108 ವರ್ಷದ ವೃದ್ಧರು ಪಂಜಾಬ್‌ನ ಮೋಗಾದಲ್ಲಿ ತರಕಾರಿ ಮಾರಿ ಜೀವನ ನಡೆಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಠಿಣ ಪರಿಶ್ರಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ನಿರುದ್ಯೋಗಿ ಯುವಕರಿಗೆ ಪ್ರೇರಣೆ ಎಂದೂ ಬಳಕೆದಾರರು ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಸಹಾಯ ಹಸ್ತ ಚಾಚಿದ್ದಾರೆ.
ವರ್ಷ 50ರ ಗಡಿ ದಾಟುತ್ತಿದ್ದಂತೆ ನನಗೆ ವಯಸ್ಸಾಯ್ತು ಎನ್ನುವವರ ಸಂಖ್ಯೆ ನಮ್ಮಲ್ಲಿ ಸಾಕಷ್ಟಿದೆ. ಇನ್ನು 100 ವರ್ಷ ಬದುಕೋದೇ ಕಷ್ಟ, ಬದುಕಿರೋರು ಹಾಸಿಗೆ ಮೇಲೋ ಇಲ್ಲ ಆಸ್ಪತ್ರೆಯಲ್ಲೋ ಇರೋದೇ ಹೆಚ್ಚು. ಅತಿ ಅಪರೂಪ ಎನ್ನುವಂತೆ 100ರ ಗಡಿ ದಾಟಿದ ಕೆಲವರು ಆಕ್ಟಿವ್ ಆಗಿರ್ತಾರೆ. ಜನರು ಹುಬ್ಬೇರಿಸುವಂತೆ ಮಾಡ್ತಾರೆ. ನೂರು ವರ್ಷ ಬದುಕೋದು ಹೇಗೆ, ಏನು ಸೇವನೆ ಮಾಡ್ಬೇಕು, ಏನೆಲ್ಲ ಮಾಡ್ಬೇಕು ಅಂತ ಜನರು ಅವರ ಹತ್ತಿರ ಕೇಳಿ ತಿಳಿಯೋದಿದೆ. ನೂರು ವರ್ಷ ದಾಟಿದ ಕೆಲವರು ಸೋಶಿಯಲ್ ಮೀಡಿಯಾ (Social media)ದಲ್ಲಿ ವೈರಲ್ ಆಗಿದ್ದಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ನೂರಲ್ಲ 108 ವರ್ಷದ ಯುವಕನನ್ನು ನೀವು ಕಾಣ್ಬಹುದು. ವಿಶೇಷ ಅಂದ್ರೆ ಆತ ಹಾಸಿಗೆ ಮೇಲೂ ಇಲ್ಲ, ಮನೆಯಲ್ಲಿ ವಿಶ್ರಾಂತಿ ಪಡೀತಾನೂ ಇಲ್ಲ. ತರಕಾರಿ ಮಾರಾಟ ಮಾಡ್ತಾ, ತನ್ನ ಜೀವನ ಸಾಗಿಸ್ತಿದ್ದಾನೆ. ಅಚ್ಚರಿ ಅನ್ನಿಸಿದ್ರೂ ಇದು ಸತ್ಯ.
ಪಂಜಾಬ್ (Punjab)ನ ಮೋಗಾ ನಗರದಲ್ಲಿ, 108 ವರ್ಷದ ವ್ಯಕ್ತಿ ತನ್ನ ಹಾಗೂ ತನ್ನ ಕುಟುಂಬಸ್ಥರ ಹೊಟ್ಟೆ ತುಂಬಿಸಿಕೊಳ್ಳಲು ತರಕಾರಿಗಳನ್ನು ಮಾರಾಟ ಮಾಡ್ತಿರೋದು ಕಂಡು ಬಂದಿದೆ. ತರಕಾರಿ (Vegetables) ಮಾರುತ್ತಿರುವ ಈ ವೃದ್ಧನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಜನರು ಅವನ ಕೆಲಸವನ್ನು ಶ್ಲಾಘಿಸಿದ್ದಾರೆ. ಅನೇಕ ನಿರುದ್ಯೋಗಿ, ಸೋಮಾರಿ ಯುವಕರಿಗೆ ಈ ಅಜ್ಜ ಸ್ಪೂರ್ತಿಯಾಗ್ಬೇಕು ಎಂಬ ಮಾತುಗಳು ಕೇಳಿ ಬಂದಿವೆ.
