ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ; ಚಿಕಿತ್ಸೆ ಆರಂಭ
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕ್ಯಾನ್ಸರ್ ಮೂಳೆಗಳಿಗೂ ಹರಡಿದ್ದು, ಗ್ಲೀಸನ್ ಸ್ಕೋರ್ 9 ರಷ್ಟಿದೆ ಎಂದು ವೈಟ್ ಹೌಸ್ ತಿಳಿಸಿದೆ.

ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಂಡಿದ್ದ ಜೋ ಬೈಡೆನ್ (82) ಅವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಯತ್ನಗಳು ನಡೆದಿವೆ ಎಂದು ಶ್ವೇತಭವನ ತಿಳಿಸಿದೆ.
ಬೈಡನ್‌ಗೆ ಮೂತ್ರವಿಸರ್ಜನೆ ವೇಳೆ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ಶುಕ್ರವಾರ ಪರೀಕ್ಷೆ ನಡೆಸಿದಾಗ, ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯ ಸಹಾಯಕ ಗ್ರಂಥಿಯಾಗಿರುವ ಪ್ರೋಸ್ಟೇಟ್‌ನಲ್ಲಿ ಗಂಟುಗಳಿರುವುದು ಪತ್ತೆಯಾಗಿದೆ. ಇದು ಈಗಾಗಲೇ ಮೂಳೆಗಳಿಗೂ ಹರಡಿದೆ.
ಈ ಕ್ಯಾನ್ಸರ್‌ನ ಅಪಾಯವನ್ನು ಗ್ಲೀಸನ್ ಸ್ಕೋರ್‌ನಲ್ಲಿ 6ರಿಂದ 10ರ ವರೆಗೆ ಅಂಕ ನೀಡುವ ಮೂಲಕ ಅಳೆಯಬಹುದು. ಈ ಬಗ್ಗೆ ಮಾಹಿತಿ ನೀಡಿರುವ ವೈಟ್ ಹೌಸ್, ‘ಈ ಕ್ಯಾನ್ಸರ್ ಅಪಾಯಕಾರಿಯಾದರೂ, ಪ್ರೊಜೆಸ್ಟಿರೋನ್‌ನಂತಹ ಹಾರ್ಮೋನ್‌ಗಳೊಂದಿಗೆ ಸ್ಪಂದಿಸುವ ಕಾರಣ, ಅದನ್ನು ಸುಲಭವಾಗಿ ನಿರ್ವಹಿಸಬಹುದು.
ಗ್ಲೀಸನ್ ಸ್ಕೋರ್‌ನಲ್ಲಿ ಬೈಡನ್‌ರಿಗಿರುವ ಕ್ಯಾನ್ಸರ್ 9 ಅಂಕ ಪಡೆದಿದ್ದು, ಅಪಾಯಕಾರಿ ಎಂದು ಪರಿಗಣಿಸಲಾಗಿದೆ’ ಎಂದು ಹೇಳಿದೆ.ಈ ಮೊದಲು ಬೈಡೆನ್ ಚರ್ಮದ ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆದಿದ್ದರು. 2015ರಲ್ಲಿ ಇವರ ಪುತ್ರ ಬ್ಯೂ ಬೈಡೆನ್ ಕೂಡ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು
ನಾಯಕರ ಪ್ರತಿಕ್ರಿಯೆ
ಬೈಡೆನ್‌ರ ರಾಜಕೀಯ ವಿರೋಧಿಯಾಗಿರುವ ಡೊನಾಲ್ಡ್ ಟ್ರಂಪ್, ‘ಜೋ ಬೇಗ ಮತ್ತು ಯಶಸ್ವಿಯಾಗಿ ಚೇತರಿಸಿಕೊಳ್ಳಲಿ’ ಎಂದು ಹಾರೈಸಿದ್ದಾರೆ. ಬೈಡೆನ್‌ರನ್ನು ಹೋರಾಟಗಾರ ಎಂದು ಕರೆದಿರುವ ಕಮಲಾ ಹ್ಯಾರಿಸ್, ಮತ್ತು ಮಾಜಿ ಅಧ್ಯಕ್ಷ ಒಬಾಮಾ ಅವರಿಗಾಗಿ ಪ್ರಾರ್ಥಿಸಿದ್ದಾರೆ.
ಬೇಗ ಗುಣಮುಖರಾಗಿ-ಮೋದಿ
ಬೈಡೆನ್‌ರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿರುವುದರ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಬೈಡೆನ್ ಆರೋಗ್ಯದ ಬಗ್ಗೆ ಕಳವಳವಿದೆ. ಅವರು ಬೇಗ ಸಂಪೂರ್ಣ ಗುಣಮುಖರಾಗಲಿ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಪ್ರಾರ್ಥಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

