ಯಾವುದೇ ಕಚೇರಿಯ ಕಾರಿಡಾರ್‌ನಲ್ಲಿ ಓಡಾಡಿ ನೋಡಿ, ಅಲ್ಲೊಂದಿಷ್ಟು ಜನ ಗುಸುಗುಸು ಮಾತಾಡುತ್ತಿರುತ್ತಾರೆ, ನೀವೇನೋ ಕದ್ದು ಕೇಳಿಸಿಕೊಂಡು ಬಿಟ್ಟರೆ ಎಂಬಂತೆ ನಿಮ್ಮತ್ತ ಒಮ್ಮೆ ಅನುಮಾನದ ಕಣ್ಣು ಹಾಯಿಸುತ್ತಾರೆ. ಈ ಗಾಸಿಪ್‌ನಲ್ಲಿ ಬಹುತೇಕ ಹೊಟ್ಟೆಕಿಚ್ಚು, ಹಗೆತನ, ಸಿಟ್ಟು ಸೆಡವು ತುಂಬಿರುತ್ತದೆ ಎಂದು ಯಾರಾದರೂ ಹೇಳಬಹುದು. ಇಂಥ ಈ ಮತ್ಸರದ ಮಾತುಗಳಲ್ಲಿ ಜನ ತಮ್ಮ ದಿನದ ಎಷ್ಟು ಭಾಗವನ್ನು ಸವೆಸುತ್ತಾರೆ ಎಂಬ ಬಗ್ಗೆ ನಿಮಗೇನಾದರೂ ಕಲ್ಪನೆಯಿದೆಯೇ? ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಸಂಶೋಧಕರು. ಈ ಸಂಶೋಧನೆಯಿಂದ ಆದ ಮುಖ್ಯ ಲಾಭವೆಂದರೆ ಇನ್ನು ಮುಂದೆ ಹೆಣ್ಣು ಮಕ್ಕಳಿಗೆ ಯಾರಾದರೂ ಗಾಸಿಪ್ ರಾಣಿಯರು ಎಂದು ಛೇಡಿಸಿದರೆ, ಅವರಿಗೆ ಗಂಡುಹೈಕಳಲ್ಲಿ ತಿರುಗಿ ಜಗಳವಾಡಲು ವಿಷಯ ಸಿಕ್ಕಿದೆ. ಏಕೆಂದರೆ, ಪುರುಷರೂ ಗಾಸಿಪ್ ಮಾಡುವುದರಲ್ಲಿ ಮಹಿಳೆಯರಷ್ಟೇ ನಿಸ್ಸೀಮರು ಎಂಬ ವಿಷಯ ಸಂಶೋಧನೆಯಿಂದ ಬಯಲಾಗಿದೆ.

ಸಾಮಾನ್ಯವಾಗಿ ಗಾಸಿಪ್ ಮಾಡುವವರು ನೈತಿಕತೆ ಇಲ್ಲದವರು, ಅಶಿಕ್ಷಿತರು, ಮಹಿಳೆಯರು ಹಾಗೂ ಕೆಳವರ್ಗದವರು ಎಂಬ ನಂಬಿಕೆ ಹಲವರದ್ದು. ಆದರೆ, ಇದಾವುದೂ ನಿಜವಲ್ಲ, ಬ್ಲೂ ಕಾಲರ್ ಕೆಲಸ ಮಾಡುವವರಷ್ಟೇ ವೈಟ್ ಕಾಲರ್ ಉದ್ಯೋಗಿಗಳೂ ಗಾಸಿಪ್ ಮಾಡುತ್ತಾರೆ. ಅಷ್ಟೇ ಅಲ್ಲ, ಕೇಳಿದ್ರೇನ್ರಿ ಸರೋಜಮ್ಮಾಗಳಷ್ಟೇ ಕೇಳಿದ್ರೇನ್ರಿ ಪುರುಷೋತ್ತಮಗಳೂ ಇದ್ದಾರೆ ಎಂಬ ವಿಷಯವೀಗ ಸಾಬೀತಾಗಿದೆ.  

ಸಂಬಂಧ ಸುಧಾರಿಸಬಲ್ಲ ಸೈಕಿಕ್ ಟ್ರಿಕ್ಸ್ ಅರಿತರೆ, ಬದುಕು ಬಿಂದಾಸ್!

ಹೌದು, ಜನರ ದಿನಂಪ್ರತಿ ಮಾತುಗಳ ರೆಕಾರ್ಡ್‌ಗಳನ್ನು ಆಲಿಸಿದಾಗ, ಸಂಶೋಧಕರಿಗೆ ಪುರುಷರು ಕೂಡಾ ಮಹಿಳೆಯರಷ್ಟೇ ಗಾಸಿಪ್ ಮಾಡುತ್ತಾರೆ ಎಂಬ ವಿಷಯ ಬಯಲಾಗಿದೆ. ಹೀಗೆ ಗಾಸಿಪ್ ಮಾಡುವುದರಲ್ಲಿ ಎಕ್ಸ್ಟ್ರೋವರ್ಟ್‌ಗಳು (ಬಹಿರ್ಮುಖಿ) ಎಕ್ಸ್‌ಪರ್ಟ್ಸ್ ಅಂತೆ. 

