ಕೊರೊನಾ ವೈರಸ್‌ನ ಎಂಟು ಕೇಸುಗಳು ಪತ್ತೆಯಾಗಿರುವುದು ಭಾರತವನ್ನು ಬೆಚ್ಚಿ ಬೀಳಿಸಿದೆ. ಅದರಲ್ಲೂ ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಅಟ್ಯಾಕ್ ಆಗಿರುವ ಟೆಕ್ಕಿಯೊಬ್ಬ ಸಾಕಷ್ಟು ಓಡಾಡಿದ್ದಾನೆ. ತೆಲಂಗಾಣಕ್ಕೆ ಹೋಗಿ ಅಲ್ಲಿ ಆಸ್ಪತ್ರೆ ಸೇರಿದ್ದಾನೆ. ಸುಮಾರು 300 ಮಂದಿ ಈತನ ಸಂಪರ್ಕಕ್ಕೆ ಬಂದಿದ್ದಾರೆ. ಯಾರ್ಯಾರಿಗೆ ವೈರಸ್ ಹಂಚಿಕೆಯಾಗಿದೆಯೋ ತಿಳಿಯದು. ಅಂಥವರೆಲ್ಲರ ಮೇಲೂ ಈಗ ನಿಗಾ ಇಡಲಾಗಿದೆ. ಸೋಂಕು ರೋಗ ಹರಡುವುದೇ ಹೀಗೆ.

ಕೊರೊನಾ ಜ್ವರವನ್ನು ವಿಶ್ವಸಂಸ್ಥೆ ಗ್ಲೋಬಲ್ ಎಪಿಡೆಮಿಕ್ ಎಂದು ಗುರುತಿಸಿದೆ. ಅಂದರೆ ಸೋಂಕುರೋಗ. ಸೋಂಕುರೋಗಗಳಲ್ಲಿ ಎಪಿಡೆಮಿಕ್ ಹಾಗೂ ಪ್ಯಾಂಡೆಮಿಕ್ ಎಂದು ಎರಡು ವಿಧ. ಎಪಿಡೆಮಿಕ್ ಅಂದರೆ ಸೋಂಕು ರೋಗ. ಪ್ಯಾಂಡೆಮಿಕ್ ಎಂದರೆ ತೀವ್ರಗತಿಯ ಸಾಂಕ್ರಾಮಿಕ ರೋಗ. ಒಂದು ಕಾಲದಲ್ಲಿ ಪ್ಲೇಗ್, ಮಲೇರಿಯಾ ಮುಂತಾದವು ಸಾಂಕ್ರಾಮಿಕಗಳಾಗಿದ್ದವು. ವಿಶ್ವಸಂಸ್ಥೆ ಇನ್ನೂ ಕೊರೊನಾ ಜ್ವರವನ್ನು ಸಾಂಕ್ರಾಮಿಕ ಎಂದು ಗುರುತಿಸಿಲ್ಲ. ಆದರೆ ಸಾವಿನ ಸಂಖ್ಯೆ 3000ದ ಹತ್ತಿರ ತಲುಪಿದೆ.

ಕೊರೋನಾ ಬಂದ ಕೂಡ್ಲೇ ಸಾಯೋಲ್ಲ: ಹೀಗ್ ಮಾಡಿದ್ರೆ ರೋಗ ಬರೋದೇ ಇಲ್ಲ....

ಇದುವರೆಗೆ ಈ ಭೂಮಿಯ ಮೇಲೆ ಹಲವಾರು ಬಾರಿ ಸೋಂಕು ರೋಗಗಳು, ಸಾಂಕ್ರಾಮಿಕಗಳು ಬಂದು ಹೋಗಿವೆ. ಸಾವಿರಾರು ವರ್ಷಗಳಿಂದ ಕೋಟ್ಯಂತರ ಮಂದಿ ಇದರಲ್ಲಿ ಸತ್ತಿರಬಹುದು. ಪ್ರತಿವರ್ಷ ಸುಮಾರು 6.4 ಲಕ್ಷ ಜನ ನಾನಾ ಬಗೆಯ ಜ್ವರಗಳಿಂದ ಸಾಯುತ್ತಾರೆ. ಸುಮಾರು‌ 50 ಲಕ್ಷ ಮಂದಿಗೆ ಇನ್‌ಫ್ಲುಯೆಂಜಾ ಕಾಡುತ್ತದೆ.

1918ರಿಂದೀಚೆಗೆ, ಅಂದರೆ ಕಳೆದ ನೂರು ವರ್ಷಗಳಲ್ಲಿ ಏನಾಗಿದೆ ಎಂಬುದಕ್ಕೆ ದಾಖಲೆ ಸಿಗುತ್ತದೆ. ಈ ಅವಧಿಯಲ್ಲಿ ನಾಲ್ಕು ದೊಡ್ಡ ಸಾಂಕ್ರಾಮಿಕಗಳು ಭೂಮಿಯನ್ನು ಆವರಿಸಿ ಲಕ್ಷಾಂತರ ಮಂದಿಯ ಬಲಿ ಪಡೆದಿವೆ. ಎಲ್ಲವೂ ಇನ್‌ಫ್ಲುಯೆಂಜಾ ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ಕೆಮ್ಮು, ಸೀನು, ಉಗುಳು,‌ ಸ್ಪರ್ಶ ಇತ್ಯಾದಿಯಿಂದ ಹರಡುವ ರೋಗಗಳು.

