ನಟಿ, ಬಿಗ್ಬಾಸ್ ಸ್ಪರ್ಧಿ ಶೆಫಾಲಿ ಜರಿವಾಲಾ ಅವರ ದಿಢೀರ್ ಸಾವು ಮನರಂಜನಾ ಉದ್ಯಮವನ್ನು ತಲ್ಲಣಗೊಳಿಸಿದೆ. ಇವರ ಸಾವಿಗೆ ಸೆಲೆಬ್ರಿಟಿ ಸಿಂಡ್ರೋಮ್ ಕಾರಣವಾಯ್ತಾ ಎನ್ನುವ ಸಂಶಯವಿದೆ. ಏನಿದು ಸಮಸ್ಯೆ? ಹೆಚ್ಚಾಗಿ ಹೆಂಗಸರನ್ನು ಕಾಡುವ ರೋಗ ಇದು. ಏನಿದು? ಇದರ ಡಿಟೇಲ್ಸ್ ಇಲ್ಲಿದೆ...
ಬಿಗ್ಬಾಸ್ ಖ್ಯಾತಿಯ ಬಹುಭಾಷಾ ನಟಿಯಾಗಿದ್ದ 42 ವರ್ಷದ ಶೆಫಾಲಿ ಜರಿವಾಲಾ ಅವರ ಸಾವು ಇಡೀ ಮನರಂಜನಾ ಉದ್ಯಮವನ್ನೇ ತಲ್ಲಣಗೊಳಿಸಿದೆ. ಇವರಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆ ಇಲ್ಲದಿದ್ದರೂ ಹೃದಯಾಘಾತ ಆಗಿದ್ದು ಏಕೆ ಎನ್ನುವ ಬಗ್ಗೆ ಭಾರಿ ಚರ್ಚೆಯೂ ಶುರುವಾಗಿದೆ. ವರದಿಗಳ ಪ್ರಕಾರ, ಶೆಫಾಲಿ ಜರಿವಾಲಾ ಜೂನ್27ರಂದು ಮುಂಬೈನ ತಮ್ಮ ನಿವಾಸದಲ್ಲಿ ತೀವ್ರ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದರು. ಅವರನ್ನು ಕೂಡಲೇ ಅವರ ಪತಿ ಪರಾಗ್ ಆಸ್ಪತ್ರೆಗೆ ದಾಖಲಿಸಿದರಾದರೂ ಅಲ್ಲಿ ವೈದ್ಯರು ಶೆಫಾಲಿ ಸಾವನ್ನಪ್ಪಿದ್ದಾರೆ. ರಂಭಿಕ ವೈದ್ಯಕೀಯ ಪರೀಕ್ಷೆಗಳ ಅನ್ವಯ ಶೆಫಾಲಿ ಅವರು ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಸೂಚಿಸುತ್ತವೆ, ಆದರೂ ಸಾವಿಗೆ ಅಧಿಕೃತ ಕಾರಣ ಇನ್ನೂ ತನಿಖೆಯಲ್ಲಿದೆ. ಅವರು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಸಾಮಾನ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು ಎಂದು ಅವರ ವೈದ್ಯರು ಪೊಲೀಸರಿಗೆ ಸ್ಪಷ್ಟಪಡಿಸಿದ್ದಾರೆ.
