Asianet Suvarna News Asianet Suvarna News

ಬದಲಿಸಲಾಗದ ಮನುಷ್ಯನ ಗುಣವನ್ನೇ ಬದಲಾಯಿಸಿದ ಕೊರೋನಾ!

ಎಲ್ಲ ಕೆಟ್ಟದ್ದರ ಜೊತೆಗೂ ಒಂದಿಷ್ಟು ಒಳ್ಳೆಯದು ಇರಲೇಬೇಕು. ಮೈನಸ್ ಇದ್ದಲ್ಲಿ ಪ್ಲಸ್ ಇದ್ದೇ ಇರುತ್ತದೆ. ಕೊರೊನಾ ವಿಷಯದಲ್ಲೂ ಅಷ್ಟೇ. ಯಾರಿದಂಲೂ, ಯಾವುದರಿಂದಲೂ ಬದಲಾಗದ ಮನುಷ್ಯನನ್ನು ಕೊರೊನಾ ಬದಲಿಸಿದೆ. ಕೊರೊನಾ ಕಲಿಸಿದ ಪಾಠಗಳನ್ನು ಮರೆಯದೆ ಮುಂದುವರಿಸುವ ಜಾಣತನ ತೋರಬೇಕಷ್ಟೇ. 

Corona made people realise slowing down is not bad
Author
Bangalore, First Published Mar 18, 2020, 3:24 PM IST

ಜಗತ್ತನ್ನು ಬದಲಾಯಿಸುವ ಶಕ್ತಿ ಇರುವುದು ಭಯಕ್ಕೆ ಮಾತ್ರ ಎನ್ನುವುದನ್ನು ಕೊರೊನಾ ಸಾಬೀತುಪಡಿಸಿದೆ. ವರ್ಷಾನುಗಟ್ಟಲೆಯಿಂದ ಯಾರ್ಯಾರು ಹೇಗೇ ಬಡಕೊಂಡರೂ ಬದಲಾಗದ ಮನುಷ್ಯನನ್ನು ಕೋವಿಡ್ 19 ಎಂಬ ಕಣ್ಣಿಗೆ ಕಾಣದ ವೈರಸ್ ಬದಲಿಸಿದೆ. 

ಆಹಾರ
ಹೌದು, ಹೊರಗಡೆ ತಿನ್ಬೇಡ್ರೋ, ರಸ್ತೆ ಬದಿಯ ಆಹಾರ ಒಳ್ಳೆಯದಲ್ಲ, ಮನೆಯಲ್ಲೇ ಅಡುಗೆ ಮಾಡಿಕೊಂಡು ಸೇವಿಸಿ, ಹಾಳುಮೂಳಿಗೆ ಬೈಬೈ ಅನ್ನಿ ಅಂತ ಎಷ್ಟು ಬಾರಿ ಆರೋಗ್ಯ ತಜ್ಞರು, ಆಹಾರ ತಜ್ಞರು ಬಡಕೊಂಡಿಲ್ಲ? ಜಂಕ್ ಫುಡ್ ಬೇಡ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಆಹಾರಗಳನ್ನು ಸೇವಿಸಿ ಎಂಬ ಲಕ್ಷಾಂತರ ಲೇಖನಗಳು ಬಂದಿವೆ, ಹಾಗಿದ್ದೂ ಅದಕ್ಕೆ ಕಿವಿಗೊಟ್ಟವರು ಬಹಳ ಅಪರೂಪ. ಆದರೆ, ಈ ಕೊರೊನಾ ಬಂದಿದ್ದೇ ಬಂದಿದ್ದು, ಜನ ಫ್ರೀಯಾಗಿ ಕೊಡ್ತೀವಿ ಬನ್ರಪ್ಪಾ ಎಂದರೂ ಹೊರಗಿನ ಆಹಾರ ಸೇವಿಸಲು ಮನಸ್ಸು ಮಾಡುತ್ತಿಲ್ಲ. ಜಂಕ್ ಫುಡ್ ಅಂತೂ ದೂರದ ಮಾತು. ಗಂಜಿ ಕುಡಿದ್ರೂ ಮನೆಯಲ್ಲೇ ಮಾಡಿ ಕುಡೀತೀವಿ ಅಂತಿದಾರೆ. ಇನ್ನು ಸಸ್ಯಾಹಾರದ ಬಗ್ಗೆ ಯಾರಾದ್ರೂ ಮಾತಾಡಿದ್ರೆ ಅದಕ್ಕೆ ಜಾತಿ, ಧರ್ಮದ ಬಣ್ಣ ಕಟ್ಟಿ ವಾದ ಮಾಡಿ ದ್ವೇಷ ಕಾರುತ್ತಿದ್ದವರೆಲ್ಲ ಸಡನ್ನಾಗಿ ಮಾಂಸಾಹಾರ ಸೇವನೆಯಿಂದ ದೂರವುಳಿದಿದ್ದಾರೆ. 

ದಂಪತಿ ಮಧ್ಯೆ ಹುಳಿ ಹಿಂಡಿದ ಕೊರೋನಾ, ಒಂದಾಗಿ ಬಾಳಲು ಬಿಡಲ್ವಣ್ಣ!...

