ಪ್ರಮುಖ ನಾಗರಿಕತೆಗಳ ರೂಪಿಸಿದ ವಿಶ್ವದ ಅತಿ ಉದ್ದದ 5 ನದಿಗಳಿವು
ಪ್ರಪಂಚದ ನಾಗರಿಕತೆಯಲ್ಲಿ ನದಿಗಳು ಪ್ರಮುಖ ಪಾತ್ರವಹಿಸುತ್ತವೆ. ವಿಶ್ವದ ಐದು ಅತಿ ಉದ್ದದ ನದಿಗಳು, ಅವುಗಳ ಸ್ಥಳ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ವಿಶ್ವದ ಅತೀ ಉದ್ದದ 5 ನದಿಗಳು
ನದಿಗಳು ದೇಶದ ಹಾಗೂ ಪ್ರಪಂಚದ ನಾಗರಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ನದಿಗಳಿಗೆ ಭಾರತ ಮಾತ್ರವಲ್ಲದೇ ಪ್ರಪಂಚದ ವಿವಿಧ ಸಂಸ್ಕೃತಿಗಳಲ್ಲಿ ಪೂಜನೀಯ ಭಾವವಿದೆ. ಲಕ್ಷಾಂತರ ಭೂಮಿಯನ್ನು ಹಸನು ಮಾಡುವುದರ ಜೊತೆಗೆ ಜನರ ಜೀವನಾಡಿಯಾಗಿ ನದಿಗಳು ಗುರುತಿಸಿಕೊಂಡಿವೆ. ಮಳೆಕಾಡುಗಳಿಂದ ಹಿಡಿದು ಮರುಭೂಮಿಗಳವರೆಗೆ ಮತ್ತು ಪರ್ವತಗಳಿಂದ ಸಾಗರಗಳವರೆಗೆ, ವಿಶ್ವದ ಅತಿ ಉದ್ದದ ನದಿಗಳು ವಿಶಾಲ ದೂರದವರೆಗೆ ವ್ಯಾಪಿಸಿವೆ. ಹೀಗಿರುವಾಗ ನಾವೀಗ ವಿಶ್ವದ ಐದು ಅತಿ ಉದ್ದದ ನದಿಗಳು ಹಾಗೂ ಅವು ಎಲ್ಲಿವೆ ಎಂಬುದನ್ನು ನೋಡೋಣ.
ನೈಲ್ ನದಿ, ಆಫ್ರಿಕಾ
ನೈಲ್ ನದಿಯು ಸರಿಸುಮಾರು 6,650 ಕಿಲೋಮೀಟರ್ ಉದ್ದವಿದ್ದು, ಇದು ವಿಶ್ವದ ಅತಿ ಉದ್ದದ ನದಿ ಎನಿಸಿದೆ ಇದು ಉಗಾಂಡಾ, ಸುಡಾನ್ ಮತ್ತು ಈಜಿಪ್ಟ್‌ನಂತಹ 11 ದೇಶಗಳಲ್ಲಿ ಉತ್ತರಕ್ಕೆ ಹರಿಯುತ್ತ ಸಾಗಿ ನಂತರ ಮೆಡಿಟರೇನಿಯನ್ ಸಮುದ್ರವನ್ನು ಸೇರುತ್ತದೆ. ತಾನು ಸಮುದ್ರವನ್ನು ಸೇರುವ ಮಧ್ಯೆ ನೈಲ್ ನದಿಯು ಲಕ್ಷಾಂತರ ಜನರಿಗೆ ನೀರುಣಿಸುತ್ತದೆ, ಈಶಾನ್ಯ ಆಫ್ರಿಕಾದ ಶುಷ್ಕ ಪ್ರದೇಶಗಳಲ್ಲಿ ಕೃಷಿ, ಸಾರಿಗೆ ಮತ್ತು ದೈನಂದಿನ ಜೀವನವನ್ನು ನಡೆಸುವವರ ಪಾಲಿಗೆ ಇದು ಜೀವನಾಡಿಯಾಗಿದೆ ಇದರ ಐತಿಹಾಸಿಕ ಮಹತ್ವವು ಪ್ರಾಚೀನ ಈಜಿಪ್ಟ್ ನಾಗರಿಕತೆಗೂ ಹಿಂದಿನದಾಗಿದೆ.
