ಪ್ರೆಗ್ನೆನ್ಸಿಯಲ್ಲಿ ಭಗವತ್ ಗೀತೆ ಓದೋದ್ರಿಂದ ಮಗುವಿನ ಮೇಲೆ ಯಾವ ಪರಿಣಾಮ ಬೀರುತ್ತೆ
ಗರ್ಭಾವಸ್ಥೆಯಲ್ಲಿ ಭಗವದ್ಗೀತೆಯನ್ನು ಓದುವುದರಿಂದ ತಾಯಿ ಮತ್ತು ಮಗುವಿನ ಮೇಲೆ ಉಂಟಾಗುವ ಪರಿಣಾಮವೇನು? ಎನ್ನುವ ಕುರಿತು ಸಮಗ್ರ ಮಾಹಿತಿ ಇಲ್ಲಿದೆ. ನೀವು ಗರ್ಭಿಣಿಯಾಗಿದ್ದಲ್ಲಿ ಭಗವದ್ಗೀತೆ ಓದಬೇಕೆ? ಎಂದು ಯೋಚನೆ ಮಾಡುತ್ತಿದ್ದರೆ ಇದನ್ನ ಓದಿ.

ಒಬ್ಬ ಮಹಿಳೆ ಗರ್ಭಿಣಿಯಾಗಿದ್ದಾಗ, ಅವಳ ಮತ್ತು ಮಗುವಿನ ಆಧ್ಯಾತ್ಮಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುವ ವಿಷಯಗಳನ್ನು ಅಧ್ಯಯನ ಮಾಡಲು ಆಕೆಗೆ ಸುತ್ತಲಿನ ಜನರು ಸಲಹೆ ನೀಡುತ್ತಾರೆ. ಕೆಲವರು ದೇವರ ನಾಮ ಸ್ಮರಣೆ ಮಾಡು ಎಂದರೆ, ಇನ್ನೂ ಕೆಲವರು ಹನುಮಾನ್ ಚಾಲೀಸ ಓದು ಎನ್ನುತ್ತಾರೆ. ಮತ್ತೆ ಕೆಲವರು ಗೀತೆಯನ್ನು ಓದು ಎಂದು ಹೇಳುತ್ತಾರೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಗರ್ಭದಲ್ಲಿರುವ ಭ್ರೂಣವು 7 ನೇ ತಿಂಗಳಿನಿಂದ ಕೇಳಲು ಪ್ರಾರಂಭಿಸುತ್ತದೆ, ಆದ್ದರಿಂದ ಆ ಸಮಯದಲ್ಲಿ ಗರ್ಭಿಣಿ ಮಹಿಳೆ ಉತ್ತಮ ಆಲೋಚನೆಗಳು ಮತ್ತು ಸಕಾರಾತ್ಮಕ ವಿಷಯಗಳತ್ತ ಮಾತ್ರ ಗಮನ ಹರಿಸಬೇಕು. ನೀವು ನಕಾರಾತ್ಮಕವಾಗಿ ಯೋಚನೆ (negative thoughts)ಮಾಡಿದರೆ ಮಗುವಿನ ಮೇಲೆ ಕೂಡ ಅದೇ ರೀತಿಯ ಪರಿಣಾಮ ಬೀರುತ್ತೆ.
ಹಾಗಾಗಿ ನೀವು ಆಧ್ಯಾತ್ಮಿಕತೆ ಬಗ್ಗೆ ಒಲವು ತೋರುವುದಾದರೆ ಭಗವದ್ಗೀತೆಯನ್ನು (Bhagavad Gita) ಓದಬಹುದು. ಭಗವದ್ಗೀತೆಯ ಪಠಣವು ಗರ್ಭಿಣಿ ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಆಧ್ಯಾತ್ಮಿಕ ಶಾಂತಿ ಮತ್ತು ಮಾನಸಿಕ ಸ್ಥಿರತೆಯನ್ನು ನೀಡುತ್ತದೆ. ಗರ್ಭದಲ್ಲಿಯೇ ನಾರದರಿಂದ ಶ್ರೀಮದ್ ಭಗವದ್ಗೀತೆಯ ಬೋಧನೆಗಳನ್ನು ಕೇಳಿದ ಮತ್ತು ವಿಷ್ಣುವಿನ ಮಹಾನ್ ಭಕ್ತನಾದ ಭಕ್ತ ಪ್ರಹ್ಲಾದ ಇದಕ್ಕೆ ಅತ್ಯುತ್ತಮ ಉದಾಹರಣೆ.
