ಟಿವಿ, ನ್ಯೂಸ್‌ಪೇಪರ್, ಫೇಸ್ಬುಕ್, ವಾಟ್ಸಾಪ್, ಬಸ್ಸು, ರೈಲು ಎಲ್ಲ ಕಡೆ ಕೇಳಿಬರುತ್ತಿರೋದು ಒಂದೇ ಪದ- ಕೊರೋನಾ ಕೊರೋನಾ ಕೊರೋನಾ... ಅಂತಾರಾಷ್ಟ್ರೀಯ ನಾಯಕರಿಂದ ಹಿಡಿದು ಕಾಮನ್ ಮ್ಯಾನ್‌ವರೆಗೆ ಎಲ್ಲರ ಬಾಯಲ್ಲಿ ಕೊರೋನಾ ಎಂಬುದು ಜಪಮಂತ್ರದಂತೆ ಕೇಳಿಸುತ್ತಿದೆ. ಕೊರೋನಾ ಅಲ್ಲಿ ಬಂತು, ಇಲ್ಲಿ ಬಂತು, ಅದನ್ನು ತಡೆಯುವ ಮಾರ್ಗಗಳೇನು, ಕೊರೋನಾಗೆ ಔಷಧವಿಲ್ಲ ಇತ್ಯಾದಿ ಇತ್ಯಾದಿ ವಿಷಯಗಳಿಂದಾಗಿ ಜನ ಕಂಗೆಟ್ಟು ಭೀತಗೊಂಡಿದ್ದಾರೆ. ಆದರೆ, ಕೊರೋನಾ ವಿಷಯದಲ್ಲಿ ನಿಜವಾಗಿಯೂ ಎಲ್ಲರೂ ಹೆದರಿಸುತ್ತಿರುವಷ್ಟು ಹೆದರುವ ಅಗತ್ಯ ಇದೆಯೇ? ಖಂಡಿತಾ ಇಲ್ಲ ಎನ್ನುತ್ತಿವೆ ಕೊರೋನಾದ ಅಂಕಿಅಂಶಗಳು. 
ಇದನ್ನು ಸ್ವಲ್ಪ ಲಾಜಿಕಲ್ ಆಗಿ ಪರಿಶೀಲಿಸಿದರೆ ನೀವು ಸುರಕ್ಷಿತವಾಗಿದ್ದೀರ ಎಂಬ ವಿಷಯ ಸಮಾಧಾನ ನೀಡುತ್ತದೆ.

ಹೌದು, ಕೊರೋನಾ ವೈರಸ್ ಹರಡಿ 3 ತಿಂಗಳಾಗಿದೆ. ಇದುವರೆಗೂ ಸುಮಾರು 93,127 ಜನರಿಗೆ ಈ ವೈರಸ್ ಅಟ್ಯಾಕ್ ಆಗಿದೆ. ಇದೇನು ಕಡಿಮೆ ಸಂಖ್ಯೆಯಲ್ಲ ನಿಜ. ಆದರೆ ಇದರಲ್ಲಿ 80,270ದಷ್ಟು ಜನರು ಚೀನಾದಲ್ಲೇ ಇದ್ದಾರೆ. ಕೊರೋನಾದಿಂದ ಇದುವರೆಗೂ ಸಾವಿಗೀಡಾದವರ ಸಂಖ್ಯೆ 3,202. ಇದರಲ್ಲಿ ಕೂಡಾ 2,981 ಮಂದಿ ಚೀನೀಯರು. ನೀವು ಚೀನಾದಲ್ಲಿಲ್ಲವಾದರೆ, ನಿಮ್ಮ ಭಯ ಈ ಸಂಖ್ಯೆಯಿಂದಾಗಿ ಶೇ.96ರಷ್ಟು ಕಡಿಮೆಯಾಗಲೇಬೇಕು. ಇಷ್ಟರ ಮೇಲೂ ಒಂದು ವೇಳೆ ನಿಮಗೆ ಕೊರೋನಾ ವೈರಸ್ ಅಟ್ಯಾಕ್ ಆಯಿತು ಎಂದುಕೊಳ್ಳೋಣ. ಈ ವೈರಸ್ ಅಟ್ಯಾಕ್ ಆಗಿದ್ದರಲ್ಲಿ ಶೇ.81ರಷ್ಟು ಕೇಸ್‌ಗಳು ಬಹಳ ಕಡಿಮೆ ಅಪಾಯಕಾರಿಯಾದವು. ನಿಮಗೆ ಆಗಾಗ ಶೀತ ಜ್ವರ ಕಾಣಿಸಿಕೊಂಡು ಹೋಗುತ್ತದಲ್ಲ- ಅಷ್ಟೇ ಇದರ ಪರಿಣಾಮ. ಇನ್ನು ಶೇ.14ರಷ್ಟು ಕೇಸ್‌ಗಳು ಮಧ್ಯಮ ಮಟ್ಟದಲ್ಲಿ ಅಪಾಯಕಾರಿ. ಉಳಿದ ಕೇವಲ ಶೇ.5ರಷ್ಟು ಕೇಸ್‌ಗಳು ಮಾತ್ರ ಗಂಭೀರ ಸ್ಥಿತಿಯವು. ಇದರರ್ಥ, ನಿಮಗೆ ಕೊರೋನಾ ವೈರಸ್ ಅಟ್ಯಾಕ್ ಆದರೂ ಗುಣ ಹೊಂದುವ ಸಂಭಾವ್ಯತೆಯೇ ಹೆಚ್ಚು. ಒಂದು ವೇಳೆ ಗಂಭೀರ ಸ್ಥಿತಿಗೇ ತಲುಪಿದಿರೆಂದುಕೊಳ್ಳಿ, ಸಾರ್ಸ್‌ನಲ್ಲಿ ಸಾವಿನ ಸಂಖ್ಯೆ ನೂರಕ್ಕೆ 10 ಇದ್ದರೆ, ಕೊರೋನಾದಲ್ಲಿ 100ಕ್ಕೆ 2 ಕೇಸ್‌ಗಳು ಮಾತ್ರ ಸಾವಿನ ಹಂತಕ್ಕೆ ತಲುಪುತ್ತವೆ. ಅಂದರೆ ಕೊರೋನಾ ಸಾರ್ಸ್‌ಗಿಂತ 5 ಪಟ್ಟು ಕಡಿಮೆ ಅಪಾಯಕಾರಿ ಎಂದಾಯಿತು. 

