- Home
- News
- World News
- ತನ್ನ ವಾಯುಪ್ರದೇಶ ಹಠಾತ್ ಮುಚ್ಚಿದ ಇರಾನ್: ಭಾರತ ಅಮೆರಿಕಾಗೆ ನಡುವೆ ಸಂಚರಿಸುತ್ತಿದ್ದ ಹಲವು ವಿಮಾನಗಳ ಹಾರಾಟ ರದ್ದು
ತನ್ನ ವಾಯುಪ್ರದೇಶ ಹಠಾತ್ ಮುಚ್ಚಿದ ಇರಾನ್: ಭಾರತ ಅಮೆರಿಕಾಗೆ ನಡುವೆ ಸಂಚರಿಸುತ್ತಿದ್ದ ಹಲವು ವಿಮಾನಗಳ ಹಾರಾಟ ರದ್ದು
ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ, ಇರಾನ್ ತನ್ನ ವಾಯುಪ್ರದೇಶವನ್ನು ಹಠಾತ್ ಮುಚ್ಚಿದೆ. ಈ ನಿರ್ಧಾರದಿಂದ ದೆಹಲಿ ಮತ್ತು ಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಗಳು ಸೇರಿದಂತೆ ಹಲವು ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿವೆ.

ತನ್ನ ವಾಯುಪ್ರದೇಶವನ್ನು ಹಠಾತ್ ಮುಚ್ಚಿದ ಇರಾನ್
ನವದೆಹಲಿ: ಇರಾನ್ ಮೇಲೆ ಅಮೆರಿಕಾ ಸಮರ ಸಾರಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಅಮೆರಿಕಾದ ಬೆದರಿಕೆ ಹಿನ್ನೆಲೆಯಲ್ಲಿ ಇರಾನ್ ಕೂಡ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದು, ಈಗ ತನ್ನ ವಾಯುಪ್ರದೇಶವನ್ನು ಹಠಾತ್ ಆಗಿ ಮುಚ್ಚಿದೆ. ಇದರಿಂದ ದೆಹಲಿಯಿಂದ ಅಮೆರಿಕಾದ ನ್ಯೂಯಾರ್ಕ್‌ಗೆ ಹೊರಟಿದ್ದ ಮೂರು ವಿಮಾನಗಳು ರದ್ದಾಗಿವೆ. ಭಾರತ ಪಾಶ್ಚಿಮಾತ್ಯ ದೇಶಗಳ ಜೊತೆ ವಾಯುಯಾನ ಮೂಲಕ ಸಂಪರ್ಕ ಸಾಧಿಸಬೇಕಾದರೆ ಇರಾನ್ ಇರಾಕ್ ವಾಯುಪ್ರದೇಶವನ್ನು ದಾಟಿಯೇ ಮುಂದೆ ಸಾಗಬೇಕು.
ಅಮೆರಿಕಾಗೆ ತೆರಳುವ ಹಲವು ವಿಮಾನಗಳ ಹಾರಾಟ ಸ್ಥಗಿತ
ಇರಾನ್ ಬುಧವಾರ ಮಧ್ಯರಾತ್ರಿಯಿಂದಲ್ಲೇ ತನ್ನ ವಾಯುಪ್ರದೇಶವನ್ನು ಹಠಾತ್ ಮುಚ್ಚಿರುವುದರಿಂದ ಬುಧವಾರ ರಾತ್ರಿಯಿಂದಲೇ ದೆಹಲಿಯಿಂದ ನ್ಯೂಯಾರ್ಕ್‌ಗೆ ಹೊರಟ ಜೆಎಫ್‌ಕೆ (ಎಐ 101),ದೆಹಲಿ-ನ್ಯೂವಾರ್ಕ್ (ಎಐ 105) ಮತ್ತು ಮುಂಬೈ-ಜೆಎಫ್‌ಕೆ (ಎಐ 119) ವಿಮಾನಗಳು ರದ್ದಾಗಿವೆ. ಈ ವಿಮಾನಗಳು ರದ್ದಾಗಿರುವುದರಿಂದ ಹಿಂದಿರುಗುವ ವಿಮಾನಗಳನ್ನು ಸಹ ರದ್ದುಗೊಳಿಸಲಾಯಿತು. ಇಂದು ಬೆಳಗಿನ ಜಾವ ಇಂಡಿಗೋದ ಬಾಕು-ದೆಹಲಿ ವಿಮಾನವು ಕ್ಯಾಸ್ಪಿಯನ್ ಸಮುದ್ರವನ್ನು ದಾಟಿ ಇರಾನ್ ಮೇಲೆ ಹಾರಬೇಕಾಗಿದ್ದ ಕಾರಣ ಈ ವಿಮಾನವೂ ಕೂಡ ಒಂದು ಗಂಟೆಯೊಳಗೆ ಅಜೆರ್ಬೈಜಾನ್ ರಾಜಧಾನಿಗೆ ಅರ್ಧದಲ್ಲೇ ಮರಳಿದೆ.. ಮಾರ್ಗ ಬದಲಾವಣೆ ಸಾಧ್ಯವಾಗದ ಕೆಲವು ವಿಮಾನಗಳ ಹಾರಾಟವನ್ನು ಏರ್ ಇಂಡಿಯಾ ರದ್ದುಗೊಳಿಸಲಿದೆ.
