ವಾಸನೆಯ ಉಸಿರು ಎಂದರೆ ಉಸಿರಾಡಿದಾಗ, ಮಾತನಾಡಲು ಬಾಯಿ ತೆರೆದಾಗ ಹೊಮ್ಮುವ ಕೆಟ್ಟ ನಾತ. ಹಲವು ಬಾರಿ ಈ ಸಮಸ್ಯೆ ಇರುವವರಿಗೆ ತಮ್ಮ ಉಸಿರು ವಾಸನೆ ಎಂಬುದೇ ಗೊತ್ತಿರುವುದಿಲ್ಲ. ಆದರೆ, ಎದುರು ನಿಂತ ವ್ಯಕ್ತಿಗೆ ಇದು ತಕ್ಷಣಕ್ಕೆ ಅನುಭವಕ್ಕೆ ಬರುವುದರಿಂದ ಆತ ಇವರ ಬಗ್ಗೆ ಅಸಹ್ಯ ಪಟ್ಟುಕೊಳ್ಳಬಹುದು ಅಥವಾ ಇವರೊಂದಿಗೆ ಮಾತನಾಡಲು ಹಿಂಜರಿದು ದೂರ ಓಡಬಹುದು. ಇದರಿಂದ ಆತ್ಮವಿಶ್ವಾಸಕ್ಕೆ ಘಾಸಿಯಾಗುತ್ತದೆ. ಸ್ವಚ್ಛತೆಯ ಬಗ್ಗೆ ಎಲ್ಲರೂ ಮಾತನಾಡುವ ಈ ದಿನಗಳಲ್ಲಿ ವಾಸನೆಯ ಉಸಿರನ್ನು ಹೊಂದುವುದು ಉಚಿತವಲ್ಲ. ಹೀಗಾಗಿ, ಉಸಿರನ್ನು ತಾಜಾವಾಗಿಯೂ, ಸ್ವಚ್ಛವಾಗಿಯೂ ಇಟ್ಟುಕೊಳ್ಳುವುದು ಮುಖ್ಯ. ಯಾವಾಗ ಬಾಯಿ ವಾಸನೆ ಬರುತ್ತದೆ, ಅದಕ್ಕಾಗಿ ಏನೆಲ್ಲ ಮಾಡಬಹುದು ನೋಡೋಣ. 

- ಈರುಳ್ಳಿ ಬೆಳ್ಳುಳ್ಳಿ ಸೇವನೆ
ಊಟದೊಂದಿಗೆ ಈರುಳ್ಳಿ, ಬೆಳ್ಳುಳ್ಳಿ, ಉಪ್ಪಿನಕಾಯಿ, ಮಸಾಲೆಯನ್ನು ಸೇವಿಸಿದರೆ, ಅದು ನಮ್ಮ ಬ್ಲಡ್‌ಸ್ಟ್ರೀಮ್‌ಗೆ ಸೇರಿದ ಬಳಿಕ ಶ್ವಾಸಕೋಶಕ್ಕೆ ತಲುಪಿ, ಕೆಟ್ಟ ಉಸಿರಾಗಿ ಹೊರ ಬರುತ್ತದೆ. 

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು 10 ಐಡಿಯಾಗಳು!

ಪರಿಹಾರ:
- ದಿನದ ಸಮಯದಲ್ಲಿ ಅಂಥ ಆಹಾರದಿಂದ ದೂರವಿರಿ.
- ಗ್ರೀನ್ ಟೀಯು ಕೆಟ್ಟ ಉಸಿರನ್ನು ಹೊಮ್ಮಿಸುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಬಲ್ಲದು.
- ಆಗಾಗ ತುಳಸಿ ಹಾಗೂ ಪುದೀನಾ ಎಲೆ ಅಗಿಯುವ ಅಭ್ಯಾಸವು ಉಸಿರಿನ ವಾಸನೆಯಿಂದಾಗುವ ಮುಜುಗರ ತಪ್ಪಿಸಬಹುದು.
- ಶುಂಠಿಯ ಸೇವನೆ ಹೆಚ್ಚಿಸುವ ಮೂಲಕ ವಾಸನೆಯ ಉಸಿರಿನಿಂದ ಬಹುಮಟ್ಟಿಗೆ ದೂರಾಗಬಹುದು. 
- ಊಟದ ಬಳಿಕ ಮೌತ್‌ವಾಶ್‌ ಬಳಸುವ ಅಭ್ಯಾಸ ಒಳ್ಳೆಯದು. 

- ಬಾಯಿ ಶುಚಿತ್ವ ಕೊರತೆ
ಬಾಯಿಯ ಸ್ವಚ್ಛತೆ ಸರಿಯಾಗಿ ಮಾಡಿಕೊಳ್ಳದಿದ್ದರೆ ತಿಂದ ಆಹಾರದ ಸಣ್ಣ ಪುಟ್ಟ ತುಣುಕುಗಳು ಹಲ್ಲಿನಡಿ ಸಿಲುಕಿಕೊಂಡು ಬ್ಯಾಕ್ಟೀರಿಯಾಗಳಿಗೆ ಆಹ್ವಾನ ಕೊಡಬಹುದು. ಇದರಿಂದ ಹಲ್ಲಿನಲ್ಲಿ ಹುಳುಕೂ ಕಾಣಿಸಿಕೊಳ್ಳುತ್ತದೆ. ಕೆಲವರು ಹಲ್ಲನ್ನು ಚೆನ್ನಾಗಿಯೇ ಬ್ರಶ್ ಮಾಡಿದರೂ ನಾಲಿಗೆಯನ್ನು ಸ್ವಚ್ಛಗೊಳಿಸುವುದನ್ನು ಕಡೆಗಣಿಸಿಬಿಡುತ್ತಾರೆ. ಇದನ್ನು ಕೂಡಾ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ವಾಸನೆಯ ಉಸಿರು ಹೊಮ್ಮುತ್ತದೆ. ಅಲ್ಲದೆ, ಹಲವು ಕಾಯಿಲೆಗಲಿಗೂ ಕಾರಣವಾಗುತ್ತದೆ. 

ಪರಿಹಾರ:
- ಸರಿಯಾದ ರೀತಿಯಲ್ಲಿ ದಿನಕ್ಕೆ ಕನಿಷ್ಠ 2 ಬಾರಿ ಬ್ರಶ್ ಮಾಡುವುದು. ಈ ಸಂದರ್ಭದಲ್ಲಿ ನಾಲಿಗೆಯನ್ನು ಸಹಾ ಸ್ವಚ್ಛಗೊಳಿಸುವುದು.
- ಪ್ರತಿ ಊಟ, ತಿಂಡಿಯ ಬಳಿಕ ಮೌತ್‌ವಾಶ್ ಮಾಡಿ. ಕನಿಷ್ಠ ಪಕ್ಷ 30 ಸೆಕೆಂಡ್‌ಗಳ ಕಾಲ ಬಾಯಿ ಮುಕ್ಕಳಿಸಬೇಕು. 
- ಸೇಬು, ಕ್ಯಾರೆಟ್‌ನಂಥ ಗಟ್ಟಿಯಾದ ಹಣ್ಣುತರಕಾರಿಗಳು ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು. ಅವು ವಸಡನ್ನು ಸ್ವಚ್ಛಗೊಳಿಸಬಲ್ಲವು. ಹಲ್ಲುಹುಳುಕನ್ನೂ ಕಡಿಮೆ ಮಾಡುತ್ತವೆ. ಜೊತೆಗೆ ಆಗಾಗ ಇವನ್ನು ತಿನ್ನುವುದರಿಂದ ಬಾಯಿಯಲ್ಲಿ ಎಂಜಲಿನ ಚಲನೆ ಹೆಚ್ಚಾಗುತ್ತದೆ. ಹೀಗಾದಾಗ ಬಾಯಿವಾಸನೆ ಕಡಿಮೆಯಾಗುತ್ತದೆ. 
- ವರ್ಷಕ್ಕೊಮ್ಮೆ ದಂತವೈದ್ಯರ ಬಳಿ ಹೋಗಿ ಹಲ್ಲುಗಳು ಹಾಗೂ ವಸಡುಗಳನ್ನು ಸ್ವಚ್ಛಗೊಳಿಸಿಕೊಂಡು ಬರುವ ಅಭ್ಯಾಸ.

