ಕೊರೋನಾ ಟೈಮಲ್ಲಿ ಬಿಗ್ ಬಾಸ್ ಹುಡ್ಗಿ ಯೋಗ ಕ್ಲಾಸ್!
‘ಪಲ್ಲಟ’ದಂಥಾ ಸಿನಿಮಾ ಮೂಲಕ ತಾನೆಂಥಾ ನಟಿ ಅನ್ನೋದನ್ನು ತೋರಿಸಿದವರು ಅಕ್ಷತಾ ಪಾಂಡವಪುರ. ಅಫ್ ಕೋರ್ಸ್ ಬಿಗ್ ಬಾಸ್‌ನಂಥಾ ವೇದಿಕೆಗಳಲ್ಲೂ ಸುದ್ದಿಯಾದ್ರು. ಇದೀಗ ಕೊರೋನಾ ಟೈಮ್‌ನಲ್ಲಿ ಮನೆಯಿಂದ ಹೊರಗೆ ಕಾಲಿಡಲಾಗದ ಹೊತ್ತಲ್ಲಿ ಅವರು ಯೋಗ ಪಾಠ ಹೇಳಿದ್ದಾರೆ.
- ನಿತ್ತಿಲೆ
ಇದು ಕೊರೋನಾ ಕಾಲ. ಎಲ್ಲರೂ ಬಾಗಿಲು ಹಾಕ್ಕೊಂಡು ಮನೆಯೊಳಗೆ ಗುಮ್ಮನಂತಿರುವ ಟೈಮು. ಈ ಹೊತ್ತಲ್ಲಿ ಉದ್ಯೋಗಿಗಳೇನೋ ವರ್ಕ್ ಫ್ರಂ ಹೋಂ ಅಂತಿದ್ದಾರೆ. ಆದರೆ ಚಿಕ್ಕ ಮಕ್ಕಳ, ಕಾಲೇಜ್ ಹುಡುಗ್ರ ಕತೆ ಹೇಳಿ ಪ್ರಯೋಜನ ಇಲ್ಲ. ರಜೆ ಸಿಕ್ಕ ಶುರು ಶುರುವಿಗೆ ಓಟಿಟಿ ಫ್ಲಾಟ್‌ಫಾರಂನಲ್ಲಿ ರಾತ್ರಿ, ಹಗಲು ಸಿನಿಮಾ ನೋಡಿದ್ದೇ ನೋಡಿದ್ದು. ಒಂದು ಟೈಮ್ ನಂತರ ಅದೂ ಬೋರಾಗಿದೆ. ಈ ರಜೆಯೂ ಸಾಕು, ಡಿಪ್ರೆಸ್ ಆಗಿ ಮನೆಯಲ್ಲಿ ಒದ್ದಾಡೋದು ಸಾಕು. ಬೇಗ ಮೊದಲಿನ ಹಾಗಾಗ್ಲಿ ದೇವ್ರೇ ಅಂತಿದ್ದಾರೆ. ಇಂಥಾ ಟೈಮ್‌ನಲ್ಲಿ ಪಾಂಡವಪುರದ ಹುಡುಗಿ ಅಕ್ಷತಾ ನಿರಂತರ ಯೋಗಾಭ್ಯಾಸದಲ್ಲಿ ಮಗ್ನರಾಗಿದ್ದಾರೆ.
ಸ್ಟುಡಿಯೋ ಉದ್ಘಾಟಿಸಿ ಕನಸು ನನಸು ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ!
ಅವರೇ ಹೇಳುವಂತೆ ಬದುಕಿನ ಕಷ್ಟಗಳಿಗೆ, ನೋವುಗಳಿಗೆ ಗೆಳೆಯರು ಆಗಿ ಬರುತ್ತಾರೋ ಇಲ್ವೋ, ಆದರೆ ಯೋಗ ಮಾತ್ರ ಯಾವತ್ತೂ ಬೆಸ್ಟ್ ಗೆಳೆಯನ ಹಾಗೆ ಲವಲವಿಕೆ ಕೊಡುತ್ತೆ. ತುಂಬ ಒಂಟಿತನ ಫೀಲ್ ಬರುತ್ತಿರುವಾಗ, ಗಾಳಿಯಲ್ಲೊಂದು ವಿಷಾದದ ರಾಗ ತೇಲಿ ಬಂದಾಗ, ಬೆಸ್ಟ್ ಫ್ರೆಂಡ್ ಥರ ಹೆಗಲಿಗೆ ಕೈ ಹಾಕಿ ಸಮಾಧಾನ ಮಾಡೋದು, ಮುಳ್ಳೆದ್ದ ಮನಸ್ಸನ್ನು ಶಾಂತ ಪಡಿಸೋದು ಯೋಗ.
