Asianet Suvarna News Asianet Suvarna News

Health Tips: ವರ್ಷಕ್ಕೊಮ್ಮೆ ಈ ಪರೀಕ್ಷೆ ಮಾಡಿಸ್ಕೊಳ್ಳಿ, ಆರೋಗ್ಯಕರ ಜೀವನ ನಡೆಸಿ

ನಾವು ಆರೋಗ್ಯವಾಗಿದ್ದೇವೆ ಎಂದುಕೊಂಡಿರ್ತೇವೆ. ಆದ್ರೆ ನಮ್ಮ ದೇಹದಲ್ಲಿ ಏನೇನೋ ವ್ಯತ್ಯಾಸವಾಗಿ ಹಾಸಿಗೆ ಹಿಡಿಯುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಪರಿಸ್ಥಿತಿ ನಮಗೆ ಬರಬಾರದು ಅಂದ್ರೆ ರಕ್ತ ಪರೀಕ್ಷೆ ಮಾಡಿಸಿಕೊಳ್ಬೇಕು. 
 

Blood Tests To Get Every Year
Author
First Published Jan 27, 2023, 2:17 PM IST

ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ. ಪ್ರತಿ ನಿತ್ಯ ವ್ಯಾಯಾಮ, ಯೋಗ, ಪ್ರಾಣಾಯಾಮದ ಜೊತೆ ಆರೋಗ್ಯಕರ ಆಹಾರ ಸೇವನೆ ಮಾತ್ರವಲ್ಲ ನಿಯಮಿತವಾಗಿ ನಮ್ಮ ಆರೋಗ್ಯ ಪರೀಕ್ಷೆ ಕೂಡ ಮುಖ್ಯವಾಗುತ್ತದೆ. ಯಾವುದೇ ಖಾಯಿಲೆ ಬಂದಿಲ್ಲ ಎನ್ನುವ ಕಾರಣಕ್ಕೆ ನಾವು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸೋದಿಲ್ಲ. ಏಕಾಏಕಿ ಅನಾರೋಗ್ಯ ಕಾಡಿದಾಗ ಕಂಗಾಲಾಗ್ತೇವೆ. ಅನೇಕ ಖಾಯಿಲೆಗಳು ಯಾವುದೇ ಮುನ್ಸೂಚನೆ ನೀಡದೆ ನಮ್ಮ ದೇಹವನ್ನು ಕೊರೆಯುತ್ತದೆ. ಈಗಿನ ದಿನಗಳಲ್ಲಿ ಕ್ಯಾನ್ಸರ್, ಥೈರಾಯ್ಡ್ ಸೇರಿದಂತೆ ಕೆಲ ಖಾಯಿಲೆಗಳು ಸಾಮಾನ್ಯ ಎನ್ನುವಂತಾಗಿದೆ. ಕೊನೆ ಹಂತಕ್ಕೆ ಹೋದ್ಮೇಲೆ ಜೀವ ಉಳಿಸಿಕೊಳ್ಳಲು ಹೋರಾಡುವ ಬದಲು ಆರಂಭದಲ್ಲಿಯೇ ಎಚ್ಚರಿಕೆ ತೆಗೆದುಕೊಂಡ್ರೆ ಆರೋಗ್ಯಕರ ಜೀವನವನ್ನು ನಡೆಸಬಹುದು. 

ನಿಮ್ಮ ಆರೋಗ್ಯ (Health) ವನ್ನು ಸುಸ್ತಿರವಾಗಿಟ್ಟುಕೊಳ್ಳಬೇಕೆಂದ್ರೆ ನೀವು ಹೆಚ್ಚು ಶ್ರಮವಹಿಸಬೇಕಾಗಿಲ್ಲ. ವರ್ಷದಲ್ಲಿ ಒಮ್ಮೆ ರಕ್ತ (Blood) ಪರೀಕ್ಷೆ ಮಾಡಿಸಿ ಎಲ್ಲ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿದ್ರೆ ಸಾಕು. ರಕ್ತ ಪರೀಕ್ಷೆ (Test) ಯಲ್ಲಿ ನಮ್ಮಲ್ಲಿ ಏನು ನ್ಯೂನ್ಯತೆಯಿದೆ ಎಂಬುದು ಗೊತ್ತಾಗುತ್ತದೆ. ಆ ತಕ್ಷಣ ಚಿಕಿತ್ಸೆ ಪಡೆದ್ರೆ ಖಾಯಿಲೆಯಿಂದ ಬೇಗ ಹೊರಬರಬಹುದು. ನಾವಿಂದ ವರ್ಷದಲ್ಲಿ ನೀವು ಮಾಡಿಸಲೇಬೇಕಾದ ಪರೀಕ್ಷೆಗಳು ಯಾವುವು ಎಂಬುದನ್ನು ಹೇಳ್ತೆವೆ. ನೀವು ಪ್ರತಿಯೊಂದು ಪರೀಕ್ಷೆಗೂ ಪದೇ ಪದೇ ರಕ್ತ ನೀಡಬೇಕಾಗಿಲ್ಲ. ಒಮ್ಮೆ ರಕ್ತ ನೀಡಿ ಎಲ್ಲ ಪರೀಕ್ಷೆ ಮಾಡಿಸಬಹುದು.