Image: Getty
ಗರ್ಭಾವಸ್ಥೆಯಲ್ಲಿ ಗೀತೆಯನ್ನು ಓದುವುದರಿಂದ ಗರ್ಭಿಣಿ ಮಹಿಳೆಯರಲ್ಲಿ ಮಾನಸಿಕ ಒತ್ತಡ (mental stress) ಕಡಿಮೆಯಾಗುತ್ತದೆ, ಇದು ಅವರ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಮಗುವಿನ ಬೆಳವಣಿಗೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತೆ. ಇದರಿಂದ ಏನೆಲ್ಲಾ ಆಗುತ್ತೆ ಅನ್ನೋದನ್ನು ನೋಡೋಣ.
ಈ ಧರ್ಮಗ್ರಂಥವು ಜೀವನ, ಧರ್ಮ, ಕ್ರಿಯೆ ಮತ್ತು ಜ್ಞಾನದ ಆಳವಾದ ರಹಸ್ಯಗಳನ್ನು ವಿವರಿಸುತ್ತದೆ, ತಾಯಿಯ ಚಿಂತನೆ ಮತ್ತು ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಗರ್ಭದಲ್ಲಿರುವ ಭ್ರೂಣವು ಈ ಸಕಾರಾತ್ಮಕ ಆಲೋಚನೆಗಳನ್ನು ಹೀರಿಕೊಳ್ಳುತ್ತದೆ, ಇದು ಹುಟ್ಟಿನಿಂದಲೇ ಉತ್ತಮ ಮೌಲ್ಯಗಳನ್ನು ನೀಡುವಲ್ಲಿ ಸಹಕಾರಿಯಾಗಿದೆ.
ಅಧ್ಯಯನಗಳ ಪ್ರಕಾರ, ಗರ್ಭಾವಸ್ಥೆಯಲ್ಲಿ ತಾಯಿಯ ಭಾವನೆಗಳು ಮತ್ತು ಆಲೋಚನೆಗಳು ಮಗುವಿನ ಮೇಲೆ ಆಳವಾದ ಪರಿಣಾಮ ಬೀರುತ್ತವೆ, ಅದಕ್ಕಾಗಿಯೇ ಧಾರ್ಮಿಕ ಮತ್ತು ಸ್ಪೂರ್ತಿದಾಯಕ ಪಠ್ಯಗಳನ್ನು ಓದುವುದು ಶುಭವೆಂದು ಪರಿಗಣಿಸಲಾಗುತ್ತದೆ.
ಶ್ರೀಮದ್ ಭಗವದ್ಗೀತೆಯ 'ಗರ್ಭ ಗೀತೆ' ಅಧ್ಯಾಯವನ್ನು ಕೇಳುವುದರಿಂದ ತಾಯಿ ಸುಸಂಸ್ಕೃತ ಸಂತಾನವನ್ನು ಪಡೆಯುತ್ತಾಳೆ ಎಂದು ಹೇಳಲಾಗುತ್ತೆ. ಅಷ್ಟೇ ಅಲ್ಲ ಗರ್ಭಾವಸ್ಥೆಯಲ್ಲಿ ನೀವು ಸ್ಪೂರ್ತಿದಾಯಕ ಮತ್ತು ಮಂಗಳಕರ ಪುಸ್ತಕವನ್ನು ಓದಲು ಬಯಸಿದರೆ, ಶ್ರೀಮದ್ ಭಗವದ್ಗೀತೆಗಿಂತ ಉತ್ತಮ ಆಯ್ಕೆ ಬೇರೊಂದಿಲ್ಲ.