ಕಷ್ಟದ ಯೋಗಾಸನ ನಂಗಿಷ್ಟಆಗ್ತಿತ್ತು
‘ಅಲ್ಲಿಯವರೆಗೆ ಬಹಳ ಕಷ್ಟದ ಆಸನಗಳನ್ನು ಲೀಲಾಜಾಲವಾಗಿ ಮಾಡುತ್ತಿದ್ದೆ. ಆದರೆ ಸುಲಭದ ಆಸನಗಳು ಬರುತ್ತಿರಲಿಲ್ಲ. ಯೋಗವನ್ನು ಆಳವಾಗಿ ನೋಡಲಾರಂಭಿಸಿದ ಮೇಲೆ ಇದಕ್ಕೆ ಕಾರಣ ನನ್ನ ವ್ಯಕ್ತಿತ್ವ ಅಂತ ಗೊತ್ತಾಯ್ತು. ನಾನು ಹೈಪರ್ ಆಕ್ಟಿವ್ ಆಗಿರುವ ಕಾರಣ ಕಷ್ಟದ ಆಸನಗಳನ್ನು ಚಕ್ ಚಕ ಅಂತ ಮಾಡ್ತಿದ್ದೆ. ನಿಧಾನವಾಗಿ ಮಾಡುವ ಆಸನಗಳು ಕಷ್ಟಅನಿಸುತ್ತಿದ್ದವು. ಗುರುಗಳ ಮೂಲಕ ಈ ವಿಷಯ ತಿಳಿದ ಮೇಲೆ ಸಂಯಮ ತಂದುಕೊಂಡು ಆಸನಗಳನ್ನು ಗಾಢವಾಗಿ ಅನುಭವಿಸುತ್ತಾ ಮಾಡಲಾರಂಭಿಸಿದೆ. ಅದರಿಂದ ಅನುಭವವೇ ಬದಲಾಗುತ್ತಾ ಹೋಯಿತು’ ಅಂತಾರೆ. ಅಕ್ಷತಾ ವಾರಕ್ಕೊಮ್ಮೆ ಜಲನೇತಿ ಮಾಡ್ತಾರೆ. ಜಲನೇತಿ ಅಂದರೆ ಮೂಗಿನ ಒಂದು ಹೊಳ್ಳೆಗೆ ಗಿಂಡಿಯಿಂದ ಹಾಕಿ ಇನ್ನೊಂದು ಹೊಳ್ಳೆಯ ಮೂಲಕ ಹೊರ ಬಿಡೋದು. ಇದರ ಜೊತೆಗೆ ದೇಹದ ಕ್ಲೆನ್ಸಿಂಗ್‌ಗೆ ಸಹಕಾರಿಯಾಗುವ ಯೋಗವನ್ನು ಮಾಡುತ್ತಾರೆ.
