Asianet Suvarna News Asianet Suvarna News

ಸಾಮಾನ್ಯ ಕಾಯಿಲೆಗಳಿಗೆ ಬಳಸಿ ಹರ್ಬಲ್ ಫಸ್ಟ್ ಏಡ್ ಕಿಟ್!

ಮನೆಮದ್ದುಗಳು ಭಾರತೀಯರಿಗೆ ಹೊಸತಲ್ಲ. ಆದರೆ, ಹೊಸ ತಲೆಮಾರಿನವರಿಗೆ ಅವು ಸ್ವಲ್ಪ ಹೊಸತು. ಅಡುಗೆಕೋಣೆಯಲ್ಲೇ ಔಷಧವಿರುವಾಗ ಎಲ್ಲಕ್ಕೂ ಮಾತ್ರೆ ನುಂಗುವುದು, ಸಣ್ಣಪುಟ್ಟದ್ದಕ್ಕೂ ವೈದ್ಯರ ಬಳಿ ಹೋಗುವುದು ಸಮಯ ಹಾಗೂ ಹಣವನ್ನು ವ್ಯರ್ಥ ಪೋಲು ಮಾಡಿದಂತೆ. 
 

7 ways to Make An Herbal First Aid Kit For Common Ailments
Author
Bangalore, First Published Dec 28, 2019, 8:42 AM IST

ಪ್ರತಿನಿತ್ಯ ಆಹಾರದಲ್ಲಿ ಶುಂಠಿ, ನಿಂಬೆ, ಜೇನುತುಪ್ಪ, ಕರಿಮೆಣಸು, ಕೊಬ್ಬರಿಎಣ್ಣೆ, ತುಪ್ಪ ಮುಂತಾದವುಗಳನ್ನು ಸೇರಿಸಿಕೊಂಡು ಸಾಮಾನ್ಯವೆಂಬಂತೆ ಸೇವಿಸುವುದರಿಂದ ಹಲವಾರು ಕಾಯಿಲೆಗಳನ್ನು ನಮಗೆ ಗೊತ್ತಿಲ್ಲದೆಯೇ ದೂರವಿಡುತ್ತಿರುತ್ತೇವೆ. ಆದರೂ ಕೆಲವೊಮ್ಮೆ ಜ್ವರ, ಕೆಮ್ಮು, ಶೀತ, ಅಲರ್ಜಿ, ನೋವು ಮುಂತಾದ ಸಣ್ಣ ಪುಟ್ಟ ತೊಂದರೆಗಳು ಬಾಧಿಸುತ್ತವೆ. ಇವುಗಳಿಗೆ ವೈದ್ಯರ ಬಳಿ ಹೋಗುವುದಕ್ಕಿಂತ ಮನೆಯಲ್ಲೇ ಮದ್ದು ಮಾಡಿ ಸೇವಿಸಬಹುದು. ಯಾವ ಅಡ್ಡ ಪರಿಣಾಮವೂ ಇಲ್ಲದ ಈ ಔಷಧಗಳು ಕಾಯಿಲೆಗಳ ವಿರುದ್ಧ ಸಮರ್ಥವಾಗಿ ಹೋರಾಡುತ್ತವೆ. ಇಲ್ಲಿವೆ ನೋಡಿ ಯಾವ ಸಮಸ್ಯೆಗೆ ಏನು ಮದ್ದಾಗುತ್ತದೆ ಎಂದು.

ನಿಮ್ಮ ದೇಹದ ವಾಸನೆಯ ಮುಜುಗರದಿಂದ ಪಾರಾಗೋದು ಹೇಗೆ?

1. ಸಣ್ಣ ಪುಟ್ಟ ಸುಟ್ಟ ಗಾಯ

ಅಲೋವೆರಾ ಸಣ್ಣ ಪುಟ್ಟ ಸುಟ್ಟ ಗಾಯಗಳಿಗೆ ಬಹಳ ಉಪಯುಕ್ತ. ಇದರ ತಂಪು ಗುಣ ಗಾಯದ ಉರಿ ಕಡಿಮೆ ಮಾಡುವ ಜೊತೆಗೆ ಬೇಗ ಗುಣಪಡಿಸುತ್ತದೆ. 

2. ಅಲರ್ಜಿಗಳು

ಮೈ ತುರಿಕೆ ಇದ್ದರೆ ತುಂಬೆ ಎಲೆಗಳನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಇದು ತಣ್ಣಗಾದ ಬಳಿಕ ತುರಿಕೆ ಇರುವ ಜಾಗಕ್ಕೆ ಹಚ್ಚಿ.  ಟೀಟ್ರೀ ಆಯಿಲ್ ಕೂಡಾ ಅಲರ್ಜಿಗೆ ಒಳ್ಳೆಯದು. ಸ್ಪಾಂಜ್‌ಗೆ ಐದಾರು ಹನಿ ಟೀ ಟ್ರೀ ಆಯಿಲ್ ಹಾಕಿಕೊಂಡು ಚರ್ಮದ  ಸಮಸ್ಯೆ ಇರುವಲ್ಲಿಗೆ ಲೇಪಿಸಿ. 