ಕರೋನಾ ಭೀತಿ; ಕೈ ಕುಲುಕೋಕಿಂತ ನಮಸ್ತೇಯೇ ವಾಸಿ ಅಂತಿವೆ ವಿದೇಶಗಳು...

ಹಿಂದೆ 2003ರಲ್ಲಿ ಸಾರ್ಸ್ ಬಂದಾಗ ಫೇಸ್ಬುಕ್, ವಾಟ್ಸಾಪ್ ಇರಲಿಲ್ಲ. 2009ರಲ್ಲಿ ಸ್ವೈನ್ ಫ್ಲೂ ಬಂದಾಗ ಫೇಸ್ಬುಕ್ ಇನ್ನೂ ಕಣ್ಣು ಬಿಡುತ್ತಿತ್ತು. 2014ರಲ್ಲಿ ಎಬೋಲಾ ಬಂದಾಗ ವಾಟ್ಸಾಪ್‌ಗೆ ಕೇವಲ 450 ಮಿಲಿಯನ್ ಬಳಕೆದಾರರು ಇದ್ದರು. ಆದರೆ, ಈಗ ಕೊರೋನಾ ಬಂದಾಗ ವಾಟ್ಸಾಪ್‌ಗೆ 2 ಶತಕೋಟಿ ಬಳಕೆದಾರರಿದ್ದರೆ, ಫೇಸ್ಬುಕ್‌ಗೆ 1.69 ಶತಕೋಟಿ ಬಳಕೆದಾರರಿದ್ದಾರೆ. ಇನ್ನು ಈಗಿರುವಷ್ಟು ನ್ಯೂಸ್ ಚಾನಲ್‌ಗಳ ಹಾವಳಿಯೂ ಹಿಂದೆಂದೂ ಇರಲಿಲ್ಲ. ಹೀಗಾಗಿ, ಉಳಿದೆಲ್ಲವುಗಳಿಗಿಂತ ಕೊರೋನಾ ವಿಷಯಗಳು ವೈರಸ್‌ಗಿಂತ ವೇಗವಾಗಿ ಹರಡುತ್ತಿವೆ. ಅದೇ ಕಾರಣಕ್ಕೆ ಜನ ಹೆಚ್ಚು ಭಯಭೀತರಾಗುತ್ತಿದ್ದಾರೆ ಅಷ್ಟೇ. ಇನ್ನೂ ಹೆಚ್ಚಿನ ಸುರಕ್ಷತಾ ಭಾವನೆಗಾಗಿ ಅಂಕಿಸಂಕಿಗಳನ್ನು ಮತ್ತಷ್ಟು ಬಗೆದು ನೋಡೋಣ. 

