ಈಗ ಯಾರಿಗೆ ಒತ್ತಡವಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಒತ್ತಡದಲ್ಲಿರುತ್ತಾರೆ. ಆದ್ರೆ ಈ ಒತ್ತಡ ದೀರ್ಘಕಾಲ ನಿಮ್ಮನ್ನು ಕಾಡಿದ್ರೆ ಅಪಾಯ ಹೆಚ್ಚು.  ಮಧುಮೇಹ, ಸ್ನಾಯು ನೋವಿಗೆ ಕಾರಣವಾಗ್ಬಹುದು ನಿಮ್ಮ ಒತ್ತಡದ ಲೈಫ್ 

ಒತ್ತಡ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಒತ್ತಡ ಆಗಾಗ ಬಂದು ಹೋಗುವ ನೆಗಡಿ – ಕೆಮ್ಮಿನಂತೆ ಅಲ್ಲ. ನಮಗೆ ಒತ್ತಡ ಕಾಡ್ತಿದೆ ಎನ್ನುವುದೇ ತಿಳಿಯೋದಿಲ್ಲ. ಸದ್ದಿಲ್ಲದೆ ನಮ್ಮನ್ನು ಆವರಿಸುವ ಈ ಒತ್ತಡ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಒತ್ತಡ ಮತ್ತು ಆಘಾತಕ್ಕೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾನೆ. ಈ ನಿರಂತರ ಒತ್ತಡ ಆತಂಕದ ಅಸ್ವಸ್ಥತೆ ಮತ್ತು ಖಿನ್ನತೆಗೆ ಕಾರಣವಾಗುತ್ತದೆ. ಒತ್ತಡವಿರುವ ವ್ಯಕ್ತಿಗೆ ಶಾಂತಿ ಸಿಗಲು ಸಾಧ್ಯವೇ ಇಲ್ಲ. ಮುಂದೆ ಎಷ್ಟೇ ಖುಷಿ ಇದ್ರೂ ಅವರ ಮನಸ್ಸಿನಲ್ಲಿ ಅಶಾಂತಿಯೊಂದು ನೆಲೆಗೊಂಡಿರುತ್ತದೆ. ಅದು ಯಾವಾಗ ಕಡಿಮೆಯಾಗುತ್ತೆ ಎಂಬುದನ್ನು ಸ್ಪಷ್ಟವಾಗಿ ಹೇಳಲೂ ಸಾಧ್ಯವಿಲ್ಲ. ಒತ್ತಡ ಪದೇ ಪದೇ ಕಾಡ್ತಿದ್ದರೆ ಅದು ಪಿಟಿಎಸ್ ಡಿಯಂತಹ ಶಾಶ್ವತ ಪರಿಣಾಮಕ್ಕೆ ಕಾರಣವಾಗುತ್ತದೆ. ದೀರ್ಘಕಾಲದ ಒತ್ತಡದಿಂದ ಏನೆಲ್ಲ ಸಮಸ್ಯೆ ಕಾಡುತ್ತದೆ ಎಂಬ ವಿವರ ಇಲ್ಲಿದೆ.

ಮಾನಸಿಕ (Mental) ಆರೋಗ್ಯದ ಮೇಲೆ ದೀರ್ಘಕಾಲದ ಒತ್ತಡ (Stress) ದ ಪ್ರಭಾವ : 

ಆತಂಕ ಮತ್ತು ಖಿನ್ನತೆ (Depression) : ಸದಾ ನಿಮ್ಮನ್ನು ಒತ್ತಡ ಕಾಡುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಇದನ್ನು ನೀವು ತಾತ್ಕಾಲಿಕ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ. ಇದು ಖಿನ್ನತೆ ಮತ್ತು ಆತಂಕಕ್ಕೆ ಕಾರಣವಾಗುತ್ತದೆ ಎಂದು ಎವಾಲ್ವ್‌ನ ಪ್ರಮುಖ ಮನಶ್ಶಾಸ್ತ್ರಜ್ಞ ಮತ್ತು ಸಂಶೋಧಕ ಡಾ ಸುಕೃತಿ ರೆಕ್ಸ್ ಹೇಳುತ್ತಾರೆ. ನಿರಂತರ ಒತ್ತಡದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೆ ಮನಸ್ಸು ತೊಳಲಾಡುತ್ತದೆ. ಮನಸ್ಸು ಸದಾ ಭಾರವಾಗಿರುತ್ತದೆ. 

42ರಲ್ಲೂ ಫಿಟ್ ಅಲ್ಲು ಅರ್ಜುನ್… ಇವರ ಬಲಿಷ್ಠ ದೇಹದ, ಫಿಟ್ನೆಸ್ ಗುಟ್ಟಿದ್ದು, ಜೊತೆಗೆ ಆಹಾರ ಅಲರ್ಜಿಯೂ ಇದೆಯಂತೆ!

ಪಿಟಿಎಸ್ ಡಿ :  ಮೊದಲೇ ಹೇಳಿದಂತೆ ದೀರ್ಘಕಾಲ ಒತ್ತಡ ಶಾಶ್ವತ ಪರಿಣಾಮಗಳನ್ನು ಉಂಟುಮಾಡಬಹುದು. ಇದು ಎಂದಿಗೂ ವಾಸಿಯಾಗದ ಗಾಯದಂತಾಗುತ್ತದೆ. ಆಘಾತಕಾರಿ, ಭಯಾನಕ ಅಥವಾ ಅಪಾಯಕಾರಿ ಘಟನೆಯನ್ನು ಅನುಭವಿಸಿದ ನಂತ್ರ ಜನರಿಗೆ ಈ ಪಿಟಿಎಸ್ ಡಿ ಕಾಡುತ್ತದೆ. ಯಾವುದಾದ್ರೂ ಆಘಾತಕಾರಿ ಘಟನೆ ವೇಳೆ ಅಥವಾ ನಂತ್ರ ಇದು ಕಾಡುತ್ತದೆ. 

