ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು 10 ಐಡಿಯಾಗಳು!
ಕೊರೋನಾ ವೈರಸ್ ನಮ್ಮನ್ನು ಗೆಲ್ಲುವ ಮುನ್ನ ನಾವೇ ಅದನ್ನು ಎದುರಿಸಲು ಅಣಿಯಾಗಬೇಕು. ಅದಕ್ಕಿರುವ ಸದ್ಯದ ಒಂದು ಮಾರ್ಗವೆಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಒಂದಷ್ಟುಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಅವುಗಳೆಂದರೆ:
1. ರೋಗನಿರೋಧಕ ಶಕ್ತಿ ಹೆಚ್ಚಿಸುವ ತುಳಸಿ, ಅರಶಿನ, ಜೀರಿಗೆ, ಶುಂಠಿ, ದೊಡ್ಡಪತ್ರೆ ಮುಂತಾದ ಸಾಂಬಾರಪದಾರ್ಥಗಳನ್ನು ಆಹಾರದಲ್ಲಿ ಬಳಸುವುದು.
2. ದೇಹಕ್ಕೆ ಅಗತ್ಯವಿರುವ ಪ್ರೊಟೀನ್ ಪೂರೈಕೆಗೆ ವಿವಿಧ ಬೇಳೆಗಳನ್ನು, ತೊಗರಿ, ಹೆಸರು, ಕಡ್ಲೆ ಮುಂತಾದವುಗಳನ್ನು ಹುರಿದು ಅಥವಾ ನೀರಿನಲ್ಲಿ ನೆನೆಸಿ ಅನಂತರ ಬೇಯಿಸಿ ಅಥವಾ ಕೋಸಂಬರಿಯ ರೂಪದಲ್ಲಿ ಬಳಸುವುದು.
3. ದೇಹದ ಶಕ್ತಿಯನ್ನು ಹೆಚ್ಚಿಸುವ ಪೌಷ್ಟಿಕಾಂಶಗಳುಳ್ಳ ವಿವಿಧ ಹಣ್ಣು, ತರಕಾರಿಗಳನ್ನು ಸೇವಿಸುವುದು. ಆಯಾ ಕಾಲದಲ್ಲಿ ಹಾಗೂ ಪ್ರದೇಶದಲ್ಲಿ ಬೆಳೆಯುವ ಹಣ್ಣು ತರಕಾರಿಗಳನ್ನೇ ಸೇವಿಸುವುದಕ್ಕೆ ಆದ್ಯತೆ ನೀಡುವುದು.
4. ಅಕ್ಕಿಯನ್ನು ಆಹಾರದ ಮುಖ್ಯ ಧಾನ್ಯವಾಗಿಯೂ ರಾಗಿ, ಜೋಳ, ಗೋಧಿಗಳನ್ನು ಆಗಾಗ ಬಳಸಿಕೊಳ್ಳುವ ಅಭ್ಯಾಸವನ್ನು ಮಾಡಬೇಕು. ರಾಗಿ ಅಥವಾ ಜೋಳ ನಿಮ್ಮ ಮುಖ್ಯ ಆಹಾರ ಧಾನ್ಯವಾಗಿದ್ದರೆ ಅದನ್ನೇ ಹೆಚ್ಚು ಬಳಸಬಹುದು.
ಕೊರೋನಾ ವಾರಿಯರ್ಸ್ ಆಯುರ್ವೇದ ಕಿಟ್ ವಿತರಿಸಿದ ಗಿರಿಧರ್ ಕಜೆ!
5. ದೇಹಕ್ಕೆ ಅಗತ್ಯವಾದ ಕೊಬ್ಬಿನ ಅಂಶವನ್ನು ರಿಫೈನ್ ಮಾಡದ ಎಣ್ಣೆ ಅಥವಾ ತುಪ್ಪ, ಬೆಣ್ಣೆಗಳಿಂದ ಪಡೆಯುವುದು.
6. ಕುಡಿಯಲು ಕುದಿಸಿ ಆರಿಸಿದ ಹಾಗೂ ಬೆಚ್ಚಗಿನ ನೀರನ್ನೇ ಬಳಸುವುದು. ಹಾಲು, ಮೊಸರಿನ ಬಳಕೆಯನ್ನು ನಿಯಮಿತವಾಗಿ ಮಾಡುವುದು.
7. ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಡಿ ಟು ಈಟ್ ಆಹಾರ ವಸ್ತುಗಳ ಬಳಕೆಯನ್ನು ಸಾಧ್ಯವಾದಷ್ಟೂಕಡಿಮೆಗೊಳಿಸುವುದು.