ವಯಸ್ಸು

ಉಳಿದೆಲ್ಲದರಂತೆ ಕೊರೋನಾದಲ್ಲಿ ಕೂಡಾ ಪ್ರಕರಣದ ಗಂಭೀರತೆಗೂ, ವಯಸ್ಸಿಗೂ ಸಂಬಂಧವಿದೆ. 50 ವರ್ಷ ಒಳಗಿನವರಿಗೆ ಕೊರೋನಾ ಅಟ್ಯಾಕ್ ಆದರೆ, ಅದು ಗಂಭೀರ ಸ್ವರೂಪಕ್ಕೆ ತಿರುಗುವ ಸಾಧ್ಯತೆ ಕೇವಲ ಶೇ.0.2ರಷ್ಟು. ಅಂದರೆ, ಕೊರೋನಾ ದಾಳಿಯಾದರೂ, ಬಹುತೇಕ ಜನರು ಅದರಿಂದ ಗುಣಮುಖರಾಗಿದ್ದಾರೆ ಎಂದಾಯಿತು. ಇದುವರೆಗೂ ಕೊರೋನಾಗೆ ಬಲಿಯಾದವರಲ್ಲಿ ಅತಿ ಹೆಚ್ಚು ಅಂದರೆ ಶೇ.14.8ರಷ್ಟು ಮಂದಿ 80 ವರ್ಷ ಮೇಲ್ಪಟ್ಟವರು. ಇನ್ನು ಶೇ.8ರಷ್ಟು ಸಾವಿಗೀಡಾದವರು 70ರಿಂದ 79 ವರ್ಷ ವಯಸ್ಸಿನವರು. ಶೇ.3.5ರಷ್ಟು ಮಂದಿ 60ರಿಂದ 69 ವರ್ಷದವರು. 
10 ವರ್ಷದೊಳಗಿನ ಮಕ್ಕಳು ಕೊರೋನಾಗೆ ಬಲಿಯಾಗಿಲ್ಲ. ಉಳಿದಂತೆ 10ರಿಂದ 40 ವರ್ಷದವರು ಇದಕ್ಕೆ ಬಲಿಯಾದದ್ದು ಕೇವಲ ಶೇ.0.2ರಷ್ಟು. 40ರಿಂದ 49 ವರ್ಷದವರಲ್ಲಿ ಶೇ.0.4ರಷ್ಟು ಮಂದಿ ಕೊರೋನಾಗೆ ಬಲಿಯಾದರೆ, 50ರಿಂದ 60 ವಯೋಮಾನದ ಶೇ.1.3ರಷ್ಟು ಜನರನ್ನು ಮಾತ್ರ ಕೊರೋನಾಗೆ ಬಲಿ ತೆಗೆದುಕೊಳ್ಳಲು ಸಾಧ್ಯವಾಗಿದೆ. ಅಂದರೆ, ನೀವಿನ್ನೂ 60 ವರ್ಷದ ಒಳಗಿನವರಾಗಿದ್ದು, ಚೀನಾದಲ್ಲಿಲ್ಲ ಎಂದರೆ ಕೊರೋನಾ ಬಂದರೂ ಅದರಿಂದ ಸುಲಭವಾಗಿ ಚೇತರಿಸಿಕೊಳ್ಳುವಷ್ಟು ನಿಮ್ಮ ರೋಗ ನಿರೋಧಕ ಶಕ್ತಿ ಸಮರ್ಥವಾಗಿರುತ್ತದೆ ಎಂದಾಯಿತು. 

ಮತ್ತೊಂದು ಸಾಂಕ್ರಾಮಿಕ ರೋಗ ಕಾಡಿದರೆ ಎದುರಿಸಲು ಸಿದ್ಧವಾಗಿದ್ಯಾ ಭಾರತ?...

