ಜಗತ್ತಿನ ಎಲ್ಲ ಪೋಷಕರು ಒಪ್ಪಿಕೊಳ್ಳುವ ಒಂದು ವಿಷಯವಿದ್ದರೆ, ಅದು ಮಕ್ಕಳನ್ನು ಬೆಳೆಸುವುದು ಮಕ್ಕಳಾಟವಲ್ಲ ಎಂಬುದು. ಮಕ್ಕಳನ್ನು ಬೆಳೆಸುವ ಯಾವುದೇ ಸಿದ್ಧ ಮಾದರಿ ಇಲ್ಲ ನಿಜ. ಒಬ್ಬೊಬ್ಬರೂ ಪೇರೆಂಟಿಂಗ್ ವಿಷಯಕ್ಕೆ ಬಂದರೆ ತಮ್ಮದೇ ಆದ ವ್ಯಾಖ್ಯಾನ ಹೊಂದಿರುತ್ತಾರೆ. ಸಾಮಾನ್ಯವಾಗಿ ತಮ್ಮ ಪೋಷಕರು ತಮ್ಮನ್ನು ಬೆಳೆಸುವಾಗ ಮಾಡಿದ ಸರಿಯೇನು, ತಪ್ಪೇನು ಎಂಬ ತಿಳಿವಳಿಕೆಯ ಆಧಾರದಲ್ಲಿ ಮಕ್ಕಳನ್ನು ಬೆಳೆಸುವವರು ಎಲ್ಲರೂ. ಹಾಗಿದ್ದೂ, ಬಹುತೇಕ ಪೋಷಕರು ತಮಗೆ ಅರಿವಿಲ್ಲದೆಯೇ, ಉದ್ದೇಶಪೂರ್ವಕವಾಗಿ ಅಲ್ಲದೆ  ಮಕ್ಕಳಿಗೆ ನೋವು ಮಾಡುತ್ತಿರುತ್ತಾರೆ. 

ಎಷ್ಟೇ ಮಕ್ಕಳನ್ನು ನೋಯಿಸಬಾರದೆಂದುಕೊಂಡರೂ ಅವರನ್ನು ಬೆಳೆಸುವ ಹಾದಿಯಲ್ಲಿ ಆಗಾಗ ಅವರಿಗೆ ಗಾಯಗಳಾಗುತ್ತಿರುತ್ತವೆ. ಮನೆಯಲ್ಲಿ ಆರೋಗ್ಯಕರವಾದ ಹಾಗೂ ಸಮಸ್ಯೆಗಳನ್ನು ಗುಣಪಡಿಸುವಂಥ ವಾತಾವರಣ ಸೃಷ್ಟಿಸಿಕೊಡುವುದು ಬಹಳ ಮುಖ್ಯ. ಅಷ್ಟೇ ಮುಖ್ಯವಾದುದು, ನಾವು ಮಕ್ಕಳ ಮನಸ್ಸಿಗೆ ನೋವು ಮಾಡದೇ, ಅವರಿಗೆ ಒತ್ತಡ ಹಾಕದೇ ಬೆಳೆಸುವುದು. ಈ ಬಗ್ಗೆ ನೀವೆಷ್ಟೇ ಜಾಗರೂಕತೆ ವಹಿಸಿದರೂ ಆಗಾಗ ಈ ಟಾಕ್ಸಿಕ್ ಗುಣಗಳು ಪೋಷಕರ ಬತ್ತಳಿಕೆಯಿಂದ ಹೊರ ಹಾರುತ್ತವೆ. 

ಆಕೆ / ಆತನನ್ನು ನೋಡಿದರೆ ಮಾತ್ರ ಹೃದಯ ಕುಣಿಯುವುದೇಕೆ?

