ಚಳಿಗಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಹಿರಿಯ ನಾಗರಿಕರ ಸಾವು ಹೆಚ್ಚುತ್ತದೆ. ಶೀತ ಹವಾಮಾನ ಹೃದಯದ ಮೇಲೆ ಒತ್ತಡ ಹೇರುತ್ತದೆ. ಬೆಚ್ಚಗಿನ ಉಡುಗೆ ಧರಿಸಿ, ಹಠಾತ್ ತಾಪಮಾನ ಬದಲಾವಣೆಗಳನ್ನು ತಪ್ಪಿಸಿ, ಸಕ್ರಿಯರಾಗಿರಿ, ಆರೋಗ್ಯಕರ ಆಹಾರ ಸೇವಿಸಿ, ನೀರು ಕುಡಿಯಿರಿ ಮತ್ತು ಒತ್ತಡ ಕಡಿಮೆ ಮಾಡಿ. ರಕ್ತದೊತ್ತಡವನ್ನು ನಿಗದಲ್ಲಿಡಿ.

ಡಿಸೆಂಬರ್‌ ಬಂತೆಂದರೆ ಸಾಕು, ನಮ್ಮ ಪರಿಚಿತರಲ್ಲೇ ಹಲವಾರು ಹಿರಿಯ ನಾಗರಿಕರು ಮರಣವನ್ನಪ್ಪುವುದನ್ನು ನಾವು ಕಾಣುತ್ತೇವೆ. ಹೃದಯದ ಕಾಯಿಲೆ ಹೊಂದಿರುವವರು ಬಹಳ ಬೇಗನೆ ಚಳಿಗಾಲದ ಥಂಡಿಗೆ ಬಲಿಯಾಗುತ್ತಾರೆ. ಇದೇಕೆ ಹೀಗೆ ಮತ್ತು ಇದನ್ನು ತಪ್ಪಿಸುವುದು ಹೇಗೆ? 

ಇತ್ತೀಚೆಗೆ ಒಂದೇ ವಾರದಲ್ಲಿ ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ, ಸಾಲುಮರದ ತುಳಸಿ ಗೌಡ, ತಬಲಾ ಮಾಂತ್ರಿಕ ಝಕೀರ್‌ ಹುಸೇನ್‌ ಮೃತಪಟ್ಟರು. ಇದು ಡಿಸೆಂಬರ್‌ ತಿಂಗಳು. ಚಳಿಗಾಲದ ಚಳಿ ತೀವ್ರವಾಗಿದೆ. ಚಳಿ ಹೆಚ್ಚಿರುವುದು ಮತ್ತು ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುವುದು ಕಾಕತಾಳೀಯವಲ್ಲ. ಹೃದಯದ ಕಾಯಿಲೆ ಇರುವವರಂತೂ ಇನ್ನೂ ಬಹಳ ಎಚ್ಚರವಾಗಿರಬೇಕು. ಹೃದಯದ ಆರೋಗ್ಯಕ್ಕೂ ಚಳಿಗಾಲಕ್ಕೂ ಈ ಕಾಲದಲ್ಲಿ ವಹಿಸಬೇಕಾದ ಎಚ್ಚರಕ್ಕೂ ಇರುವ ಸಂಬಂಧಗಳನ್ನು ಇಲ್ಲಿ ನೋಡೋಣ. 

ಹೃದಯದ ಆರೋಗ್ಯ
ಚಳಿಗಾಲದ ತಿಂಗಳುಗಳಲ್ಲಿ ಶೀತ ಹವಾಮಾನವು ಬೆಚ್ಚಗಾಗಲು ದೇಹದ ಪ್ರಯತ್ನವನ್ನು ಹೆಚ್ಚಿಸುತ್ತದೆ. ಹೃದಯ ಕಾಯಿಲೆ ಹೊಂದಿರುವವರು ಈಗ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಅವರ ಹೃದಯವು ಈಗಾಗಲೇ ಒತ್ತಡದಲ್ಲಿದೆ. ಶೀತ ಹವಾಮಾನ ಹೃದಯ ಬಡಿತ ಅಥವಾ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹೃದಯವು ರಕ್ತವನ್ನು ಪಂಪ್ ಮಾಡಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಚಳಿಯ ವಾತಾವರಣ ಹೃದಯದ ಅಪಧಮನಿಗಳನ್ನು ಕಿರಿದಾಗುವಂತೆ ಮಾಡುತ್ತದೆ. ಹೃದಯಕ್ಕೆ ರಕ್ತದ ಹರಿವನ್ನು ಸೀಮಿತಗೊಳಿಸುತ್ತದೆ. ಕಡಿಮೆ ತಾಪಮಾನದಲ್ಲಿ ಹೃದಯಕ್ಕೆ ರಕ್ತದ ಹರಿವು ಕಡಿಮೆಯಾದಾಗ, ಹೃದಯಕ್ಕೆ ಒತ್ತಡ ಉಂಟುಮಾಡುವ ಹೆಚ್ಚಿನ ಶ್ರಮದ ಕೆಲಸ ಮಾಡಿದರೆ ಹೃದಯಾಘಾತ ಉಂಟಾಗಬಹುದು.