ಕೊರೋನಾಕ್ಕಿಂತ ಸಿಗರೇಟ್ ಚಟ ಅಪಾಯಕಾರಿ

ಫೆಬ್ರವರಿ 10ರಂದು 108 ಜನರು, ಅವರಲ್ಲಿ ಬಹುತೇಕ ಚೀನಿಯರು ಕೊರೋನಾಗೆ ಬಲಿಯಾದರು. ಇದು ಬಹಳ ದೊಡ್ಡ ಸಂಖ್ಯೆಯೇ ನಿಜ. ಆದರೆ, ಅದೇ ದಿನ ಕ್ಯಾನ್ಸರ್‌ಗೆ ಬಲಿಯಾದವರ ಸಂಖ್ಯೆ 26,283 ಜನ. ಹೃದಯದ ಕಾಯಿಲೆಗಳಿಂದಾಗಿ ಸತ್ತವರ ಸಂಖ್ಯೆ 24,641. ಸಕ್ಕರೆ ಕಾಯಿಲೆಗೆ ಜೀವ ತೆತ್ತವರು 4,300 ಜನ. ಹಾಗೂ ಅಂದು ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಕೊರೋನಾಗೆ ಬಲಿಯಾದವರ 27.7 ಪಟ್ಟಿನಷ್ಟು ಹೆಚ್ಚು. ಕೆಟ್ಟ ಡ್ರೈವಿಂಗ್, ಆಲ್ಕೋಹಾಲ್ ಸೇವನೆ, ಸಿಗರೇಟು ಚಟಗಳು ಕೊರೋನಾ ವೈರಸ್‌ಗಿಂತ ಹೆಚ್ಚು ಅಪಾಯಕಾರಿ. ಅಂದರೆ, ಯಾರಿಗೆ ಯಾವಾಗ ಏನು ಆಗುತ್ತದೆಂದು ಹೇಳಲಾಗದು. ಕೊರೋನಾಗೆ ಭಯ ಪಡುವುದು ಬಿಟ್ಟು ಸಿಗುವ ಪ್ರತಿ ದಿನವನ್ನೂ ಸಂತೋಷದಿಂದ ಕಳೆಯುವ ರೂಢಿ ಮಾಡಿಕೊಳ್ಳುವುದು ಉತ್ತಮ. 

ಮುಂಜಾಗ್ರತೆ ಒಳ್ಳೆಯದು

ಇಷ್ಟೆಲ್ಲ ಆದ ಮೇಲೆ ಕೂಡಾ ಕೊರೋನಾ ಬರದಂತೆ ಮುಂಜಾಗ್ರತೆ ತೆಗೆದುಕೊಳ್ಳುವುದು ಉತ್ತಮವೇ. ಕೊರೋನಾ ಒಂದೇ ಅಲ್ಲ, ಯಾವ ಕಾಯಿಲೆ ಕೂಡಾ ಬರದಂತೆ ಮುಂಜಾಗ್ರತೆ ತೆಗೆದುಕೊಳ್ಳುವುದು ಖಂಡಿತಾ ಒಳ್ಳೆಯದೇ. 
ಕೊರೋನಾದಿಂದ ದೂರ ಉಳಿಯಲು ನಿಮ್ಮ ಕೈಗಳನ್ನು ಉತ್ತಮ ಸ್ಯಾನಿಟೈಸರ್‌ನಿಂದ ಆಗಾಗ ಸ್ವಚ್ಛಗೊಳಿಸಿಕೊಳ್ಳುತ್ತಿರಿ. ಅಲ್ಲದೆ, ಈ ಕಾಯಿಲೆ ಹರಡುವ ಅತಿ ವೇಗದ ವಿಧಾನ ಎಂದರೆ ಸೀನಿನ ಮೂಲಕ. ಹಾಗಾಗಿ ಸೀನುವವರಿಂದ ದೂರ ಉಳಿಯುವಂತೆ ನೋಡಿಕೊಳ್ಳಿ. ಅಂದರೆ ಗುಂಪಿನಿಂದ ಸ್ವಲ್ಪ ದೂರವಿರಿ. ಜೊತೆಗೆ, ಪ್ರತಿಯೊಬ್ಬರೂ ತಾವು ಸೀನುವಾಗ ಕರವಸ್ತ್ರ ಅಡ್ಡ ಹಿಡಿದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಇನ್ನು ಈ ಕಾಯಿಲೆಯಿಂದ ಹೆದರಿದವರೆಲ್ಲ ಮಾಸ್ಕ್ ಹಾಕಿಕೊಂಡು ತಿರುಗಾಡುವುದನ್ನು ಕಾಣಬಹುದು. ಆದರೆ, ಸಧ್ಯದ ಸ್ಥಿತಿಯಲ್ಲಿ ನಿಮ್ಮಲ್ಲಿ ಕೊರೋನಾ ಇಲ್ಲದಿದ್ದಾಗ ಮಾಸ್ಕ್ ಅಗತ್ಯ ನಿಮಗೆ ಖಂಡಿತಾ ಇಲ್ಲ. ನಿಮಗೆ ಹುಷಾರಿಲ್ಲದಾಗ ಸೀನಿ ಇತರರಿಗೆ ತೊಂದರೆಯಾಗಬಾರದೆಂಬ ಕಾಳಜಿಯಿಂದ ಮಾತ್ರ ಮಾಸ್ಕ್ ಧರಿಸಿದರೆ ಸಾಕು. ಇದರ ಹೊರತಾಗಿ ಉತ್ತಮ ಆಹಾರ ಸೇವನೆ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ಮತ್ತಿನ್ನೆಲ್ಲ ಭಯ ದೂರವಿಡಿ.