- Home
- Viral News
- ಹೆಂಡ್ತಿ ನದಿಗೆ ತಳ್ಳಿದರೂ ಬದುಕಿಬಂದ ಗಂಡ ತಾತಪ್ಪ ಹಗುರಿಲ್ಲಪ್ಪೋ; ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ!
ಹೆಂಡ್ತಿ ನದಿಗೆ ತಳ್ಳಿದರೂ ಬದುಕಿಬಂದ ಗಂಡ ತಾತಪ್ಪ ಹಗುರಿಲ್ಲಪ್ಪೋ; ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ!
ರಾಯಚೂರಿನಲ್ಲಿ ನದಿಗೆ ಬಿದ್ದ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ಘಟನೆಯ ಹಿಂದೆ ತಾತಪ್ಪ ಮಾಡಿದ ಭಾರೀ ಯಡವಟ್ಟು ಈಗ ಬಹಿರಂಗವಾಗಿದೆ. ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆಂಬ ಆರೋಪ ಕೇಳಿಬಂದಿದೆ.

ರಾಯಚೂರು (ಜು.23): ಸೇತುವೆ ಮೇಲಿನಿಂದ ಫೋಟೋ ತೆಗೆಸಿಕೊಳ್ಳುವಾಗ ಹೆಂಡತಿ ನದಿಗೆ ತಳ್ಳಿದ್ದು, ಹರಿಯುತ್ತಿದ್ದ ನದಿಯಲ್ಲಿ ಈಜಿ ನಡುಗಡ್ಡೆಯ ಕಲ್ಲೊಂದರ ಮೇಲೆ ಕುಳಿತು 'ಅಕಿನಾ ಹಿಡ್ಕೊಳ್ರೀ ಬ್ರೋ...' ಎಂದು ಕೂಗಿಕೊಂಡಿದ್ದ ತಾತಪ್ಪ ನಾವು-ನೀವು ಅನ್ಕೊಂಡಂಗ ಹಗುರಿಲ್ರಪ್ಪೋ..! ತನ್ನ ಅತ್ತೆಯ ಮಗಳು ಬೇಡ ಎಂದರೂ ಬಾಲ್ಯ ವಿವಾಹ ಮಾಡಿಕೊಂಡು, ಆಕೆಗೆ 18 ವರ್ಷ ತುಂಬುವ ಮೊದಲೇ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನೆ. ಈಗ ಹೆಂಡತಿ ಬೇಡವೆಂದು ಡಿವೋರ್ಸ್ ಕೊಡಲು ಮುಂದಾದ ತಾತಪ್ಪ, ಪೋಕ್ಸೋ ಕೇಸಿನಲ್ಲಿ ಜೈಲಿಗೆ ಹೋಗೋ ಪರಿಸ್ಥಿತಿಯಲ್ಲಿದ್ದಾನೆ.
ಹೌದು, ಕಳೆದ 3 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಹೆಂಡತಿಯೊಂದಿಗೆ (ಅಪ್ತಾಪ್ತ ಬಾಲಕಿ) ಊರಿಗೆ ಹೋಗುವಾಗ ರಾಯಚೂರಿನ ಗುರ್ಜಾಪುರದಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾದ ಸೇತುವೆಯೊಂದರ ಮೇಲೆ ಬೈಕ್ ನಿಲ್ಲಿಸಿ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಸೇತುವೆಯ ತೀರಾ ತುದಿಯಲ್ಲಿ ನಿಂತುಕೊಂಡು ಫೋಟೋ ತೆಗೆದುಕೊಳ್ಳುವಾಗ ಆಯತಪ್ಪಿಯೋ ಅಥವಾ ಹೆಂಡತಿಯೇ ತಳ್ಳಿಯೋ ನದಿಗೆ ಬಿದ್ದಿದ್ದಾನೆ.