ಅನಗತ್ಯ ಹೋಲಿಕೆ
ತಮ್ಮ ಮಗುವಿನಷ್ಟು ವಿಶೇಷವಾದ, ಬುದ್ದಿವಂತ ಮಗು ಮತ್ತೊಂದಿಲ್ಲ ಎಂದು ಬಹುತೇಕ ಎಲ್ಲ ಪೋಷಕರಿಗೂ ಅನಿಸುತ್ತದೆ. ಆದರೆ, ಶಾಲೆಗೆ ಕಳುಹಿಸುತ್ತಿದ್ದಂತೆ ಬೇರೆ ಮಗು ಸದಾ ತಮ್ಮ ಮಗುವಿಗಿಂತ ಮುಂದಿರುವುದು ತಿಳಿಯತೊಡಗುತ್ತದೆ. ಇದನ್ನು ಯಾವ ಪೋಷಕರಿಗೂ ಜೀರ್ಣಿಸಿಕೊಳ್ಳುವುದು ಕಷ್ಟವೇ. ಅವರು ಈ ಬಗ್ಗೆ ಚಿಂತಿಸತೊಡಗುತ್ತಾರೆ. ಈ ಚಿಂತೆ ಹೋಲಿಕೆಯ ರೂಪದಲ್ಲಿ ಮಕ್ಕಳ ಮೇಲೆ ಒತ್ತಡ ಹಾಕಲಾರಂಭಿಸುತ್ತದೆ, ಅವರನ್ನು ಕೀಳರಿಮೆಗೆ ತಳ್ಳಲಾರಂಭಿಸುತ್ತದೆ. ಹಾಗಾಗಿ, ಪೋಷಕರು ತಿಳಿದುಕೊಳ್ಳಬೇಕಾದದ್ದೇನೆಂದರೆ, ನೀವು ದೊಡ್ಡ ಉದ್ಯಮಿಯೇ ಆಗಿರಬಹುದು, ಪ್ರಕಾಂಡ ಪಂಡಿತರೇ ಆಗಿರಬಹುದು- ಈಗ ಶಾಲೆಯಲ್ಲಿ ಮಗು ಓದಬೇಕಾಗಿರುವುದು ನಿಮ್ಮ ಪರವಲ್ಲ, ಅದು ನಿಮ್ಮ ಸ್ಪರ್ಧೆಯಲ್ಲ. ಇಷ್ಟಕಕ್ಕೂ ಶಾಲೆಯ ಗ್ರೇಡ್‌ಗಳು ಮಗುವಿನ ಬುದ್ಧಿವಂತಿಕೆಯ ಮಾನದಂಡವೂ ಅಲ್ಲ. ಅವರನ್ನು ಅವರ ಪಾಡಿಗೆ ಬೆಳೆಯಲು ಬಿಡಿ. 
ಇದೇ ಹೋಲಿಕೆ ಮಕ್ಕಳ ಒಡಹುಟ್ಟಿದವರೊಡನೆ ಮಾಡುವುದರಿಂದ ಅವರ ನಡುವೆ ದ್ವೇಷ ಬೆಳೆವ ಸಂಭವವೂ ಇದೆ. ಜೊತೆಗೆ, ಆತ್ಮವಿಶ್ವಾಸಕ್ಕೆ ಪೋಷಕರೇ ಕೊಡುವ ಕೊಡಲಿ ಏಟು ಇದಾಗಿದೆ. 

ಲಿಂಗಬೇಧ ಬೆಳೆಸುವುದು
ಮನೆಯಲ್ಲಿ ಮಗಳಿಗೆ ಪಾತ್ರೆ ತೊಳೆಸುವುದು, ಆದರೆ ಮಗ ಅದನ್ನು ಸಿಂಕ್‌ನಲ್ಲಿಟ್ಟರೆ ಸಾಕು ಎಂಬಂತೆ ನಡೆಸಿಕೊಳ್ಳುವುದರಿಂದ ಮಕ್ಕಳ ಮನಸ್ಸಿನಲ್ಲಿ ಲಿಂಗಾದಾರಿತವಾದ ದೊಡ್ಡ ಕಂದರವೊಂದನ್ನು ಸೃಷ್ಟಿಸಿಕೊಡುತ್ತಿರುತ್ತೀರಿ. ಗಂಡು ಹಾಗೂ ಹೆಣ್ಣು ಮಕ್ಕಳನ್ನು ಒಂದೇ ರೀತಿ ನಡೆಸಿಕೊಳ್ಳಿ. ಇಷ್ಟಕ್ಕೂ ಪುರುಷರು ಮನೆಯ ಯಾವ ಕೆಲಸ ಮಾಡಬಾರದು ಎಂಬ ಮನಸ್ಥಿತಿಯಲ್ಲಿ ಮಗನನ್ನು ಬೆಳೆಸಿದರೆ, ಬದಲಾಗುತ್ತಿರುವ ಇಂದಿನ ಸಮಾಜದ ರೂಪುರೇಶೆಯಲ್ಲಿ ಕೆಲಸಕ್ಕೆ ಬಾರದವನಾಗಿ ನಾಳೆ ಅನುಭವಿಸುವವನು ಆತನೇ. ಮನೆಯಲ್ಲಿ ಲಿಂಗ ಸಮಾನತೆ ಪೋಷಿಸಿ. ನೀವು ಈ ಅಸಮಾನತೆಗೆ ಇತಿ ಹಾಡದಿದ್ದಲ್ಲಿ ಅದು ಬಹಳಷ್ಟು ತಲೆಮಾರುಗಳಿಗೆ ಮುಂದುವರಿಯುತ್ತದೆ ಎಂಬುದನ್ನು ನೆನಪಿಡಿ. 