ವಿಟಮಿನ್  ಬಿ12 ಮತ್ತು ಫೋಲೇಟ್ : ಈ ಪರೀಕ್ಷೆಯು ನಿಮ್ಮ ರಕ್ತದಲ್ಲಿನ ವಿಟಮಿನ್ ಬಿ-12 ಮತ್ತು ಫೋಲೇಟ್ ಮಟ್ಟವನ್ನು ತಿಳಿಸುತ್ತದೆ. ಮೆದುಳು, ರಕ್ತ ಮತ್ತು ನರಮಂಡಲವನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ. ನಿಮ್ಮ ದೇಹವು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ವಿಟಮಿನ್ ಬಿ-12 ಮತ್ತು ಫೋಲೇಟ್  ಅಗತ್ಯವಿದೆ. ಈ ಎರಡೂ ಪೋಷಕಾಂಶಗಳು ಕೆಂಪು ರಕ್ತ ಕಣ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜೀವಕೋಶಗಳನ್ನು ನಿರ್ಮಿಸಲು ಸಹಾಯ ಮಾಡುವ ಡಿಎನ್ ಎ ಮತ್ತು ಆರ್ ಎನ್ ಎಗಳನ್ನು ತಯಾರಿಸುತ್ತವೆ.

ವಿಟಮಿನ್ ಡಿ ಪರೀಕ್ಷೆ : ಈ ಪರೀಕ್ಷೆಯು ಮೂಳೆ, ರೋಗನಿರೋಧಕ ಶಕ್ತಿ ನಿರ್ಣಯಿಸಲು ಸಹಾಯ ಮಾಡುತ್ತದೆ. ನಿಮ್ಮ ರಕ್ತದಲ್ಲಿ ವಿಟಮಿನ್ ಡಿ ಎಷ್ಟಿದೆ ಎಂಬುದನ್ನು ತಿಳಿಯಲು ಈ ಪರೀಕ್ಷೆ ಮಾಡಿಸಬೇಕು. ಮೂಳೆ ಅಸ್ವಸ್ಥತೆ ಅಥವಾ ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಸಮಸ್ಯೆ ಇದ್ದರೆ ನೀವು ಈ ಪರೀಕ್ಷೆ ಮಾಡಿಸುವುದು ಒಳ್ಳೆಯದು.  

ಥೈರಾಯ್ಡ್ : ನಿಮ್ಮ ಥೈರಾಯ್ಡ್ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸಲು ಮತ್ತು ಹೈಪರ್ ಥೈರಾಯ್ಡಿಸಮ್ ಅಥವಾ ಹೈಪೋಥೈರಾಯ್ಡಿಸಮ್‌ನಂತಹ ಸಮಸ್ಯೆಗಳನ್ನು ತಿಳಿದುಕೊಳ್ಳಲು ಈ ಪರೀಕ್ಷೆ ಅಗತ್ಯ. ಥೈರಾಯ್ಡ್ ನಿಮ್ಮ ಕತ್ತಿನ ಮುಂಭಾಗದಲ್ಲಿರುವ ಒಂದು ಸಣ್ಣ, ಚಿಟ್ಟೆ ಆಕಾರದ ಗ್ರಂಥಿಯಾಗಿದ್ದು, ಅದು ಎರಡು ಥೈರಾಯ್ಡ್ ಹಾರ್ಮೋನುಗಳಾದ ಥೈರಾಕ್ಸಿನ್ (T4) ಮತ್ತು ಟ್ರೈಯೋಡೋಥೈರೋನೈನ್ (T3) ತಯಾರಿಸುತ್ತದೆ.

ಸಿಎಂಪಿ : ಇದು ನಿಮ್ಮ ರಕ್ತದ ಗ್ಲೂಕೋಸ್, ಎಲೆಕ್ಟ್ರೋಲೈಟ್‌ಗಳು ಮತ್ತು ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯವನ್ನು ಪರೀಕ್ಷಿಸುತ್ತದೆ. ಇದು ನಿಮ್ಮ ದೇಹದ ರಾಸಾಯನಿಕ ಸಮತೋಲನ ಮತ್ತು ಚಯಾಪಚಯ ಕ್ರಿಯೆಯ  ಕುರಿತು ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಕೆಲವು ಆರೋಗ್ಯ ಪರಿಸ್ಥಿತಿಗಳ ರೋಗನಿರ್ಣಯ, ತಪಾಸಣೆ ಅಥವಾ ಮೇಲ್ವಿಚಾರಣೆಗೆ ಇದು ಸಹಾಯ ಮಾಡುತ್ತದೆ.  

