೆಯಷ್ಟೇ ಅಂತಾರೆ ವೈದ್ಯರು.
ಕೊರೋನಾ ವೈರಸ್ ಭೀತಿಯಿಂದ ಎಲ್ಲಿ ಕಾಲಿಟ್ಟರೂ ಶಸ್ತ್ರತಜ್ಞರಂತೆ ಫೇಸ್ ಮಾಸ್ಕ್ ಧರಿಸಿದ ಜನತೆ. ಅವರ ಭಯಕ್ಕೊಂದು ಮಾಸ್ಕ್ ಹಾಕಿದಂತೆ, ಮಾನಸಿಕವಾಗಿ ಏನೋ ಒಂದು ನೆಮ್ಮದಿ, ನಿಟ್ಟುಸಿರು. ಆದರೆ, ಮಾಸ್ಕ್ ಧರಿಸಿದವರನ್ನು ನೋಡಿ, ವೈರಸ್ ಹೆದರಿಕೊಂಡು ಬೇರೆಯವರತ್ತ ಓಡಿ ಬಿಡುವಷ್ಟು ಸರಳವಿದ್ದಿದ್ದರೆ, ಈಗಾಗಲೇ 90,000 ಜನರಿಗೆ ಕೊರೋನಾ ಹರಡುತ್ತಲೇ ಇರಲಿಲ್ಲ. ಈ ಬಗ್ಗೆ ನಿಮ್ಮ ಮೂಢನಂಬಿಕೆ ಓಡಿಸಲು ಕೆಲ ವೈದ್ಯರು ಪ್ರಯತ್ನಿಸಿದ್ದಾರೆ. ಮಾಸ್ಕ್‌ಗಳ ಅಗತ್ಯ ಯಾರಿಗಿದೆ, ಯಾರಿಗಿಲ್ಲ ಮುಂತಾದವನ್ನು ವಿವರಿಸಿದ್ದಾರೆ, ನೋಡಿ.
ಮಾಸ್ಕ್ ರೆಸ್ಪಿರೇಟರ್ ಅಲ್ಲ
ನೀವು ಮಾಧ್ಯಮಗಳಲ್ಲಿ ನೋಡುವ ಜನರು ಧರಿಸಿರುವ ಆ ಎಲ್ಲ ಮಾಸ್ಕ್‌ಗಳೂ ಕೂಡಾ ಧೂಳುಮುಕ್ತವಾಗಿಸುವ ಮಾಸ್ಕ್ ಇಲ್ಲವೇ ಸರ್ಜಿಕಲ್ ಮಾಸ್ಕ್ ಆಗಿರುತ್ತದೆ. ಅದು ರೆಸ್ಪಿರೇಟರ್ ಅಲ್ಲ. ಇವುಗಳ ನಡುವೆ ದೊಡ್ಡ ಡಿಫರೆನ್ಸ್ ಇದ್ದರೂ ನೋಡಲು ಒಂದೇ ತೆರನಾಗಿ ಇರುತ್ತದೆ. ಈ ಫೇಸ್ ಮಾಸ್ಕ್‌ಗಳು ಪರಿಸರದಿಂದ ಧೂಳಿನ ದೊಡ್ಡ ಕಣಗಳು ನಿಮ್ಮ ದೇಹ ಸೇರದಂತೆ ತಡೆಯುತ್ತವೆಯೇ ಹೊರತು, ಉಸಿರಾಟದ ಕಾಯಿಲೆಗಳಿಂದ ಮುಕ್ತರಾಗಿಸಲು ಅವುಗಳಿಂದ ಸಾಧ್ಯವಿಲ್ಲ. ಆದರೆ ರೆಸ್ಪಿರೇಟರ್‌ಗಳು ವೈರಸ್‌ನಂಥ ಅತಿ ಸಣ್ಣವುಗಳೂ ಉಸಿರಾಟದ ಮೂಲಕ ದೇಹ ಸೇರದಂತೆ ನೋಡಿಕೊಳ್ಳುತ್ತವೆ. ಇದನ್ನೇ ಆಸ್ಪತ್ರೆ ಸಿಬ್ಬಂದಿ ಧರಿಸುವುದು. ಇದಕ್ಕೆ ಎನ್ 95 ರೆಸ್ಪಿರೇಟರ್ ಎನ್ನಲಾಗುತ್ತದೆ. ಇದು ಶೇ.95ರಷ್ಟು ಧೂಳು, ವೈರಸ್, ಬ್ಯಾಕ್ಟೀರಿಯಾಗಳು ಒಳಹೋಗದಂತೆ ತಡೆಯಬಲ್ಲದು.
