ಮೈ-ಕೈ ಕ್ಲೀನ್ ಮಾಡಿಯೇನೋ ತೊಳೆಯುತ್ತೀರಿ, ಆದ್ರೆ ಟವೆಲ್ ಕಥೆಯೇನು?

ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈಗ ಎಲ್ಲರೂ ಪದೇಪದೆ ಕೈಗಳನ್ನು ತೊಳೆದುಕೊಳ್ಳುತ್ತಿದ್ದೇವೆ. ಆದ್ರೆ ಕೈಗಳನ್ನು ತೊಳೆದ ಬಳಿಕ ಒರೆಸಿಕೊಳ್ಳುವ ಟವೆಲ್ ಕ್ಲೀನಾಗಿದೆಯೇ ಎಂಬುದನ್ನು ಪರೀಕ್ಷಿಸಿದ್ದೀರಾ? ಕೈಗಳನ್ನು ಅದೆಷ್ಟೇ ಕ್ಲೀನಾಗಿ ತೊಳೆದಿದ್ರೂ ಟವೆಲ್ ಸ್ವಚ್ಛವಾಗಿಲ್ಲವೆಂದ್ರೆ ಪ್ರಯೋಜನವೇನು?

Check out whether towel you use is clean enough to use

ಸ್ನಾನ ಮಾಡಿದ ಅಥವಾ ಕೈ ತೊಳೆದ ಬಳಿಕ ಒರೆಸಲು ಬಳಸುವ ಟವೆಲ್ ಬಗ್ಗೆ ಬಹುತೇಕರಿಗೆ ನಿರ್ಲಕ್ಷ್ಯವೇ ಜಾಸ್ತಿ. ಕೆಲವರಂತೂ ಸ್ನಾನ ಮಾಡಿ ಮೈ ಒರೆಸಿಕೊಂಡ ಬಳಿಕ ಟವೆಲ್ ಅನ್ನು ಬಾತ್‍ರೂಮ್‍ನಲ್ಲಿ ಒಣಗಿಸದೆ ಹಾಗೆಯೇ ಇಟ್ಟು ಬರುತ್ತಾರೆ. ಇನ್ನೂ ಕೆಲವರು ಬೆಡ್ ಮೇಲೂ ಇಲ್ಲವೆ ರೂಮ್‍ನ ಯಾವುದೋ ಮೂಲೆಯಲ್ಲಿ ಎಸೆದು ಮತ್ತೆ ಮರುದಿನ ಅದೇ ಟವೆಲ್ ಬಳಸುತ್ತಾರೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಕ್ಷಣಕ್ಕೊಮ್ಮೆ ಕೈ ತೊಳೆಯಬೇಕಾದ ಅನಿವಾರ್ಯತೆಯಿದೆ. ತೊಳೆದ ಕೈಗಳನ್ನು ಟವೆಲ್‍ನಿಂದ ಒರೆಸಿಕೊಳ್ಳುತ್ತೇವೆ. ಆದ್ರೆ ಆ ಟವೆಲ್ ಎಷ್ಟು ಸ್ವಚ್ಛವಾಗಿದೆ ಎಂಬ ಬಗ್ಗೆ ಯೋಚಿಸಿದ್ದೀರಾ? ಸ್ವಚ್ಛತೆಗೆ ಆದ್ಯತೆ ನೀಡಿದರಷ್ಟೇ ಭೂಮಿ ಮೇಲೆ ಬದುಕು ಎಂಬಂತಹ ಸ್ಥಿತಿಯಿರುವಾಗ ನಾವು ಬಳಸುವ ಟವೆಲ್ ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕಾದ ಅಗತ್ಯವಿದೆ.