ಇಷ್ಟೇ ಅಲ್ಲ, ಮಹಿಳೆಯರು ಸಾಮಾನ್ಯವಾಗಿ ಹೆಚ್ಚು ತಟಸ್ಥ ಗಾಸಿಪ್ ಮಾಡುತ್ತಾರಾದರೆ, ಈ ಗಾಸಿಪ್ ವರ್ಲ್ಡ್‌ನ ನಿಜವಾದ ವಿಲನ್‌ಗಳು ಪುರುಷರು. ಅದರಲ್ಲೂ ಯುವಕರು. ಸಣ್ಣ ವಯಸ್ಸಿನವರು ಹಿರಿಯರಿಗಿಂತ ಹೆಚ್ಚು ಗಾಸಿಪ್ ಮಾಡುತ್ತಾರಂತೆ. ಅವರ ಮಾತುಗಳಲ್ಲಿ ನೆಗೆಟಿವ್ ಗಾಸಿಪ್‌ಗಳಿಗೇ ಬಹುಭಾಗ ಎಂಬುದು ಸಾಬೀತಾಗಿದೆ.

ಇನ್ನು ವ್ಯಕ್ತಿಯೊಬ್ಬ ದಿನವೊಂದಕ್ಕೆ ಎಷ್ಟು ಸಮಯ ಗಾಸಿಪ್‌ನಲ್ಲಿ ಕಳೆಯುತ್ತಾನೆಂಬ ಪ್ರಶ್ನೆ ಎತ್ತಿದರೆ, ಸರಾಸರಿ 52 ನಿಮಿಷ ಎನ್ನುತ್ತಾರೆ ಸಂಶೋಧಕರು. ಅಂದರೆ ಸುಮಾರು ದಿನದ ಒಂದು ಗಂಟೆಯನ್ನು, ವರ್ಷದಲ್ಲಿ 365 ಗಂಟೆಗಳಷ್ಟು ಸಮಯ ಅವರಿವರ ಬಗ್ಗೆ ಮಾತಾಡುತ್ತಲೇ ಪೋಲು ಮಾಡುತ್ತೇವೆಂದಾಯಿತು. 

ಅವಧಿಪೂರ್ವ ಜನಿಸಿದ ಮಕ್ಕಳ ಮೆದುಳಿಗೆ ಪುಂಗಿ ಚಿಕಿತ್ಸೆ!

ಆದರೆ, ಇದರಲ್ಲೂ ಒಂದು ಪಾಸಿಟಿವ್ ವಿಷಯವಿದೆ. ಏನು ಗೊತ್ತಾ? ಸಾಮಾನ್ಯವಾಗಿ ನಾವು ಗಾಸಿಪ್ ಮಾಡಬೇಕೆಂದೇ ಮಾತನಾಡುವುದಿಲ್ಲ. ಜನರು ಮತ್ತೊಬ್ಬರೊಂದಿಗೆ ಸಂಪರ್ಕ ಸಾಧಿಸಬೇಕೆಂಬ ಆಶಯದಿಂದ ವಿಷಯಗಳನ್ನು ಹಂಚಿಕೊಳ್ಳುತ್ತಾರೆಯೇ ಹೊರತು ಇನ್ನೊಬ್ಬರಿಗೆ ಕೇಡು ಬಯಸಿ ಅಲ್ಲ ಎಂಬುದು ಗಮನಾರ್ಹ. ಹೀಗಾಗಿ, ಗಾಸಿಪ್ ಲೋಕದಲ್ಲಿ ನಾಲ್ಕರಲ್ಲಿ ಮೂರು ಭಾಗದಷ್ಟು ಗಾಸಿಪ್ ನ್ಯೂಟ್ರಲ್ ರೀತಿಯದ್ದು. ಹೆಚ್ಚಿನವರು ತಮಗೆ ವಿಷಯ ಗೊತ್ತಾಗದಿರುವ ಭಯಕ್ಕೆ ಅಥವಾ ತಮ್ಮ ಬಗ್ಗೆಯೇ ಮಾತನಾಡುತ್ತಿದ್ದರೆ ಎಂಬ ಅನುಮಾನದಲ್ಲಿ ಹೆದರುವುದಕ್ಕಿಂತ ಗಾಸಿಪ್ ಮಾತನಾಡುವ ಗುಂಪಿನೊಂದಿಗಿರುವುದು ಸೇಫ್ ಎಂದೂ ತಿಳಿಯುತ್ತಾರೆ. ಅಲ್ಲದೆ, ಗುಟ್ಟುಗಳನ್ನು ಹೇಳುವವರನ್ನೇ ಅಲ್ಲವೇ ನಾವು ಗೆಳೆಯರೆಂದು ತಿಳಿಯುವುದು.