ಕೊರೋನಾ ಬಗ್ಗೆ ನೀವು ತಿಳಿದುಕೊಂಡ ಈ ನಂಬಿಕೆಗಳು ಸುಳ್ಳು!...
ಆರೋಗ್ಯವಂತರಿಗೆ ಫೇಸ್ ಮಾಸ್ಕ್ ಅಗತ್ಯವಿಲ್ಲ
ವೈದ್ಯರು ಹೇಳಿಲ್ಲವಾದರೆ ಯಾರೂ ಕೂಡಾ ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಸಾಮಾನ್ಯ ಜನರು ಅಂದರೆ ಆರೋಗ್ಯವಂತರಿಗೆ ಮಾಸ್ಕ್‌ನ ಅಗತ್ಯವಿಲ್ಲ. ಅದರ ಅಗತ್ಯವಿರುವುದು ಕಾಯಿಲೆ ಬಂದವರಿಗೆ. ಅಂದರೆ, ಕೋವಿಡ್ 19 ವೈರಸ್ ದಾಳಿಗೆ ಒಳಗಾದವರು ಮಾಸ್ಕ್ ಧರಿಸುವ ಅಗತ್ಯವಿದೆ. ಆದರೆ, ನೀವೇನಾದರೂ ಕರೋನಾ ವೈರಸ್ ಶಂಕಿತರನ್ನು ನೋಡಿಕೊಳ್ಳುತ್ತಿದ್ದೀರಾದರೆ ಮಾಸ್ಕ್ ಧರಿಸಿ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
ಮಾಸ್ಕ್‌ನಲ್ಲಿ ಕೂಡಾ ವೈರಸ್ ನುಗ್ಗಬಲ್ಲವು
ಫೇಸ್ ಮಾಸ್ಕ್‌ಗಳು ಫುಲ್ ಫಿಟ್ ಆಗಿ ಕೂರುವುದಿಲ್ಲವಾದ ಕಾರಣ ವೈರಸ್ ಅದರೊಳಗೆ ಆರಾಮಾಗಿ ನುಸುಳಿ ಉಸಿರಾಟ ವ್ಯವಸ್ಥೆಯಲ್ಲಿ ಸೇರಿಕೊಳ್ಳಬಹುದು. ನೀವು ಗಾಡಿ ಓಡಿಸುವಾಗ, ಮನೆಯ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಬಳಸುವ ಆ ಮಾಸ್ಕ್ ವೈರಸ್‌ನಿಂದ ರಕ್ಷಣೆ ನೀಡಲಾರದು. ಇನ್ನು ಸರ್ಜಿಕಲ್ ಮಾಸ್ಕ್ ಕೂಡಾ ಅಷ್ಟೆಲ್ಲ ಪರಿಣಾಮಕಾರಿಯಾಗಿದ್ದರೆ, ನಾವದನ್ನು ಸದಾ ಕಾಲ ಧರಿಸಿ ಯಾವ ವೈರಸ್ ಹಾಗೂ ಬ್ಯಾಕ್ಟೀರಿಯಾವನ್ನು ಒಳ ಹೋಗಲು ಬಿಡದೆ, ಸದಾ ರೋಗಮುಕ್ತವಾಗಿರಬಹುದಿತ್ತು ಅಲ್ಲವೇ?
