Asianet Suvarna News Asianet Suvarna News

ಗಾಸಿಪ್ ಗಾಯಕ್ಕೆ ಪಾಸಿಟಿವ್ ಥಿಂಕಿಂಗ್ ಎಂಬ ಮುಲಾಮು ಹಚ್ಚಿ!

ಬೇರೆಯವರ ಕುರಿತ ಗಾಸಿಪ್‍ಗೆ ಕಿವಿಯಾಗುವ ನಾವು, ನಮ್ಮ ಕುರಿತೇ ಸುಳ್ಳು ಸುದ್ದಿಗಳು ಹರಿದಾಡ ತೊಡಗಿದಾಗ ಬೆಚ್ಚಿ ಬೀಳುತ್ತೇವೆ, ಕುಗ್ಗಿ ಹೋಗುತ್ತೇವೆ. ಗಾಸಿಪ್ ಎಂಬ ಗ್ಯಾಂಗ್ರೇನ್ ನಮ್ಮ ಮನಸ್ಸನ್ನು ಕೊಳೆಸಿಬಿಡುವ ಮುನ್ನವೇ ಅದನ್ನು ಕಿತ್ತೆಸೆದು ಮುಂದೆ ಸಾಗುವುದು ಜಾಣತನ. 

8 ways to deal with gossips
Author
Bangalore, First Published Dec 27, 2019, 3:29 PM IST
  • Facebook
  • Twitter
  • Whatsapp

ಗಾಸಿಪ್ ಎಂಬ ಪದ ಕಿವಿಗೆ ಬಿದ್ದ ತಕ್ಷಣ ಕಿವಿ ಚುರುಕಾಗುತ್ತದೆ. ಕೆಟ್ಟ ಕುತೂಹಲವೊಂದು ಗರಿಗೆದರುತ್ತದೆ. ಆದರೆ, ಆ ಗಾಸಿಪ್ ನಿಮ್ಮ ಬಗ್ಗೆಯೇ ಆಗಿದ್ದರೆ? ಮನಸ್ಸಿಗೆ ನೋವಾಗುತ್ತದೆ ಅಲ್ಲವೆ? ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಮೇಲೆ ಗಾಸಿಪ್‍ಗಳು ನಕಾರಾತ್ಮಕ ಪರಿಣಾಮಗಳನ್ನುಂಟು ಮಾಡಬಲ್ಲವು. ಗಾಳಿ ಸುದ್ದಿಯಿಂದ ಆತ್ಮವಿಶ್ವಾಸ ಕುಗ್ಗಿ ಬೇಸರ, ನೋವು ಮನಸ್ಸನ್ನಾವರಿಸುತ್ತದೆ. ಹೀಗಾಗಿ ಗಾಸಿಪ್‍ಗೆ ನೀವೇ ಆಹಾರವಾಗಿದ್ದೀರಿ ಎಂಬುದು ಗಮನಕ್ಕೆ ಬರುತ್ತಿದ್ದಂತೆ ಟೆನ್ಷನ್ ಮಾಡಿಕೊಳ್ಳುತ್ತ ಕೂರುವ ಬದಲು ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸಲು ಪ್ರಯತ್ನಿಸಿ. 

ಪ್ರತಿ ದಿನ ಗಾಸಿಪ್‌ ಮಾಡಲೆಂದೇ 52 ನಿಮಿಷ ಮೀಸಲಿಡುತ್ತೇವಂತೆ!