ಒಂದಾದ ಕುಟುಂಬಗಳು
ಇನ್ನು ಸಂಬಂಧಗಳ ವಿಷಯಕ್ಕೆ ಬರೋಣ. ಒಬ್ಬರಿಗೊಬ್ಬರು ಸಮಯ ಕೊಡಲಾಗದೆ ಅದೇ ವಿಷಯಕ್ಕೆ ಪ್ರತಿ ದಿನ ಕಿತ್ತಾಟ ನಡೆಸುತ್ತಿದ್ದರು ಗಂಡ ಹೆಂಡತಿ. ರಜೆ ಬಂದರೂ ಮನೆಯೊಳಗೆ ನಿಲ್ಲದ ಮಕ್ಕಳು. ಅಜ್ಜಅಜ್ಜಿಯರಷ್ಟೇ ಮನೆ ಕಾಯೋಕೆ ಎಂಬಂತಾಗಿತ್ತು. ಎಲ್ಲ ಒಟ್ಟಾಗಿ ಸಮಯ ಕಳೆಯಲು ಪ್ರವಾಸವೊಂದೇ ದಾರಿ ಎಂಬಂತಾಗಿತ್ತು. ಎಲ್ಲರೂ ವಾರದಲ್ಲೊಂದಾದರೂ ಊಟವನ್ನು ಒಟ್ಟಿಗೇ ಕುಳಿತು ಮಾಡೋಣವೆಂದರೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಕೊರೊನಾ ಕ್ವಾರಂಟೈನ್ ಎಂದು ಇಡೀ ದಿನ ಕುಟುಂಬಗಳು ಜೊತೆಗೇ ಸಮಯ ಕಳೆಯುತ್ತಿವೆ. ವರ್ಷಗಟ್ಟಲೆಯಿಂದ ಊರಿಗೆ ಬಾರದ ಮಗನನ್ನು ನೆನೆದು ಅಳುತ್ತಿದ್ದ ಅಪ್ಪಅಮ್ಮನಿಗೆ ಹಳ್ಳಿಯ ಹಾದಿ ಹಿಡಿದ ಮಗನಿಂದ ಖುಷಿಯಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುತ್ತಿದ್ದಾರೆ. ಒಂದು ವಿಷಯದ ಕುರಿತು ಮನೆಯವರೆಲ್ಲ ಚರ್ಚಿಸುತ್ತಿದ್ದಾರೆ. ಮಕ್ಕಳಿಗೆ ರಜಾಮಜಾ ಕುಟುಂಬದೊಂದಿಗೆ ಸಿಗುತ್ತಿದೆ. 

ಪ್ರಕೃತಿ ಖುಷ್
ಪರಿಸರದ ಕುರಿತ ಜಾಗೃತಿ ಸಪ್ತಾಹಗಳು, ಲೇಖನಗಳು, ಮಾಧ್ಯಮಗಳ ಎಚ್ಚರಿಕೆಗಳು, ಅಧ್ಯಯನಗಳು ಎಲ್ಲದಕ್ಕೂ ಕಿವುಡಾಗಿದ್ದ ಜನರೆಲ್ಲ ಈಗ ಮನೆಯೊಳಗೇ ಉಳಿದಿರುವುದರಿಂದ, ಕಾರ್ಖಾನೆಗಳು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ, ಕಚೇರಿಗಳು ಕ್ಲೋಸ್ ಆಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕೊಟ್ಟಿರುವುದರಿಂದ, ಶಾಲಾಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ, ವಾಹನಗಳು ರಸ್ತೆಗಿಳಿಯದ ಕಾರಣ ವಾಯುಮಾಲಿನ್ಯ ಅಚ್ಚರಿಯ ರೀತಿಯಲ್ಲಿ ತಗ್ಗುತ್ತಿದೆ. ಗಾಳಿ ಸ್ವಚ್ಛವಾಗುತ್ತಿದೆ, ಶಬ್ದಮಾಲಿನ್ಯಕ್ಕೂ ತಡೆ ಬಿದ್ದಿದೆ. ಬಹಳ ಕಡಿಮೆ ಕಸಕಡ್ಡಿ ಧೂಳು ಸಮುದ್ರ, ಹೊಳೆಗಳಿಗೆ ಸೇರುತ್ತಿವೆ. ಜಲಚರಗಳು ಖುಷಿಯಾಗಿವೆ. ವಿಮಾನಗಳ ಅಬ್ಬರವಿಲ್ಲದೆ ಆಕಾಶ ಆರಾಮಾಗಿದೆ, ಇಷ್ಟು ದಿನ ಬಚ್ಚಿಟ್ಟುಕೊಂಡಿದ್ದ ನಕ್ಷತ್ರಗಳೆಲ್ಲ ನಿಧಾನವಾಗಿ ಗೋಚರವಾಗುತ್ತಾ ಮಿಂಚಲಾರಂಭಿಸಿವೆ. ಲಕ್ಷುರಿ ಹಡಗುಗಳ ಕೊಳೆಯಿಲ್ಲದೆ ಸಾಗರಗಳು ಸಂತೋಷವಾಗಿವೆ. ಮರ ಕಡಿಯುವವರು ಬರುತ್ತಾರೆಂಬ ಭಯವಿಲ್ಲದೆ ಖುಷಿಯಿಂದ ಗಾಳಿ ಬೀಸಲಾರಂಭಿಸಿವೆ. ಇವೆಲ್ಲವೂ ಕೊರೊನಾಕ್ಕೆ ಕೃತಜ್ಞತೆ ಹೇಳುತ್ತಿವೆ. 

