Bengaluru: ಮಗಳಿಗೆ ಕಿಡ್ನಿ ಕೊಟ್ಟು ಮರುಜೀವ ನೀಡಿದ ವೃದ್ಧ ತಂದೆ; ಔಷಧಿ ರಹಿತವಾಗಿ ಮಧುಮೇಹ ನಿಯಂತ್ರಿಸಿದ ವೈದ್ಯರು!
ಬೆಂಗಳೂರಿನಲ್ಲಿ ವೃದ್ಧ ತಂದೆಯೊಬ್ಬರು ತನ್ನ ಕಿಡ್ನಿ ಫೇಲಾದ ಮಗಳು ತನಗಿಂದ ಮೊದಲು ಸಾಯಬಾರದು ಎಂದು ತನ್ನ ಕಿಡ್ನಿಯನ್ನೇ ದಾನ ಮಾಡಿ ಮಗಳಿಗೆ ಮರುಜೀವ ನೀಡಿದ್ದಾರೆ.
ಬೆಂಗಳೂರು (ಮಾ.23): ಸಾಮಾನ್ಯವಾಗಿ ಎಷ್ಟೋ ಜನರು ತಮ್ಮ ಮಕ್ಕಳನ್ನು ಪ್ರೀತಿಯಿಂದ ಬೆಳಸಿ ಉತ್ತಮ ಜೀವನ ರೂಪಿಸಲೇ ಹೆಣಗಾಡುತ್ತಾರೆ. ಇನ್ನು ಕೆಲವರು ತಮಗೆ ಯಾವುದೇ ಸಂದರ್ಭದಲ್ಲಿ ಕಷ್ಟ ಬಂದಿತೆಂದು ತಮ್ಮ ಮಕ್ಕಳನ್ನು ಕೊಲೆ ಮಾಡಿ ತಾವೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಉತ್ತಮ ಜೀವನ ರೂಪಿಸಿಕೊಟ್ಟಿದ್ದೂ ಅಲ್ಲದೇ, ಕಿಡ್ನಿ ವೈಫಲ್ಯಗೊಂಡ ಮಗಳು ತನಗಿಂತ ಬೇಗ ಸಾಯಬಾರದು ಎಂದು ತನ್ನ ಮುಪ್ಪಿನ ವಯಸ್ಸಿನಲ್ಲಿ ಕಿಡ್ನಿ ದಾನ ಮಾಡಿ ಅಪ್ಪನೆಂದರೆ ಆಕಾಶಕ್ಕಿಂತಲೂ ಮಿಗಿಲು ಎಂಬುದನ್ನು ಸಾಬೀತು ಮಾಡಿದ್ದಾರೆ.
ಕೃತಿ ಶರ್ಮಾ (38) ಅವರಿಗೆ ಅವರ ತಂದೆ ಶ್ಯಾಮ್ ರಾವ್ (71) ಅವರು ಹೊಸ ಮರು ಜನ್ಮವನ್ನೇ ನೀಡಿದ್ದಾರೆ. ತಾನು ಪ್ರೀತಿಯಿಂದ ಬೆಳಸಿದ ಮಗಳು ತನಗಿಂದ ಮುಂಚಿತವಾಗಿ ಯಾವುದೇ ಕಾರಣಕ್ಕೂ ಜೀವ ಕಳೆದುಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಮಗಳ ಅನಾರೋಗ್ಯವನ್ನು ಸರಿಪಡಿಸಲು ತಂದೆ ಪಡಬಾರದ ಕಷ್ಟ ಪಟ್ಟಿದ್ದಾರೆ. ಆದರೆ, ಮಗಳ ಕಿಡ್ನಿ ವೈಫಲ್ಯವಾಗಿದ್ದು, 8 ತಿಂಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾ ತೂಕ ಕಳೆದುಕೊಂಡು ಸಂದಿಗ್ಧ ಸ್ಥಿತಿಯಲ್ಲಿದ್ದರು. ಆಗ ಸರ್ಜಾಪುರ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಾಗ ಹೊಸ ಕಿಡ್ನಿ ಮರುಜೋಡಣೆ ಮಾಡಿದರೆ ಮಾತ್ರ ಬದುಕುತ್ತಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆಗ, ತಂದೆ ಹಣ ಖರ್ಚಾದರೂ ಪರವಾಗಿಲ್ಲ ಕಿಡ್ನಿ ದಾನಿಗಳಿಗಾಗಿ ಹುಡುಕಿದ್ದಾರೆ. ಆದರೆ, ಯಾರೂ ಸಿಗದಿದ್ದಾಗ ತಾನೇ ಕಿಡ್ನಿ ದಾನ ಮಾಡುವುದಾಗಿ ನಿರ್ಧರಿಸಿದ್ದಾರೆ.