3. ಶೀತ, ಕೆಮ್ಮು

ಕಿತ್ತಳೆ ಹಣ್ಣಿನ ಜ್ಯೂಸ್ ಶೀತಕ್ಕೆ ಒಳ್ಳೆಯದು. ಪ್ರತಿದಿನ ಕುಡಿಯುವುದರಿಂದ ಕೆಮ್ಮು, ಕಫ, ಶೀತವನ್ನು ದೂರವಿಡಬಹುದು. 

ಕೆಮ್ಮು ಜೋರಿದ್ದರೆ  2 ಕಪ್ ನಿಂಬೆರಸ ಹಾಗೂ 7 ಚಮಚ ಜೇನುತುಪ್ಪವನ್ನು ಪಾತ್ರೆಯಲ್ಲಿ ತೆಗೆದುಕೊಂಡು ಒಂದು ಗಂಟೆ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಇದು ತಣ್ಣಗಾದ ಬಳಿಕ ಪ್ರತಿ ಗಂಟೆಗೆ ಎರಡು ಚಮಚ ಈ ಸಿರಪ್ ಸೇವಿಸಿ. ನಂತರದ ದಿನಗಳಲ್ಲೂ ಕೆಮ್ಮು ಉಳಿದಿದ್ದರೆ ಮೂರು ಗಂಟೆಗೊಮ್ಮೆ 1 ಚಮಚ ಸೇವಿಸಿ. ಗಂಟಲಲ್ಲಿ ಕಫ ಕಟ್ಟಿದ್ದರೆ ಅಥವಾ ನೋವಿದ್ದರೆ ಉಪ್ಪು ನೀರನ್ನು ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಗಂಟಲವರೆಗೆ ತೆಗೆದುಕೊಂಡು ಹೋಗಿ ಮುಕ್ಕಳಿಸುವುದರಿಂದ ಕಫ ಹೋರಗೆ ಹೋಗಿ ಕಳೆದು ಹೋದ ಸ್ವರ ವಾಪಸ್ ಬರುತ್ತದೆ. ಸ್ವಲ್ಪ ಆರಾಮವೂ ಆಗುತ್ತದೆ. 

ಇದನ್ನ ತಿಂದ್ರೆ ಹ್ಯಾಂಗ್ ಓವರ್‌ನಿಂದ ಪಾರಾಗ್ತೀರ!

4. ತಲೆನೋವು 

ಲ್ಯಾವೆಂಡರ್ ಹಾಗೂ ಪುದೀನಾ ಎಣ್ಣೆಯ ಬಳಕೆಯು ತಲೆನೋವಿಗೆ ಅರೋಮಾಥೆರಪಿಯಂತೆ ಕೆಲಸ ಮಾಡುತ್ತವೆ. ಹಣೆಯ ಎರಡೂ ಬದಿಗೆ ಇವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಮತ್ತೊಂದು ಮದ್ದೆಂದರೆ ಮಲಗಿಕೊಂಡು 15 ನಿಮಿಷಗಳ ಕಾಲ ನೋವಿರುವ ಸ್ಥಳಕ್ಕೆ ಕೋಲ್ಡ್ ಪ್ಯಾಕ್ ಕೊಟ್ಟುಕೊಳ್ಳಿ. ಪುದೀನಾ ಟೀ ಸೇವನೆ ಕೂಡಾ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಮೈಗ್ರೇನ್ ಇದ್ದರೆ ದಿನಕ್ಕೆ 100 ಗ್ರಾಂನಷ್ಟು ಬಾದಾಮಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಎಂಡೋರ್ಫಿನ್ ಹಾರ್ಮೋನ್ ಬಿಡುಗಡೆಯಾಗಿ ನೋವನ್ನು ಕಡಿಮೆ ಮಾಡುತ್ತದೆ. 

ತಲೆನೋವು ಸಿಕ್ಕಾಪಟ್ಟೆ ಜೋರಿದ್ದಾಗ ಸಕ್ಕರೆರಹಿತ ಬ್ಲ್ಯಾಕ್ ಕಾಫಿ ಮಾಡಿಕೊಂಡು ಕುಡಿಯಿರಿ. ಕೆಫಿನ್ ಸೇವನೆಯಿಂದ ನೋವು ನಿಯಂತ್ರಣಕ್ಕೆ ಬರುತ್ತದೆ. 