ಹಲವು ಮಾರ್ಗಗಳ ವಿಮಾನ ಹಾರಾಟ ಸ್ಥಗಿತಗೊಳಿಸುವ ಸಾಧ್ಯತೆ
ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ, ಇರಾನ್ ಮತ್ತು ಇರಾಕ್ ವಾಯುಪ್ರದೇಶವನ್ನು ತಪ್ಪಿಸುವುದು ಎಂದರೆ ಇರಾಕ್‌ನಿಂದ ಪಾಕಿಸ್ತಾನದವರೆಗಿನ ಸಂಪೂರ್ಣ ಪ್ರದೇಶದ ಮೇಲೆ ಹಾರಾಟ ನಡೆಸುವುದನ್ನು ತಪ್ಪಿಸುವುದಾಗಿದೆ. ಹೀಗಾಗಿ ಇಂಡಿಗೋ ವಿಮಾನಯಾನ ಸಂಸ್ಥೆಯೂ ಅಲ್ಮಾಟಿ, ತಾಷ್ಕೆಂಟ್ ಮತ್ತು ಬಾಕುಗೆ ನೀಡುವ ವಿಮಾನ ಸೇವೆಯನ್ನು ಶೀಘ್ರದಲ್ಲೇ ನಿಲ್ಲಿಸಬಹುದು ಏಕೆಂದರೆ ಆ ಸ್ಥಳಗಳು ಹಾಗೂ ಭಾರತದ ನಡುವೆ ವಿಮಾನ ಹಾರಾಟ ನಡೆಸುವುದು ಎಂದರೆ ಜೋರ್ಡಾನ್‌ನಂತಹ ಯಾವುದೇ ಸ್ಥಳದಲ್ಲಿ ನಿಲುಗಡೆ ಅಗತ್ಯವಾಗಿ ಮಾಡಲೇಬೇಕಾಗುತ್ತದೆ. ಏಕೆಂದರೆ ಇದು ಬಹಳ ಸುದೀರ್ಘ ಮಾರ್ಗವಾಗಿದೆ.
ಬುಧವಾರ ರಾತ್ರಿ ಹಠಾತ್ ಪ್ರಕಟಣೆ ಹೊರಡಿಸಿದ ಇರಾನ್
ಬುಧವಾರ ರಾತ್ರಿ ಇರಾನಿನ ವಾಯುಪ್ರದೇಶವನ್ನು ಇದ್ದಕ್ಕಿದ್ದಂತೆ ಮುಚ್ಚಲಾಯಿತು. ಗುರುವಾರ 22:15 ಕ್ಕೆ (GMT ಸಮಯದ ಪ್ರಕಾರ) ಹೊರಡಿಸಲಾದ ಅಲ್ಲಿನ ವಾಯಪಡೆಯವರಿಗೆ ನೀಡಿದ ಸೂಚನೆಯ ಪ್ರಕಾರ, ಇರಾನ್ ನಾಗರಿಕ ವಿಮಾನಯಾನ ಪ್ರಾಧಿಕಾರದ ಪೂರ್ವಾನುಮತಿ ಪಡೆದ ಅಂತರರಾಷ್ಟ್ರೀಯ ನಾಗರಿಕ ವಿಮಾನಗಳಿಗೆ ಹೊರತುಪಡಿಸಿದ ಮತ್ತೆಲ್ಲಾ ಅಂತಾರಾಷ್ಟ್ರೀಯ ವಿಮಾನಗಳಿಗೆ ತೆಹ್ರಾನ್ ವಿಮಾನ ಮಾಹಿತಿ ಪ್ರದೇಶಕ್ಕೆ ಆಗಮನ ಹಾಗೂ ನಿರ್ಗಮನಕ್ಕೆ ಅನುಮತಿ ನಿಷೇಧಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಲಾಗಿತ್ತು.
ಈ ಮಾರ್ಗದಲ್ಲಿ ಸಂಚರಿಸದಿರಲು ಹಲವು ವಿಮಾನಯಾನ ಸಂಸ್ಥೆಗಳ ನಿರ್ಧಾರ
ಇದಾದ ನಂತರ ತೆಹ್ರಾನ್ ವಿಮಾನ ಮಾಹಿತಿ ಪ್ರದೇಶವೂ ಮತ್ತೆ ಕಾರ್ಯಾಚರಣೆ ಆರಂಭಿಸಿದ ಎಂದು ಹೇಳುವ ಮತ್ತೊಂದು ಪ್ರಕಟಣೆ ಹೊರಡಿಸಲಾಯ್ತು. ಆದರೆ ಅನೇಕ ವಿಮಾನಯಾನ ಸಂಸ್ಥೆಗಳು ಸುರಕ್ಷತೆಯ ಕಾರಣಗಳಿಗಾಗಿ ಆ ವಾಯುಪ್ರದೇಶದಲ್ಲಿ ಹಾರಾಟ ನಡೆಸದಿರಲು ನಿರ್ಧರಿಸಿವೆ. ಈ ಸಂಬಂಧ ಏರ್ ಇಂಡಿಯಾ ಪ್ರಕಟಣೆ ಹೊರಡಿಸಿದೆ.