ಮಾನಸಿಕ ಆರೋಗ್ಯದ ಕಡೆಗಣನೆ
ಈ ವಿಷಯದ ಬಗ್ಗೆ ಹೆಚ್ಚಿನ ಪೋಷಕರು ಸರಿಯಾಗಿ ಗಮನ ಹರಿಸುವುದಿಲ್ಲ. ಸಾಮಾನ್ಯವಾಗಿ ಮಕ್ಕಳಿಗೆ ಕಾಯಿಲೆಗಳು ಬಂದಾಗ ಅತಿಯಾಗಿ ಕಾಳಜಿ ವಹಿಸುವ ಪೋಷಕರು ಅವರ ಮನಸ್ಸಿನ ಆರೋಗ್ಯಕ್ಕೂ ಅದೇ ಮಟ್ಟಿನ ಪ್ರಾಮುಖ್ಯತೆ ನೀಡುವುದಿಲ್ಲ. ಮಕ್ಕಳಲ್ಲಿ ಯಾವುದಾದರೂ ಮಾನಸಿಕ ಸಮಸ್ಯೆಗಳಿದ್ದಲ್ಲಿ, ಅವರು ಸದಾ ಅಸಂತೋಷಿತರಾಗಿದ್ದಲ್ಲಿ, ಸಣ್ಣಪುಟ್ಟದ್ದಕ್ಕೂ ಅಳುವುದು, ಒಂಟಿಯಾಗಿರುವುದು, ಏನನ್ನೂ ಹಂಚಿಕೊಳ್ಳದಿರುವುದು, ದೂರುವುದು, ಕೀಳರಿಮೆ, ಅತಿಯಾದ ಹೊಟ್ಟೆಕಿಚ್ಚು, ಜಗಳಗಂಟ ವರ್ತನೆ ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಇವೆಲ್ಲ ಸಾಮಾನ್ಯ ಎಂದು ಸುಮ್ಮನಿರುವವರು ಹಲವರು. ಆದರೆ ಇವೆಲ್ಲಕ್ಕೂ ಪೋಷಕರು ಗಮನ ವಹಿಸುವ, ಅದನ್ನು ಸರಿಪಡಿಸುವ ಅಗತ್ಯವಿದೆ. ಇದಕ್ಕಾಗಿ ಕೌನ್ಸೆಲಿಂಗ್ ಸಹಾಯ ಪಡೆಯಲು ಕೂಡಾ ಹಿಂಜರಿಯಬೇಕಿಲ್ಲ. 

ಹಳೆ ಪ್ರೀತಿ ಮರೆತು ಹೊಸ ಬದುಕಿನತ್ತ...