ಹಾಗಿದ್ದರೆ ಅವರ ಸಾವಿಗೆ ಕಾರಣವಾಗಿದ್ದು ಅವರು ಪಡೆದುಕೊಳ್ಳುತ್ತಿದ್ದ ಆ್ಯಂಟಿ ಏಜಿಂಗ್ ಅರ್ಥಾತ್ ವಯಸ್ಸಾಗದಂತೆ ತಡೆಯುವ ಚಿಕಿತ್ಸೆ ಎನ್ನುವುದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ. ಆದರೆ ಆ ಚಿಕಿತ್ಸೆಯೇ ಅವರ ಹಠಾತ್ ಸಾವಿಗೆ ಕಾರಣ ಎಂದು ಹೇಳಲು ಯಾವುದೇ ಪುರಾವೆಗಳು ಸದ್ಯಕ್ಕೆ ಇಲ್ಲವಾದರೂ, ಶೆಫಾಲಿ ಅವರ ಜೀವನ ಕ್ರಮ ನೋಡುವುದಾದರೆ ಇದೇ ಮುಖ್ಯ ಕಾರಣ ಎನ್ನುವುದನ್ನೂ ತಳ್ಳಿಹಾಕುವಂತಿಲ್ಲ ಎಂದಿದ್ದಾರೆ ವೈದ್ಯರು. ವೈದ್ಯಕೀಯ ವರದಿ ಪ್ರಕಾರ ಆ್ಯಂಟಿ ಏಜಿಂಗ್ ಚಿಕಿತ್ಸೆಗಳು (anti-aging treatments) ದೇಹದ ಮೇಲೆ ಗಂಭೀರ ಸ್ವರೂಪದ ಅಡ್ಡಪರಿಣಾಮಗಳನ್ನು ಉಂಟುಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೆಂದರೂ ಇದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಕೊಡುವ ಚಿಕಿತ್ಸೆ ಎಂದ ಮೇಲೆ ಅಲ್ಲಿ ಅಡ್ಡ ಪರಿಣಾಮ ಇರಲೇಬೇಕು. ವಯಸ್ಸಾಗುವುದು ಪ್ರಕೃತಿಯ ನಿಯಮ. ಅದನ್ನು ತಡೆಯಲು ಯೋಗ, ಧ್ಯಾನ ಇತ್ಯಾದಿಗಳನ್ನು ಅನುಸರಿಸುವುದು ಇದೆ. ಆದರೆ ಇಂಜೆಕ್ಷನ್ನಂಥ ಹಾನಿಕಾರದ ಪ್ರಯೋಗಗಳಿಗೆ ದೇಹವನ್ನು ಒಡ್ಡಿಕೊಂಡರೆ ಸಹಜವಾಗಿ ಅದು ಮಿತಿಮೀರಿದಾಗ ರಿಯಾಕ್ಟ್ ಮಾಡುತ್ತದೆ ಎನ್ನುತ್ತಾರೆ ತಜ್ಞರು.
ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಸೆಲೆಬ್ರಿಟಿಗಳಿಗೆ ಅಗತ್ಯವಾದದ್ದೇ. ಏಕೆಂದರೆ ಸೌಂದರ್ಯವೇ ಅವರ ಬಂಡವಾಳ, ಬಾಹ್ಯ ಸೌಂದರ್ಯ ಇದ್ದರಷ್ಟೇ ಅವರಿಗೆ ಮಾರುಕಟ್ಟೆಯೂ ಇರುತ್ತದೆ. ಇದೇ ಕಾರಣಕ್ಕೆ ಇವರು ಸೆಲೆಬ್ರಿಟಿ ಸಿಂಡ್ರೋಮ್ನಿಂದ ಬಳುತ್ತಲೇ ಇರುತ್ತಾರೆ. ಇದು ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ ಜನಸಾಮಾನ್ಯರನ್ನೂ ಕಾಡುವ ಸಮಸ್ಯೆಯೇ. ಆದರೂ ಇದಕ್ಕೆ ಹೆಚ್ಚಾಗಿ ಬಳಲುವವರು ಮಹಿಳೆಯರು ಎನ್ನುತ್ತದೇ ಅಧ್ಯಯನ. ಏಕೆಂದರೆ ಸೌಂದರ್ಯ ಎಂದರೇನೇ ಮಹಿಳೆ ಎನ್ನುವ ಮಾತಿದೆಯಲ್ಲ, ಆದ್ದರಿಂದ ವಯಸ್ಸಾಗುತ್ತಾ ಬಂದರೆ, ಏನನ್ನೋ ಕಳೆದುಕೊಳ್ಳುವ ಅನುಭವ ಶುರುವಾಗಿ ಸೆಲೆಬ್ರಿಟಿ ಸಿಂಡ್ರೋಮ್ಗೆ ಒಳಗಾಗುತ್ತಾರೆ. ಆ ಸಮಯದಲ್ಲಿ ಏನಾಗುತ್ತದೆ ಎನ್ನುವ ಬಗ್ಗೆ ಖ್ಯಾತ ಹಿರಿಯ ಲೇಖಕಿ ಮತ್ತು ಆಪ್ತ ಸಮಾಲೋಚಕಿ ಶಾಂತಾ ನಾಗರಾಜ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರು ಹೇಳಿರುವುದು ಏನೆಂದರೆ,
‘ ಸೆಲೆಬ್ರೆಟಿ ಸಿಂಡ್ರೋಮ್ ‘ ಎನ್ನುವುದು ಒಂದು ಮನೋರೋಗ. ಇದು ಸಿನಿಮಾ ಕಲಾವಿದರಲ್ಲಿ ತೀರಾ ಸಾಮಾನ್ಯ. ಕೆಲವರಂತೂ ತಾವು ಶತಾಯಗತಾಯ ಸುಂದರವಾಗಿಯೇ ಕಾಣಬೇಕೆಂದು ವರ್ಷಕ್ಕೊಮ್ಮೆ ಪ್ಲಾಸ್ಟಿಕ್ ಸರ್ಜರಿ ಸಹ ಮಾಡಿಸಿಕೊಳ್ಳುತ್ತಾರೆ. ಡಾ. ಗುರುಪ್ರಸಾದ್ ಕಾಗಿನೆಲೆಯವರ ‘ ಕಾಯ ‘ ಕಾದಂಬರಿ ಈ ವಸ್ತುವನ್ನೇ ಆಧರಿಸಿದ್ದಾಗಿದೆ. ಇದು ಕೇವಲ ಸಿನಿಮಾ ಕಲಾವಿದರಿಗಷ್ಟೇ ಅಲ್ಲ ಅನೇಕರಿಗೆ ಇರುತ್ತದೆ. ಈ ಕಾಯಿಲೆಯ ಲಕ್ಷಣಗಳೇನೆಂದರೆ,
1. ತಾವು ಜಗತ್ತಿನಲ್ಲೇ ಅತ್ಯಂತ ಸುಂದರರು ಎಂದು ಭಾವಿಸಿಕೊಳ್ಳುವುದು
2. ಅದಕ್ಕಾಗಿ ಅಹರ್ನಿಶಿ ಚಿಂತೆ ಮಾಡುತ್ತಾ, ಕುರೂಪಿಗಳು ಹತ್ತಿರ ಬಂದರೂ ತಮ್ಮ ರೂಪ ಹಾಳಾಗಬಹುದೆಂದು ಭಯಪಡುವುದು. ಮತ್ತು ಇತರರನ್ನು ಕೀಳಾಗಿ ಕಾಣುವುದು
3. ಮಾನವೀಯತೆಯನ್ನೇ ಮರೆತು ರೂಪವೇ ಸರ್ವಸ್ವವೆಂದು ಭಾವಿಸುವುದು.
4. ಅದಕ್ಕಾಗಿ ವಿಪರೀತ ಖರ್ಚುಮಾಡುವುದು.
5. ಕೂದಲಿಗೆ ಬಣ್ಣ, ಕಾಂಟ್ಯಾಕ್ಟ್ ಲೆನ್ಸ್, ಮೇಕಪ್ ಸಲಕರಣೆಗಳು, ಇವೆಲ್ಲವೂ ಇವರಿಂದಲೇ ವ್ಯಾಪಾರವಾಗುವುದು.
6. ತಾವೆಂದಿಗೂ ವೃದ್ಧರೇ ಆಗುವುದಿಲ್ಲವೆನ್ನುವ ಭ್ರಮೆಯನ್ನು ಗಾಢವಾಗಿ ಬೆಳೆಸಿಕೊಳ್ಳುವುದು.
7. ಸ್ನೇಹ ಸಂಬಂಧಗಳಲ್ಲೂ ಸ್ವಾರ್ಥವನ್ನೇ ಮೆರೆಯುವುದು.
8. ತಮ್ಮ ಸೌಂದರ್ಯವನ್ನು ಸುತ್ತಲಿನವರು ಸದಾ ಹೊಗಳುತ್ತಿರಲೆಂದು ಬಯಸುವುದು
ಹೊಗಳಿಕೆಗೆ ಹಿಗ್ಗುತ್ತಿರುವುದು.
9. ಅಹಂಕಾರವನ್ನು ಯಾವ ನಾಚಿಕೆಯೂ ಇಲ್ಲದೇ ಪ್ರದರ್ಶಿಸುವುದು.
10. ಎಲ್ಲಕ್ಕಿಂತಾ ಮುಖ್ಯವಾಗಿ , ತಾನು ಸುಂದರವಾಗಿರುವುದರಿಂದ ತಾನು ಏನು ಮಾಡಿದರೂ ಮತ್ತು ಏನು ಮಾತಾಡಿದರೂ ಅದೇ ಸರಿ ಎಂದು ನಂಬುವುದು.