8. ನಡುಗೆ, ಜಾಗಿಂಗ್ ಅಥವಾ ಓಟದ ಜೊತೆಗೆ ಯೋಗ-ಧ್ಯಾನ ಮಾಡುವುದು.
9. ಸೂರ್ಯನಮಸ್ಕಾರ, ತ್ರಿಕೋನಾಸನ, ಅರ್ಧಚಕ್ರಾಸನ, ಪಾಶ್ರ್ವಕೋನಾಸನ, ಸೇತುಬಂಧಾಸನ, ಭುಜಂಗಾಸನ, ಧನುರಾಸನ, ಪದ್ಮಾಸನ ಮುಂತಾದವುಗಳ ಅಭ್ಯಾಸ ಒಳ್ಳೆಯದು. ಇವೆಲ್ಲವನ್ನೂ ನಿಧಾನವಾದ ಉಸಿರಾಟದೊಂದಿಗೆ ಅಭ್ಯಾಸ ಮಾಡುವುದು ಕೂಡ ಬಹುಮುಖ್ಯ. ಪ್ರಾಣಾಯಾಮಗಳಲ್ಲಿ ನಾಡಿಶುದ್ಧಿಯ ಅಭ್ಯಾಸ ಮುಖ್ಯವಾದುದು. ಜೊತೆಗೇ ಕ್ರಿಮಿಹರವಾದ ಸೂರ್ಯಭೇದನ, ಭಸ್ತಿ್ರಕಾ ಅಭ್ಯಾಸಗಳನ್ನು ನಿಯಮಿತವಾಗಿ ಮಾಡುವುದು ಒಳಿತು. ಇವುಗಳಲ್ಲದೇ ಷಟ್ಕಿ್ರಯೆಗಳಲ್ಲಿ ವಮನ ಹಾಗೂ ಕಪಾಲಭಾತಿಗಳ ಅಭ್ಯಾಸವೂ ಹಿತ. ಇತರ ವ್ಯಾಯಾಮಗಳನ್ನು ಕೂಡ ದಿನಕ್ಕೆ ಒಂದು ಗಂಟೆಯಂತೆ ಅಭ್ಯಾಸ ಮಾಡುವುದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ, ಮನಸ್ಸಿಗೆ ಉತ್ಸಾಹವನ್ನು ತುಂಬುತ್ತದೆ.
ಇಮ್ಯುನಿಟಿ ಹೆಚ್ಚಿಸಲು ಮೂರು ಸರಳ ಯೋಗಾಸನ!
10. ಇದೆಲ್ಲದರೊಂದಿಗೆ ಅನಾರೋಗ್ಯದಿಂದ ನಮ್ಮನ್ನು ಕಾಪಾಡಲು ಅಗತ್ಯವಾದುದು ಮನಸ್ಸಿನ ಆರೋಗ್ಯ. ಮಾನಸಿಕ ಒತ್ತಡಗಳನ್ನು ದೂರವಿಡುವ ಹವ್ಯಾಸಗಳನ್ನು ಅದು ಓದು ಇರಬಹುದು, ಕಲೆ ಇರಬಹುದು, ಯಾವುದೇ ಮನೋರಂಜನೆ ಇರಬಹುದು ನಾವು ಅಳವಡಿಸಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯ. ಅದಕ್ಕಾಗಿ ದಿನಕ್ಕೆ ಒಂದಷ್ಟುಹೊತ್ತು ಧ್ಯಾನದ ಮೊರೆಹೋಗುವುದು ಕೂಡ ಉತ್ತಮ ಮಾರ್ಗ. ಮನಸ್ಸು ಉತ್ಸಾಹಪೂರ್ಣವಾಗಿದ್ದರೆ ದೇಹವನ್ನು ಆಕ್ರಮಿಸುವ ರೋಗವನ್ನು ಹಿಮ್ಮೆಟ್ಟಿಸಬಹುದು. ಆದರೆ ಮನಸ್ಸು ಕೊರಗುತ್ತಿದ್ದರೆ ದೇಹವನ್ನೂ ಬದುಕನ್ನೂ ಸೊರಗಿಸಲು ಯಾವ ರೋಗವೂ ಬರಬೇಕಾಗಿಲ್ಲ. ಉತ್ತಮ ಔಷಧಿ ಗುಣಗಳುಳ್ಳ ಆಹಾರವನ್ನು ಸೇವಿಸಿ, ಚೆನ್ನಾಗಿ ವ್ಯಾಯಾಮ ಹಾಗೂ ನಿದ್ದೆಯನ್ನು ಮಾಡುವ ಮೂಲಕ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಇಮ್ಮಡಿಸಿಕೊಳ್ಳೋಣ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ಎಚ್ಚರಿಕೆ ಇರಲಿ.