ಎಳೆ ಬಿಸಿಲು, ಮಳೆಹನಿಯಲ್ಲಿ ಯೋಗ ಮಾಡ್ತಾರೆ
ಯೋಗವನ್ನು ಸಾಮಾನ್ಯವಾಗಿ ರೂಂ ಒಳಗೆ ಮಾಡ್ತಾರೆ. ಹೆಚ್ಚು ಅಂದರೆ ಛಾವಣಿ ಇರುವ ಟೆರೇಸ್‌ನಲ್ಲಿ ಮಾಡಬಹುದು. ಆದರೆ ಅಕ್ಷತಾ ಎಳೆ ಬಿಸಿಲಿಗೆ ಮೈಯೊಡ್ಡಿ ಯೋಗ ತಲ್ಲೀನೆಯಾಗುತ್ತಾರೆ. ಸುರಿವ ಮಳೆಯಲ್ಲಿ ಯೋಗ ಮಾಡುತ್ತಾರೆ. ಅಷ್ಟೇ ಅಲ್ಲ. ಅಂಡರ್ ವಾಟರ್ ಯೋಗವನ್ನೂ ಮಾಡುತ್ತಾರೆ. ಈ ಥರ ಪ್ರಕೃತಿ ನಡುವೆ ಯೋಗ ಮಾಡೋದರಿಂದ ಪರಿಣಾಮ ಇನ್ನಷ್ಟುತೀವ್ರವಾಗಿರುತ್ತೆ ಅನ್ನೋದು ಇವರು ಕಂಡುಕೊಂಡ ಅನುಭವ. ಎಲ್ಲರೂ ಇದನ್ನು ಮಾಡೋದು ಬಹಳ ಒಳ್ಳೆಯದು ಅಂತಾರೆ. ಮಳೆ ಹನಿಯಲ್ಲಿ ಯೋಗ ಮಾಡುತ್ತಿದ್ದರೆ ದೇಹ ಹಗುರ ಆಗುವ ಜೊತೆಗೆ ಮನಸ್ಸೂ ಖುಷಿಯಿಂದ ಪುಟಿಯುತ್ತಿರುತ್ತದೆ ಅನ್ನುವುದು ಇವರ ಅನುಭವದ ಮಾತು.
ಹಿಮಾಲಯದ ತುತ್ತ ತುದಿಯಲ್ಲಿ ಯೋಗಾಸನ
ಹಿಮಾಲಯ ಪ್ರವಾಸಕ್ಕೆ ಪ್ಲಾನ್ ಮಾಡುತ್ತಿದ್ದಾಗಲೇ ಅಲ್ಲಿ ಅರ್ಧ ಗಂಟೆ ಯೋಗಾಸನ ಮಾಡಬೇಕು ಅನ್ನೋದೂ ತಲೆಯಲ್ಲಿತ್ತು. ಮನಾಲಿಯಿಂದ ಏರು ತಿರುವಿನ ಹಾದಿಯಲ್ಲಿ ಮೇಲೇರಿ ರೋಹ್ ತಾಂಗ್ ಪಾಸ್ ಗೆ ತಲುಪಿದ್ದೇ ಸಣ್ಣಗೆ ಹಿಮ ಸುರಿಯಲಾರಂಭಿಸಿತು. ಅಂಥದ್ದೊಂದು ಕನಸಿನಂಥಾ ಹವೆಯಲ್ಲಿ ಬೆಟ್ಟದ ತುದಿ ತಲುಪಿ ಅಲ್ಲಿ ಯೋಗಾಸನ ಮಾಡಿದ್ದು ಅಕ್ಷತಾಗೆ ಜೀವನಪೂರ್ತಿ ನೆನಪಿರುವ ಗಳಿಗೆ.
ನಾನು ಜಿಮ್ ಗೆ ಹೋಗಲ್ಲ. ಜಿಮ್ ದೇಹವನ್ನು ಸ್ಟಿಫ್ ಮಾಡುತ್ತೆ. ಯೋಗ ಫ್ಲೆಕ್ಸಿಬಲ್ ಆಗಿರಿಸುತ್ತೆ. ನಟಿಯಾಗಿ ನನಗೆ ಯೋಗದಿಂದ ಬಹಳ ಪ್ರಯೋಜನ ಆಗಿದೆ. ಬೊಜ್ಜು, ದೈಹಿಕ ಸಮಸ್ಯೆ ಬರಲ್ಲ. ಪ್ರತಿರೋಧ ಶಕ್ತಿ ಹೆಚ್ಚುತ್ತದೆ. ಯೋಗದ ಮೂಲಕವೇ ನನ್ನ ಮಾನಸಿಕ ತುಮುಲಗಳಿಂದ ಹೊರಬಂದಿದ್ದೇನೆ. ದಿನದಲ್ಲಿ ಒಂದು ಗಂಟೆ ಆಸನ ಮಾಡ್ತೀನಿ. ಎಳೆ ಬಿಸಿಲು, ಮಳೆಹನಿ, ಹಿಮಬೆಟ್ಟ, ಅಂಡರ್ ವಾಟರ್‌ನಲ್ಲೆಲ್ಲ ಯೋಗ ಮಾಡೋದು ಅನನ್ಯ ಅನುಭವ.- ಅಕ್ಷತಾ ಪಾಂಡವಪುರ, ನಟಿ
ಕೊರೋನಾ ಟೈಮ್‌ನಲ್ಲಿ ಯೋಗ ಪಾಠ
- ಮನೆಯೊಳಗೇ ಇರುವ ಟೈಮ್ ಇದು. ಹಿಂದೆಲ್ಲೋ ಕಲಿತ ಯೋಗಾಸನಕ್ಕೆ ಮತ್ತೆ ಮರಳಲು ಬೆಸ್ಟ್ ಟೈಮ್.