ಸ್ವಚ್ಛತೆ
ಸ್ವಚ್ಛತೆಯ ಕುರಿತು ಬಾಯ್ ಬಾಯ್ ಬಡಿದುಕೊಂಡರೂ ಬದಲಾಗದ ಜನರು ಈಗ ಪದೇ ಪದೆ ಕೈ ತೊಳೆಯುತ್ತಿದ್ದಾರೆ. ಬಾಯಿಗೆ ಕರವಸ್ತ್ರ ಅಡ್ಡ ಹಿಡಿದು  ಕೆಮ್ಮುವ ಸೀನುವ ಅಭ್ಯಾಸ ರೂಢಿಸಿಕೊಳ್ಳುತ್ತಿದ್ದಾರೆ. ಮನೆ ಹಾಗೂ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಗಮನ ಹರಿಸುತ್ತಿದ್ದಾರೆ. ತಮ್ಮ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಈಗ ಅರಿತುಕೊಳ್ಳುತ್ತಿದ್ದಾರೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದವರೆಲ್ಲ ಈಗ ಸಣ್ಣ ಶೀತಕ್ಕೂ ಆಸ್ಪತ್ರೆಗೆ ಓಡುತ್ತಿದ್ದಾರೆ. ಆರೋಗ್ಯ ಹೆಚ್ಚಿಸಿಕೊಳ್ಳಲು ಪ್ರಾಣಾಯಾಮ, ಯೋಗ ಮಾಡುತ್ತಿದ್ದಾರೆ. ಹಣವೇ ಎಲ್ಲ ಅಂದುಕೊಂಡವರು ಲಕ್ಷ ಲಕ್ಷ ಲಾಸ್ ಆಗುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ, ಆರೋಗ್ಯವಿದ್ದರೆ ಸಾಕಪ್ಪಾ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಇದಲ್ಲವೇ ಅಚ್ಛೇ ದಿನ್?

ಕೊರೋನಾ ಆತಂಕ ನಿವಾರಣೆಗೆ ಯೋಗ, ಧ್ಯಾನ, ಪ್ರಾಣಾಯಾಮ ಮದ್ದು!...

ಯಾವುದೋ ಅರಿಯದ ಗುರಿಯತ್ತ ವೇಗವಾಗಿ ಓಡುತ್ತಿದ್ದ ಜಗತ್ತು ಇದ್ದಕ್ಕಿದ್ದಂತೆ ವೇಗ ತಗ್ಗಿಸಿದೆ. ವೇಗ ತಗ್ಗಿದರೂ ಹೆಚ್ಚೇನೂ ಬದಲಾಗದು, ನಿಧಾನದ ಬದುಕು ಕೆಟ್ಟದೇ ಎಂದು ಈಗ ಅರಿವಾಗಿದೆ. ಇಷ್ಟು ದಿನದ ಜೀವನಶೈಲಿ ಕುರಿತ ಆತ್ಮವಿಮರ್ಶೆ ಮಾಡಿಕೊಳ್ಳಲು ಈಗ ಸಮಯ ಸಿಕ್ಕಿದೆ. ಕಳೆದ 50 ವರ್ಷಗಳ ಹುಚ್ಚು ಕೋಡಿ ಓಟ ಪರಿಸರದ ವಿರುದ್ಧ ಮನುಷ್ಯನದಾಗಿತ್ತು. ಈಗ ಆತನಿಗೆ  ಪ್ರಕೃತಿ ಮುಂದೆ ತಾನೆಷ್ಟು ಸಣ್ಣವನು ಎಂದು ಅರಿಯಲು ಸಣ್ಣದೊಂದು ದಾರಿ ಸಿಕ್ಕಿದೆ. ಉಸಿರಾಡಲು ಸಮಯ ಸಿಕ್ಕಿದೆ, ಶಾಂತವಾಗಿರಲು, ನಮ್ಮ ಅರ್ಥ ಕಳೆದುಕೊಂಡ ಬದುಕಿನ ಕುರಿತು ಪರಾಂಬರಿಸಿ ಮುಂದುವರಿಯಲು ಸರಿಯಾದ ಸಮಯ ಇದಾಗಿದೆ. ಈ ಗ್ರಹದ ಎಲ್ಲ ಜೀವಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಇನ್ನೂ ಅವಕಾಶವಿದೆ. ಕೊರೊನಾ ನೆಪದಲ್ಲಿ ಅಷ್ಟಾದರೂ ಬದಲಾಗೋಣ ಅಲ್ಲವೇ?

Follow Us:
Download App:
  • android
  • ios