ಕಸಿನ್ ಮದ್ವೆಯಾದ್ರೆ ಮಕ್ಕಳು ಅಂಗವೈಕಲ್ಯ ಆಗೋದಷ್ಟೇ ಅಲ್ಲ, ಗರ್ಭಪಾತವೂ ಹೆಚ್ಚು!
ಇನ್ನು ತಂದೆ ಕಿಡ್ನಿ ದಾನ ಮಾಡುವ ನಿರ್ಧಾರವನ್ನೇನೋ ಮಾಡಿದ್ದಾರೆ. ಆದರೆ, ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆಯಾ ಎಂಬುದು ವೈದ್ಯರ ಪ್ರಶ್ನೆಯಾಗಿತ್ತು. ಪ್ರಸ್ತುತ 71 ವರ್ಷದ ಮುಪ್ಪಿನಲ್ಲಿರುವ ವ್ಯಕ್ತಿಯಿಂದ ಕಿಡ್ನಿ ದಾನ ಮಾಡಲು ಸಾಧ್ಯವೇ ಎಂದು ವೈದ್ಯರನ್ನು ಪ್ರಶ್ನೆ ಮಾಡಿದ್ದಾರೆ. ಆಗ ಸಕಾರಾತ್ಮಜವಾಗಿ ಸ್ಪಂದಿಸಿದ ವೈದ್ಯರು ನಿಮ್ಮ ಆರೋಗ್ಯ ಸ್ಥಿತಿಯನ್ನು ಆಧರಿಸಿರುತ್ತದೆ ಎಂದು ತಿಳಿಸಿದ್ದಾರೆ. ನಂತರ, ತಂದೆಯ ಆರೋಗ್ಯ ಪರೀಕ್ಷೆ ಮಾಡಿದಾಗ ಮಧುಮೇಹ ಇರುವುದು ಗೊತ್ತಾಗಿದೆ. ಆಗ, ಕಿಡ್ನಿ ಅಗತ್ಯವಿರುವ ಮಗಳನ್ನು ಬದುಕಿಸಲು ತಂದೆ ಮುಂದಾಗಿರುವುದನ್ನು ನೋಡಿ ವೈದ್ಯಕೀಯ ಸವಾಲುಗಳನ್ನು ಸ್ವೀಕರಿಸಲು ವೈದ್ಯರು ತೀರ್ಮಾನಿಸಿದ್ದಾರೆ. ಆಗ, ನೀವು ಕಡ್ನಿ ದಾನ ಮಾಡಲು ಮಾನಸಿಕವಾಗಿ ಸಿದ್ಧರಾಗಿ, ನಾವು ಮುಂದಿನ ಚಿಕತ್ಸೆಗಳನ್ನು ನೀಡಿ ನಿಮ್ಮ ಮಗಳಿಗೆ ಮರುಜನ್ಮ ನೀಡಲು ನಾವು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಕಿಡ್ನಿ ದಾನ ಮಾಡಲು ಮುಂದಾದ ತಂದೆ ಶ್ಯಾಮ್ ರಾವ್ ಅವರಿಗೆ ಆಹಾರದಲ್ಲಿ ಏನು ತಿನ್ನಬೇಕು ಮತ್ತು ಜೀವನಶೈಲಿಯ ಬದಲಾವಣೆಯ ಬಗ್ಗೆ ವೈದ್ಯರು ಸಲಹೆ ನೀಡಿದರು. ಇದರಿಂದ ಮಧುಮೇಹ ಔಷಧ ತೆಗೆದುಕೊಳ್ಳುವ ಅಗತ್ಯವಿಲ್ಲದಂತೆ ಮಾಡಿದರು. ಸಾಧಕ-ಬಾಧಕಗಳ ಬಗ್ಗೆ ಕೂಲಂಕುಷವಾಗಿ ಮೌಲ್ಯಮಾಪನ ಮಾಡಿದ ವೈದ್ಯರು, ಕಿಡ್ನಿ ದಾನಿ ರಾವ್ ಅವರ ಉತ್ತಮ ಆರೋಗ್ಯ ನೋಡಿ ಔಷಧಿಗಳ ಅಗತ್ಯವಿಲ್ಲದೆ ನಿಯಂತ್ರಿಸಿದ್ದರು. ಹಾಗಾಗಿ ವಯಸ್ಸಾದಂತೆ ಅವರಿಗೆ ಕಿಡ್ನಿಯಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆಯಾಗಿತ್ತು. ಇನ್ನು ಕಿಡ್ನಿ ನೀಡುವ ದಾನಿಗಳು ರಕ್ತ ಸಂಬಂಧಿಯೇ ಆಗಿದ್ದರಿಂದ ಮುಂದಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