ಮನೆಯಲ್ಲೇ ಕುಳಿತು ಖಿನ್ನತೆ ಬೇಕಿದೆ ಎಚ್ಚರ, ತಜ್ಞರ ಸಲಹೆ

ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪ್ರಸಕ್ತ ತಾಣ
ಟವೆಲ್ ನೀರನ್ನು ಹೀರಿಕೊಳ್ಳುತ್ತದೆ. ಅದನ್ನು ಸರಿಯಾಗಿ ಒಣಗಿಸದೆ ಹಾಗೆಯೇ ಬಿಟ್ಟರೆ ಅದರಲ್ಲಿರುವ ತೇವಾಂಶ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಪ್ರತಿ ಬಾರಿ ನೀವು ಮೈ ಒರೆಸಿಕೊಂಡಾಗ ನಿಮ್ಮ ಚರ್ಮದ ಮೇಲ್ಮೈಯಲ್ಲಿರುವ ಬ್ಯಾಕ್ಟೀರಿಯಾಗಳು ಟವೆಲ್‍ಗೆ ವರ್ಗಾವಣೆಗೊಳ್ಳುತ್ತವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಬಹುತೇಕ ಸಂದರ್ಭಗಳಲ್ಲಿ ನಾವು ಟವೆಲ್ ಅನ್ನು ಬಾತ್‍ರೂಮ್‍ನೊಳಗಿಟ್ಟು ಬರುತ್ತೇವೆ. ಹೆಚ್ಚಾಗಿ ಬಾತ್‍ರೂಮ್‍ಗಳಲ್ಲಿ ಬೆಳಕು ಕಡಿಮೆ ಇರುತ್ತದೆ ಇಲ್ಲವೆ ಕತ್ತಲೆಯಿಂದ ಕೂಡಿರುತ್ತವೆ. ಇಂಥ ಜಾಗದಲ್ಲಿ ನಾನಾ ಕಾಯಿಲೆಗಳನ್ನು ಹರಡುವ ಬ್ಯಾಕ್ಟೀರಿಯಾಗಳು ಬಹುಬೇಗ ಬೆಳೆಯುತ್ತವೆ. ಹೀಗಾಗಿ ಒದ್ದೆ ಟವೆಲ್‍ಗಳು ಬ್ಯಾಕ್ಟೀರಿಯಾ ಅಭಿವೃದ್ಧಿ ತಾಣಗಳಾಗಿ ಪರಿವರ್ತಿತವಾಗುವ ಸಾಧ್ಯತೆಯಿದೆ.

ಶೇ.90 ಬಾತ್‍ರೂಮ್ ಟವೆಲ್‍ಗಳಲ್ಲಿವೆ ಬ್ಯಾಕ್ಟೀರಿಯಾ
ಯುನಿವರ್ಸಿಟಿ ಆಫ್ ಅರಿಜೋನಾದ ಮೈಕ್ರೋಬಯಾಲಜಿಸ್ಟ್ ಚಾಲ್ರ್ಸ್ ಗೆರ್ಬ ನಡೆಸಿದ ಅಧ್ಯಯನವೊಂದರ ಪ್ರಕಾರ ಶೇ.90ರಷ್ಟು ಬಾತ್‍ರೂಮ್ ಟವೆಲ್‍ಗಳಲ್ಲಿ ಕೊಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಅದರಲ್ಲಿ ಶೇ.14ರಷ್ಟು ಇ-ಕೊಲಿ ಎಂಬ ಬ್ಯಾಕ್ಟೀರಿಯಾಗಳ ವಾಹಕಗಳಾಗಿವೆ ಎಂದು ಅಧ್ಯಯನ ತಿಳಿಸಿದೆ. ಬಹುತೇಕ ಸಂದರ್ಭಗಳಲ್ಲಿ ಈ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಹೀಗಾಗಿ ನಾವು ಕೈ ತೊಳೆದ ಇಲ್ಲವೆ ಸ್ನಾನ ಮಾಡಿದ ಬಳಿಕ ನಿನ್ನೆ ಬಳಸಿ ಮೂಲೆಯಲ್ಲಿ ಎಸೆದ ಟವೆಲ್ ಅನ್ನೇ  ಬಳಸುತ್ತೇವೆ. ಇಂಥ ಟವೆಲ್‍ನಿಂದ ಮೈ ಉಜ್ಜಿಕೊಂಡಾಗ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಸಂಪರ್ಕಕ್ಕೆ ಬರುತ್ತವೆ. ಇದು ಅನೇಕ ರೋಗಗಳಿಗೆ ಆಹ್ವಾನ ನೀಡುವ ಸಾಧ್ಯತೆಯಿರುತ್ತದೆ. ನೀವು ನಿಮ್ಮ ದೇಹವನ್ನು ಕ್ಲೀನ್ ಆಗಿಟ್ಟುಕೊಳ್ಳಲು ಅದೆಷ್ಟೇ ಬಾರಿ ಸ್ನಾನ ಮಾಡಿದರೂ ಕೈ-ಕಾಲು, ಮುಖ ತೊಳೆದುಕೊಂಡರೂ ಒರೆಸಲು ಕೊಳಕಾದ ಟವೆಲ್ ಬಳಸಿದ್ರೆ ಪ್ರಯೋಜನವೇನು ಹೇಳಿ? ನಿಮ್ಮೆಲ್ಲ ಪ್ರಯತ್ನವೂ ವ್ಯರ್ಥವಾಗುತ್ತದೆ. ಇದೇ ಕಾರಣಕ್ಕೆ ನಾವು ಬಳಸುವ ಟವೆಲ್‍ಗಳನ್ನು ಆಗಾಗ ಒಗೆದು, ಬಿಸಿಲಿನಲ್ಲಿ ಒಣಗಿಸಬೇಕು ಎಂದು ಹೇಳೋದು. ಇಲ್ಲವಾದ್ರೆ ನಾನಾ ತರಹದ ಸೋಂಕುಗಳು ನಮ್ಮನ್ನು ಅಪ್ಪಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. 

