ಹನುಮಸಾಗರ(ಏ.05): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ಶಿವ​ರಾಜ ಕೋಳೂರ ಆನ್‌​ಲೈ​ನ್‌​ನ​ಲ್ಲಿಯೇ ಉಪ​ನ್ಯಾಸ ನೀಡು​ವು​ದ​ರೊಂದಿಗೆ ಮಾದರಿಯಾಗಿದ್ದಾರೆ.

ಕೊರೋನಾ ವೈರಸ್‌ನಿಂದ ಈಗಾಗಲೇ ಮುನ್ನೆಚ್ಚರಿಕೆಯಾ​ಗಿ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿದೆ. ಪದವಿ ಕಾಲೇಜುಗಳಲ್ಲಿ ವಿಷಯವಾರು ತರ​ಬೇತಿ ಅರ್ಧಕ್ಕೆ ನಿಂತಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಪೂರ್ವವಾಗಿ ಸಿದ್ಧತೆಗೆ ಓದಲು ಸಾಧ್ಯವಾಗದೇ ವಿದ್ಯಾ​ರ್ಥಿ​ಗಳು ತೀವ್ರ ತೊಂದರೆ ಅನು​ಭ​ವಿ​ಸು​ತ್ತಿ​ರು​ವು​ದನ್ನು ಅರಿತ ಅತಿಥಿ ಉಪ​ನ್ಯಾ​ಸಕ ಶಿವ​ರಾಜ ವಾಟ್ಸ್‌ ಆ್ಯಪ್‌ ಹಾಗೂ ಫೇಸ್‌ ಬುಕ್‌ ಮೂಲಕ ಪ್ರತಿನಿತ್ಯ ಪಾಠ ಬೋಧಿಸುತ್ತಿದ್ದಾರೆ.

ಪ್ರತಿದಿನ ಒಂದು ಗಂಟೆ ಫೇಸ್‌ಬುಕ್‌ನಲ್ಲಿ ಲೈವ್‌ ಆಗಿ ಪಾಠ ಬೋಧಿಸುವ ಇವರು, ನಂತರ ತಮ್ಮ ತರಗತಿಯ ವಿದ್ಯಾರ್ಥಿಗಳ ವಾಟ್ಸ್‌ ಆ್ಯಪ್‌ ಗ್ರುಪ್‌ಗಳನ್ನು ಮಾಡಿಕೊಂಡು ಅದರಲ್ಲಿ ನೋಟ್ಸ್‌, ಪ್ರಶ್ನೆ ಪತ್ರಿಕೆಯ ಅಂಕಗಳ ಸರಳತೆಯನ್ನು ಬಿಡಿಸಿ ಗ್ರುಪ್‌ಗೆ ಹಾಕುವದರ ಮೂಲಕ ಇತರ ಉಪನ್ಯಾಸಕರಿಗೆ ಮಾದರಿಯಾಗಿದ್ದಾರೆ.

ಉಚ್ಚಂಗಿದುರ್ಗ ಜಾತ್ರೆಗೆ ಬಂದು ಸಂಕಷ್ಟಕ್ಕೆ ಸಿಲುಕಿದ ಬಡ ವ್ಯಾಪಾರಿಗಳು!

ಈ ಮೆಸೇಜನ್ನು ನೋಡಿದಂತಹ ರಾಜ್ಯದ ನಾನಾ ಜಿಲ್ಲೆಯ ಉಪನ್ಯಾಸಕರು ಶಿವರಾಜರಿಗೆ ಕರೆ ಮಾಡಿ ಆನ್‌ಲೈನ್‌ ಮೂಲಕ ಪಾಠ ಬೋಧಿಸುವ ವಿಧಾನದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 99645177221 ಸಂಪರ್ಕಿಸಲು ಕೋರಲಾಗಿದೆ.

ಈ ಬಗ್ಗೆ ಮಾತನಾಡಿದ ಇತಿಹಾಸ ಉಪನ್ಯಾಸಕ ಶಿವರಾಜ ಕೋಳೂರ ಅವರು, ಇದಕ್ಕೆಲ್ಲಾ ನಮ್ಮ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ಉಪನ್ಯಾಸಕ ಶಿವರಾಜ ಬಂಡಿಹಾಳರ ಮಾರ್ಗದರ್ಶನದಿಂದ ಸಾಧ್ಯವಾಗಿದೆ. ಸಧ್ಯ ಹಲವು ವಿದ್ಯಾರ್ಥಿಗಳು ಆ್ಯಂಡ್‌ರೈಡ್‌ ಮೊಬೈಲನ್ನು ಹೊಂದಿದ್ದು, ಇದರಿಂದ ವಿದ್ಯಾರ್ಥಿಗಳು ಮನೆಯಲ್ಲಿದ್ದುಕೊಂಡೇ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೂಲಕ ವ್ಯಾಸಂಗ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ. 

ಶಿವರಾಜ ಸರ್‌ ಬೋಧಿಸುವ ಪಾಠ ಚೆನ್ನಾಗಿದ್ದು, ಅವರು ಒದಗಿಸುವ ನೋಟ್ಸ್‌ಗಳನ್ನು ಇತರ ಕಾಲೇಜಿನ ನಮ್ಮ ಸ್ನೇಹಿತರಿಗೆ ನೀಡಲಾಗುತ್ತಿದ್ದು ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬಿಎ ಅಂತಿಮ ವರ್ಷದ ವಿದ್ಯಾರ್ಥಿ ಬಸವರಾಜ ತಾಳಕೇರಿ ಹೇಳಿದ್ದಾರೆ.