Asianet Suvarna News Asianet Suvarna News

ಕುಕಿಂಗ್‌ ಇಂಟರೆಸ್ಟ್ ಇಲ್ವಾ? ರೀ ನೀವು ಕುಕ್ ಮಾಡಿದ್ರೇನೆ ಫಿಟ್ ಆಗೋದು!

ಕೆಲವರಿಗೆ ಅಡುಗೆಯಲ್ಲಿ ಇನ್ನಿಲ್ಲದ ಆಸಕ್ತಿ. ಹೊಸ ಹೊಸ ರೆಸಿಪಿಗಳನ್ನು ಟ್ರೈ ಮಾಡುತ್ತ ಮನೆ ಮಂದಿಗೆಲ್ಲ ಅದರ ರುಚಿಯನ್ನು ಉಣ್ಣಬಡಿಸುವ ಮೂಲಕ ಖುಷಿ ಪಡುತ್ತಾರೆ. ಮನಸ್ಸಿನ ದುಗುಡವನ್ನು ದೂರ ಮಾಡುವ ಹವ್ಯಾಸಗಳಲ್ಲಿ ಅಡುಗೆಗೆ ಅಗ್ರಸ್ಥಾನವಿದೆ ಗೊತ್ತಾ?

Cooking makes you mentally fit
Author
Bangalore, First Published Dec 28, 2019, 12:56 PM IST
  • Facebook
  • Twitter
  • Whatsapp

ಆ ದಿನ ಏಕೋ ನಿಮ್ಮ ಮೂಡ್ ಸರಿಯಿರುವುದಿಲ್ಲ., ಯಾವ ಕೆಲಸದಲ್ಲೂ ಆಸಕ್ತಿಯಿಲ್ಲ. ಒಬ್ಬರೆ ಸುಮ್ಮನೆ ಕುಳಿತು ಫೇಸ್‍ಬುಕ್ ನೋಡ್ತ ಇರ್ತೀರಿ, ಅದರಲ್ಲಿ ಯಾವುದೋ ಒಂದು ಹೊಸ ರೆಸಿಪಿ ವಿಡಿಯೋ ಕಣ್ಣಿಗೆ ಬೀಳುತ್ತೆ. ತಕ್ಷಣ ಅದನ್ನು ಸಿದ್ಧಪಡಿಸಿ ರುಚಿ ನೋಡಬೇಕು, ಮನೆಮಂದಿಗೆಲ್ಲ ಬಡಿಸಬೇಕು, ಅವರೆಲ್ಲ ಬಾಯಿ ಚಪ್ಪರಿಸಿಕೊಂಡು ತಿಂದು ತನ್ನ ಕೈರುಚಿಯನ್ನು ಹೊಗಳಬೇಕು ಎಂಬೆಲ್ಲ ಬಯಕೆ ನಿಮ್ಮಲ್ಲಿ ಗರಿಗೆದರುತ್ತದೆ.

ಮಾಡೋ ಅಡುಗೆ ಸೂಪರ್‌ ಆಗಿರ್ಬೇಕಂದ್ರೆ ಕಿಚನ್‌ಗೆ ಸ್ವಲ್ಪ ಬದಲಾವಣೆ ತನ್ನಿ!