ನಂತರ, ಈಜಿಕೊಂಡು ನಡುಗಡ್ಡೆಯಲ್ಲಿದ್ದ ಕಲ್ಲೊಂದರ ಮೇಲೆ ಕುಳಿತುಕೊಂಡು, ಸಹಾಯಕ್ಕಾಗಿ ಬೇಡಿಕೊಂಡಿದ್ದಾನೆ. ನಂತರ, ಸಹಾಯಕ್ಕೆ ಬಂದವರ ಮುಂದೆ ಬ್ರೋ... ಅಕೀನಾ ಹಿಡ್ಕೊಳ್ರೀ ಬ್ರೋ.. ಎಂದು ಕೂಗು ಹಾಕಿದ್ದಾನೆ. ಅಕಿನಾ ನನ್ನ ನದಿಗೆ ತಳ್ಯಾಳ... ಅಕಿನ ಬಿಡಬ್ಯಾಡ್ರಿ ಬ್ರೋ ಎಂದು ಕೂಗಿದ್ದಾನೆ.
ನಂತರ ಸ್ಥಳೀಯರು ಆತನಿಗೆ ಹಗ್ಗವನ್ನು ಎಸೆದು ರಕ್ಷಣೆ ಮಾಡಿದ್ದಾನೆ. ಹೀಗೆ, ಹಗ್ಗವನ್ನು ಹಿಡಿದು ಪ್ರಾಣ ಉಳಿಸಿಕೊಂಡು ಬಂದ ತಾತಪ್ಪ, ತಾನು ಹೆಂಡತಿಯೊಂದಿಗೆ ಜೀವನ ಮಾಡೊಲ್ಲ, ಡಿವೋರ್ಸ್ ಕೊಡಿಸಿ ಎಂದು ಪಟ್ಟು ಹಿಡಿದಿದ್ದನು. ಮನೆಯವರು ಕೂಡಾ ಸುಮ್ಮನಾಗಿದ್ದನು.
ಆದರೆ, ಈ ಪ್ರಹಸನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, '2025ರಲ್ಲಿ ಹೆಂಡತಿಯಿಂದ ಕೊಲೆ ಯತ್ನ ನಡೆದ ಬಳಿಕವೂ ಬದುಕುಳಿದು ಬಂದ ಏಕೈಕ ಗಂಡ' ಎಂದು ಟ್ಯಾಗ್‌ಲೈನ್ ಕೊಟ್ಟು ಈತನನ್ನು ಹೀರೋ ಮಾಡಿದ್ದರು. ಅಲ್ಲಿಯ ಘಟನೆಯ ಬಗ್ಗೆ ಯಾರಿಗೂ ಸಂಪೂರ್ಣ ಮಾಹಿತಿ ಇಲ್ಲದಿದ್ದರೂ, ಆತನ ಅಪ್ರಾಪ್ತ ಹೆಂಡತಿಯ ಮೇಲೆ ಕೊಲೆ ಪ್ರಯತ್ನದ ಆರೋಪ ಹೊರಿಸಿದ್ದರು.
ನಾ ಒಲ್ಲೆ ಎಂದರೂ ಆಪ್ರಾಪ್ತೆಯನ್ನು ಬಾಲ್ಯವಿವಾಹ ಆಗಿದ್ದ ತಾತಪ್ಪ:
ಸಂಬಂಧದಲ್ಲಿ ಅತ್ತೆಯ ಮಗನಾಗಿದ್ದ ತಾತಪ್ಪ, ಮಾವನ ಮಗಳನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದಾನೆ. ಆಗ ಬಾಲಕಿ ಇನ್ನೂ ಪ್ರೌಢಶಾಲೆಯನ್ನು ಪೂರ್ಣಗೊಳಿಸಿದ ಹಂತದಲ್ಲಿದ್ದು, ಆಕೆಗಿನ್ನೂ 15 ವರ್ಷ 8 ತಿಂಗಳು ವಯಸ್ಸಾಗಿದೆ. ನಮ್ಮ ದೇಶದ ಕಾನೂನಿನಲ್ಲಿ 18 ವರ್ಷದ ಮೇಲ್ಪಟ್ಟ ಮಹಿಳೆ ಹಾಗೂ 21 ವರ್ಷ ಮೇಲ್ಪಟ್ಟ ಪುರುಷನಿಗೆ ಮದವೆಯ ವಯಸ್ಸು ನಿಗದಿ ಮಾಡಲಾಗಿದ್ದರೂ, ಇದನ್ನು ಉಲ್ಲಂಘಿಸಿ ಮದುವೆ ಮಾಡಿಕೊಂಡಿದ್ದಾನೆ.