ನೆಗೆಟಿವ್ ಯೋಚನೆಗಳಿಗೆ ಲಗಾಮು ಹಾಕಿ: ನಿಮ್ಮ ಬಗ್ಗೆ ನಕಾರಾತ್ಮಕ ಸುದ್ದಿಗಳು ಹಬ್ಬುತ್ತಿವೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಅವಮಾನದಿಂದ ಮನಸ್ಸು ಕುಗ್ಗಿ ಹೋಗುತ್ತದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಅಥವಾ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಆ ಕ್ಷಣಕ್ಕೆ ನಿಮ್ಮಿಂದ ಸಾಧ್ಯವಾಗದಿರಬಹುದು. ಆದರೆ, ಆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವುದು, ಬಿಡುವುದು ನಿಮ್ಮ ಕೈಯಲ್ಲೇ ಇರುತ್ತದೆ. ಗಾಸಿಪ್‍ಗೆ ನೀವು ಆಹಾರವಾಗಿದ್ದೀರಿ ಎಂಬುದು ತಿಳಿಯುತ್ತಿದ್ದಂತೆ ಭಯ, ಸಿಟ್ಟು, ಉದ್ವೇಗ ಎಲ್ಲವೂ ಒಟ್ಟಿಗೆ ಮನಸ್ಸಿನ ಮೇಲೆ ಆಕ್ರಮಣ ಮಾಡುತ್ತವೆ. ಇದು ಸಹಜ ಕೂಡ. ಆದರೆ, ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಹೆಚ್ಚು. ಹೀಗಾಗಿ ಇಂಥ ಸಮಯದಲ್ಲಿ ಮನಸ್ಸಿನಲ್ಲಿ ಮೂಡುವ ಭಾವನೆಗಳ ಮೇಲೆ ಹಿಡಿತ ಸಾಧಿಸುವುದು ಅಗತ್ಯ. ಮನಸ್ಸನ್ನು ಶಾಂತಗೊಳಿಸಲು ಜೋರಾಗಿ ಉಸಿರಾಡಿ, ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಳ್ಳಿ ಅಥವಾ ಒಬ್ಬರೇ ಸ್ವಲ್ಪ ದೂರ ವಾಕ್ ಮಾಡಿ. ಇದರಿಂದ ಮನಸ್ಸು ಶಾಂತಗೊಂಡು, ಸಮಸ್ಯೆಗೆ ಸಮರ್ಪಕವಾದ ಪರಿಹಾರವೊಂದು ಹೊಳೆಯಬಹುದು.

ದೃಷ್ಟಿಕೋನ ವಿಸ್ತರಿಸಿಕೊಳ್ಳಿ: ಮೂಡ್ ಸರಿಯಿಲ್ಲದಿರುವಾಗ ನಮ್ಮ ದೃಷ್ಟಿಕೋನದ ಪರಿಧಿ ಕೂಡ ಸಂಕೋಚಿತಗೊಂಡಿರುತ್ತದೆ. ನಕಾರಾತ್ಮಕ ಯೋಚನೆಗಳು ನಮ್ಮ ಒಳಗಣ್ಣನ್ನು ಮುಚ್ಚಿರುತ್ತವೆ. ಹೀಗಾಗಿ ಇಂಥ ಮನಸ್ಥಿತಿಯಲ್ಲಿ ಯೋಚಿಸಿದರೆ ಸೂಕ್ತ ಪರಿಹಾರ ಹೊಳೆಯುವುದಿಲ್ಲ. ಪರಿಸ್ಥಿತಿಯನ್ನು ವಿಶಾಲ ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ಮಾತ್ರ ಹೊಸ ಹಾದಿಯೊಂದು ಗೋಚರಿಸುತ್ತದೆ. 

ಗಾಸಿಪ್ ಹೊಡೆಯೋದ್ರಲ್ಲಿ ಗಂಡುಹೈಕ್ಳೂ ಎತ್ತಿದ ಕೈ!