ತಕ್ಷಣ ಅಡುಗೆಮನೆ ಪ್ರವೇಶಿಸುವ ನೀವು ಉತ್ಸಾಹ, ಉಲ್ಲಾಸದಿಂದ ನಳಪಾಕ ಸಿದ್ಧಪಡಿಸಲು ಪ್ರಾರಂಭಿಸುತ್ತೀರಿ. ಮನಸ್ಸಿನಲ್ಲಿ ಇಷ್ಟು ಹೊತ್ತು ಮನೆ ಮಾಡಿದ್ದ ಬೇಸರ, ಆಲಸ್ಯ ಎಲ್ಲವೂ ಕ್ಷಣಮಾತ್ರದಲ್ಲಿ ದೂರವಾಗಿ ಅಡುಗೆಯಲ್ಲೇ ನಿಮ್ಮ ಸಂಪೂರ್ಣ ಗಮನ ಮುಳುಗಿ ಬಿಡುತ್ತದೆ. ಅಡುಗೆ ನಮ್ಮನ್ನು ನಾವೇ ಭಾವನಾತ್ಮಕವಾಗಿ ಪುರಸ್ಕರಿಸಿಕೊಳ್ಳುವ ಅನುಭವ ನೀಡುತ್ತದೆ ಎಂಬುದಕ್ಕೆ ವೈಜ್ಞಾನಿಕ ಮನ್ನಣೆಯೂ ಇದೆ. ಅಡುಗೆ ಮಾನಸಿಕ ಆರೋಗ್ಯದ ಮೇಲೆ ಜಾದೂವನ್ನೇ ಮಾಡಬಲ್ಲದು. ಅಡುಗೆ ಮಾಡೋದ್ರಿಂದ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ?

ನಿಮ್ಮ ಮೇಲೆ ನಿಮಗೇ ಅಭಿಮಾನ: ಹೊಸ ರೆಸಿಪಿ ಟ್ರೈ ಮಾಡುತ್ತೀರಿ. ಅದು ನೀವಂದ್ಕೊಂಡಿದ್ದಕ್ಕಿಂತಲೂ  ಚೆನ್ನಾಗಿ ಮೂಡಿಬರುತ್ತದೆ. ನೋಡಿದರೇನೆ ಬಾಯಿಯಲ್ಲಿ ನೀರಿಳಿಯುತ್ತದೆ, ನಾಲಿಗೆ ಮೇಲಿಟ್ಟರೆ ಸೂಪರ್ ಟೆಸ್ಟ್. ಇಷ್ಟು ಹೊತ್ತು ನೀವು ಆ ಖಾದ್ಯ ಸಿದ್ಧಪಡಿಸಲು ಪಟ್ಟ ಶ್ರಮವೆಲ್ಲವೂ ಸಾರ್ಥಕವಾದ ಭಾವನೆ ನಿಮ್ಮ ಮನದಲ್ಲಿ ಮೂಡುತ್ತದೋ ಇಲ್ಲವೋ? ನಿಮ್ಮ ಕೈರುಚಿ ಬಗ್ಗೆ ನಿಮಗೇ ಹೆಮ್ಮೆ ಅನ್ನಿಸುತ್ತದೆ.

ಇನ್ನು ನಿಮ್ಮ ಪತಿಯೋ, ಅತ್ತೆಯೋ ಇಲ್ಲ ಮಕ್ಕಳೋ ಇದನ್ನು ಟೆಸ್ಟ್ ಮಾಡಿ ಹೊಗಳಿದರಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬ ಅನುಭವವಾಗುವುದು ಪಕ್ಕಾ. ಇವೆಲ್ಲವೂ ನಿಮ್ಮನ್ನು ಒಳ್ಳೆಯ ಮೂಡ್‍ಗೆ ಕರೆದುಕೊಂಡು ಹೋಗುತ್ತವೆ. ನೀವು ಬೇರೆಯೇನಾದರೂ ಕೆಲಸ ಮಾಡಿದರೆ ಅದರ ಫಲಿತಾಂಶ ನಿಮ್ಮ ಸ್ಪರ್ಶಕ್ಕೆ ಸಿಗದೇ ಇರಬಹುದು. ಆದರೆ, ಅಡುಗೆ ಹಾಗಲ್ಲ, ಅದರ ಫಲಿತಾಂಶ ನಿಮ್ಮ ಅನುಭವಕ್ಕೆ ಸಿಗುತ್ತದೆ. ಪರಿಣಾಮ ಮನಸ್ಸಿನಲ್ಲಿ ಸಾರ್ಥಕ ಭಾವ ಒಡಮೂಡುತ್ತದೆ.  