- ಒಣಬಾಯಿ
ಎಂಜಲು ಬಾಯಿಯ ಸ್ವಚ್ಛತೆ ವಿಷಯದಲ್ಲಿ ಪ್ರಮುಖವಾದುದು. ಹೆಚ್ಚು ಹೊತ್ತು ಎಂಜಲು ಒಳಗೆ ಆಡದೆ, ಬಾಯಿಯಲ್ಲೇ ಉಳಿದರೆ ಅದರಿಂದ ಬಾಯಿ ವಾಸನೆ ಬರುತ್ತದೆ. ಇದೇ ಕಾರಣಕ್ಕೆ ಹೆಚ್ಚು ಹೊತ್ತು ಮಾತನಾಡದೆ ಉಳಿದಾಗ, ನಿದ್ರಿಸಿ ಎದ್ದಾಗ ಬಾಯಿ ವಾಸನೆ ಬರುವುದು. ಅದರಲ್ಲೂ ಬಾಯಿ ಕಳೆದು ನಿದ್ರಿಸುವ ಅಭ್ಯಾಸವಿದ್ದರೆ ಬಾಯಿ ಮತ್ತಷ್ಟು ಒಣವಾಗುತ್ತದೆ. 

ಪರಿಹಾರ:
- ಪದೇ ಪದೆ ನೀರು ಕುಡಿಯುತ್ತಿರುವುದು ಹಾಗೂ ಚ್ಯೂಯಿಂಗ್ ಗಮ್ ಅಗಿಯುವ ಅಭ್ಯಾಸ ಡ್ರೈ ಮೌತ್‌ನಿಂದ ಮುಕ್ತರಾಗಲು ಸಹಾಯ ಮಾಡುತ್ತದೆ. ನಂತರವೂ ಒಣಬಾಯಿಯ ಸಮಸ್ಯೆಯಿದ್ದರೆ ವೈದ್ಯರನ್ನು ಕಾಣಬೇಕು. 

- ಸೋಂಕು
ಹಲ್ಲುಗಳು, ವಸಡು, ಮೂಗು, ಗಂಟಲುಗಳಲ್ಲಿ ಇನ್ಫೆಕ್ಷನ್ ಆಗಿದ್ದರೆ ಆಗ ಕೂಡಾ ಬಾಯಿ ವಾಸನೆ ಬರುತ್ತದೆ. ಹಲ್ಲುಗಳು ಹುಳುಕಾಗಿದ್ದಾಗ, ವಸಡಿನ ಕಾಯಿಲೆಗಳಿದ್ದಾಗ, ಬಾಯಿಹುಣ್ಣಾದಾಗ, ಓರಲ್ ಸರ್ಜರಿಯ ಬಳಿಕ, ಸೈನಸ್ ಇದ್ದರೆ, ಗಂಟಲು ಹಾಗೂ ಮೂಗಿನಲ್ಲಿ ಇತರೆ ರೀತಿಯ ಸಮಸ್ಯೆಗಳಿದ್ದಾಗಲೂ ವಾಸನೆಯ ಉಸಿರು ಹೊಮ್ಮಬಹುದು. 

ಫರ್ಟಿಲಿಟಿ ಹೆಚ್ಚಿಸೋ ಫುಡ್ಸ್... ಮಗು ಬೇಕೆಂದ್ರೆ ಆಹಾರಕ್ಕೆ ಗಮನ ಹರಿಸ ...

ಪರಿಹಾರ:
- ವೈದ್ಯರನ್ನು ಭೇಟಿಯಾಗಲೇಬೇಕು. 

ಇವಿಷ್ಟೇ ಅಲ್ಲದೆ, ಪ್ರಗ್ನೆನ್ಸಿ, ಕ್ಯಾನ್ಸರ್, ಮೆಟಾಬಾಲಿಕ್ ಸಮಸ್ಯೆಗಳು, ಹೊಟ್ಟೆಯ ಆ್ಯಸಿಡ್‌ಗಳ ಕ್ರೋನಿಕ್ ರಿಫ್ಲಕ್ಸ್ ಇದ್ದಾಗ ಕೂಡಾ ಕೆಟ್ಟ ಉಸಿರಿನ ಸಮಸ್ಯೆ ಕಾಣಿಸಿಕೊಳ್ಳಬಹುದು. 

ಪರಿಹಾರ: ಯಾವ ಸಮಸ್ಯೆ ಇದೆಯೋ ಅದನ್ನು ಪರಿಹರಿಸಿಕೊಳ್ಳುವತ್ತ ಗಮನ ಹರಿಸಬೇಕು.