ಅರಕಲಗೂಡು ತಾಲೂಕಿನ ಮಜ್ಜನಹಳ್ಳಿ ಗ್ರಾಮದಲ್ಲಿ ಮೂಢನಂಬಿಕೆಯಿಂದಾಗಿ ಮನೆ ಮುಂದಿನ ರಸ್ತೆಯಲ್ಲಿ ಶವ ಸಾಗಿಸಲು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಮೃತದೇಹವನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆಯಲ್ಲೇ ಇರಿಸಲಾಗಿತ್ತು.

ಹಾಸನ: ಮನೆ ಮುಂದಿನ ರಸ್ತೆಯಲ್ಲಿ ಶವ ಸಾಗಿಸಲು ಅವಕಾಶ ನೀಡುವುದಿಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೃತದೇಹ ರಸ್ತೆಯಲ್ಲೇ ಕೆಲಕಾಲ ಇರಿಸಿದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿ ಮಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮನೆ ಮುಂದಿನ ರಸ್ತೆಯಲ್ಲಿ ಶವ ತೆಗೆದುಕೊಂಡ ಹೋಗದಂತೆ ತಡೆ

ಗ್ರಾಮದ ಮಡಿವಾಳ ಜನಾಂಗಕ್ಕೆ ಸೇರಿದ ತಂಗ್ಯಮ್ಮ (60) ಗುರುವಾರ ರಾತ್ರಿ ಮೃತಪಟ್ಟಿದ್ದರು. ಶುಕ್ರವಾರ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಸಂದರ್ಭ ಮನೆ ಮುಂದಿನ ರಸ್ತೆಯಲ್ಲಿ ಶವ ಸಾಗಿಸಲು ಬಿಡುವುದಿಲ್ಲ ಎಂದು ಕೆಲ ಕುಟುಂಬಗಳು ವಿರೋಧ ವ್ಯಕ್ತಪಡಿಸಿದವು. ಇದರಿಂದ ಸುಮಾರು ಒಂದೂವರೆ ಗಂಟೆ ಶವ ರಸ್ತೆಯಲ್ಲೇ ಇರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಪೊಲೀಸರೇ ಬಂದು ಟ್ರ್ಯಾಕ್ಟರ್ ಚಲಾಯಿಸಿದ್ರು

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಪರ್ಯಾಯ ರಸ್ತೆ ಮೂಲಕ ಮೃತದೇಹ ಸ್ಮಶಾನಕ್ಕೆ ಸಾಗಿಸಲು ಅನುವು ಮಾಡಿಕೊಟ್ಟರು. ಪೊಲೀಸರು ಮಧ್ಯಪ್ರವೇಶಿಸಿ ಸೌದೆ ತುಂಬಿದ್ದ ಟ್ರ್ಯಾಕ್ಟರನ್ನು ಸ್ವತಃ ಚಲಾಯಿಸಿಕೊಂಡು ಬಂದು ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟರು.

ಇದನ್ನೂ ಓದಿ: ಹಾಸನಾಂಬ ದೇವಿ ಜಾತ್ರಾ ಪೋಸ್ಟರ್ ಬಿಡುಗಡೆ, 12 ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