Asianet Suvarna News Asianet Suvarna News

ಈ ನಗರದಲ್ಲಿ ಎಲ್ಲ ಅವಳಿಗಳೇ!

ಅವಳಿಗಳ ವಿಷಯಕ್ಕೆ ಬಂದರೆ ಭಾರತವು ಅತಿ ಕಡಿಮೆ ಅವಳಿ ಜನನ ಪ್ರಮಾಣ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುತ್ತದೆ. ನಮ್ಮಲ್ಲಿ ಈ ಅನುಪಾತ ಪ್ರತಿ ಒಂದು ಸಾವಿರ ಜನನಕ್ಕೆ ಒಂಭತ್ತರಷ್ಟಿದ್ದರೆ ಕೇರಳದ ಕೋಡಿನಿಯಲ್ಲಿ ಅದು ಪ್ರತಿ ಸಾವಿರ ಜನಕ್ಕೆ ನಾಲವತ್ತೈದರಷ್ಟಿದ್ದು ರಾಷ್ಟ್ರೀಯ ಅನುಪಾತದ ಐದು ಪಟ್ಟು ಹೆಚ್ಚಾಗಿದೆ. 

A Kerala village with 400 pairs of twins that continues to be a mystery to research
Author
Bengaluru, First Published May 26, 2019, 12:09 PM IST

ಕೋಡಿನಿ ಕೇರಳದ ಮಲ್ಲಪ್ಪುರಂ ಜಿಲ್ಲೆಯ ತಿರುರಂಗಡಿ ತಾಲೂಕಿನ ವ್ಯಾಪ್ತಿಗೆ ಬರುವ ಒಂದು ಪುಟ್ಟಹಳ್ಳಿ. ಅಜಮಾಸು ಎರಡು ಸಾವಿರದಷ್ಟುಕುಟುಂಬಗಳಿರುವ ಈ ಹಳ್ಳಿಯಲ್ಲಿ ಶೇಕಡಾ ಎಂಬತ್ತೈದರಷ್ಟು ಜನಸಂಖ್ಯೆ ಮುಸ್ಲಿಂ ಸಮುದಾಯದವರದ್ದು.

ಈ ಹಳ್ಳಿಯನ್ನು ಪ್ರವೇಶಿಸುತ್ತಿದ್ದಂತೆಯೇ ಅವಳಿನಗರಕ್ಕೆ ಸ್ವಾಗತ ಎಂಬ ಫಲಕವೊಂದು ನಿಮ್ಮನ್ನು ಸ್ವಾಗತಿಸುತ್ತದೆ. ಹಾಗೆಯೇ ಮುಂದೆ ಸಾಗಿದರೆ ನಿಮಗೆದುರಾಗುವ ಶಾಲೆಯ ಕೊಠಡಿಯೊಳಗೊಮ್ಮೆ ಇಣುಕಿ ನೋಡಿ, ಏನೋ ಎಡವಟ್ಟೆಂದೆನಿಸುತ್ತಿದೆಯಲ್ಲ ? ಅದು ಸಹಜವೇ ಬಿಡಿ. ಏಕೆಂದರೆ ಪಾಠಕೇಳುತ್ತಿರುವ ಅನೇಕ ಮುಖಗಳಲ್ಲಿ ಸಾಮ್ಯತೆಗಳನ್ನು ನೀವು ನೋಡಿರುತ್ತೀರಿ.ಹೌದು ಇದು ಇಲ್ಲಿನ ವಿಶಿಷ್ಟತೆ. ಭಾರತದಲ್ಲೇ ಅತಿಹೆಚ್ಚು ಅವಳಿಗಳು ಹುಟ್ಟುವ ಪ್ರದೇಶವೆಂಬ ಖ್ಯಾತಿಯನ್ನು ಪಡೆದಿರುವ ಹಾಗೂ ಆ ಕಾರಣಕ್ಕೆ ಜಾಗತಿಕ ದಾಖಲೆಗೂ ಲಗ್ಗೆ ಇಟ್ಟಿರುವ ಈ ಗ್ರಾಮ ವಿಜ್ಞಾನಿಗಳಿಗೊಂದು ಸವಾಲಾಗಿ ನಿಂತಿದೆ.

