ಅರಸೀಕೆರೆಯ ಅಗ್ಗುಂದ ಗ್ರಾಮದ ಶ್ರೀಮತಿ ಎ.ವಿ. ಶಿವಲಿಂಗಮ್ಮ ಪ್ರೌಢಶಾಲೆಯಲ್ಲಿ 45 ವರ್ಷಗಳ ಹಿಂದಿನ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಗುರುವಂದನೆ ಸಲ್ಲಿಸಿದರು. ನಿವೃತ್ತ ಶಿಕ್ಷಕರನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿ ಸನ್ಮಾನಿಸಲಾಯಿತು. ಇದೇ ವೇಳೆ ಡಾ. ಭಾರತಿಯವರ ಪುಸ್ತಕ ಬಿಡುಗಡೆ ಮಾಡಲಾಯಿತು.
ಹಾಸನ: ನಾಲ್ಕು ದಶಕಗಳ ಹಿಂದೆ ತಮಗೆ ಅಕ್ಷರಾಭ್ಯಾಸ ಮಾಡಿಸಿ ಬದುಕಿನ ದಿಕ್ಕು ತೋರಿದ ಗುರುಗಳನ್ನು ಸ್ಮರಿಸುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಗುರುವಂದನೆ ಸಲ್ಲಿಸಿದ ಅಪರೂಪದ ಕ್ಷಣಕ್ಕೆ ಕಸಬಾ ಹೋಬಳಿಯ ಅಗ್ಗುಂದ ಗ್ರಾಮ ಸಾಕ್ಷಿಯಾಯಿತು.
ಗ್ರಾಮದ ಶ್ರೀಮತಿ ಎ.ವಿ. ಶಿವಲಿಂಗಮ್ಮ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ವತಿಯಿಂದ ಗುರುವಂದನೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸುಮಾರು 45 ವರ್ಷಗಳ ಹಿಂದೆ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳು ವೈದ್ಯರು, ಶಿಕ್ಷಕರು, ರೈತರು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಬದುಕಿಗೆ ಮಾರ್ಗದರ್ಶನ ನೀಡಿದ ಗುರುಗಳನ್ನು ಗೌರವಿಸುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಶಿಕ್ಷಕರಿಗೆ ಬೆಳ್ಳಿರಥದಲ್ಲಿ ಮೆರವಣಿಗೆ
ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಶಿಕ್ಷಕರನ್ನು ಉಡುಸಲಮ್ಮ ದೇವಸ್ಥಾನದಿಂದ ಶಾಲೆಯವರೆಗೆ ವಿಶೇಷ ಮೆರವಣಿಗೆಯ ಮೂಲಕ ಕರೆತರಲಾಯಿತು. ಪಟಾಕಿ ಸಿಡಿಸಿ, ವೀರಗಾಸೆ ಕಲಾತಂಡದ ಪ್ರದರ್ಶನದೊಂದಿಗೆ ಶಿಕ್ಷಕರನ್ನು ಬೆಳ್ಳಿರಥದಲ್ಲಿ ಕೂರಿಸಿ, ಪೂರ್ಣಕುಂಭದೊಂದಿಗೆ ಗೌರವಪೂರ್ವಕವಾಗಿ ಶಾಲಾ ಆವರಣಕ್ಕೆ ಕರೆತರಲಾಯಿತು. ಬಳಿಕ ವೇದಿಕೆಯಲ್ಲಿ ಹಿರಿಯ ಶಿಕ್ಷಕರನ್ನು ಸನ್ಮಾನಿಸಿ, ಅವರ ಸೇವೆ ಹಾಗೂ ವಿದ್ಯಾರ್ಥಿಗಳ ಬದುಕಿಗೆ ನೀಡಿದ ಮಾರ್ಗದರ್ಶನವನ್ನು ಹಳೆಯ ವಿದ್ಯಾರ್ಥಿಗಳು ಸ್ಮರಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ವೈ.ಬಿ. ಹರಿಯಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸಿ, ಉತ್ತಮ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಿದ ಗುರುಗಳನ್ನು ಎಂದಿಗೂ ಮರೆಯಬಾರದು. ತಮಗೆ ವಿದ್ಯೆ ನೀಡಿದ ಶಾಲೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ತಮ್ಮ ಕೈಲಾದಷ್ಟು ತನು, ಮನ, ಧನದಿಂದ ಸಹಕರಿಸಬೇಕು ಎಂದು ಹೇಳಿದರು.
