-ವಿಭಾ ಡೋಂಗ್ರೆ

ದೇಶವು ಲಾಕ್‌ಡೌನ್‌ ಎಂದು ಸ್ತಬ್ಧಗೊಂಡ ದಿನದಿಂದ, ಕೌಟುಂಬಿಕ ಹಿಂಸೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯದ ದೂರುಗಳು ಗಣನೀಯವಾಗಿ ಹೆಚ್ಚಿದೆ ಎಂಬ ಆಘಾತಕಾರಿ ಅಂಶವು ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ದಿನದಿನವೂ ಕರೆಗಳು ಹೆಚ್ಚುತ್ತಿವೆ ಎಂದು ಇತ್ತೀಚಿನ ವರದಿಗಳು ತಿಳಿಸುತ್ತಿವೆ.

ಈ ಸಂದರ್ಭದಲ್ಲಿ ಸಾರ್ವಜನಿಕ ಜವಾಬ್ದಾರಿಯೂ ಮಹತ್ತರ ಪಾತ್ರ ವಹಿಸುತ್ತದೆ. ಜನರು ತಮ್ಮ ನೆರೆಹೊರೆಯಲ್ಲಿ ಇಂಥಾ ಸಮಸ್ಯೆಗಳು ಇವೆ ಎಂದು ತಿಳಿದಾಕ್ಷಣ, ಮಾತನಾಡಿ ಪರಿಹರಿಸುವ, ಭಾವನಾತ್ಮಕ ಬೆಂಬಲ ನೀಡುವ, ಇಲ್ಲವೇ ಸಹಾಯವಾಣಿಗೆ ತಿಳಿಸುವ ಪ್ರಯತ್ನ ಮಾಡಬೇಕು. - ಡಾ. ಸಂಧ್ಯಾಕಾವೇರಿ, ಆಪ್ತ ಸಮಾಲೋಚಕರು.

ಕೌಟುಂಬಿಕ ಹಿಂಸೆ, ಖಂಡಿತವಾಗಿಯೂ ಸಹಿಸಿಕೊಳ್ಳುವ ವಿಚಾರವಲ್ಲ. ಇದು ವ್ಯಕ್ತಿ, ಕುಟುಂಬ ಮತ್ತು ಸಮಾಜ.. ಹೀಗೆ ಮೂರು ಹಂತಗಳಲ್ಲಿ ಸ್ವಾಸ್ಥ್ಯ ಹದಗೆಡಿಸುತ್ತದೆ. ಈ ಸಂದರ್ಭದಲ್ಲಿ ಬೆಳೆಸಿಕೊಳ್ಳುವ ಹಗೆತನಗಳೂ ಅಥವಾ ಎಸಗುವ ದೌರ್ಜನ್ಯ ಕೃತ್ಯಗಳು ಬೇರಾವುದೋ ದುರಂತ ತಂದೊಡ್ಡುವ ಅಪಾಯವಿದೆ.

ಮಕ್ಕಳ ಕಿರಿಕಿರಿಗೆ ಹಿಂಸೆ ಅಸ್ತ್ರ

- ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅನಾಥಾಲಯಗಳ ಮಕ್ಕಳನ್ನು ಅವರ ಪಾಲಕರ (ಕೇರ್‌ ಟೇಕರ್‌ ಗಳ) ಹತ್ತಿರ ಬಿಡಲಾಗಿದೆ. ಹಾಸ್ಟೆಲ್‌ ಮಕ್ಕಳು ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶನದಂತೆ ಅಲ್ಪಾವಧಿ ವೀಕ್ಷಣೆಯಲ್ಲಿದ್ದ ಮಕ್ಕಳನ್ನು ಊರಿಗೆ ಕಳುಹಿಸಲಾಗಿದೆ. ಹೀಗೆ ಹೋದ ಮಕ್ಕಳನ್ನು ಹೆಚ್ಚಿನ ಪಾಲಕರು ಹೊರೆ ಎಂದೇ ಭಾವಿಸಿದ್ದಾರೆ. ಇದರಲ್ಲಿ ಬಹುತೇಕ ಮಕ್ಕಳು ಹೆಚ್ಚುವರಿ ಜವಾಬ್ದಾರಿ, ಹೊರೆ ಎಂಬ ಭಾವನೆ ಪಾಲಕರಲ್ಲಿ ಮೂಡಿದೆ. ಮತ್ತು ಬಹುತೇಕ ಸಂದರ್ಭಗಳಲ್ಲಿ ಈ ಹತಾಶಾ ಭಾವನೆಯು ಮನೆಯಲ್ಲಿರುವ ಪರಿಚಯಸ್ಥ ವ್ಯಕ್ತಿಗಳಿಂದಲೇ ಶೋಷಣೆಯ ಮೂಲಕ ಹೊರಬರುತ್ತಿದೆ.