ಕಬ್ಬಿಣ : ನಮ್ಮ ದೇಹದಲ್ಲಿ ಕಬ್ಬಿಣದ ಅಂಶ ಎಷ್ಟಿದೆ ಎಂಬುದನ್ನು ತಿಳಿಯುವುದು ಮುಖ್ಯ. ಹಾಗಾಗಿ ಈ ಪರೀಕ್ಷೆ ಮಾಡಬೇಕು. ದೇಹದಲ್ಲಿ ಕಬ್ಬಿಣ ಕಡಿಮೆಯಾಗುವುದು ರಕ್ತಹೀನತೆಯ ಸಂಕೇತವಾಗಿದೆ. ಅದೇ ನಿಮ್ಮ ದೇಹದಲ್ಲಿ ಹೆಚ್ಚಿನ ಕಬ್ಬಿಣಂಶವಿದ್ರೆ ಅದು ಹಿಮೋಕ್ರೊಮಾಟೋಸಿಸ್ ಸಂಕೇತವಾಗಿದೆ. 

ಲಿಪಿಡ್ ಪ್ಯಾನಲ್ :  ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಪರೀಕ್ಷಿಸಲು ಇದು ಸಹಕಾರಿ.  ಒಮೆಗಾ 3 ಮತ್ತು ಒಮೆಗಾ 6 ಮೌಲ್ಯಗಳನ್ನು ಪಡೆಯಬಹುದು.

ಪೇಪರ್ ಕಪ್‌ನಲ್ಲಿ ಟೀ ಕುಡೀತೀರಾ? ಕ್ಯಾನ್ಸರ್ ಕಾಡ್ಬೋದು ಹುಷಾರ್!

ಹೆಚ್ ಬಿಎಐಸಿ : 3 ತಿಂಗಳವರೆಗಿನ ನಿಮ್ಮ ರಕ್ತದ ಗ್ಲೂಕೋಸ್ ಅನ್ನು ಇದ್ರಲ್ಲಿ ಪರೀಕ್ಷಿಸಲಾಗುತ್ತದೆ. ಊಟದ ಮೊದಲು ಅಥವಾ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಳೆಯುವ ಪರೀಕ್ಷೆಗಳಿಗಿಂತ ಇದು ಹೆಚ್ಚು ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ.

ಫಾಸ್ಟಿಂಗ್ ಇನ್ಸುಲಿನ್ : ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ತಿಳಿಯಲು ಇದು ನೆರವಾಗುತ್ತದೆ. ಮಧುಮೇಹ ಅಥವಾ ಇತರ ಚಯಾಪಚಯ ಕಾಯಿಲೆಗಳಿಗೆ ಕಾರಣವಾಗುವ ಯಾವುದೇ ಮಟ್ಟದ ಇನ್ಸುಲಿನ್ ಪ್ರತಿರೋಧವನ್ನು ನಿರ್ಣಯಿಸುತ್ತದೆ.

ಹಾರ್ಮೋನ್ ಪ್ಯಾನಲ್ : ಹಾರ್ಮೋನ್ ಪ್ರಮಾಣ ತಿಳಿಯಲು ಇದು ಸಹಕಾರಿ. ಋತುಬಂಧ, ಬಂಜೆತನ, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ಮತ್ತು ಕೆಲವು ಗೆಡ್ಡೆಗಳಂತಹ ಪರಿಸ್ಥಿತಿಗಳನ್ನು ಪತ್ತೆಹಚ್ಚಲು ಇದು ನೆರವಾಗುತ್ತದೆ.

ಹೆಚ್ ಎಸ್ ಸಿಆರ್ ಪಿ : ತೀವ್ರ ಅನಾರೋಗ್ಯ ಮತ್ತು ಉರಿಯೂತದ ಕಾರಣ ಪತ್ತೆ ಮಾಡುತ್ತದೆ.  

Health Tips: ನಕ್ಕರೂ ಮೂತ್ರ ಸೋರಿ ಮುಜುಗರವಾಗ್ತಿದ್ಯಾ? ಹೀಗೆ ಮಾಡಿ

ಬ್ಲಡ್ ಕೌಂಟ್ : ಆರ್ ಬಿ (RB) ಮತ್ತು ಡಬ್ಲ್ಯುಬಿಎಸ್ (WBS) ಇದರಲ್ಲಿ ಪ್ರಮುಖ ಪರೀಕ್ಷೆಗಳಾಗಿವೆ. ನಿಮ್ಮ ಪ್ರತಿರಕ್ಷಣಾ ಕಾರ್ಯ ಮತ್ತು ವಿಟಮಿನ್ ಕೊರತೆ ತಿಳಿಯಲು ಇದು ಸಹಕಾರಿ.  

ಹೋಮೋಸಿಸ್ಟೈನ್ : ಉರಿಯೂತ, ವಿಟಮಿನ್ ಕೊರತೆ ಪತ್ತೆ ಮಾಡುತ್ತದೆ. 

Follow Us:
Download App:
  • android
  • ios