ಸಮುದಾಯಕ್ಕೆ ಹಬ್ಬಿದ ಸೋಂಕು: ಕೊಚ್ಚಿಯಲ್ಲಿ ಜ್ವರವಿರುವ ಶೇ.30ರಷ್ಟು ಜನರಲ್ಲಿ ಕೋವಿಡ್ ಸೋಂಕು
ದೇಶದಲ್ಲಿ ಕೋವಿಡ್ ವೈರಸ್‌ನ ರೂಪಾಂತರಿ ತಳಿ ಜೆಎನ್.1 ದಿನೇ ದಿನೇ ಹೆಚ್ಚುತ್ತಿದ್ದು, ಈಗಾಗಲೇ ಇದು ಸಮುದಾಯಕ್ಕೆ ಹರಡಿರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ನವದೆಹಲಿ: ದೇಶದಲ್ಲಿ ಕೋವಿಡ್ ವೈರಸ್‌ನ ರೂಪಾಂತರಿ ತಳಿ ಜೆಎನ್.1 ದಿನೇ ದಿನೇ ಹೆಚ್ಚುತ್ತಿದ್ದು, ಈಗಾಗಲೇ ಇದು ಸಮುದಾಯಕ್ಕೆ ಹರಡಿರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಭಾರತೀಯ ರಾಷ್ಟ್ರೀಯ ವೈದ್ಯಕೀಯ ಸಂಘದ ಕೋವಿಡ್ ಟಾಸ್ಕ್‌ಫೋ ರ್ಸ್ ಉಪಾಧ್ಯಕ್ಷ ಡಾ.ರಾಜೀವ್ ಜಯದೇವನ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಈ ಕುರಿತು ಎಚ್ಚರಿಕೆ ನೀಡಿದ್ದಾರೆ.
ಡಾ.ಜಯದೇವನ್ ಮಾತನಾಡಿ, 'ಕೇರಳದ ಕೊಚ್ಚಿಯಲ್ಲಿ ಇನ್ ಫ್ಲುಯೆಂಜಾ ಲಕ್ಷಣಗಳಿರುವವರನ್ನು ಪರೀಕ್ಷೆಗೊಳಪಡಿಸಿದಾಗ ಶೇ.30ರಷ್ಟು ಮಂದಿಗೆ ಪಾಸಿಟಿವ್ ಬಂದಿದೆ. ಇದು ಮತ್ತೊಮ್ಮೆ ಕೋವಿಡ್ ಜನಸಮುದಾಯಕ್ಕೆ ಹರಡಿರುವುದರ ಲಕ್ಷಣ. ನನ್ನ ಪಕ್ಕದ ಮನೆಯವರಿಗೂ ಕೋವಿಡ್ ಬಂದಿದೆ. ಎಲ್ಲೆಡೆ ಪಾಸಿಟಿವ್ ಬರುತ್ತಿದೆ. ಕಳೆದೊಂದು ತಿಂಗಳಿನಿಂದ ಈ ವೈರಸ್ ಹರಡುತ್ತಿದೆ. ಆದರೆ ಕೋವಿಡ್ ಪರೀಕ್ಷೆ ಬಹಳ ಕಡಿಮೆ ನಡೆಯುತ್ತಿತ್ತು. ಕೆಲವೆಡೆ ಪರೀಕ್ಷೆಯೇ ನಡೆಯುತ್ತಿರಲಿಲ್ಲ. ನವೆಂಬರ್‌ಗಿಂತ ಮೊದಲು ಇನ್‌ಫ್ಲುಯೆಂಜಾ ಲಕ್ಷಣವಿರುವವರಲ್ಲಿ ಶೇ.1ರಷ್ಟು ಮಂದಿಗೆ ಪಾಸಿಟಿವ್ ಬರುತ್ತಿತ್ತು. ನವೆಂಬರ್ ನಂತರ ಅದು ಶೇ.9ಕ್ಕೆ ಏರಿತು. ಈಗ ಪಾಸಿಟಿವಿಟಿ ದರ ಕೆಲವೆಡೆ ಶೇ.30ಕ್ಕೆ ಏರಿಕೆಯಾಗಿದೆ. ಇದರರ್ಥ ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರ ಮತ್ತು ಮೈಕೈ ನೋವಿನ ಬಹುತೇಕ ಪ್ರಕರಣಗಳು ಕೋವಿಡ್ ಆಗಿವೆ' ಎಂದು ತಿಳಿಸಿದ್ದಾರೆ.
ಕಾಫಿನಾಡಲ್ಲಿ ಪಾಸಿಟಿವ್ ಖಾತೆ ತೆಗೆದ ಕೊವಿಡ್, ನಾಲ್ವರಿಗೆ ಸೋಂಕು ದೃಢ!