Kidney Transplant : ಇದೇ ಮೊದಲ ಬಾರಿ ಮನುಷ್ಯನಿಗೆ ಕಸಿಯಾಯ್ತು ಹಂದಿ ಕಿಡ್ನಿ
ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್ ಮಾಡಿದ ಡಾ. ಪಲ್ಲವಿ ಪಾತ್ರಿ ಮಾತನಾಡಿ, 70 ವರ್ಷ ಮೇಲ್ಪಟ್ಟ ವ್ಯಕ್ತಿಯನ್ನು ಕಿಡ್ನಿ ದಾನಿಯನ್ನಾಗಿ ಕೇಸ್-ಟು-ಕೇಸ್ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ದಾನಿಯ ಒಟ್ಟಾರೆ ಆರೋಗ್ಯದ ಪರೀಕ್ಷೆ ಮಾಡಲಾಗುತ್ತದೆ. ವಯಸ್ಸಾದ ದಾನಿಗಳ ಕಿಡ್ನಿಗಳು ದಾನಿ ಮತ್ತು ಸ್ವೀಕರಿಸುವವರ ಮೇಲೆ ಪರಿಣಾಮ ಬೀರುತ್ತವೆ. ವಯಸ್ಸಾದವರು ನೀಡುವ ಕಿಡ್ನಿಗಳು ಕಿರಿಯ ದಾನಿಗಳಷ್ಟು ದೀರ್ಘಕಾಲ ಉಳಿಯುವುದಿಲ್ಲ. ಮಧುಮೇಹಿಗಳು ಕಿಡ್ನಿ ದಾನಕ್ಕೆ ಅನರ್ಹರೆಂದು ಪರಿಗಣಿಸಿದರೂ ನಾವು ಸವಾಲಾಗಿ ಸ್ವೀಕರಿಸಿ ಆಹಾರ ಪಥ್ಯ ಮಾಡಿಸಿ, ಕಿಡ್ನಿ ದಾನಕ್ಕೆ ಬೇಕಾದ ಸ್ಥಿತಿ ಹೊಂದಲು ಪ್ರೇರೇಪಣೆ ನೀಡಿದೆವು. ಉತ್ತಮ ಜೀವನ ಶೈಲಿ ಹೊಂದಿದ್ದ ರೋಗಿಯ ತಂದೆಯ ಆರೋಗ್ಯ ಸಹಸ್ಥಿತಿಗೆ ಬಂದಾಗ ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್ ಮಾಡಿದ್ದೇವೆ ಎಂದು ತಿಳಿಸಿದರು.
ತಂದೆಯಿಂದ ಕಿಡ್ನಿ ಪಡೆದ ಕೃತಿ ಶರ್ಮಾ ಅವರಿಗೆ ಮುಂದಿನ ದಿನಗಳಲ್ಲಿ ಡಯಾಲಿಸಿಸ್ ಅಗತ್ಯವಿಲ್ಲ. ಹೊಸ ಕಿಡ್ನಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶಸ್ತ್ರಚಿಕಿತ್ಸೆಯ ನಂತರ, ಅವರ ತಂದೆ ರಾವ್ ಮತ್ತು ಮಗಳು ಶರ್ಮಾ ಆರೋಗ್ಯ ಉತ್ತಮವಾಗಿ ಚೇತರಿಕೆ ಕಂಡಿದೆ ಎಂದು ವೈದ್ಯರ ತಂಡವು ತಿಳಿಸಿದೆ. ಮಗಳಿಗೆ ತನ್ನ ಕಿಡ್ನಿ ದಾನ ಮಾಡಿ ಆಕೆಗೆ ಮರುಜೀವ ನೀಡಿದ ಖುಷಿ ವೃದ್ಧ ತಂದೆಯ ಮೊಗದಲ್ಲಿ ಮೂಡಿದೆ. ಇನ್ನು ಮಗಳು ಕೂಡ ತನ್ನ ತಂದೆಯ ಕಾರ್ಯಕ್ಕೆ ಋಣಿ ಆಗಿದ್ದಾಳೆ.