ಇಂಥವರ ಮಾತು ನಡವಳಿಕೆ ಕಡೆಗೆ ಯೋಚನಾ ರೀತಿಯೂ ಅತ್ಯಂತ ಕೃತಕವಾಗಿರುತ್ತದೆ. ಯಾಕೆಂದರೆ ಇಂಥವರು ‘ ಮನುಷ್ಯರಿಗೆ ಸಾಮಾಜಿಕ ಜೀವನದಲ್ಲಿ ಒಬ್ಬರಾಗಿ ಬದುಕಲು ರೂಪ ಮುಖ್ಯವಲ್ಲ ಗುಣ ಮುಖ್ಯ ‘ ಎನ್ನುವ ಮೂಲಭೂತ ತಿಳುವಳಿಕೆಯನ್ನೇ ಇವರು ಕೊಂದುಕೊಂಡಿರುತ್ತಾರೆ ಎಂದು ಶಾಂತಾ ನಾಗರಾಜ್ ಅವರು ಬರೆದಿದ್ದಾರೆ.
ಅಷ್ಟಕ್ಕೂ ಅವರು ಬರೆದಿರುವ ಹಿಂದಿರುವ ಉದ್ದೇಶ ಶೆಫಾಲಿ ಸಾವಿನ ಬಗ್ಗೆಯಲ್ಲ, ಬದಲಿಗೆ ದಿನಪತ್ರಿಕೆಯೊಂದರಲ್ಲಿ ಖ್ಯಾತ ನಟಿ ಜ್ಯೂಲಿ ಲಕ್ಷ್ಮೀ ಅವರು ನೀಡಿರುವ ಹೇಳಿಕೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಅದರ ಬಗ್ಗೆ ಶಾಂತಾ ನಾಗರಾಜ್ ಅವರು ಈ ಮೇಲಿನಂತೆ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ನಟಿ ಲಕ್ಷ್ಮೀ ಅವರು ಸೌಂದರ್ಯದ ಬಗ್ಗೆ ಮಾತನಾಡುತ್ತಾ, ಸೌಂದರ್ಯವೆಲ್ಲಾ ಉಡುಗಿ ಹೋದ, ತಲೆಕೂದಲೆಲ್ಲಾ ಬೆಳ್ಳಗಾದ, ಚೈತನ್ಯವೆಲ್ಲಾ ಉಡುಗಿ ಹೋಗಿದ್ದ ತಮ್ಮ ಸ್ನೇಹಿತೆಯ ಜೊತೆ ನಾನು ಮಿಕ್ಸ್ ಆಗಲು ಇಷ್ಟಪಟ್ಟಿಲ್ಲ. ಅಂಥವರ ಜೊತೆ ನಾನು ಸೇರುವುದೇ ಇಲ್ಲ. ನನಗೆ ವಯಸ್ಸಾಗಿ ಹೋಯ್ತು ಎನ್ನುವವರ ಜೊತೆ ನಾನು ಮಿಕ್ಸ್ಅಪ್ ಆಗಲ್ಲ. ಸ್ನೇಹಿತರಾಗಲೀ, ಸಂಬಂಧಿಕರೇ ಆಗಲೆ ಸ್ಮಾರ್ಟ್ ಇದ್ದರೆ ಮಾತ್ರ ಬನ್ನಿ ಎಂದು ಹೇಳಿದ್ದಾರೆ. ಅವರು ಯಾವ ಅರ್ಥದಲ್ಲಿ ಇದನ್ನು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಮೇಲ್ನೋಟಕ್ಕೆ ಇದು ಸೌಂದರ್ಯ ಇಲ್ಲದವರು ತಮ್ಮ ಬಳಿ ಇರಬೇಡಿ ಎನ್ನುವ ಅರ್ಥ ಕೊಡುತ್ತಿದೆ ಎಂದು ಸಾಕಷ್ಟು ಟ್ರೋಲ್ ಆಗುತ್ತಿದೆ. ಈ ಬಗ್ಗೆ ಸೆಲೆಬ್ರಿಟಿ ಸಿಂಡ್ರೋಮ್ ಇದಾಗಿರುವುದಾಗಿ ಶಾಂತಾ ನಾಗರಾಜ್ ಅವರು ಸೊಗಸಾಗಿ ಇದರ ವಿವರಣೆ ನೀಡಿದ್ದಾರೆ.
