ಜಮ್ಮು ಕಾಶ್ಮೀರ ಚುನಾವಣೆ: ಬಿಜ್ಬೆಹರದಿಂದ ಸ್ಪರ್ಧಿಸುತ್ತಿರುವ ಮೆಹಬೂಬಾ ಪುತ್ರಿ ಇಲ್ತಿಜಾ ಸುಂದರ ಫೋಟೋಗಳು
ಜಮ್ಮು ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕಣಿವೆ ನಾಡು ಜಮ್ಮು ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ. ಈ ಸಂದರ್ಭದಲ್ಲಿ ಜಮ್ಮುಕಾಶ್ಮೀರದ ಬೆಜ್ಬೆಹರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಇಲ್ತಿಜಾ ಮುಫ್ತಿ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
37 ವರ್ಷದ ಇಲ್ತಿಜಾ ಮುಫ್ತಿ ಅವರು ಪೀಪಲ್ ಡೆಮಾಕ್ರಟಿಕ್ ಪಾರ್ಟಿಯಿಂದ ಬಿಜ್ಬೆಹರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇವರು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿಯಾಗಿದ್ದಾರೆ. ಬಿಜ್ಬೆಹರ ಕ್ಷೇತ್ರವೂ ಮುಫ್ತಿ ಕುಟುಂಬದ ಭದ್ರಕೋಟೆಯಾಗಿದೆ.
ಈ ಸಂದರ್ಭದಲ್ಲಿ ಮಾಧ್ಯಮವೊಂದು ಅವರ ಸಂದರ್ಶನ ನಡೆಸಿದ್ದು, ಹಲವು ವಿಚಾರಗಳ ಬಗ್ಗೆ ಮುಫ್ತಿ ಮಾತನಾಡಿದ್ದಾರೆ. ಪಿಡಿಪಿಗೆ ಮುಂದಿನ ಚುನಾವಣೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಅಧಿಕಾರದ ಗದ್ದುಗೆ ಸಿಗುವುದೇ ಎಂಬ ಪ್ರಶ್ನೆಯೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪಕ್ಷದ ಪ್ರಚಾರ ಉಸ್ತುವಾರಿಯೂ ಆಗಿರುವ ಇಲ್ತಿಜಾ ಅವರು ಉತ್ತರಿಸಿದ್ದಾರೆ.
ಕಾಶ್ಮೀರಿ ಮತದಾರರ ಮನಸ್ಸನ್ನು ಓದುವುದು ಅಸಾಧ್ಯ, ಅವರು ತಮ್ಮ ಹೃದಯದಲ್ಲಿರುವುದನ್ನು ಎಂದಿಗೂ ವ್ಯಕ್ತಪಡಿಸುವುದಿಲ್ಲ, ಅವರು ಮತ ಚಲಾಯಿಸಲು ಹೋದಾಗ ಮಾತ್ರ ಅದನ್ನು ವ್ಯಕ್ತಪಡಿಸುತ್ತಾರೆ ಎಂದು ಇಲ್ತಿಜಾ ಹೇಳಿದ್ದಾರೆ.
ನನಗೆ ನನ್ನದೇ ಆದ ಗುರುತಿದೆ. ಜನರಿಗೆ ಇಲ್ತಿಜಾ ಎಂದರೆ ಯಾರು ಎಂದು ಗೊತ್ತು. ಪ್ರಚಾರಕ್ಕೆ ಹೋದಾಗ ಜನ ನಿಮಗೆ ಮತ ಹಾಕುತ್ತೇವೆ ಎಂದು ಹೇಳುತ್ತಾರೆ. ಮುಫ್ತಿ ಕುಟುಂಬದ ಹೊರತಾಗಿ ನನಗೆ ನನ್ನದೇ ಆದ ಗುರುತಿದೆ ಎಂದು ಅವರು ಹೇಳುತ್ತಾರೆ.
ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಪುತ್ರಿಯಾಗಿರುವ ಇಲ್ತಿಜಾ ಮುಫ್ತಿ ಅವರು ಬಿಜ್‌ಬೆಹರಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸುತ್ತಿದ್ದು, ಈ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಮುಫ್ತಿ ಕುಟುಂಬದ ಮೂರನೇ ತಲೆಮಾರಿನವರಾಗಿದ್ದಾರೆ ಇಲ್ತಿಜಾ.
ಕಾಶ್ಮೀರದಲ್ಲಿ ರಾಜಕೀಯ ಆರಂಭಿಸಿರುವುದು ನನಗೆ ಉರ್ದು ಕವಿ ಗಲಿಬ್ ಅವರ ಮಾತನ್ನು ನೆನಪಿಸುತ್ತದೆ, ಅವರು ಹೇಳುವಂತೆ ಪ್ರೀತಿ ಬೆಂಕಿಯ ನದಿ, ಅದೇ ರೀತಿ ಜಮ್ಮು ಕಾಶ್ಮೀರದಲ್ಲಿ ರಾಜಕೀಯವೂ ಬೆಂಕಿಯ ನದಿ ಇದ್ದಂತೆ. ಇಲ್ಲಿ ಎಲ್ಲವೂ ಸುಡುತ್ತದೆ. ಜನ ನನ್ನನ್ನು ಅರ್ಥ ಮಾಡಿಕೊಳ್ಳಬೇಕು ಅಪಾರ್ಥಮಾಡಿಕೊಳ್ಳಬಾರದು ಎಂಬುದು ನನ್ನ ಉದ್ದೇಶ ಎಂದು ಹೇಳುತ್ತಾರೆ ಇಲ್ತಿಜಾ.
ಚುನಾವಣೆ ಪ್ರಚಾರಕ್ಕೆ ಹೋದ ವೇಳೆ, ಕೇಂದ್ರದಲ್ಲಿ ಕುಳಿತ ಸರ್ಕಾರವೂ ನಮ್ಮ ಭೂಮಿ ಹಾಗೂ ಉದ್ಯೋಗದಿಂದ ನಮ್ಮವರನ್ನು ತೆಗೆದು ಹಾಕಿದೆ. ನಮ್ಮ ಗಂಡು ಮಕ್ಕಳು ಸರ್ಕಾರಿ ನೌಕರರಾಗಿದ್ದರು 10 ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಏನೋ ಬರೆದಿದ್ದಕ್ಕೆ ಈಗ ಕೆಲಸದಿಂದ ತೆಗೆಯಲಾಗಿದೆ ಎಂದು ಎಷ್ಟು ಕಡೆ ಕೆಲವರು ನನ್ನ ಬಳಿ ದೂರಿದ್ದಾರೆ. ಇಲ್ಲಿ ಡ್ರಗ್ ಸಮಸ್ಯೆಯೂ ಇದೆ ಯುವ ಸಮೂಹ ಡ್ರಗ್ ದಾಸರಾಗುತ್ತಿದ್ದಾರೆ ಎಂದು ಇಲ್ತಿಜಾ ಹೇಳಿದ್ದಾರೆ.
ಅಲ್ಲದೇ ಜಮ್ಮು ಕಾಶ್ಮೀರದ ಈ ಬಾರಿಯ ಚುನಾವಣೆಯಲ್ಲಿ ಜಮಾತ್-ಇ-ಇಸ್ಲಾಮಿ ಸ್ಪರ್ಧೆ ಮಾಡುತ್ತಿರುವುದು ನಿಮಗೆ ಹಿನ್ನಡೆಯೆ ಎಂದು ಕೇಳಿದಾಗ ಉತ್ತರಿಸಿದ ಇಲ್ತಿಜಾ , ಜಮಾತ್ ಸ್ಪರ್ಧೆಯಿಂದ ನನಗೆ ತೊಂದರೆ ಇಲ್ಲ, ಜಮಾತ್ ಒಳ್ಳೆಯ ಕೆಲಸ ಮಾಡುತ್ತಿದೆ ಆದರೆ ಅದರ ಅಭ್ಯರ್ಥಿಗಳು ಬೇರೆ ಬೇರೆ ಹಿನ್ನೆಲೆ ಹೊಂದಿದ್ದಾರೆ ಎಂದರು.