ಚಳಿಯು ಅಧಿಕ ರಕ್ತದೊತ್ತಡ, ವೇಗವಾದ ಹೃದಯ ಬಡಿತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ. ರಕ್ತದ ಪರಿಚಲನೆ ಕಡಿಮೆ ಅಗುವ ಮೂಲಕ ಪಾರ್ಶ್ವವಾಯುವಿನ ಅಪಾಯ ಕೂಡ ಇರುತ್ತದೆ. 

ಏನು ಮಾಡಬೇಕು? 
ಬೆಚ್ಚಗಿನ ಉಡುಗೆ:
ನಿಮ್ಮ ತಲೆ ಮತ್ತು ಕುತ್ತಿಗೆಯನ್ನು ರಕ್ಷಿಸಲು ಟೋಪಿ, ಕೈಗವಸುಗಳು ಮತ್ತು ಸ್ಕಾರ್ಫ್ ಸೇರಿದಂತೆ ಬೆಚ್ಚಗಾಗಲು ಸಾಕಷ್ಟು ಪದರದ ಉಡುಪು ಧರಿಸಿ. 
ಆದರೆ ತುಂಬಾ ಬೆಚ್ಚಗೆ ಅಲ್ಲ: ಹಠಾತ್ ತಾಪಮಾನ ಬದಲಾವಣೆಗಳನ್ನು ತಪ್ಪಿಸಿ. ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಆರಾಮವಾಗಿ ಬೆಚ್ಚಗಾಗಿಸಿ, ಆದರೆ ಹೆಚ್ಚು ಬಿಸಿಯಾಗಬೇಡಿ.
ಹಠಾತ್ ಥಂಡಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ: ಬೆಚ್ಚಗಿನ ಸ್ಥಳದಲ್ಲಿದ್ದವರು ತಕ್ಷಣ ಶೀತಕ್ಕೆ ಹೊರಬೀಳಬೇಡಿ. ನಿಮ್ಮ ದೇಹ ತಾಪಮಾನ ಬದಲಾವಣೆಗೆ ನಿಧಾನವಾಗಿ ಹೊಂದಿಕೊಳ್ಳಲಿ.
ಸಕ್ರಿಯರಾಗಿರಿ: ಹೊರಗೆ ತಂಪಾಗಿದ್ದರೂ ಸಹ, ಸಕ್ರಿಯವಾಗಿರಲು ಪ್ರಯತ್ನಿಸಿ. ಒಳಾಂಗಣ ನಡಿಗೆ, ಯೋಗ, ಅಥವಾ ಲಘುವಾಗಿ ಸ್ಟ್ರೆಚಿಂಗ್‌ನಂತಹ ವ್ಯಾಯಾಮಗಳು ನಿಮ್ಮ ಹೃದಯವನ್ನು ಬಲವಾಗಿ ಇರಿಸಿಕೊಳ್ಳಬಹುದು.
ಹೃದಯಕ್ಕೆ ಆರೋಗ್ಯಕರ ಆಹಾರ ಸೇವಿಸಿ: ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಕೊಬ್ಬಿನಂಥ ಆರೋಗ್ಯಕರ ಆಹಾರ ಸೇವಿಸಿ. ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಹೆಚ್ಚಿನ ಕೊಬ್ಬಿನ ಆಹಾರವನ್ನು ತಪ್ಪಿಸಿ.

ಬೆಳಗ್ಗೆ ಎದ್ದು 15 ನಿಮಿಷ ವಾಕಿಂಗ್ ಮಾಡಿದ್ರೆ ಈ ಸಮಸ್ಯೆಗಳಿಂದ ಬಚಾವ್!

ರಕ್ತದೊತ್ತಡವನ್ನು ಗಮನಿಸಿ: ಶೀತ ವಾತಾವರಣವು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಇದು ಆರೋಗ್ಯಕರ ಮಟ್ಟದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಅದನ್ನು ಟ್ರ್ಯಾಕ್ ಮಾಡಿ.
ಹೈಡ್ರೇಟೆಡ್ ಆಗಿರಿ: ಚಳಿಗಾಲದಲ್ಲಿಯೂ ಸಹ ನೀವು ಸಾಕಷ್ಟು ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ನಿರ್ಜಲೀಕರಣವು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು.
ಒತ್ತಡವನ್ನು ಕಡಿಮೆ ಮಾಡಿ: ಚಳಿಗಾಲದಲ್ಲಿ ರಜಾದಿನಗಳಿರಬಹುದು. ಹಾಗಂತ ಹೆಚ್ಚುವರಿ ಒತ್ತಡದ ಪ್ರವಾಸ, ಅಡ್ವೆಂಚರ್‌ ಬೇಡ. ಆಳವಾದ ಉಸಿರಾಟ, ಧ್ಯಾನ ಅಥವಾ ಇತರ ರಿಲ್ಯಾಕ್ಸಿಂಗ್‌ ಚಟುವಟಿಕೆಗಳ ಮೂಲಕ ವಿಶ್ರಾಂತಿ ಸಮಯ ತೆಗೆದುಕೊಳ್ಳಿ.

ಬಾಳೆಹಣ್ಣು ತಿಂದ ನಂತರ ನೀರು ಕುಡಿಯಬಾರದು ಏಕೆ, ಕುಡಿದರೆ ಏನಾಗುತ್ತೆ?