ನೀವೂ ಹೀಗ್ ಮಾಡ್ತೀರಾ? ಹೆಚ್ಚಿನ ಪೋಷಕರ ಕೆಟ್ಟ ಚಾಳಿ ಇದು

ಮಕ್ಕಳಲ್ಲಿಯೂ ಶಾಲೆಯಿಲ್ಲದೆ, ಸ್ನೇಹಿತರ ಬಳಗವಿಲ್ಲದೆ, ಪರೀಕ್ಷೆಯ ಬಗ್ಗೆ ಸ್ಪಷ್ಟತೆಯಿಲ್ಲದೆ ಭಾವನಾತ್ಮಕ ಗೊಂದಲಗಳಿರುತ್ತವೆ. ಈ ಸಂದರ್ಭದಲ್ಲಿ ಮಕ್ಕಳು ರಚ್ಚೆ ಹಿಡಿಯುವುದು, ಕಿರಿಕಿರಿ ಮಾಡುವುದು ಸಾಮಾನ್ಯ. ಇದನ್ನು ನಿರ್ವಹಿಸಲು ಸಮಾನವಾಗಿ ಮನೋಹತಾಶ ಸ್ಥಿತಿಯಲ್ಲಿರುವ ಪಾಲಕರು ಹಿಂಸೆಯನ್ನು ಅಸ್ತ್ರವನ್ನಾಗಿಸಿಕೊಳ್ಳುತ್ತಾರೆ.

ಕೌಂಟುಂಬಿಕ ಹಿಂಸೆ

- ವ್ಯಸನಿಗಳಿಗೆ ಸರಿಯಾದ ಸರಕುಗಳು ಸಿಗದಿರುವ ಕಾರಣ ಕೌಟುಂಬಿಕ ಹಿಂಸೆ ಪ್ರಕರಣಗಳು ಹೆಚ್ಚುತ್ತಿವೆ ಎನ್ನಬಹುದು. ಅವರ ಸಂಪೂರ್ಣ ಆಶಾಭಂಗದ ಪರಿಣಾಮವನ್ನು ಕುಟುಂಬ ಎದುರಿಸುತ್ತಿದೆ.

- ಹಲವರಲ್ಲಿ ಕೆಲಸ ಕಳೆದುಕೊಳ್ಳುವ ಭಯ, ಆರ್ಥಿಕ ಅಭದ್ರತೆಯ ಭೀತಿಯು ಮನೋಸ್ಥಿಮಿತವನ್ನು ಹದಗೆಡಿಸುತ್ತದೆ. ಈ ದವಡೆಗೆ ಮತ್ತೆ ಕುಟುಂಬವೇ ತುತ್ತು. ಮನೆಯಲ್ಲಿರುವವರ ಮೇಲೆ ಹರಿಹಾಯುವುದು, ಹೆಂಡತಿ ಮಕ್ಕಳಿಗೆ ಹೊಡೆಯುವುದು ಜಾಸ್ತಿಯಾಗುತ್ತದೆ.

ಅಂತರ್ಮುಖಿ ಮಗುವಿನ ಪೋಷಕರಿಗಿಷ್ಟು ಟಿಪ್ಸ್

- ಹಲವು ಕುಟುಂಬಗಳು ಕೇವಲ ಮದುವೆಯಾಗಿದ್ದೇವೆ, ಸಾಮಾಜಿಕ ಕಟ್ಟಳೆ ಎಂದು ಜೊತೆಗಿದ್ದಾರೆ ಹೊರತು ಆತ್ಮತೃಪ್ತಿಯಿಂದಲ್ಲ. ಹಳೆ ಹಳೆಯ ಅಸಮಾಧಾನದ ವಿಚಾರಗಳ ಮಂಡನೆಗೆ ಈಗ ಮತ್ತೆ ವೇದಿಕೆ ಸಿಕ್ಕಂತಾಗಿದೆ.

ಪರಿಹಾರ ಹೇಗೆ?

- ಈಗ ಮನೆಯಲ್ಲಿರುವ ಮಕ್ಕಳಿಗೆ ಮಾತನಾಡಲು ಹೆಚ್ಚು ಉತ್ತೇಜನ ನೀಡಬೇಕು. ಸ್ನೇಹಿತರ ಹತ್ತಿರ, ಶಿಕ್ಷಕರ ಹತ್ತಿರ ಫೋನಿನಲ್ಲಿ ಮಾತನಾಡಲು ಬಿಟ್ಟಾಗ ಮಕ್ಕಳು ಆದಷ್ಟುನಿರಾಳವಾಗುತ್ತಾರೆ ಹಾಗೂ ಚೈತನ್ಯ ತುಂಬಿಕೊಳ್ಳುತ್ತಾರೆ. (ಇವರು ತಮಗೆ ಲೈಂಗಿಕ ದೌರ್ಜನ್ಯವಾಗುತ್ತಿರುವ ಪಕ್ಷದಲ್ಲಿ ಅದನ್ನೂ ವ್ಯಕ್ತಪಡಿಸಬಹುದು).