ಅಮೆಜಾನ್ ನದಿ, ದಕ್ಷಿಣ ಅಮೆರಿಕಾ
ಅಮೆಜಾನ್ ನದಿ ಸುಮಾರು 6,400 ಕಿಲೋಮೀಟರ್ ಉದ್ದವಿದ್ದು, ವಿಶ್ವದ ಎರಡನೇ ಅತಿ ಉದ್ದದ ನದಿಯಾಗಿದೆ ಆದರೆ ಇದು ವಿಶ್ವದಲ್ಲೇ ಅತಿ ಹೆಚ್ಚು ನೀರಿನ ಹೊರಸೂಸುವಿಕೆಯನ್ನು ಹೊಂದಿದೆ. ಇದು ಪೆರುವಿಯನ್ ಆಂಡಿಸ್‌ನಲ್ಲಿ ಹುಟ್ಟಿ ಕೊಲಂಬಿಯಾ ಮತ್ತು ಬ್ರೆಜಿಲ್ ಮೂಲಕ ಸಾಗಿ ಅಟ್ಲಾಂಟಿಕ್ ಸಾಗರಕ್ಕೆ ಸೇರುತ್ತದೆ. ಈ ನದಿಯೂ ಅಮೆಜಾನ್ ಜಲಾನಯನ ಪ್ರದೇಶದಲ್ಲಿ ಅತ್ಯಂತ ಜೀವವೈವಿಧ್ಯ ಮಳೆಕಾಡಿನ ಜೀವನಾಡಿಯಾಗಿದೆ. ಹಾಗೂ ಜಾಗತಿಕ ಪರಿಸರ ವಿಜ್ಞಾನ ಮತ್ತು ಇಂಗಾಲದ ಸೈಕ್ಲಿಂಗ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
ಯಾಂಗ್ಟ್ಜಿ ನದಿ, ಚೀನಾ
ಸುಮಾರು 6,374 ಕಿಲೋಮೀಟರ್ ಉದ್ದವಿರುವ ಯಾಂಗ್ಟ್ಜಿ ನದಿಯು ಏಷ್ಯಾದ ಅತಿ ಉದ್ದ ಮತ್ತು ವಿಶ್ವದ ಮೂರನೇ ಅತಿ ಉದ್ದದ ನದಿಯಾಗಿದೆ. ಇದು ಕೇವಲ ಚೀನಾದಲ್ಲಿ ಮಾತ್ರ ಹರಿಯುತ್ತದೆ, ಟಿಬೆಟಿಯನ್ ಪ್ರಸ್ಥಭೂಮಿಯ ಹಿಮನದಿಯಿಂದ ಆರಂಭವಾಗಿ ಶಾಂಘೈನಲ್ಲಿರುವ ಪೂರ್ವ ಚೀನಾ ಸಮುದ್ರದವರೆಗೆ ಇದು ಹರಿಯುತ್ತದೆ ಈ ನದಿಯು ಜಲವಿದ್ಯುತ್ ಶಕ್ತಿ, ನೀರಾವರಿ ಮತ್ತು ಜಲಸಾರಿಗೆಯನ್ನು ಒದಗಿಸುವುದರಿಂದ ಮತ್ತು ತ್ರೀ ಗೋರ್ಜಸ್ ಅಣೆಕಟ್ಟು ಎಂದು ಕರೆಯಲ್ಪಡುವ ವಿಶ್ವದ ಅತಿದೊಡ್ಡ ಅಣೆಕಟ್ಟನ್ನು ಹೊಂದಿರುವುದರಿಂದ ಇದು ಚೀನಾದ ಆರ್ಥಿಕತೆಯ ಕೇಂದ್ರ ಎನಿಸಿದೆ.
