Asianet Suvarna News Asianet Suvarna News

ಸಿಂಕ್ ಸ್ವಚ್ಛತೆಯೇ ಸ್ವಚ್ಛ ಭಾರತಕ್ಕೆ ಕೊಡುಗೆ!

ಸಿಂಕಿಗೂ, ಬೆಂಗಳೂರನಂಥ ನಗರಗಳ ಅಪಾರ್ಟ್‌ಮೆಂಟ್‌ಗೂ ಎಡಬಿಡದ ನಂಟು. ಸಿಂಕ್ ಹಾಗೂ ಕಮೋಡ್‌ಗಳನ್ನು ಸ್ವಚ್ಛವಾಗಿಟ್ಟುಕೊಂಡರೆ, ಇಡೀ ಫ್ಲ್ಯಾಟ್‌ನ ಸ್ವಾಸ್ಥ್ಯಕ್ಕೇ ಒಳ್ಳೆಯದು. ಇಲ್ಲದಿದ್ದರೆ ಆಗಾಗ ನೀರು ಕಟ್ಟಿಕೊಂಡು, ದುರ್ವಾಸನೆ ಬೀರಿ, ಮನೆಯಲ್ಲಿ ಗಬ್ಬುನಾತ ಬೀರುತ್ತದೆ. ಅಷ್ಟೇ ಅಲ್ಲ, ಅಪಾರ್ಟ್‌ಮೆಂಟ್‌ ಪೈಪ್ ಕಟ್ಟಿಕೊಂಡು, ಅಲ್ಲಲ್ಲಿ ನೀರು ಲೀಕ್ ಆಗಿ, ಡ್ರೈನೇಜ್ ನೀರು ಪ್ಲೇ ಏರಿಯಾದಲ್ಲಿ ಹರಿಯುವಂತೆಯೂ ಆಗುವ ಸಾಧ್ಯತೆ ಇರುತ್ತದೆ.

Things to keep away from your drain

ಪಾತ್ರೆ ತೊಳೆಯುವುದು, ಕೈ ತೊಳೆಯುವುದು, ಮುಖ ತೊಳೆಯುವುದು, ಹಲ್ಲುಜ್ಜುವುದು..ಒಂದಾ, ಎರಡಾ? ಈ ಮಲ್ಟಿ ಟಾಸ್ಕ್ ಮಾಡೋ ಜಾಗವೇ ಸಿಂಕ್. ವಿವಿಧ ನಮೂನೆಗಳಲ್ಲಿ, ವಿಧವಿಧವಾಗಿ ಮಾರುಕಟ್ಟೆಯಲ್ಲಿ ಹಲವು ಪ್ರೈಸ್‌ಗಳಲ್ಲಿ ಲಭ್ಯವಿರೋ ಸಿಂಕ್ ಮನೆಯ ಅಲಂಕಾರವನ್ನೂ ಹೆಚ್ಚಿಸುತ್ತದೆ. ಆದರೆ, ಅದರ ಸ್ವಚ್ಛತೆ ಕಡೆ  ಗಮನ ಕೊಡದಿದ್ದರೆ ಇಡೀ ಮನೆಯೇ ಗಬ್ಬು ನಾರುವಂತಾಗುತ್ತದೆ. ಇಂಥ ಸಿಂಕ್ ಹಾಗೂ ಕಮೋಡ್‌ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ?

- ಸಿಂಕ್‌ನಲ್ಲಿ ಅಕ್ಕಿ ಹಾಗೂ ಪಾತ್ರೆ ತೊಳೆಯುವಾಗ ಜಾಗೃತವಾಗಿರಿ. ಅನ್ನ, ಅಕ್ಕಿ ಕಾಳು ಸಿಂಕ್‌ನೊಳಗೆ ಹೋಗದಂತೆ ನೋಡಿಕೊಳ್ಳಿ. ನೀರು ಮಾತ್ರ ಒಳಗೆ ಹೋಗುವಂಥ ಜಾಲರಿಯನ್ನು ಅಳವಡಿಸಿ. ಅದರಲ್ಲಿ ಸಿಕ್ಕಿದ ಕಸವನ್ನು ತೆಗದು ಡಸ್ಟ್ ಬಿನ್‌ಗೆ ಹಾಕಿ. 