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ಟವೆಲ್ ಕ್ಲೀನ್‍ಗೆ ಇಲ್ಲಿವೆ ಟಿಪ್ಸ್
ಆಗಾಗ ವಾಷ್ ಮಾಡಿ
ಅಮೆರಿಕನ್ ಕ್ಲೀನಿಂಗ್ ಇನ್ಸ್ಟಿಟ್ಯೂಟ್ ತಜ್ಞರ ಪ್ರಕಾರ 3-5 ಬಾರಿ ಬಳಸಿದ ಬಳಿಕ ಟವೆಲ್ ಅನ್ನು ಒಗೆಯೋದು ಅಗತ್ಯ. ಆದ್ರೆ ಮೈಕ್ರೋಬಯಾಲಜಿಸ್ಟ್ ಚಾಲ್ರ್ಸ್ ಗೆರ್ಬ ಪ್ರಕಾರ ಬ್ಯಾಕ್ಟೀರಿಯಾ ಸಾಮಾನ್ಯ ಡಿಟರ್ಜೆಂಟ್ ಬಳಕೆಯಿಂದ ನಾಶವಾಗುವ ಸಾಧ್ಯತೆ ಕಡಿಮೆ. ಆದಕಾರಣ ಆಕ್ಟಿವೇಟೆಡ್ ಆಕ್ಸಿಜನ್ ಬ್ಲೀಚ್ ಹೊಂದಿರುವ ಡಿಟರ್ಜೆಂಟ್ ಹಾಗೂ ಬಿಸಿ ನೀರಿನಿಂದ ಟವೆಲ್ ತೊಳೆಯೋದು ಅಗತ್ಯ.

ಟವೆಲ್ ಒಣಗಿಸಿ
ಸ್ನಾನವಾದ ಬಳಿಕ ಅಥವಾ ಕೈ ಒರೆಸಿಕೊಂಡ ತಕ್ಷಣ ಟವೆಲ್ ಅನ್ನು ಬಿಸಿಲಿನಲ್ಲಿ ಒಣ ಹಾಕಲು ಮರೆಯಬೇಡಿ. ಇದರಿಂದ ಟವೆಲ್‍ನಲ್ಲಿ ಬ್ಯಾಕ್ಟೀರಿಯಾಗಳ ವಂಶಾಭಿವೃದ್ಧಿ ಆಗೋದು ತಪ್ಪುತ್ತದೆ. ಅದೇ ಒದ್ದೆ ಟವೆಲ್ ಅನ್ನು ಹಾಗೆಯೇ ಮುದ್ದೆ ಮಾಡಿ ಎಸೆದು ಹೋದ್ರೆ ಅದು ಬ್ಯಾಕ್ಟೀರಿಯಾಗಳ ವಾಸಸ್ಥಾನವಾಗೋದು ಪಕ್ಕಾ.

ಕೊರೋನಾ ಟೈಮಲ್ಲಿ ಬಿಗ್‌ ಬಾಸ್‌ ಹುಡ್ಗಿ ಯೋಗ ಕ್ಲಾಸ್‌!

ಟವೆಲ್ ಬದಲಾಯಿಸುತ್ತಿರಿ
ನೀವು ಟವೆಲ್ ಬದಲಾಯಿಸಿ ಎಷ್ಟು ಟೈಮ್ ಆಯ್ತು? ಒಮ್ಮೆ ನೆನಪಿಸಿಕೊಳ್ಳಿ. ಕೆಲವರಂತೂ ಟವೆಲ್ ಹರಿದು ಹೋಗುವ ತನಕ ಬಳಸುತ್ತಾರೆ. ಟವೆಲ್ ಅನ್ನು ದೀರ್ಘಕಾಲ ಬಳಸೋದು ಒಳ್ಳೆಯದ್ದಲ್ಲ. ಅವುಗಳಲ್ಲಿ ಕಣ್ಣಿಗೆ ಕಾಣದ ಕೀಟಾಣುಗಳು ಬೆಳೆದಿರುತ್ತವೆ. ಕಂದು ಬಣ್ಣ ಅಥವಾ ಕಪ್ಪು ಬಣ್ಣದ ಪ್ಯಾಚ್‍ಗಳು ಟವೆಲ್ ಮೇಲೆ ಕಾಣಿಸುತ್ತಿದ್ದರೆ ಅವುಗಳನ್ನು ಮೊದಲು ಬದಲಾಯಿಸಿ. 

ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ
ಕೆಲವು ಮನೆಗಳಲ್ಲಿ ಮನೆಮಂದಿಯೆಲ್ಲ ಒಂದೇ ಟವೆಲ್ ಬಳಸುತ್ತಾರೆ. ಇದು ತಪ್ಪು. ಇದರಿಂದ ರೋಗಗಳು ಬೇಗ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳಿವೆ. ರಿಂಗ್‍ವಾರ್ಮ್ ಸೇರಿದಂತೆ ಕೆಲವೊಂದು ಚರ್ಮ ಕಾಯಿಲೆಗಳು ಟವೆಲ್ ಮೂಲಕ ಹರಡುವ ಸಾಧ್ಯತೆ ಹೆಚ್ಚಿದೆ. 

Latest Videos
Follow Us:
Download App:
  • android
  • ios