ತಂದೆ- ತಾಯಿಯನ್ನು ಗೌರವದಿಂದ ನೋಡಿಕೊಳ್ಳುವ ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರುವ ವಿದ್ಯಾರ್ಥಿಯನ್ನು ಕಂಡಾಗ ಶಿಕ್ಷಕರಿಗೆ ಅಪಾರ ಸಂತೋಷವಾಗುತ್ತದೆ. ಪ್ರತಿಯೊಬ್ಬ ಗುರು ಕೂಡ ತನ್ನ ಶಿಷ್ಯರು ತನಗಿಂತಲೂ ಉನ್ನತ ಸ್ಥಾನಕ್ಕೇರಬೇಕು ಎಂಬ ಆಶಯ ಹೊಂದಿರುತ್ತಾರೆ. ನಾಲ್ಕೈದು ದಶಕಗಳ ಹಿಂದೆ ಪಾಠ ಕಲಿಸಿದ ಗುರುಗಳನ್ನು ಇಂದಿಗೂ ಸ್ಮರಿಸಿ ಗೌರವಿಸುತ್ತಿರುವುದು ಸಂತಸದ ಸಂಗತಿ ಎಂದರು.
ನಿವೃತ ಶಿಕ್ಷಕ ಹಿರಿಯಣ್ಣಯ್ಯ ಮಾತನಾಡಿ, ಶಿಕ್ಷಕ ಎಂದರೆ ಕೇವಲ ಪಠ್ಯಪುಸ್ತಕದ ವಿಷಯಗಳನ್ನು ಬೋಧಿಸುವ ವ್ಯಕ್ತಿಯಲ್ಲ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ, ಉತ್ತಮ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು, ಶಾಲೆಯಲ್ಲಿ ಸೇವೆ ಸಲ್ಲಿಸಿದ ದಿನಗಳ ಅನುಭವಗಳನ್ನು ಹಳೆಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಜಿ.ಎನ್. ಜಯಣ್ಣ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಗೂ ಆದ್ಯತೆ ನೀಡಬೇಕು. ಶಿಕ್ಷಣ ಮತ್ತು ಕ್ರೀಡೆ ಎರಡರಲ್ಲೂ ಆಸಕ್ತಿ ಬೆಳೆಸಿಕೊಂಡಾಗ ಸಮಗ್ರ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಎನ್.ಆರ್. ರಾಜಪ್ಪ, ಎಂ.ಬಿ. ಓಂಕಾರಪ್ಪ ಸೇರಿದಂತೆ ನಿವೃತ್ತ ಶಿಕ್ಷಕರು ತಮ್ಮ ಸೇವಾವಧಿಯ ಅನುಭವಗಳನ್ನು ಹಳೆಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಎ.ಎಂ. ರಾಮಚಂದ್ರಪ್ಪ, ಕಲ್ಲೇಶಪ್ಪ, ಎಸ್. ಶಿವಣ್ಣ ಸೇರಿದಂತೆ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕರು ಸಹ ತಮ್ಮ ಅನುಭವಗಳನ್ನು ಮೆಲುಕು ಹಾಕಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕಿ ಡಾ. ಭಾರತಿಯವರ ಪಿಎಚ್‌ಡಿ ಆಧಾರಿತ ‘ಜಿಲ್ಲಾ ಪಂಚಾಯಿತಿಯಲ್ಲಿ ಮಹಿಳೆಯರ ಪಾತ್ರ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ವೈ.ಎಸ್. ಪರಮೇಶ್ವರಪ್ಪ ಸ್ವಾಗತಿಸಿದರು. ಪಿ.ಎಸ್. ಗೀತಾ ಕಾರ್ಯಕ್ರಮ ನಿರೂಪಿಸಿದರು. ಎ.ಎಸ್. ಪರಮೇಶ್ವರಯ್ಯ ವಂದಿಸಿದರು. ಹಳೆಯ ವಿದ್ಯಾರ್ಥಿಗಳಾದ ಎ.ಎಸ್. ಕರುಣಾಕರ, ಪನ್ನಸಮುದ್ರ, ಮರುಳಯ್ಯ, ಷಡಕ್ಷರಿ ಸೇರಿದಂತೆ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