ಉದ್ಯೋಗಸ್ಥ ಮಹಿಳೆಯ ಅಡುಗೆಕೋಣೆಯಲ್ಲಿರಲೇಬೇಕಾದ ಸಾಧನಗಳಿವು

ಕ್ರಿಯೇಟಿವಿಟಿಗೆ ಕೈಗನ್ನಡಿ:  ಅಡುಗೆ ಎನ್ನುವುದು ಒಂದು ಅಂದವಾದ ಚಿತ್ರ ಬಿಡಿಸಿದಷ್ಟೇ ಕ್ರಿಯೇಟಿವ್ ಕೆಲಸ. ನೀವೆಷ್ಟು ಕ್ರಿಯೇಟಿವ್ ಆಗಿ ಯೋಚಿಸುತ್ತೀರೋ ಅಷ್ಟು ಚೆನ್ನಾಗಿರುತ್ತದೆ ನೀವು ಸಿದ್ಧಪಡಿಸುವ ಖಾದ್ಯದ ಬಣ್ಣ ಹಾಗೂ ರುಚಿ. ಅಡುಗೆ ಬೇರೆ ಚಟುವಟಿಕೆಯಂತೆ ನಿಮ್ಮಲ್ಲಿ ಉದ್ವೇಗ ಮೂಡಿಸುವುದಿಲ್ಲ. ಬದಲಿಗೆ ಮನಸ್ಸನ್ನು ಪ್ರಶಾಂತವಾಗಿರಿಸುವ ಜೊತೆಗೆ ಕೆಲಸದಲ್ಲಿ ತಲ್ಲೀನರಾಗುವಂತೆ ಮಾಡುತ್ತದೆ. ಇದರಿಂದಾಗಿ ನಿಮ್ಮ ಮನಸ್ಸಲ್ಲಿದ್ದ ಒತ್ತಡ ಹಾಗೂ ಉದ್ವೇಗ ದೂರವಾಗುತ್ತದೆ. ಅಡುಗೆ ವ್ಯಕ್ತಿಯ ಮನಸ್ಸಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಮೂಲಕ ಆತ್ಮವಿಶ್ವಾಸ ಹಾಗೂ ಸಂತಸವನ್ನು ಮೂಡಿಸುತ್ತದೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. 

ಮನೆಮಂದಿಯ ಮನಸ್ಸು ಗೆಲ್ಲುವ ಕೀಲಿ ಕೈ: ಪತಿ ಯಾವುದೋ ವಿಷಯಕ್ಕೆ ನಿಮ್ಮ ಮೇಲೆ ಮುನಿಸಿಕೊಂಡು ಆಫೀಸ್‍ಗೆ ಹೋಗಿರುತ್ತಾರೆ. ಸಂಜೆ ಮನೆಗೆ ಹಿಂತಿರುಗಿದ ಮೇಲೂ ಅವರ ಕೋಪ ತಣ್ಣಗಾಗಿರುವುದಿಲ್ಲ. ಇಂಥ ಸಮಯದಲ್ಲಿ ಅವರಿಗಿಷ್ಟವಾದ ತಿಂಡಿಯನ್ನು ಸಿದ್ಧಪಡಿಸಿ ಅವರ ಮುಂದಿಡಿ. ರುಚಿಯಾದ ತಿನಿಸು ನಾಲಿಗೆಯನ್ನು ಸ್ಪರ್ಶಿಸಿದ ತಕ್ಷಣ ಅವರ ಕೋಪ ಕೂಡ ತಿಂಡಿಯಷ್ಟೇ ಬೇಗ ಕರಗಿ ಹೋಗುತ್ತದೆ. ಇನ್ನು ಪತಿಗೆ ಇಷ್ಟವಾದ ತಿಂಡಿಯನ್ನು ಸಿದ್ಧಪಡಿಸುವಾಗ ನಿಮ್ಮ ಮನಸ್ಸಿನಲ್ಲಿ ಉತ್ಸಾಹ ಮನೆ ಮಾಡುತ್ತದೆ.

