ಹಿರೇಕೆರೂರು[ನ.13]: ಸುಪ್ರೀಂ ಕೋರ್ಟ್ ತಂದೆಯ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಿದೆ ಎಂದು ಅನರ್ಹ ಶಾಸಕ ಬಿ ಸಿ ಪಾಟೀಲ್ ಅವರ ಪುತ್ರಿ ಶೃತಿ ಪಾಟೀಲ್ ಅವರು ಹೇಳಿದ್ದಾರೆ.

ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ತೀರ್ಪು ಅತ್ಯಂತ‌ ಖುಷಿ ಕೊಟ್ಟಿದೆ. ನಾವು ನಿರೀಕ್ಷೆ ಮಾಡಿದ್ದು ಕೂಡ ಇದನ್ನೇ. ನಾಳೆ ನಮ್ಮ ತಂದೆ ಬರ್ತ್ ಡೇ ಅವರಿಗೆ ಸುಪ್ರೀಂ ಕೋರ್ಟ್ ‌ಗಿಫ್ಟ್ ನೀಡಿದೆ. ನಾನು ತೀರ್ಪು ಬಂದ ತಕ್ಷಣ ತಂದೆಗೆ ಕರೆ ಮಾಡಿ ಮಾತನಾಡಿದ್ದೇನೆ. ಅವರು ಕೂಡ ಖುಷಿಯಾಗಿದ್ದಾರೆ. ಎಲ್ಲರಿಗೂ ಧನ್ಯವಾದ ಹೇಳಿದ್ದೇನೆ. ಯಾಕಂದ್ರೆ ‌ಅನರ್ಹ ಶಾಸಕರು ಎಲ್ಲರೂ ಸೇರಿ ಒಂದು ದೊಡ್ಡ ತೀರ್ಮಾನ ತೆಗೆದುಕೊಂಡಿದ್ರು ಚುನಾವಣೆಗೆ ಸ್ಪರ್ಧೆ ಮಾಡೋಕೆ ಅವಕಾಶ ಕೊಟ್ಟಿರೋದು ದೊಡ್ಡ ಜಯ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ. 

ಸೋತರೂ ಗೆದ್ದ ಅನರ್ಹ ಶಾಸಕರು: ಚುನಾವಣೆಗೆ ಸ್ಪರ್ಧೆಗೆ ಅಸ್ತು ಎಂದ ಸುಪ್ರೀಂ

ಮಾಜಿ ಸ್ಪೀಕರ್ ರಮೇಶಕುಮಾರ್ ಅವರು ಒಂದು ವಿಧಾನಸಭೆ ಅವಧಿ ಮುಗಿಯುವವರೆಗೂ ಶಾಸಕರನ್ನ ಅನರ್ಹತೆ ಮಾಡಿದ್ದರು. ರಮೇಶ ಕುಮಾರ ಅವರು ಒಂದು ಪಕ್ಷದ ಪರ ಕೆಲಸ ಮಾಡಿ ಇಂತಹ ‌ಆದೇಶ ಮಾಡಿದ್ದರು.ಆದರೆ, ಸುಪ್ರೀಂಕೋರ್ಟ್ ನ್ಯಾಯದ ಪರ ತೀರ್ಪು ನೀಡಿದೆ.  ನಾಳೆ‌ಯಿಂದಲೇ ಉಪ ಚುನಾವಣೆ ಕೆಲಸ ಶುರು ಮಾಡುತ್ತೇವೆ. ಹಿರೇಕೆರೂರಿನ ಜನ ಈ ಬಾರಿ ಇನ್ನಷ್ಟು ಹೆಚ್ಚಿನ ಅಂತರದಿಂದ ನಮ್ಮ ತಂದೆಯನ್ನು ಗೆಲ್ಲಿಸ್ತಾರೆ. ಪಕ್ಷೇತರ ಆದರೂ ಸರಿ ಅಥವಾ ಒಂದು ಪಕ್ಷದ ಚಿಹ್ನೆಯಿಂದ ನಿಂತರೂ ಸರಿ ಜನ ಆಶೀರ್ವಾದ ಮಾಡ್ತಾರೆ. ನಾನು ಚುನಾವಣೆಯಲ್ಲಿ ತಂದೆ‌ ಪರ ಓಡಾಡಿ ಕೆಲಸ ಮಾಡ್ತೀನಿ ಎಂದು ಹೇಳಿದ್ದಾರೆ. 

ಸೋತು ಬೀಗಿದ ಅನರ್ಹರು: ಚುನಾವಣೇಲಿ ಗೆದ್ದರೆ ಸಚಿವ ಪದವಿ ಖಚಿತ!

ಅನರ್ಹ ಶಾಸಕರ ತೀರ್ಪು ಕೊನೆಗೂ ಸುಪ್ರೀಂ ಕೋರ್ಟಿಂದ ಪ್ರಕಟವಾಗಿದೆ. ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.ಆದರೆ ಇದೇ ವೇಳೆ ರಿಲೀಫ್ ಕೂಡ ನೀಡಿದೆ. ರಾಜ್ಯದಲ್ಲಿ ಶೀಘ್ರ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಹೇಳಿದೆ. ಇದರಿಂದ ಅನರ್ಹ ಶಾಸಕರು ಸಂತಸದಲ್ಲಿದ್ದಾರೆ.