ಉದಾಹರಣೆಗೆ 1918ರಲ್ಲಿ ಬಂದ ಇನ್‌ಫ್ಲುಯೆಂಜಾ. ಆಗ ಮೊದಲ ಮಹಾಯುದ್ಧದ ಸಂದರ್ಭ. ಸೈನ್ಯದ ಓಡಾಟ, ಯುದ್ಧದ ವಾತಾವರಣ ಹೆಚ್ಚಿತ್ತು. ಆಧುನಿಕ ವೈದ್ಯಕೀಯ ಇನ್ನೂ ಮೂಡಿರಲಿಲ್ಲ. ಆಗ ಯುರೋಪ್, ರಷ್ಯ ಮುಂತಾದ ಕಡೆ ಈ ಇನ್‌ಫ್ಲುಯೆಂಜಾ ಹುಟ್ಟಿಕೊಂಡಿತು. ಸುಮಾರು 5 ಕೋಟಿ ಜನ ಇದಕ್ಕೆ ಬಲಿಯಾದರು ಎಂಬ ಅಂದಾಜು.

ಕೊರೋನಾ ಭೀತಿ ಬೇಡ: ಪಿಎಂ ಮೋದಿ ಅಭಯ!...

ಇದಾದ ನಂತರ 1957, 1968 ಮತ್ತು 2009ರಲ್ಲಿ ಇನ್‌ಫ್ಲುಯೆಂಜಾ ಉಗ್ರವಾಗಿ ಮರಳಿ ಬಂದಿತ್ತು. ಪ್ರತಿ ಸಲ ಬಂದಾಗಲೂ ಅದಕ್ಕೆ ಹೊಸ ವ್ಯಾಕ್ಸೀನ್, ಹೊಸ ಔಷಧ ಕಂಡು ಹಿಡಿಯಬೇಕಾಗಿ ಬಂದಿದೆ. ಆದರೆ ಇನ್‌ಫ್ಲುಯೆಂಜಾದ ವೈರಸ್ ಹೊಸ ಔಷಧ ನಿರೋಧಕ ಗುಣವನ್ನು ಮೈಗೂಡಿಸಿಕೊಂಡು ಇನ್ನಷ್ಟು ಉಗ್ರವಾಗಿ ಮರಳಿ ಬರುತ್ತಿದೆ. 2009ರಿಂದೀಚೆಗೆ ಇದು ಹಕ್ಕಿಜ್ವರ, ಹಂದಿಜ್ಬರ, ನಿಪಾ, ಸಾರ್ಸ್, ಮೆರ್ಸ್ ಹೀಗೆ ನಾನಾ ಅವತಾರಗಳಲ್ಲಿ ಬಂದಿದೆ. ಈಗ ಚೀನಾ ಮೂಲದ ಕೋವಿಡ್-19 ಕೂಡ ಇದರದೇ ಇನ್ನೊಂದು ಆವೃತ್ತಿ.

ಇನ್ನೊಮ್ಮೆ ಹೀಗೆ ಸಾಂಕ್ರಾಮಿಕ ಬಂದರೆ ಅದನ್ನು ಎದುರಿಸೋಕೆ ನಾವು ಎಷ್ಟು ಸಿದ್ಧರಾಗಿದ್ದೇವೆ? ಇದಕ್ಕೆ ಉತ್ತರ ಬಹಳ ಕಷ್ಟ. ಯಾಕೆಂದರೆ ನಾವೀಗ ಮೊದಲಿಗಿಂತ ಹೆಚ್ಚು ಕನೆಕ್ಟೆಡ್ ಆಗಿದ್ದೇವೆ. ನಿನ್ನೆ ಅಮೆರಿಕದಲ್ಲಿದ್ದವನು ಇಂದು ಭಾರತದಲ್ಲಿರಬಹುದು. ಇಂಥ ಸನ್ನಿವೇಶದಲ್ಲಿ ಯಾವ ದೇಶವೂ ಸಾಂಕ್ರಾಮಿಕದ ಆತಂಕದಿಂದ ಹೊರತಲ್ಲ. ಯಾವ ದೇಶವೂ ಇನ್ನೊಂದು ದೇಶವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದಷ್ಟು ಸ್ವಾವಲಂಬಿಯಲ್ಲ. 

ಆಧುನಿಕ ಮೆಡಿಕಲ್ ಕ್ಷೇತ್ರ ಸಾಕಷ್ಟು ಬೆಳೆದಿದೆ. ಆದರೆ ಕೆಲವಕ್ಕೆ ಇನ್ನೂ ಔಷಧವಿಲ್ಲ. ತಡೆಯುವಿಕೆಯೇ ಮದ್ದು. ದೇಶಗಳು ಮಿಲಿಟರಿಗೆ ಖರ್ಚು ಮಾಡುವಷ್ಟು ಮೆಡಿಸಿನ್‌ಗೆ ಮಾಡುತ್ತಿಲ್ಲ. ಔಷಧಗಳು ಖಾಸಗಿ ಲಾಬಿ ಕೈಯಲ್ಲಿ ಇದೆ. ಅಮೆರಿಕ ಮುಂತಾದ ಮುಂದುವರಿದ ದೇಶಗಳು ಹೇಗೋ ಬದುಕಿಕೊಳ್ಳಬಹುದು. ಆದರೆ ಭಾರತದಂಥ, ಆರೋಗ್ಯ ಸೇವೆ ಕಳಪೆಯಾಗಿರುವ ದೇಶದಲ್ಲಿ ಕೊರೊನಾವೈರಸ್‌ನಂಥ ಸಾಂಕ್ರಾಮಿಕ ಹಬ್ಬತೊಡಗಿದರೆ ಪರಿಣಾಮ ವಿನಾಶಕಾರಿ ಅನಿಸಲಿದೆ.