ಕಿಚನ್ ನಲ್ಲಿ ತಿಳಿಯದೆ ಮಾಡುವ ತಪ್ಪುಗಳಿವು

ಅಷ್ಟೇ ಅಲ್ಲ, ಆ ಸಮಯದಲ್ಲಿ ನಿಮ್ಮ ಮನಸ್ಸು ಖುಷಿಗೊಳ್ಳುವ ಜೊತೆಗೆ ಸಾರ್ಥಕತೆಯ ಅನುಭವವಾಗುತ್ತದೆ. ಇಂಥ ಅನುಭವ ಮನೆಯ ಇತರ ಸದಸ್ಯರೊಂದಿಗಿನ ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಅಷ್ಟೇ ಅಲ್ಲ, ನಿಮಗೆ ನಿಮ್ಮಲ್ಲಿರುವ ಟ್ಯಾಲೆಂಟ್ ಹಾಗೂ ಪವರ್‍ನ ಪರಿಚಯವಾಗುತ್ತದೆ. 

ಆರೋಗ್ಯ ಸಂರಕ್ಷಣೆ:  ನಮ್ಮ ಶರೀರ ಹಾಗೂ ಮಿದುಳಿನ ಆರೋಗ್ಯವು ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಅಡುಗೆ ಸಿದ್ಧಪಡಿಸುವಾಗ ನೀವು ಖಾದ್ಯಕ್ಕೆ ಯಾವೆಲ್ಲ ಪದಾರ್ಥಗಳನ್ನು ಸೇರಿಸುತ್ತಿದ್ದೀರಿ ಎಂಬುದು ನಿಮಗೆ ಸರಿಯಾಗಿ ತಿಳಿದಿರುತ್ತದೆ. ಅಷ್ಟೇ ಅಲ್ಲ, ಅದರ ನ್ಯುಟ್ರಿಷನಲ್ ವ್ಯಾಲ್ಯು ಬಗ್ಗೆಯೂ ತಿಳಿದುಕೊಳ್ಳುತ್ತೀರಿ. ಮನೆಯ ಎಲ್ಲ ಸದಸ್ಯರ ಡಯೆಟ್ ಬಗ್ಗೆ ನಿಮಗೆ ಅರಿವಿರುತ್ತದೆ. ಯಾರು ಏನು ತಿನ್ನುತ್ತಾರೆ, ಏನು ತಿನ್ನುವುದಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿರುತ್ತದೆ. ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆಯಿದ್ದರೆ ಯಾವೆಲ್ಲ ಪದಾರ್ಥಗಳನ್ನು ಅವರಿಗೆ ನೀಡಬಾರದು ಎಂಬ ಬಗ್ಗೆಯೂ ತಿಳಿದುಕೊಳ್ಳುತ್ತೀರಿ. ಒಟ್ಟಾರೆ ಅಡುಗೆ ಮೂಲಕ ನೀವು ಮನೆಮಂದಿಯ ವೈದ್ಯರಾಗುತ್ತೀರಿ. 

ಸಿಂಕ್ ಸ್ವಚ್ಛತೆಯೇ ಸ್ವಚ್ಛ ಭಾರತಕ್ಕೆ ಕೊಡುಗೆ!

ಉಳಿತಾಯದ ಮೂಲ: ಮನೆಯಲ್ಲೇ ಅಡುಗೆ ಸಿದ್ಧಪಡಿಸುವುದರಿಂದ ಶುಚಿ, ರುಚಿಯಾದ ಆಹಾರವನ್ನು ಸವಿಯಲು ಸಾಧ್ಯವಾಗುತ್ತದೆ. ಹೋಟೆಲ್‍ನಿಂದ ಫುಡ್ ಆರ್ಡರ್ ಮಾಡುವುದರಿಂದ ಆರೋಗ್ಯದ ಜೊತೆಗೆ ಪಾಕೆಟ್‍ಗೂ ಹಾನಿ. ಹೀಗಾಗಿ ನಿಮ್ಮ ಆಹಾರವನ್ನು ನೀವೇ ಸಿದ್ಧಪಡಿಸಿ ಹಣ ಉಳಿತಾಯ ಮಾಡಬಹುದು. 

Follow Us:
Download App:
  • android
  • ios