- ಈಗ ಮನೆಯಲ್ಲಿರುವ ಹಿರಿಯರ ಜವಾಬ್ದಾರಿ ಗುರುತರವಾದುದು. ಇಡೀ ದಿನ ಮಕ್ಕಳನ್ನು ಆಟ, ಕತೆ, ಚರ್ಚೆಗಳಲ್ಲಿ ಬಿಡುವಿಲ್ಲದಂತೆ ತೊಡಗಿಸಬೇಕು. ಜೊತೆಗೆ ಮನೆಯಲ್ಲಿನ ದೊಡ್ಡವರೂ ಇದರ ಭಾಗವಾದರೆ ಅವರಲ್ಲಿನ ಒತ್ತಡವೂ ಕಡಿಮೆಯಾಗುತ್ತದೆ.

- ಆದಷ್ಟುಮಕ್ಕಳ ಆತ್ಮವಿಶ್ವಾಸ ಬೆಳೆಸುವ ಕೆಲಸ ನಡೆಯಬೇಕು. ಯಾವುದಾದರೂ ಕಲೆಯನ್ನು ಅಭ್ಯಸಿಸಲು ಹಚ್ಚುವುದು ದಿನದಿನ ಅದನ್ನು ಪ್ರಶಂಸಿಸುವುದು ಹೀಗೆ.

- ಮನೆಯಲ್ಲಿರುವವರು ಸುದ್ದಿ ತಿಳಿಯುವ ಬಗ್ಗೆ ಕಠಿಣ ದಿನಚರಿ ಮಾಡಿಕೊಳ್ಳಬೇಕು. ನಿಮಿಷ ನಿಮಿಷವೂ ಕೊರೋನಾ ಆತಂಕ ಹೆಚ್ಚಿಸುವ ಸುದ್ದಿಗಳು ಹಬ್ಬುವಾಗ ಎಲ್ಲವನ್ನೂ ಓದಿ ಒತ್ತಡಗಳಿಗೆ ಒಳಗಾಗುತ್ತಿರುವವರೂ ಹೆಚ್ಚು. ಆದಷ್ಟುಅನಗತ್ಯ ಮಾಹಿತಿಗಳಿಂದ, ಸುದ್ದಿಗಳಿಂದ ದೂರ ಉಳಿಯುವುದೇ ಒಳಿತು.

- ಈಗಿರುವ ಸಮಯವನ್ನು ನಮಗೆ ಆಸಕ್ತಿ ಇರುವ ಕೆಲಸಗಳಿಗೆ ಹಾಗೂ ಹೊಸದನ್ನು ಕಲಿಯುವೆಡೆಗೆ, ಎಷ್ಟೋ ವರ್ಷಗಳಿಂದ ಮಾತನಾಡದ ಸ್ನೇಹಿತ, ಸಂಬಂಧಿಕರೊಂದಿಗೆ ಮತ್ತೆ ಸಂಪರ್ಕ ಬೆಳೆಸಲು ಬಳಸಿಕೊಳ್ಳಬೇಕು.

- ಕೋಪವನ್ನು ನಿರ್ವಹಿಸುವ ತಂತ್ರಗಳನ್ನು ರೂಢಿಸಿಕೊಳ್ಳುವುದು, ಉದಾ : ಸಂಘರ್ಷ ಎದುರಾಗುವ ಸಂದರ್ಭದಲ್ಲಿ ಮೌನ ತಳೆಯುವುದು, ಅಥವಾ ಆ ಜಾಗದಿಂದ ಎದ್ದು ಹೋಗುವುಚು, ಧ್ಯಾನ ಕೂಡ ಸಹಕಾರಿ.

- ಆಪ್ತ ಸಮಾಲೋಚಕರು, ಸಹಾಯವಾಣಿಗಳು ಖಂಡಿತವಾಗಿ ಈ ದಿಸೆಯಲ್ಲಿ ಪರಿಹಾರ ನೀಡಬಲ್ಲವು.

ಕೌಟುಂಬಿಕ ಹಿಂಸೆಯ ಬಗೆಗಿರುವ ದೃಷ್ಟಿಕೋನವೇ ಬದಲಾಗಬೇಕಿದೆ. ನಾವು ನಮ್ಮ ಬಗೆಗಿನ ಆತ್ಮವಿಶ್ವಾಸ ಬೆಳೆಸಿಕೊಳ್ಳದ ಹೊರತು ಈ ಹಿಂಸೆಯನ್ನು ಅನುಭವಿಸುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಮೊದಲಿಗೆ ಕುಟುಂಬದವರು ದೌರ್ಜನ್ಯವನ್ನು ಸಹಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಇದನ್ನು ಮನೋಸ್ಥೈರ್ಯದೊಂದಿಗೆ ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು. - ಡಾ ಪ್ರೀತಿ ಪೈ, ಮನೋವೈದ್ಯೆ, ಮಾನಸ ನರ್ಸಿಂಗ್‌ ಹೋಂ, ಶಿವಮೊಗ್ಗ