ವೃದ್ಧಾಶ್ರಮದಲ್ಲಿ ಚಿಗುರಿದ ಪ್ರೀತಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ – ಅಜ್ಜಿ
@_manithind_ ಹೆಸರಿನ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅಜ್ಜ ತಳ್ಳುವ ಗಾಡಿ ಪಕ್ಕ ಕುಳಿತಿದ್ದಾನೆ. ತಳ್ಳುವ ಗಾಡಿಯಲ್ಲಿ ಈರುಳ್ಳಿ, ಆಲೂಗಡ್ಡೆಯನ್ನು ನೀವು ಕಾಣ್ಬಹುದು. ವಿಡಿಯೋದಲ್ಲಿ ತನ್ನ ವಯಸ್ಸನ್ನು ಕೂಡ ಅಜ್ಜ ಹೇಳ್ತಿದ್ದಾನೆ. ಇಂದು ಮೊಗಾದಲ್ಲಿ ಒಬ್ಬ ಅದ್ಭುತ ವ್ಯಕ್ತಿಯನ್ನು ಭೇಟಿಯಾದೆ, 108 ವರ್ಷ ವಯಸ್ಸಿನ ಬೀದಿ ವ್ಯಾಪಾರಿ, ಇನ್ನೂ ನಗುತ್ತಾ ಈರುಳ್ಳಿ ಮತ್ತು ಆಲೂಗಡ್ಡೆ ಮಾರುತ್ತಿದ್ದಾನೆ. ಅವರ ಜೀವನವು ಕಠಿಣ ಪರಿಶ್ರಮದಿಂದ ಕೂಡಿದ್ದು, ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. ಈ ವೀಡಿಯೊಗೆ ಇದುವರೆಗೆ 3.26 ಲಕ್ಷಕ್ಕೂ ಹೆಚ್ಚು ಲೈಕ್ ಬಂದಿವೆ. ಅನೇಕ ಜನರು ಕಾಮೆಂಟ್ ಮಾಡುತ್ತಿದ್ದಾರೆ. ಅಜ್ಜನ ಕೆಲಸವನ್ನು ಬಳಕೆದಾರರು ಮೆಚ್ಚಿದ್ದಾರೆ.
ತುಪ್ಪ ಸೇವನೆಗೂ ಟೈಂ ಇದೆ, ತಪ್ಪಾಗಿ ತಿನ್ನೋರ ಸಂಖ್ಯೆಯೇ ಹೆಚ್ಚಿದೆ
ರೊಟ್ಟಿ ದಾಲ್ ತಿಂದು ಅಜ್ಜ ಗಟ್ಟಿಯಾಗಿದ್ದಾರೆಂದು ಕಮೆಂಟ್ ಮಾಡಿದ್ದಾರೆ. ಅವರು ಇನ್ನಷ್ಟು ವರ್ಷ ಸುಖವಾಗಿ ಬದುಕಲಿ ಎಂದು ಇನ್ನೊಬ್ಬರು ಆಶಿಸಿದ್ದಾರೆ. ಅವರು ಯುವಕರಿಗೆ ಸ್ಪೂರ್ತಿ, ನಾನು 25 ವರ್ಷಗಳ ಹಿಂದೆ ಅವರನ್ನು ನೋಡಿದ್ದೆ, ಈಗ ಅವರು ಆರೋಗ್ಯವಾಗಿದ್ದಾರೆಂದು ಭಾವಿಸುತ್ತೇನೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಒಳ್ಳೆ ಆಲೋಚನೆ ಹೊಂದಿರುವ ಹಿರಿಯರು ಇವರು, ಇವರದ್ದೇ ಕೊನೆ ತಲೆಮಾರು ಎಂದು ಮತ್ತೊಬ್ಬರು ಬರೆದಿದ್ದಾರೆ. ಅಜ್ಜ ನಿರಂತರವಾಗಿ ಕೆಲಸ ಮಾಡ್ತಿರೋದೆ ಅವರು ಇಷ್ಟು ಕಾಲ ಬದುಕಲು ಕಾರಣ ಎಂದು ಮತ್ತೊಬ್ಬರು ಬರೆದಿದ್ದಾರೆ. ಕೆಲ ಬಳಕೆದಾರರು ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅವರು ಎಲ್ಲಿ ಸಿಗ್ತಾರೆ, ಅವರನ್ನು ಸಂಪರ್ಕಿಸೋದು ಹೇಗೆ ಎಂದು ಕೇಳಿದ್ದಾರೆ.