ಬಿಟ್ಟಾಕಿ, ಮುಂದೆ ಸಾಗಿ: ಆಗೋದೆಲ್ಲ ಒಳ್ಳೆಯದ್ದಕ್ಕೆ ಎಂದು ಭಾವಿಸಿ. ಗಾಸಿಪ್ ಹರಡಿಸುತ್ತಿರುವ ವ್ಯಕ್ತಿ ನಿಮ್ಮ ಆತ್ಮೀಯರೇ ಆಗಿರಬಹುದು. ಇಷ್ಟು ದಿನ ಅವರ ಇನ್ನೊಂದು ಮುಖದ ಪರಿಚಯ ನಿಮಗೆ ಆಗಿರಲಿಲ್ಲ. ಆದರೆ, ಈಗ ಆ ವ್ಯಕ್ತಿ ಏನೆಂಬುದು ನಿಮಗೆ ತಿಳಿಯಿತ್ತಲ್ಲವೆ. ಇನ್ನು ಮುಂದೆ ಆ ವ್ಯಕ್ತಿಯೊಂದಿಗೆ ವ್ಯವಹರಿಸುವಾಗ ನೀವು ಎಚ್ಚರಿಕೆ ವಹಿಸುತ್ತೀರಿ. ಇದರಿಂದ ಮುಂದೆ ಎದುರಾಗಬಹುದಾದ ಇದಕ್ಕಿಂತ ದೊಡ್ಡದಾದ ಆಪತ್ತಿನಿಂದ ನೀವು ಪಾರಾದಂತಾಯಿತು. 

ಹಿಂಜರಿಯದೆ ಪ್ರತಿಕ್ರಿಯಿಸಿ: ಸುಳ್ಳನ್ನು ಸುಳ್ಳು ಎನ್ನದಿದ್ದರೆ ದೊಡ್ಡ ತಪ್ಪಾಗುತ್ತದೆ. ನೀವೇನೂ ತಪ್ಪೇ ಮಾಡದಿದ್ದಾಗ ನಿಮ್ಮ ಬಗ್ಗೆ ಸುಳ್ಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹೀಗಿರುವಾಗ ನೀವು ಈ ಕುರಿತು ಸ್ಪಷ್ಟನೆ ನೀಡದಿದ್ದರೆ ನಿಮ್ಮ ಕುರಿತ ಗಾಸಿಪ್ ನಿಜವೆಂದೇ ಉಳಿದವರು ಭಾವಿಸುವ ಸಾಧ್ಯತೆಯಿದೆ. ಆದಕಾರಣ ನಿಮ್ಮ ಕುರಿತ ಗಾಸಿಪ್‍ಗಳಿಗೆ ಬಾಯಿಮುಚ್ಚಿಕೊಳ್ಳುವುದಕ್ಕಿಂತ ಸ್ಪಷ್ಟನೆ ನೀಡುವುದು ಒಳ್ಳೆಯದು. ಇದರಿಂದ ನಿಮ್ಮ ಮನಸ್ಸಿನ ದುಗುಡವೂ ಕಡಿಮೆಯಾಗುತ್ತದೆ. 

ಚಳಿ ಬಿಡಿಸಿ: ಗಾಸಿಪ್ ಹಬ್ಬಿಸಿದ ವ್ಯಕ್ತಿ ಯಾರೆಂಬುದು ಗೊತ್ತಾದರೆ ಆತನೊಂದಿಗೆ ಮುಕ್ತವಾಗಿ ಮಾತನಾಡಿ. ಹಾಗಂತ ವಾಗ್ವಾದ ಮಾಡಲು ಹೋಗಬೇಡಿ. ಬದಲಿಗೆ ಶಾಂತಿಯಿಂದ ಮಾತನಾಡಿ. ನಿಮಗೆ ಆತ ಹಬ್ಬಿಸಿದ ಸುಳ್ಳು ಸುದ್ದಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ಮನದಟ್ಟು ಮಾಡಿಸಿ. ನಿಮ್ಮ ಮನಸ್ಸಿಗೆ ನೋವಾಗಿದೆ ಎಂಬುದನ್ನು ಅರ್ಥ ಮಾಡಿಸಿ. ಇದರಿಂದ ಆತನಿಗೆ ತನ್ನ ತಪ್ಪಿನ ಅರಿವಾಗಬಹುದು.