ಎಕ್ಸ್‌ನಲ್ಲಿ ಏರ್ ಇಂಡಿಯಾ ಪ್ರಕಟಣೆ
ಇರಾನ್‌ನಲ್ಲಿ ಉದ್ಭವಿಸಿರುವ ಪರಿಸ್ಥಿತಿ, ಅದರ ನಂತರದ ವಾಯುಪ್ರದೇಶದ ಮುಚ್ಚುವಿಕೆ ಮತ್ತು ನಮ್ಮ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಈ ಪ್ರದೇಶದ ಮೇಲೆ ಹಾರುವ ಏರ್ ಇಂಡಿಯಾ ವಿಮಾನಗಳು ಈಗ ಪರ್ಯಾಯ ಮಾರ್ಗವನ್ನು ಬಳಸುತ್ತಿವೆ. ಇದು ವಿಳಂಬಕ್ಕೆ ಕಾರಣವಾಗಬಹುದು. ಪ್ರಸ್ತುತ ಮಾರ್ಗ ಬದಲಾಯಿಸಲು ಸಾಧ್ಯವಾಗದ ಕೆಲವು ಏರ್ ಇಂಡಿಯಾ ವಿಮಾನಗಳನ್ನು ರದ್ದುಗೊಳಿಸಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ನಮ್ಮ ವೆಬ್‌ಸೈಟ್‌ನಲ್ಲಿ ತಮ್ಮ ವಿಮಾನಗಳ ಸ್ಥಿತಿಯನ್ನು ಪರಿಶೀಲಿಸಲು ನಾವು ಪ್ರಯಾಣಿಕರನ್ನು ವಿನಂತಿಸುತ್ತೇವೆ. ಈ ಅನಿರೀಕ್ಷಿತ ಅಡಚಣೆಯಿಂದ ಪ್ರಯಾಣಿಕರಿಗಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದಿಸುತ್ತದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಏರ್ ಇಂಡಿಯಾ ಇಂದು ಬೆಳಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಲುಫ್ಥಾನ್ಸ್ ಗ್ರೂಪ್
ಮಧ್ಯಪ್ರಾಚ್ಯದಲ್ಲಿನ ಪ್ರಸ್ತುತ ಪರಿಸ್ಥಿತಿಯಿಂದಾಗಿ, ಜರ್ಮನಿಯ ವಿಮಾನಯಾನ ಸಂಸ್ಥೆಯಾದ ಲುಫ್ಥಾನ್ಸ್ ಗ್ರೂಪ್ ಕೂಡ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ ನಂತರ, ಜನವರಿ 15, ಗುರುವಾರದಿಂದ ಅಂದರೆ ಇಂದಿನಿಂದ ಜನವರಿ 19, 2026 ರ ಸೋಮವಾರದವರೆಗೆ ಟೆಲ್ ಅವಿವ್ ಮತ್ತು ಅಮ್ಮನ್‌ಗೆ ಮತ್ತು ಅಲ್ಲಿಂದ ಹಗಲು ಮಾತ್ರ ವಿಮಾನಗಳನ್ನು ನಿರ್ವಹಿಸಲು ನಿರ್ಧರಿಸಿದೆ. ಇದರರ್ಥ ಸಿಬ್ಬಂದಿಗಳು ಆ ಸ್ಥಳದಲ್ಲಿ ರಾತ್ರಿ ಉಳಿಯದೇ ತಕ್ಷಣವೇ ಹಿಂತಿರುಗುತ್ತಾರೆ. ಕೆಲವು ಸಂದರ್ಭಗಳಲ್ಲಿ, ವಿಮಾನಗಳ ರದ್ದತಿಯೂ ಇರಬಹುದು. ಇದಲ್ಲದೆ, ಮುಂದಿನ ಸೂಚನೆ ಬರುವವರೆಗೂ ಇರಾನಿನ ಮತ್ತು ಇರಾಕಿ ವಾಯುಪ್ರದೇಶದಲ್ಲಿ ಹಾರಾಟ ನಡೆಸುವುದನ್ನು ಎಲ್ಲಾ ಲುಫ್ಥಾನ್ಸ್ ಗ್ರೂಪ್ ವಿಮಾನಯಾನ ಸಂಸ್ಥೆಗಳು ತಪ್ಪಿಸಲಿವೆ ಎಂದು ಲುಫ್ಥಾನ್ಸ ವಕ್ತಾರರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