A Kerala village with 400 pairs of twins that continues to be a mystery to research

ಅವಳಿಗಳ ವಿಷಯಕ್ಕೆ ಬಂದರೆ ಭಾರತವು ಅತಿ ಕಡಿಮೆ ಅವಳಿ ಜನನ ಪ್ರಮಾಣ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುತ್ತದೆ. ನಮ್ಮಲ್ಲಿ ಈ ಅನುಪಾತ ಪ್ರತಿ ಒಂದು ಸಾವಿರ ಜನನಕ್ಕೆ ಒಂಭತ್ತರಷ್ಟಿದ್ದರೆ ಕೋಡಿನಿಯಲ್ಲಿ ಅದು ಪ್ರತಿ ಸಾವಿರ ಜನಕ್ಕೆ ನಾಲವತ್ತೈದರಷ್ಟಿದ್ದು ರಾಷ್ಟ್ರೀಯ ಅನುಪಾತದ ಐದು ಪಟ್ಟು ಹೆಚ್ಚಾಗಿದೆ. ಒಂದು ಅಂದಾಜಿನಂತೆ ಇದೀಗ ಇಲ್ಲಿನ ಎರಡುಸಾವಿರ ಕುಟುಂಬಗಳಲ್ಲಿ ಸುಮಾರು ನಾನೂರೈವತ್ತು ಅವಳಿ ಜೋಡಿಗಳಿದ್ದಾರೆ.

ಅವಳಿಗಳು ಹುಟ್ಟುವ ಪ್ರಮಾಣ ಕೋಡಿನಿಯಲ್ಲಿ ವೇಗ ಪಡೆದುಕೊಂಡಿದ್ದು ಇತ್ತೀಚೆಗೆ. ಸ್ಥಳೀಯವಾಗಿ ಲಭ್ಯವಿರುವ ಮಾಹಿತಿಯಂತೇ ಇಲ್ಲಿ ಮೊದಲ ಅವಳಿಗಳು ಹುಟ್ಟಿದ್ದು 1949 ರಲ್ಲಿ. ಅದಾದ ನಂತರ ಇಲ್ಲಿ ಅವಳಿಗಳು ಹುಟ್ಟುವ ಪ್ರಮಾಣ ಹೆಚ್ಚುತ್ತ ಹೋಗುತ್ತಿದ್ದು ಪ್ರತಿವರ್ಷ ಸುಮಾರು 15 ಜೋಡಿ ಅವಳಿಗಳು ಇಲ್ಲಿ ಜನಿಸುತ್ತಿದ್ದಾರೆ.

ಈ ಏರಿಕೆಯ ಪ್ರಮಾಣದಿಂದ ಈ ಊರಿನ ಹತ್ತು ಪ್ರತಿಶತಃ ಜನಸಂಖ್ಯೆ ಅವಳಿಗಳದ್ದೇ ಆಗಿದೆ. ಆದರೆ ಇಲ್ಲಿನ ನಾಗರೀಕರಿಗೆ ಈ ಕುರಿತು ಹಿಂಜರಿಕೆಯೇನೂ ಇಲ್ಲ ಬದಲಾಗಿ ಅವರು ಈ ಕುರಿತು ಹೆಮ್ಮೆಯನ್ನು ವ್ಯಕ್ತಪಡಿಸುತ್ತ ತಮ್ಮೂರಿಗೆ ಅವಳಿ ನಗರವೆಂದು ಮರುನಾಮಕರಣ ಮಾಡಿ ಅಲ್ಲಿ ಭಾರತದ ಪ್ರಥಮ ಅವಳಿ ಮತ್ತು ಬಂಧುಗಳ ಸಂಘ ವನ್ನು ಸ್ಥಾಪಿಸಿದ್ದಾರೆ. ಅವಳಿಗಳಿಗೆ ಅದೊಂದು ಸಹಜ ಪ್ರಕ್ರಿಯೆಯೆಂದು ಮನದಟ್ಟು ಮಾಡಿಸಿ ಜೊñಗೆæ ಅವರ ಕುಟುಂಬದವರ ಆತ್ಮವಿಶ್ವಾಸ ಹೆಚ್ಚಿಸುವುದು ಸಂಘದ ಮುಖ್ಯ ಉದ್ದೇಶ.