ಮಾಸ್ಕ್‌ಗಳು ಲೀಕ್ ಆಗುತ್ತವೆ
ಮಾಸ್ಕ್‌ಗಳು ಲೂಸ್ ಫಿಟ್ಟಿಂಗ್ ಆಗಿರುವುದರಿಂದ ಬದಿಯಿಂದ, ಕೆಳಗಿಂದ ವೈರಸ್‌ನಂಥ ಸಣ್ಣವು ಒಳನುಗ್ಗಬಲ್ಲವು. ಹಾಗಂಥ ಎನ್95ನಂಥ ರೆಸ್ಪಿರೇಟರ್‌ಗಳನ್ನೇ ಕೊಳ್ಳುತ್ತೇವೆ ಎಂದು ನೀವಂದರೆ ಅದರ ನಿಜವಾದ ಅಗತ್ಯ ಹೆಲ್ತ್‌ಕೇರ್ ವಲಯದಲ್ಲಿ ಕೆಲಸ ಮಾಡುವವರಿಗಿದೆ. ಅವು ದೊಡ್ಡ ಮಟ್ಟದಲ್ಲಿ ಉತ್ಪಾದನೆಯಾಗುವುದಿಲ್ಲ ಕೂಡಾ. ಇಷ್ಟಕ್ಕೂ ಸಿಕ್ಕಾಪಟ್ಟೆ ಟೈಟ್ ಫಿಟ್ಟಿಂಗ್ ಇರುವ ರೆಸ್ಪಿರೇಟರ್‌ಗಳಲ್ಲಿ ಉಸಿರಾಡಲು ಸಾಮಾನ್ಯ ಮನುಷ್ಯರಿಗೆ ಪರದಾಟವೇ. ಅದನ್ನು ಧರಿಸಲು ತರಬೇತಿಯೇ ಬೇಕು. ಇಷ್ಟಕ್ಕೂ ಎಷ್ಟೊಂದು ಕೊಳಕು, ಕಸ ತುಂಬಿದ ಪರಿಸರದಲ್ಲೇ ಬೆಳೆದ ನಾವು ಭಾರತೀಯರ ರೋಗ ನಿರೋಧಕ ಶಕ್ತಿ ಪಾಶ್ಚಾತ್ಯರಂಥಲ್ಲ, ಅದು ಬಹಳ ಹೆಚ್ಚಿನ ಮಟ್ಟದಲ್ಲಿರುತ್ತದೆ. ಹಾಗಾಗಿ, ಆರೋಗ್ಯವಂತ ಭಾರತೀಯರ್ಯಾರೂ ಫೇಸ್ ಮಾಸ್ಕ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ.
ಕೊರೋನಾ ಮರಣಮೃದಂಗ; ಸೋಂಕಿತರು, ಸಾವನ್ನಪ್ಪಿರುವವರ ಬಗ್ಗೆ ಒಂದು ವರದಿಯಿದು!...
ಕಾಯಿಲೆಯಿದ್ದರೆ ಧರಿಸಿ
ಮಾಸ್ಕ್ ನಿಮ್ಮನ್ನು ವೈರಲ್ ಕಾಯಿಲೆಗಳಿಂದ ರಕ್ಷಿಸಲಾರವಾದರೂ, ಅವು ನಿಮ್ಮಿಂದ ಇತರರಿಗೆ ಹರಡದಂತೆ ಒಂದು ಮಟ್ಟಿಗೆ ಕೆಲಸ ಮಾಡಬಲ್ಲವು. ಹಾಗಾಗಿ, ನಿಮಗೆ ವೈರಲ್ ಕಾಯಿಲೆಗಳಿದ್ದಲ್ಲಿ, ಕೆಮ್ಮು, ಸೀನು ಹೆಚ್ಚಿದ್ದಲ್ಲಿ ಮಾಸ್ಕ್ ಧರಿಸುವ ಅಭ್ಯಾಸ ಮಾಡಿಕೊಳ್ಳಿ. ಹಾಗಂಥ ಮಾಸ್ಕ್ ಧರಿಸಿದ ಕೂಡಲೇ ಇತರರಿಗೆ ನಿಮ್ಮಿಂದ ಕಾಯಿಲೆ ಹಬ್ಬುವುದಿಲ್ಲ ಎಂದು ಕಚೇರಿಗೆ ಹೋಗುವಷ್ಟು ಭಂಡಧೈರ್ಯ ಮಾಡದಿರಿ. ಮಾಸ್ಕ್ ಆ ಮಟ್ಟಿನ ರಕ್ಷಣೆಯನ್ನು ನೀಡಲಾರದು.