ಡಾ.ಸೌಮ್ಯಾ ಸ್ವಾಮಿನಾಥನ್ ಮಾತನಾಡಿ, 'ಈಗ ಹರಡುತ್ತಿರುವ ಕೋವಿಡ್ ಕೇವಲ ಸಾಮಾನ್ಯ ನೆಗಡಿ ಎಂದು ನಿರ್ಲಕ್ಷಿಸಬಾರದು. ಕೋವಿಡ್ ನಿಂದ ದೀರ್ಘಾವಧಿಯಲ್ಲಿ ಉಂಟಾಗಬಹುದಾದ ಹೃದಯಾಘಾತ, ಪಾರ್ಶ್ವವಾಯು ಹಾಗೂ ಮಾನಸಿಕ ಸಮಸ್ಯೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಜೆಎನ್. ತಳಿ ತೀವ್ರ ಪ್ರಮಾಣದಲ್ಲಿ ಹರಡುತ್ತಿದ್ದರೂ ಇದರಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಹೆಚ್ಚಾಗದೆ ಇರಬಹುದು. ಅದಕ್ಕೆ ಎರಡು ಡೋಸ್ ಲಸಿಕೆ ನೀಡಿರುವುದು ಕೂಡ ಒಂದು ಕಾರಣ. ಮೊದಲ ಮೂರು ಅಲೆಗಳಲ್ಲಿ ನಮ್ಮ ದೇಶ ವೈದ್ಯಕೀಯವಾಗಿ ಸಾಕಷ್ಟು ಮುಂದುವರೆದಿದೆ. ಹಾಗಾಗಿ ಇದಕ್ಕೆ ಚಿಕಿತ್ಸೆ ನೀಡುವುದು ಕಷ್ಟವಿಲ್ಲ, ಆದರೆ ರೋಗಿಗಳ ಹಾಗೂ ವೃದ್ಧರು ಮಾಸ್ಕ್ ಧರಿಸಬೇಕುಎಂದು ಹೇಳಿದ್ದಾರೆ.
'ಈಗಷ್ಟೇ ಭಾರತದಲ್ಲಿ ಪರೀಕ್ಷೆ ಹೆಚ್ಚಿಸಲಾಗಿದೆ. ಹೀಗಾಗಿ ಮುಂದಿನ ಕೆಲ ದಿನಗಳಲ್ಲಿ ಹೆಚ್ಚೆಚ್ಚು ರಾಜ್ಯಗಳಿಂದ ದತ್ತಾಂಶಗಳು ಸಿಗುತ್ತವೆ. ಸದ್ಯಕ್ಕೆ ಕೇರಳ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಮಾತ್ರ ಕೇಸು ಹೆಚ್ಚುತ್ತಿರುವ ವರದಿಯಿದೆ. ಮುಂದೆ ಇದೇ ಪರಿಸ್ಥಿತಿ ಎಲ್ಲಾ ರಾಜ್ಯಗಳಲ್ಲೂ ಕಾಣಿಸಿಕೊಳ್ಳ ಬಹುದು. ವಿಶ್ವ ಆರೋಗ್ಯ ಸಂಸ್ಥೆಯು ಈ ವರ್ಷದ ಮೇ ತಿಂಗಳಲ್ಲಿ ಕೋವಿಡ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ ಎಂದು ಘೋಷಿಸಿದಾಗಲೂ ಇದರಿಂದ ಈಗಲೂ ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಆತಂಕವಿದೆ ಎಂದೇ ಹೇಳಿತ್ತು ಎಂದು ಡಾ.ಸೌಮ್ಯಾ ತಿಳಿಸಿದ್ದಾರೆ.