ಕೃತಿಯೇ ಉತ್ತರವಾಗಲಿ: ಮಾತಿಗಿಂತ ಕೃತಿ ಮೇಲು. ಆದಕಾರಣ ನಿಮ್ಮ ಕುರಿತ ಎಲ್ಲ ಗಾಸಿಪ್‍ಗಳಿಗೂ ಕೆಲಸದ ಮೂಲಕವೇ ಉತ್ತರ ನೀಡಿ. ನಿಮ್ಮ ಉತ್ತಮ ಕಾರ್ಯಗಳು ಗಾಸಿಪ್ ಹಬ್ಬಿಸುತ್ತಿರುವವರ ಬಾಯಿಗೆ ಖಂಡಿತಾ ಬೀಗ ಹಾಕಿಸುತ್ತವೆ. ಒಂದು ವೇಳೆ ಆತ ಹಳೇ ಚಾಳಿ ಮುಂದುವರಿಸಿದರೂ ಕೇಳುವವರು ಅದನ್ನು ನಂಬುವುದಿಲ್ಲ. 

ಚಳಿಗಾಲದಲ್ಲಿಈ ಆಹಾರಗಳನ್ನು ಸೇವಿಸಿದರೆ ನಿಮ್ಮ ಆರೋಗ್ಯ ಸೂಪರ್!

ಕ್ಷಮಿಸಿ ದೊಡ್ಡವರಾಗಿ: ಗಾಸಿಪ್ ಹಬ್ಬಿಸುತ್ತಿರುವವರು ನಿಮಗೆಷ್ಟೇ ಹಾನಿ ಮಾಡಿರಬಹುದು. ಆದರೂ ಅವರನ್ನು ಕ್ಷಮಿಸಿಬಿಡಿ. ನಿಮ್ಮ ಮೇಲಿನ ಅಸೂಯೆ ಅಥವಾ ದ್ವೇಷದ ಕಾರಣಕ್ಕೆ ಅವರು ಹಾಗೇ ಮಾಡಿರಬಹುದು. ಇದು ಆ ವ್ಯಕ್ತಿಯ ವೀಕ್‍ನೆಸೇ ಹೊರತು ನಿಮ್ಮದ್ದಲ್ಲ. ಹೀಗಾಗಿ ಇಂಥ ಸಣ್ಣತನ ತೋರಿದ ವ್ಯಕ್ತಿಯನ್ನು ಕ್ಷಮಿಸುವುದು ನಿಮ್ಮ ದೊಡ್ಡತನವಾಗುತ್ತದೆ. ಅಷ್ಟೇ ಅಲ್ಲ, ಕ್ಷಮಿಸುವುದರಿಂದ ನಿಮ್ಮ ಮನಸ್ಸು ಕೂಡ ನಿರಾಳವಾಗುತ್ತದೆ. 

ನಿಮ್ಮ ಖುಷಿಗೆ ಮಣೆ ಹಾಕಿ: ನಿಮ್ಮ ಮನಸ್ಸಿನ ನೆಮ್ಮದಿ, ಖುಷಿಯ ಮುಂದೆ ಬೇರೆಲ್ಲವೂ ನಗಣ್ಯ. ಆದಕಾರಣ ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ಯೋಚಿಸಿ. ನಿಮಗಿಷ್ಟವಾದ ಕೆಲಸಗಳನ್ನು ಮಾಡಿ. ಖುಷಿ ನೀಡುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಸಮಾಜಮುಖಿ ಕಾರ್ಯಗಳನ್ನು ಮಾಡಿ. ಸಂಗೀತ, ಓದು ನಿಮ್ಮ ಮನಸ್ಸಿನ ಭಾರವನ್ನು ತಗ್ಗಿಸಿ ಖುಷಿ ನೀಡಬಲ್ಲವು.

Follow Us:
Download App:
  • android
  • ios