ಮಾಸ್ಕ್ ಸರಿಯಾಗಿ ಧರಿಸಿ
ಮಾಸ್ಕ್‌ನ ಲಾಭ ಲಿಮಿಟೆಡ್ ಆಗಿದ್ದರೂ ಬಳಸುವವರಿಗೆ ಅದನ್ನು ಸರಿಯಾಗಿ ಬಳಸಲು ತಿಳಿದಿರಬೇಕು. ಮಾಸ್ಕ್ ಪರಿಣಾಮಕಾರಿಯಾಗಿರಲು ಬಾಯಿ ಹಾಗೂ ಮೂಗು ಎರಡನ್ನೂ ಸಂಪೂರ್ಣ ಮುಚ್ಚುವಂತೆ ಅದನ್ನು ಧರಿಸುವುದು ಮುಖ್ಯ. ಮುಖ ತುರಿಸಿಕೊಳ್ಳಲು, ಮತ್ಯಾರೊಂದಿಗೋ ಮಾತಾಡಲು ನೀವು ಮಾಸ್ಕ್ ಎತ್ತುತ್ತಿರಾದರೆ ಅದನ್ನು ಧರಿಸಿ ಪ್ರಯೋಜನವಿಲ್ಲ. ಅಲ್ಲದೆ, ಗಡ್ಡ ಇರುವವರಿಗೆ ಮಾಸ್ಕ್ ಉಪಯೋಗವಾಗುವುದಿಲ್ಲ. ಮಾಸ್ಕ್ ಧರಿಸುವ ಮೊದಲು ಹಾಗೂ ನಂತರದಲ್ಲಿ ಕೈಗಳನ್ನು ಸೋಪ್ ಬಳಸಿ ಸರಿಯಾಗಿ ತೊಳೆದುಕೊಳ್ಳಬೇಕು. ಅದನ್ನು ಧರಿಸಿದ ಬಳಿಕ ಮುಟ್ಟುತ್ತಿರಬಾರದು. ಸಿಂಗಲ್ ಯೂಸ್ ಮಾಸ್ಕ್‌ಗಳನ್ನು ಮರುಬಳಕೆ ಮಾಡಕೂಡದು. ಅದನ್ನು ತೆಗೆವಾಗ ಕೂಡಾ ಅದರ ಹಿಂದಷ್ಟೇ ಮುಟ್ಟಿ ಮುಚ್ಚಿರುವ ಡಸ್ಟ್‌ಬಿನ್ ಒಳಗೆ ಹಾಕಿ ತಕ್ಷಣ ಕೈಗಳನ್ನು ತೊಳೆದುಕೊಳ್ಳಬೇಕು.
ಇಷ್ಟಕ್ಕೂಕೊರೋನಾ ವೈರಸ್ ಇರುವ ವ್ಯಕ್ತಿ ಕೆಮ್ಮಿದರೆ ಅಥವಾ ಸೀನಿದರೆ- ಆ ಸಮಯದಲ್ಲಿ ನೀವು 6 ಅಡಿಗಳ ಒಳಗೆ ಅವರ ಹತ್ತಿರವಿದ್ದರೆ ಮಾತ್ರ ವೈರಸ್ ಹರಡುತ್ತದೆ. ಇದಲ್ಲದೆ, ವೈರಸ್ ಇದ್ದ ಜಾಗವನ್ನು ಕೈಗಳಲ್ಲಿ ಮುಟ್ಟಿದ ಬಳಿಕ ಬಾಯಿ, ಕಣ್ಣು, ಕಿವಿಗಳನ್ನು ಮುಟ್ಟಿಕೊಂಡರೆ ವೈರಸ್ ಹರಡುತ್ತದೆ.