594 ಕೋವಿಡ್ ಕೇಸು, 6 ಸಾವು: ಸಕ್ರಿಯ ಕೇಸು 2,669ಕ್ಕೆ ಏರಿಕೆ
ನವದೆಹಲಿ: ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು 594 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,669ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಕೇರಳದ 3, ಕರ್ನಾ ಟಕದ 2, ಮತ್ತು ಪಂಜಾಬ್‌ನ 1 ಸೇರಿ ಒಟ್ಟು 6 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಜೆಎನ್.1 ರೂಪಾಂತರಿಯಿಂದ ಹೆಚ್ಚು ಅಪಾಯವಿಲ್ಲ: ತಜ್ಞರು
ನವದೆಹಲಿ: ದೇಶಾದ್ಯಂತ ಕೋವಿಡ್ ಹೊಸ ಜೆಎನ್.1 ಬಗ್ಗೆ ಆತಂಕ ಹರಡಿರುವುದರ ಬೆನ್ನಲ್ಲೇ ಈ ಬಗ್ಗೆ ಸಮಾಧಾನಕರ ಮಾತುಗಳನ್ನಾಡಿರುವ ತಜ್ಞರು, 'ಈ ರೂಪಾಂತರಿಯಿಂದ ಹೆಚ್ಚು ಅಪಾಯವಿಲ್ಲ. ಇದು ಹರಡುತ್ತಿರುವುದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ನಮ್ಮಲ್ಲೀಗ ಲಭ್ಯವಿರುವ ಚಿಕಿತ್ಸೆಗಳೇ ಈ ವೈರಸ್‌ಗೂ ಸಾಕು' ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆ ಜೊತೆ ಮಾತನಾಡಿದ ಹಿರಿಯ ಆರೋಗ್ಯ ತಜ್ಞ ಡಾ.ಚಂದ್ರಕಾಂತ್ ಲಹಾರಿಯಾ, 'ಶ್ವಾಸಕೋಶಕ್ಕೆ ಸಂಬಂಧಿಸಿದ ಎಲ್ಲಾ ವೈರಸ್‌ಗಳೂ ಹೀಗೇ ಬದಲಾಗುತ್ತಿರುತ್ತವೆ ಮತ್ತು ಹರಡುತ್ತವೆ. ಜೆಎನ್.1 ರೂಪಾಂತರಿ ವೈರಸ್ ಹರಡುತ್ತಿರುವುದರಲ್ಲಿ ಆಶ್ಚರ್ಯ ವೇನಿಲ್ಲ. ಇದರ ಬಗ್ಗೆ ಆತಂಕಪಡುವ ಅಗತ್ಯವೂ ಇಲ್ಲ. ಇದರ ಸೋಂಕು ಕಡಿಮೆ ಪ್ರಮಾಣದಲ್ಲಿರುತ್ತದೆ. ಎಲ್ಲಾ ವೈರಸ್‌ಗಳೂ ರೂಪಾಂತರಗೊಳ್ಳುತ್ತವೆ. ಈ ವೈರಸ್‌ಗೆ ನಮ್ಮ ಲೀಗ ಲಭ್ಯವಿರುವ ಚಿಕಿತ್ಸೆಯೇ ಸಾಕು. ಹಾಲಿ ಇರುವ ಸುರಕ್ಷತಾ ಕ್ರಮಗಳನ್ನು ಜನರು ಪಾಲಿಸಬೇಕು' ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಸ್ಪೋಟವಾಗುವ ಭಯ: ಕಂಟಕವಾಗುತ್ತಾ ಕ್ರಿಸ್ಮಸ್, ನ್ಯೂ ಇಯರ್ ಎಂಡ್ ರಜೆ?
'ವೈರಸ್‌ಗಳು ರೂಪಾಂತರಗೊಳ್ಳುವುದು ಅತ್ಯಂತ ಸಹಜ. ಭಾರತದಲ್ಲಿ ಜನರು ಈಗಾಗಲೇ ಒಮಿಕ್ರೋನ್ ಸೇರಿದಂತೆ ಸಾರ್ಸ್ ಕೋವ್ -2 ವೈರಸ್‌ನ ಬೇರೆ ಬೇರೆ ರೂಪಾಂತರಿಗಳಿಗೆ ತೆರೆದುಕೊಂಡಿದ್ದಾರೆ. ಎಲ್ಲರೂ ಕನಿಷ್ಠ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಹೀಗಾಗಿ ಜೆಎನ್. ರೂಪಾಂತರಿಯಿಂದ ಹೊಸ ಅಪಾಯವೇನೂ ಇಲ್ಲ, ಈ ರೂಪಾಂತರಿಯ ಸೋಂಕಿತರು ತೀವ್ರ ಅನಾರೋಗ್ಯಕ್ಕೆ ತುತ್ತಾಗುವುದಿಲ್ಲ' ಎಂದು ತಿಳಿಸಿದ್ದಾರೆ.
ಹೈದರಾಬಾದ್‌ನ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಕಾರ್ತೀಕ್ ವೇದುಲ, 'ಜೆಎನ್.1 ರೂಪಾಂತರಿಯು ಒಮಿಕ್ರೋನ್‌ನ ರೂಪಾಂತರಿಯಾದ ಬಿಎ.2.86ನ ಇನ್ನೊಂದು ತಳಿ. ಇದು ಅಪಾಯಕಾರಿ ಲಕ್ಷಣ ತೋರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ, ಹೀಗಾಗಿ ಹೆದರುವ ಅಗತ್ಯವಿಲ್ಲ' ಎಂದಿದ್ದಾರೆ.