ನಿನಗಾಗಿ ಇಷ್ಟೆಲ್ಲ ಮಾಡಿದ್ದೇನೆ ಎಂಬ ಧೋರಣೆ
ಹೌದು, ಮಕ್ಕಳಾದ ಮೇಲೆ ಬದುಕು ಬಹಳಷ್ಟು ಬದಲಾಗುತ್ತದೆ. ನಿದ್ರೆಯಿಲ್ಲದ ರಾತ್ರಿಗಳು, ಬದಲಾದ ಕೆಲಸದ ಸಮಯ, ಉದ್ಯೋಗ ಬಿಡಬೇಕಾಗಿ ಬಂದಿದ್ದು, ವಿಶ್ರಾಂತಿ ಇಲ್ಲದೆ ಕಳೆದದ್ದು, ಕಳೆಯುತ್ತಿರುವುದು, ಅವರಿಗಗಾಗಿ ಹಗಲೂ ರಾತ್ರಿ ಒದ್ದಾಡುವುದು ಎಲ್ಲವೂ ನಿಜವೇ. ಹಾಗಂಥ ಅದನ್ನು ಪದೇ ಪದೆ ಮಕ್ಕಳ ಮುಂದೆ ಹೇಳುತ್ತಾ ಅವರನ್ನು ಅವರು ಮಾಡದ ತಪ್ಪಿಗೆ ಹೊಣೆಯಾಗುವಂತೆ, ವೃಥಾ ಪಶ್ಚಾತ್ತಾಪ ಭಾವ ಅವರಿಗೆ ಕಾಡುವಂತೆ ಮಾಡಬೇಡಿ. ನಾಳೆ ಅವರಿಗೆ ಮಕ್ಕಳಾದಾಗ ಅವರೂ ಇವೆಲ್ಲವನ್ನೂ ಮಾಡುತ್ತಾರೆ, ನಿನ್ನೆ ನಿಮ್ಮ ಪೋಷಕರೂ ಇಷ್ಟೆಲ್ಲ ತ್ಯಾಗ ಮಾಡಿದ್ದರು. ಅದನ್ನು ಹೇಳಿಕೊಂಡು ನೆನಪಿಸುತ್ತಾ, ಅವರನ್ನು ಹಂಗಿನಲ್ಲಿರಿಸಿಕೊಳ್ಳಬೇಕಾದ ಅಗತ್ಯವಿಲ್ಲ. 

ಖಾಸಗಿತನ ಗೌರವಿಸದಿರುವುದು
ಮಕ್ಕಳು ಎಂದ ಮಾತ್ರಕ್ಕೆ ಅವರಿಗೆ ಪ್ರೈವೆಸಿಯ ಅಗತ್ಯವಿಲ್ಲ ಎಂದು ಭಾವಿಸುವುದು ತಪ್ಪು. ಮಕ್ಕಳು ಸುರಕ್ಷಿತವಾಗಿದ್ದಾರೆ, ಕೆಟ್ಟ ಹಾದಿ ಹಿಡಿಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ ನಿಜ. ಹಾಗಂಥ ಅವರ ಎಲ್ಲ ವಿಷಯಗಳಿಗೂ ಮೂಗು ತೂರಿಸುವುದು ಸಲ್ಲ. ಮಕ್ಕಳು ಸೀಕ್ರೆಟ್ ಎಂದು ನಿಮಗೆ ಹೇಳಿದ್ದು, ನಿಮಗೆ ವಿಷಯವೇ ಅಲ್ಲದಿರಬಹುದು. ಹಾಗಾಗಿ ನೀವದನ್ನು ಎಲ್ಲರ ಬಳಿ ಹೇಳಿಕೊಂಡು ನಕ್ಕಿರಬಹುದು. ಆದರೆ, ಮಗುವಿಗೆ ಅದೇ ತನ್ನ ಅತಿ ದೊಡ್ಡ ರಹಸ್ಯವಾಗಿರುತ್ತದೆ. ಅದು ಹೀಗೆ ಬಯಲಾದುದಕ್ಕೆ ಬಹಳ ನೊಂದುಕೊಳ್ಳುತ್ತದೆ. ಅಷ್ಟೇ ಅಲ್ಲ, ಇನ್ನು ಮುಂದೆ ಮಗು ತನ್ನ ಯಾವುದೇ ಸೀಕ್ರೆಟ್‌ಗಳನ್ನು ಪೋಷಕರ ಬಳಿ ಹೇಳಿಕೊಳ್ಳಲು ಬಯಸುವುದಿಲ್ಲ. ಮಗುವು ತನ್ನ ಪಾಡಿಗೆ ತಾನು ಬೆಳೆಯಲು, ಇರಲು ಅವಕಾಶ ಕೊಡಿ. ಅಗತ್ಯ ಬಿದ್ದಾಗೆಲ್ಲ ನೀವಿರುತ್ತೀರಿ ಎಂಬುದನ್ನು ಮನದಟ್ಟು ಮಾಡಿಸಿ.