- ಎಣ್ಣೆಯನ್ನೂ ಸಿಂಕ್‌ಗೆ ಹಾಕಬೇಡಿ. ಜಿಡ್ಡಿನಂಶ ಹೆಚ್ಚಾಗಿ, ಕೆಟ್ಟ ವಾಸನೆ ಬೀರಲು ಆರಂಭಿಸುತ್ತದೆ. ಅಷ್ಟೇ ಅಲ್ಲ ಕೆಲವು ವಸ್ತಗಳ ಸರಾಗವಾಗಿ ಚಲಿಸದಂತೆ ಈ ಎಣ್ಣೆ ತಡೆಯೊಡ್ಡುತ್ತದೆ. 

- ಹಿಟ್ಟು : ರೊಟ್ಟಿ, ಚಪಾತಿ ಮತ್ತಿತರ ಹಿಟ್ಟುಗಳನ್ನು ಅಪ್ಪಿತಪ್ಪಿಯೂ ಸಿಂಕಿಗೆ ಹಾಕಬೇಡಿ. ಇದು ಸಿಂಕ್ ಕಟ್ಟಿಕೊಳ್ಳುವಂತೆ ಮಾಡುತ್ತದೆ. ಹಿಟ್ಟು ಉಳಿಯದಂತೆ ಎಚ್ಚರವಹಿಸಿ, ಉಳಿದರೂ, ಡಸ್ಟ್ ಬಿನ್‌ಗೆ ಹಾಕಿ. 

- ಮೊಟ್ಟೆ ಚಿಪ್ಪು: ಈ ಚಿಪ್ಪು ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲ. ರಾಶಿ ರಾಶಿ ಚಿಪ್ಪುಗಳು ಒಟ್ಟಾಗಿ, ನೀರು ಹೋಗದಂತೆ ತಡೆಯೊಡ್ಡುತ್ತದೆ. ಮೊಟ್ಟೆ ಒಡೆದಾಗ ಅದರ ಚಿಪ್ಪು ಸಿಂಕ್‍ನೊಳಗೆ ಹೋಗದಿರಲಿ.

- ಕಾಫಿ ಪುಡಿ, ಟೀ: ಉಳಿದ ಕಾಫಿ, ಟೀ ಚರಟವನ್ನು ಡಸ್ಟ್‌ಬಿನ್‌ಗೇ ಹಾಕಿ. ಇದನ್ನು ನೀರಿನ ಚಲನೆಯ ಸರಾಗ ವೇಗಕ್ಕೆ ತಡೆಯೊಡ್ಡುತ್ತದೆ.

- ಕಾಂಡೊಮ್ , ಸ್ಯಾನಿಟರಿ ನ್ಯಾಪ್ಕಿನ್ / ಟ್ಯಾಂಪೂನ್ : ಕಾಂಡೊಮ್‌ಗಳು ನೀರಿನಲ್ಲಿ ಕರಗುವುದಿಲ್ಲ.  ಸ್ಯಾನಿಟರಿ ಪ್ಯಾಡ್ ಮತ್ತು ಟ್ಯಾಂಪೂನ್‌ಗಳಂತೂ ನೀರನ್ನು ಹೀರಿಕೊಂಡು ಉಬ್ಬಿಕೊಳ್ಳುತ್ತದೆ. ನೀರಲ್ಲಿ ಕರಗುವುದೂ ಇಲ್ಲ, ನೀರು ಸುಲಭವಾಗಿ ಚಲಿಸದಂತೆ ತಡೆಯೊಡ್ಡುತ್ತದೆ. 

ಇಂಥ ವಸ್ತುಗಳನ್ನು ಎಲ್ಲಿ ಎಸೆಯಬೇಕೋ, ಅಲ್ಲಿಯೇ ಎಸೆಯಿರಿ. ಮನೆಯನ್ನು ಸ್ವಚ್ಛವಾಗಿಡುವುದರೊಂದಿಗೆ, ಸಮುದಾಯದ ನೈರ್ಮಲ್ಯವನ್ನೂ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಸಣ್ಣ ಕಸವೂ ಕಮೋಡ್ ಹಾಗೂ ಸಿಂಕ್ ಸೇರದಂತೆ ನೋಡಿಕೊಂಡು ಸ್ವಚ್ಛ ಭಾರತಕ್ಕೆ ನಮ್ಮ ಮಹಾನ್ ಕೊಡುಗೆ ನೀಡೋಣ.

Follow Us:
Download App:
  • android
  • ios