ಅಲ್ಲದೇ ಜಮ್ಮು ಕಾಶ್ಮೀರದಲ್ಲಿ ಯಾವ ಪಾರ್ಟಿಯ ಪರವೂ ಯಾವುದೇ ಅಲೆ ಇಲ್ಲ. ಇಲ್ಲಿ ಪಿಡಿಪಿ ಕಿಂಗ್ ಮೇಕರ್ ಆಗಲಿದೆ. ಬಿಜೆಪಿಯಂತೂ ಕಿಂಗ್ ಮೇಕರ್‌ನ ಸಮೀಪದಲ್ಲೂ ಇಲ್ಲ, ಇಲ್ಲಿ ಬಿಜೆಪಿ ಬರುವುದಂತೂ ಕನಸಿನ ಮಾತು ಇಲ್ಲಿ ಘಟಬಂಧನದ ಪಕ್ಷವೂ ಅಧಿಕಾರಕ್ಕೇರಲಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಈ ಕ್ಷೇತ್ರದ ಜನ ನನ್ನನ್ನು ಒಬ್ಬಳು ಸಾಮಾನ್ಯಳಂತೆ ನೋಡಬೇಕು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ಎಂದು ನೋಡಬಾರದು ನಾನು ಕೇವಲ ನನ್ನ ತಾಯಿಯ ನೋಟವನ್ನಷ್ಟೇ ಪಡೆದುಕೊಂಡು ಬಂದಿಲ್ಲ, ಆಕೆಯ ಹಠವಾದಿ ಧೋರಣೆಯೂ ನನಗೆ ಬಂದಿದೆ.
ನಾನೊಬ್ಬಳು ತಂತ್ರಗಾರಳು, ಆದರೆ ಆಕೆ ಭಾವುಕ ಜೀವಿ. ಇದು ನನ್ನ ವ್ಯಕ್ತಿತ್ವ ಸಮಯ ಹೋಗುತ್ತಿದ್ದಂತೆ ಜನ ಇದನ್ನು ಗುರುತಿಸಬಹುದು ಎಂದು ತಮ್ಮ ವ್ಯಕ್ತಿತ್ವದ ಬಗ್ಗೆ ಹೇಳಿದ್ದಾರೆ ಇಲ್ತಿಜಾ.
ನಾನು ನನ್ನದೇ ವ್ಯಕ್ತಿತ್ವದಿಂದ ಗುರುತಿಸಿಕೊಳ್ಳಲು ಬಯಸುತ್ತೇನೆ. ಎಲ್ಲರ ಮಾತನ್ನು ಕೇಳಬೇಕು. ಆದರೆ ನಮಗೇನು ಅನಿಸುವುದೋ ಅದನ್ನೇ ಮಾಡಬೇಕು ಏಕೆಂದರೆ ದಿನದ ಅಂತ್ಯದಲ್ಲಿ ನಾವು ಏನನ್ನು ನಂಬುತ್ತೇವೆ ಅದನ್ನೇ ಮಾಡಬೇಕಾಗುತ್ತದೆ. ನನ್ನ ರಾಜಕೀಯ ಕಾರ್ಯತಂತ್ರವು ನನ್ನ ಅಜ್ಜ ಹಾಗೂ ನನ್ನ ತಾಯಿಯ ರಾಜಕೀಯ ಚತುರತೆಯ ಮಿಶ್ರಣವಾಗಿದೆ. ಇವರಿಬ್ಬರ ರಾಜಕೀಯ ತಂತ್ರಗಾರಿಕೆಯನ್ನು ಮಿಶ್ರಣ ಮಾಡಿದಾಗ ಅದು ನನಗೆ ಕೆಲಸ ಮಾಡುತ್ತದೆ ಜನರು ನನ್ನ ಅರ್ಥ ಮಾಡಿಕೊಳ್ಳಬೇಕು ಎಂಬುದೇ ನನ್ನ ಸದ್ಯದ ಬೇಡಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.