A Kerala village with 400 pairs of twins that continues to be a mystery to research

ಆದರೂ ದಿನನಿತ್ಯದ ವ್ಯವಹಾರಗಳಲ್ಲಿ ಈ ಅವಳಿಗಳು ಎಷ್ಟು ಗೊಂದಲ ಸೃಷ್ಟಿಸುತ್ತಾರೆಂಬ ಎಂಬ ಕುತೂಹಲ ಸಹಜವೇ. ಅದರಲ್ಲೂ ಶಾಲೆಗಳಲ್ಲಿ ಸಮವಸ್ತ್ರದಲ್ಲಿ ಈ ಮಕ್ಕಳು ಶಿಕ್ಷಕರಿಗೆ ಗೊಂದಲ ಮೂಡಿಸುವುದು ಖರೆ. ಆದರೆ ಇದು ಪ್ರತಿವರ್ಷದ ಗೋಳಾಗಿರುವುದರಿಂದ ಇಲ್ಲಿನ ಶಿಕ್ಷಕರೂ ಇದಕ್ಕೆ ಒಗ್ಗಿ ಹೋಗಿದ್ದಾರೆ. ಮಕ್ಕಳನ್ನು ಹೆಸರಿನಿಂದ ಬೇರ್ಪಡಿಸಿ ಕೂರಿಸುವುದು , ಆಟದಲ್ಲಿ ಇಬ್ಬರು ಅವಳಿಗಳನ್ನು ಒಂದೇ ತಂಡದಲ್ಲಿರುವಂತೆ ನೋಡಿಕೊಳ್ಳುವುದು ಹೀಗೆ ಕೆಲವು ಉಪಾಯಗಳನ್ನು ಅವರು ಕಂಡುಕೊಂಡಿದ್ದಾರೆ.

ಈ ಪ್ರಮಾಣದಲ್ಲಿ ಅವಳಿಗಳ ಸಂಖ್ಯೆ ಈ ಗ್ರಾಮದಲ್ಲಷ್ಟೇ ಹೆಚ್ಚುವುದಕ್ಕೆ ಕಾರಣವೇನು ಎಂಬ ಬಗ್ಗೆ ಸ್ಥಳೀಯ ವೈದ್ಯರಾದ ಡಾ. ಸ್ರಿಬಿಜು ಈ ಕುರಿತು ಈ ಕುರಿತು ಹಲವು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದಾರೆ. ಅವರು ಸಂಗ್ರಹಿಸಿದ ಮಾಹಿತಿಯಂತೆ ಇಲ್ಲಿನ ಜನಸಂಖ್ಯೆಯಲ್ಲಿ ಶೇಕಡಾ 85 ರಷ್ಟುಜನ ಮುಸ್ಲಿಂ ಸಮುದಾಯವರಾದರೂ ಅವಳಿಗಳು ಹುಟ್ಟುವ ಪ್ರಕ್ರಿಯೆ ಹಿಂದೂ ಮತ್ತು ಕ್ರಿಶ್ಚಿಯನ್‌ ಸಂಪ್ರದಾಯದವರಲ್ಲೂ ಕಂಡುಬರುತ್ತದೆ. ಹೀಗಾಗಿ ಸ್ಥಳಿಯ ಜೀವನಶೈಲಿಗೂ ಅವಳಿಗಳ ಹುಟ್ಟಿಗೂ ಸಂಬಂಧವಿಲ್ಲ. ಅಷ್ಟೇ ಏಕೆ ಇಲ್ಲಿನ ಮಹಿಳೆಯರು ಹೊರಗೆ ಮದುವೆಯಾಗಿ ಹೋಗಿ ಅವಳಿಗಳನ್ನು ಹೆತ್ತ ಉದಾಹರಣೆಗಳೂ ಬೇಕಾದಷ್ಟಿವೆ.

ಇನ್ನು ಮಧ್ಯವಯಸ್ಕ ಮಹಿಳೆಯರ ಪ್ರಸವದಲ್ಲಿ ಅವಳಿಗಳು ಹುಟ್ಟುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಕೋಡಿನಿಯಲ್ಲಿ ಹದಿನೆಂಟರಿಂದ ಇಪ್ಪತ್ತರೊಳಗೆ ಹೆಣ್ಮಕ್ಕಳ ಮದುವೆಯಾಗುವುದರಿಂದ ಆ ವಾದವೂ ನಿಲ್ಲುವುದಿಲ್ಲ. ಕೃತಕ ಗರ್ಭಧಾರಣೆ ಅವಳಿಗಳ ಜನನಕ್ಕೆ ಇನ್ನೊಂದು ಪ್ರಮುಖ ಕಾರಣ ಇಲ್ಲಿ ಅದೂ ನಡೆಯುವುದಿಲ್ಲ. ಇತ್ತೀಚೆಗೆ ಅವಳಿಗಳ ಜೊತೆಗೆ ತ್ರಿವಳಿಗಳೂ ಹುಟ್ಟುವುದನ್ನು ತಾನು ಗಮನಿಸಿದ್ದಾಗಿ ಹೇಳುವ ಡಾ ಸ್ರಿಬಿಜು ಇದೊಂದು ಕಳೆದ ಆರವತ್ತರಿಂದ ಎಪ್ಪತ್ತು ವರ್ಷಗಳಿಂದೀಚೆಗೆ ಆರಂಭವಾದ ಪ್ರಕ್ರಿಯೆಯೆಂದು ಹೇಳುತ್ತಾರೆ.