5. ಕೀಟ ಕಚ್ಚಿದರೆ

ಜೇನುನೊಣ, ಸೊಳ್ಳೆ, ಇರುವೆ ಮುಂತಾದ ಕೀಟಗಳು ಕಚ್ಚಿದಾಗ ತುರಿಕೆ ಜೊತೆಗೆ ನೋವು ಕಾಣಿಸಿಕೊಳ್ಳಬಹುದು. ಇದಕ್ಕೆ ಲ್ಯಾವೆಂಡರ್ ಎಣ್ಣೆ ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ. 

6. ಸಂಕಟ

ಶುಂಠಿರಸವು ಸಂಕಟವನ್ನು ಕಡಿಮೆ ಮಾಡುವಲ್ಲಿ ಸಹಾಯಕ. ಹೊಟ್ಟೆ ಕೆಟ್ಟಾಗ, ಗಂಟಲಲ್ಲಿ ಕಫ ಕಟ್ಟಿದಾಗ ಕೂಡಾ ಶುಂಠಿ ರಸ ಸೇವನೆ ಚೆನ್ನಾಗಿ  ಸಹಾಯ ಮಾಡುತ್ತದೆ. ಇದರೊಂದಿಗೆ ನಿಂಬೆರಸ ಕೂಡಾ ಸಂಕಟ ಶಮನಕಾರಿ. 

ತುಂಬಾ ಹೊತ್ತು ಕುಳಿತಿರೋದು ಸ್ಮೋಕಿಂಗ್‌ನಷ್ಟೇ ಅಪಾಯಕಾರಿ !

7. ಬೆನ್ನುನೋವು

ಬೆನ್ನುನೋವಿದ್ದಾಗ ಅದರ ಆಕ್ಯುಫ್ರೆಶರ್ ಪಾಯಿಂಟ್ ಸೊಂಟದಿಂದ ಕೆಳಗೆ ಇರುತ್ತದೆ. ಯಾರ ಬಳಿಯಾದರೂ ಹೇಳಿ, ಅಲ್ಲಿಗೆ ಸ್ವಲ್ಪ ಆಲ್ಕೋಹಾಲ್ ಚಿಮ್ಮಿಸಿಕೊಂಡು ಚೆನ್ನಾಗಿ ಮಸಾಜ್ ಮಾಡಿಸಿಕೊಳ್ಳಿ. ಇದಲ್ಲದೆ ಗಂಧದ ಎಣ್ಣೆ ಕೂಡಾ ತನ್ನ ರಿಲ್ಯಾಕ್ಸಿಂಗ್ ಎಫೆಕ್ಟ್‌ಗಾಗಿ ಹೆಸರುವಾಸಿ. ಅದನ್ನು ಕೂಡಾ ಬೆನ್ನಿನ ಮಸಾಜ್‌ಗೆ ಬಳಸಬಹುದು. ಬೆನ್ನಿನ ಮೇಲೆ ಏನಾದರೂ ವಸ್ತುವನ್ನು ಹೊರ ಬೇಕಾಗಿ ಬಂದಾಗ ಕಾಲು ಗಂಟನ್ನು ಮಡಚಬೇಕೇ ಹೊರತು ಸೊಂಟವನ್ನಲ್ಲ. ಇದರಿಂದ ಬೆನ್ನಿಗೆ ಪೆಟ್ಟಾಗುವುದನ್ನು ತಡೆಯಬಹುದು. 

ಬೆನ್ನುನೋವು ಜೋರಿದ್ದರೆ ಹಾಟ್ ಆ್ಯಂಡ್ ಕೋಲ್ಡ್ ಪ್ಯಾಕ್ 20 ನಿಮಿಷಗಳ ಕಾಲ ಇಡಿ. ಕೋಲ್ಡ್ ಥೆರಪಿಗೆ ಐಸ್ ಪ್ಯಾಕ್ ಬಳಸಬಹುದು. ಹಾಟ್ ಥೆರಪಿಗೆ ಇಡಿಉಪ್ಪನ್ನು ಬಿಸಿ ಮಾಡಿ ಬಟ್ಟೆಯಲ್ಲಿ ಗಂಟು ಕಟ್ಟಿ ಬಳಸಬಹುದು. ಸರಿಯಾದ ಹಾಸಿಗೆ ಹಾಗೂ ದಿಂಬು ಬಳಕೆ ಬಗ್ಗೆ ಕೂಡಾ ಗಮನ ಕೊಡಬೇಕು. ತುಂಬಾ ಗಟ್ಟಿಯಾದ ಅಥವಾ ತುಂಬಾ ಮೆತ್ತಗಿನ ಹಾಸಿಗೆ ಬೇಡ. 

Follow Us:
Download App:
  • android
  • ios