ಅನಿಯಂತ್ರಿತ ಭಾವನೆ : ದೀರ್ಘಕಾಲದ ಒತ್ತಡ ಅಥವಾ ಆಘಾತವು ಬ್ರೇಕ್‌ಗಳಿಲ್ಲದ ರೋಲರ್‌ಕೋಸ್ಟರ್‌ನಂತೆ ಭಾವನೆಗಳನ್ನು ಉಂಟುಮಾಡಬಹುದು. ಕಿರಿಕಿರಿಯಿಂದ ಕೋಪ ನೆತ್ತಿಗೇರುವ ಸಾಧ್ಯತೆ ಇರುತ್ತದೆ. ಭಾವನೆಗಳು ಮರಗಟ್ಟುತ್ತವೆ. ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ನಿತ್ಯದ ಕೆಲಸವನ್ನು ಸುಲಭವಾಗಿ ಮಾಡೋದು ಕಷ್ಟವಾಗುತ್ತದೆ.

ನಕಾರಾತ್ಮಕ ಸ್ವಯಂ ಗ್ರಹಿಕೆ : ನಿರಂತರವಾಗಿ ಕಾಡುವ ಒತ್ತಡ ಮತ್ತು ಆಘಾತ ಸ್ವಾಭಿಮಾನವನ್ನು ಕಡಿಮೆ ಮಾಡುತ್ತದೆ. ನಾವು ಒಳ್ಳೆಯವರಲ್ಲ ಎನ್ನುವ ಭಾವನೆ ರೋಗಿಗಳಲ್ಲಿ ಮೂಡುತ್ತದೆ. ಈ ನಕಾರಾತ್ಮಕ ಸ್ವಯಂ ಗ್ರಹಿಕೆಯಿಂದ ಆತ್ಮ ವಿಶ್ವಾಸ ಕಡಿಮೆ ಆಗುತ್ತದೆ. ಜನರು ಎಲ್ಲವನ್ನೂ ನಕಾರಾತ್ಮಕವಾಗಿ ನೋಡುತ್ತಾರೆ. 

ದೈಹಿಕ ಆರೋಗ್ಯದ ಮೇಲೆ ದೀರ್ಘ ಒತ್ತಡದ ಪರಿಣಾಮಗಳು:

ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆ :  ಮಾನಸಿಕ ಒತ್ತಡ ಬರೀ ಮಾನಸಿಕ ಖಾಯಿಲೆಗೆ ಮಾತ್ರವಲ್ಲ ದೈಹಿಕ ಆರೋಗ್ಯದ ಮೇಲೂ ಆಗುತ್ತದೆ. ದೀರ್ಘಕಾಲದ ಒತ್ತಡವು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ನೀವು ಅನಾರೋಗ್ಯಕ್ಕೆ ಗುರಿಯಾಗಬಹುದು. ಒತ್ತಡವು ಕಾರ್ಟಿಸೋಲ್ ಬಿಡುಗಡೆಯನ್ನು ಪ್ರಚೋದಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತದೆ,

ದೀರ್ಘಕಾಲದ ಕಾಯಿಲೆ : ನಿರಂತರ ಒತ್ತಡ ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಇತರ ದೀರ್ಘಕಾಲದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಪಿರಿಯಡ್ಸ್ ಟೈಮಲ್ಲಿ ಉಂಟಾಗೋ ಈ ಬದಲಾವಣೆಗಳನ್ನು ಇಗ್ನೋರ್ ಮಾಡ್ಲೇ ಬೇಡಿ…

ನಿದ್ರೆಯ ಸಮಸ್ಯೆ : ಒತ್ತಡದಲ್ಲಿರುವ ಜನರ ಮೆದುಳು ಎಂದಿಗೂ ನಿದ್ರಿಸದೆ ಕಾರ್ಯನಿರತವಾಗುತ್ತದೆ. ಒತ್ತಡವು ನಿದ್ರೆಗೆ ಅಡ್ಡಿಯಾಗುತ್ತದೆ. ನಿದ್ರೆಗೆ ಅಗತ್ಯವಿರುವ ಶಾಂತತೆ ಸಿಗದ ಕಾರಣ ನಿದ್ರಾಹೀನತೆ ಕಾಡುತ್ತದೆ. ದುಃಸ್ವಪ್ನದಿಂದ ಎಚ್ಚರವಾಗುವ ಸಾಧ್ಯತೆ ಹೆಚ್ಚಿರುತ್ತದೆ. 

ನೋವು ಮತ್ತು ಆಯಾಸ : ದೀರ್ಘಕಾಲದ ಒತ್ತಡವು ತಲೆನೋವು, ಸ್ನಾಯು ನೋವು ಮತ್ತು ಒಟ್ಟಾರೆ ಆಯಾಸವನ್ನುಂಟು ಮಾಡುತ್ತದೆ. 

ದೀರ್ಘ ಒತ್ತಡ ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯವನ್ನು ಹಾಳುಮಾಡುವ ಕಾರಣ ಆರಂಭದಲ್ಲಿಯೇ ಇದಕ್ಕೆ ಚಿಕಿತ್ಸೆ ಮುಖ್ಯ. ಮನೋವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಸೂಕ್ತ.