- ಇದರಿಂದ ಡಿಪ್ರೆಶನ್ ನಂಥಾ ಸಮಸ್ಯೆಗಳು ಕಡಿಮೆ ಆಗುತ್ತವೆ. ಜಾಯಿಂಟ್ಸ್ ನಲ್ಲಿರುವ ನೋವುಗಳು ಕಡಿಮೆಯಾಗುತ್ತದೆ.
- ನಿದ್ರಾಹೀನತೆಯಂಥಾ ಸಮಸ್ಯೆ ನಿವಾರಣೆಯಾಗುತ್ತದೆ,
- ಮಳೆಹನಿಗೆ, ಎಳೆಬಿಸಿಲಿಗೆ ಮೈಯ್ಯೊಡ್ಡಿ ಯೋಗಾಸನ ಮಾಡೋದರಿಂದ ನಿಮ್ಮ ಏಕಾಗ್ರತೆ ಹೆಚ್ಚುತ್ತದೆ. ನಿಸರ್ಗಕ್ಕೆ ಹತ್ತಿರವಾದಷ್ಟುಅನುಭವಗಳು ಆಹ್ಲಾದಕರ.
- ಯೋಗಾಸನ ಮಾಡುವಾಗ ನಾನು ಸೌಂಡ್ ಇಟ್ಕೊಳಲ್ಲ. ಸುತ್ತಲಿನ ಶಬ್ದಗಳನ್ನು ಗ್ರಹಿಸುತ್ತೇನೆ. ಇಲ್ಲಿ ಹಕ್ಕಿಯೊಂದು ಕೂಗಿದಾಗ ತುಂಬ ದೂರದಲ್ಲಿ ಇನ್ನೊಂದು ಹಕ್ಕಿ ಅದಕ್ಕೆ ರಿಪ್ಲೈ ಮಾಡುತ್ತಿರುತ್ತೆ. ಆ ದನಿ ಕೇಳಲು ಮೈಯೆಲ್ಲ ಕಿವಿಯಾಗಿದ್ದು ಫೋಕಸ್ಡ್ ಆಗಿರಬೇಕು. ಅಂಥ ಅನುಭವಗಳು ಸೌಂಡ್ ಇಟ್ರೆ ಮಿಸ್ ಆಗುತ್ತವೆ.
- ಸಮುದ್ರದ ಅಲೆಗಳ ಜೊತೆಗೆ ಕಣ್ಣಿನ ಎಕ್ಸರ್ ಸೈಸ್ ಮಾಡೋದು ಮತ್ತೊಂದು ಅನುಭವ.
- ಎಲ್ಲಕ್ಕಿಂತ ಮುಖ್ಯವಾಗಿ ಯೋಗದಿಂದ ಮಾನಸಿಕ ಶಾಂತಿ ಸಿಗುತ್ತದೆ. ನಮ್ಮ ದೈಹಿಕ ಹಾಗೂ ಮಾನಸಿಕ ನೋವುಗಳೆರಡೂ ಕಡಿಮೆ ಆಗುತ್ತವೆ.
ಅಕ್ಷತಾ ಸದ್ಯ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ‘ಐ ಆಮ್ ಆನ್ ಆಕ್ಟರ್ ಆಕ್ಟಿಂಗ್ ಸ್ಟುಡಿಯೋ’ ದಲ್ಲಿ ಸಿಗುತ್ತಾರೆ. ಅಲ್ಲಿ ಅಕ್ಷತಾ ಅವರಿಂದ ಯೋಗದ ಜೊತೆಗೆ ಆಕ್ಟಿಂಗೂ ಕಲಿಯಬಹುದು. ದೂ: 9353771172