ಕೋಡಿನಿಯ ಖ್ಯಾತಿ ಇದೀಗ ದೇಶ ವಿದೇಶಗಳಿಗೂ ಹಬ್ಬಿ ದೇಸಿ ಹಾಗೂ ವಿದೇಶಿ ವಿಜ್ಞಾನಿಗಳ ತಂಡಗಳು ಹಲವು ಸುತ್ತು ಭೇಟಿ ನೀಡಿ ಸ್ಥಳಿಯರ ರಕ್ತ , ಚರ್ಮದ ಸ್ಯಾಂಪಲ್‌ಗಳ ಜೊತೆಗೆ ಆಚಾರ ವಿಚಾರಗಳ ವಿಷಯಗಳನ್ನು ಕಲೆಹಾಕಿ ಸಂಶೋಧನೆಯಲ್ಲಿ ತೊಡಗಿವೆ. ಕಾರಣ ಹುಡುಕುತ್ತ ಅತ್ತ ಅವರುಗಳು ತಮ್ಮ ತಲೆಕೆರೆದುಕೊಳ್ಳುತ್ತಿದ್ದರೆ ಇತ್ತ ಕೋಡಿನಿಯ ಆಸ್ಪತ್ರೆಗಳಲ್ಲಿ ಕುಟುಂಬಗಳು ಹೊಸ ಸದಸ್ಯರುಗಳ ಬರುವಿಕೆಯಿಂದ ತಮ್ಮ ಖುಷಿಯನ್ನು ಇಮ್ಮಡಿಸಿಕೊಳ್ಳುತ್ತಿದ್ದಾರೆ.

ಏಷ್ಯಾದಲ್ಲಿ ಅವಳಿಗಳು ಹುಟ್ಟುವ ಪ್ರಮಾಣ ಅತಿಕಡಿಮೆ ಅಂದರೆ ಪ್ರತಿಸಾವಿರಕ್ಕೆ ಹತ್ತರಷ್ಟಿದ್ದರೆ ಮಧ್ಯ ಆಫ್ರಿಕಾದಲ್ಲಿ ಅತಿ ಹೆಚ್ಚು ಅಂದರೆ ಇಪ್ಪತ್ತೆಂಟರಷ್ಟಿದೆ. ಆಫ್ರಿಕನ್‌ ಅಮೇರಿಕನ್‌ ಮೂಲದವರಲ್ಲಿ ಈ ಪ್ರಮಾಣ ಅತಿಹೆಚ್ಚಿದ್ದು ನೈಜೀರಿಯಾದ ಇಗ್ಬೋ ಓರಾ ನಗರವು ಪ್ರತಿಯೊಂದು ಮನೆಯಲ್ಲಿ ಒಂದಾದರೂ ಅವಳಿಗಳಿರುತ್ತಾರೆಂಬ ಖ್ಯಾತಿ ಹೊಂದಿದ್ದು ಅಲ್ಲಿ ಪ್ರತಿ ಸಾವಿರ ಜನನದಲ್ಲಿ ನಲತ್ತೈದರಿಂದ ಐವತ್ತರಷ್ಟುಅವಳಿಗಳು ಹುಟ್ಟುತ್ತಾರೆಂದು ದಾಖಲೆಗಳು ಹೇಳುತ್ತವೆ. ಕೋಡಿನಿ ಈ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದು ಸದ್ಯವೇ ಹೊಸ ದಾಖಲೆಯನ್ನು ನಿರ್ಮಿಸಿದರೆ ಆಶ್ಚರ್ಯವೇನಿಲ್ಲ.

- ಸುನೀಲ್‌ ಬಾರ್ಕೂರ್‌

Follow Us:
Download App:
  • android
  • ios