ಮಿಸ್ಸಿಸ್ಸಿಪ್ಪಿ-ಮಿಸೌರಿ ನದಿ ವ್ಯವಸ್ಥೆ, ಅಮೆರಿಕ
ಮಿಸ್ಸಿಸ್ಸಿಪ್ಪಿ, ಮಿಸೌರಿ ಮತ್ತು ಜೆಫರ್ಸನ್ ನದಿಗಳ ಸಂಗಮವು ಈ ಉತ್ತರ ಅಮೆರಿಕಾದ ನದಿ ನೀರಾವರಿ ವ್ಯವಸ್ಥೆಯನ್ನು ರೂಪಿಸುತ್ತದೆ. ಇದು ಸುಮಾರು 5,971 ಕಿಲೋಮೀಟರ್‌ಗಳಷ್ಟು ಉದ್ದ ವಿಸ್ತಾರವನ್ನು ಹೊಂದಿದೆ. ಇದು ಮಾಂಟಾನಾದ ರಾಕಿ ಪರ್ವತಗಳಲ್ಲಿ ಹುಟ್ಟಿ ಆಗ್ನೇಯಕ್ಕೆ ಹರಿದು ಮೆಕ್ಸಿಕೋ ಕೊಲ್ಲಿಗೆ ತಲುಪುತ್ತದೆ. ಮಧ್ಯ ಅಮೆರಿಕಾದ ರಾಜ್ಯದೊಳಗಿನ ಸಾರಿಗೆ, ಕೃಷಿ ಮತ್ತು ಕೈಗಾರಿಕೆಗಳಿಗೆ ಈ ನದಿ ವ್ಯವಸ್ಥೆಯು ಜೀವನಾಡಿ ಎನಿಸಿದೆ. ಐತಿಹಾಸಿಕವಾಗಿ ಆರಂಭಿಕ ಅಮೇರಿಕನ್ ವಸಾಹತುಗಳ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಈ ನದಿ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸಿದೆ.
ಯೆನಿಸೀ ನದಿ, ರಷ್ಯಾ ಮತ್ತು ಮಂಗೋಲಿಯಾ
ಯೆನಿಸೀ–ಬೈಕಲ್–ಸೆಲೆಂಗಾ ನದಿ ವ್ಯವಸ್ಥೆಯು ಸರಿಸುಮಾರು 3,487 ಕಿಲೋಮೀಟರ್ ಉದ್ದವಿದ್ದು, ಮಂಗೋಲಿಯಾದಿಂದ ಮಧ್ಯ ಸೈಬೀರಿಯಾದಾದ್ಯಂತ ಹರಿದು ಆರ್ಕಾಟಿಕ್ ಮಹಾಸಾಗರಕ್ಕೆ ಹರಿಯುತ್ತದೆ. ಇದು ಆರ್ಕಾಟಿಕ್ ಸಾಗರಕ್ಕೆ ಸೇರುವ ವಿಶ್ವದ ಅತಿದೊಡ್ಡ ನದಿ ವ್ಯವಸ್ಥೆಯಾಗಿದ್ದು, ವಿಶ್ವದ ಅತಿ ಉದ್ದದ ನದಿ ವ್ಯವಸ್ಥೆಗಳಲ್ಲಿ ಒಂದಾಗಿದೆ. ಯೆನಿಸೀ ನದಿಯು ರಷ್ಯಾದ ಜಲವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾಗೂ ಭೂಮಿಯ ಮೇಲಿನ ಒಂದು ಅತ್ಯಂತ ದುರ್ಗಮ ಮತ್ತು ಕಠಿಣ ಪರಿಸರವನ್ನು ಇದು ರೂಪಿಸಿದೆ.