ಬಾಲಕಿ ನಾನು ಮದುವೆಗೆ ಒಲ್ಲೆಯೆಂದರೂ, ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದು ಮದುವೆ ಮಾಡಿಕೊಂಡಿದ್ದಾಳೆ. ಈಗಲಾದರೂ ಆಕೆಗೆ 18 ವರ್ಷ ತುಂಬುವವರೆಗೂ ಕಾಯದ ತಾತಪ್ಪ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನೆ. ಇದೀಗ ನದಿಗೆ ತಳ್ಳಿದ್ದಾಳೆ ಎಂಬ ಆರೋಪ ಮಾಡಿ ಗಂಡ-ಹೆಂಡತಿ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಾನೆ.
ತಾತಪ್ಪನ ವಿರುದ್ಧ ಬಾಲ ವಿವಾಹ ಕಾಯ್ದೆಯಡಿ ಕೇಸ್; ಪೋಕ್ಸೋ ಕೇಸ್ ಹಾಕಲು ಆಗ್ರಹ:
ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಂಡ ಪತಿ ತಾತಪ್ಪ ವಿರುದ್ಧ ರಾಯಚೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲ ವಿವಾಹ ಕಾಯ್ದೆ ಅಡಿ ಪ್ರಕರಣ ದಾಖಲು ಆಗಿದೆ. ಪತಿ ತಾತಪ್ಪ ವಿರುದ್ಧ ಪೋಕ್ಸೋ ಅಡಿ ಕೇಸ್ ದಾಖಲಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಆಗ್ರಹ ಮಾಡುತ್ತಿದ್ದಾರೆ. ಯಾದಗಿರಿ ಬಾಲ ಮಂದಿರದಲ್ಲಿ ಇರುವ ಅಪ್ರಾಪ್ತೆ ಜೊತೆಗೆ ಆಪ್ತ ಸಮಾಲೋಚನೆ ಮಾಡಲಾಗಿದೆ. ಅಪ್ರಾಪ್ತೆಯ ಮಾಹಿತಿ ಪ್ರಕಾರ ಪತಿ ತಾತಪ್ಪ ದೈಹಿಕ ಸಂಪರ್ಕ ಮಾಡಿದ್ದಾನೆ. ಪೋಕ್ಸೋ ಕಾಯ್ದೆಯ 4 ಮತ್ತು 6ರ ಉಲ್ಲಂಘನೆ ಆಗಿದೆ ಎಂದು ತಿಳಿದುಬಂದಿದೆ.
ಅಪ್ರಾಪ್ತೆಗೆ ಒಲ್ಲದ ಮನಸ್ಸಿನಿಂದ ವಿವಾಹ ಮಾಡಿದ್ದು, ರಾಯಚೂರಿನ ಪೊಲೀಸ್ ಅಧಿಕಾರಿಗಳು ಕೇವಲ ಬಾಲ ವಿವಾಹ ಕಾಯ್ದೆ ಅಡಿ ಮಾತ್ರ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಇದರಿಂದ ಮಕ್ಕಳ ಆಯೋಗಕ್ಕೆ ಬೇಸರ ಆಗುತ್ತಿದೆ. ಪ್ರಕರಣ ದಾಖಲಾದ ಕೂಡಲೇ ಮಹಿಳಾ ಪೊಲೀಸ್ ಅಧಿಕಾರಿಗಳು ತನಿಖೆ ಶುರು ಮಾಡಬೇಕು. ಆದರೆ, ಪ್ರಕರಣ ದಾಖಲಾಗಿ 24 ಗಂಟೆಗಳು ಆಗಿವೆ. ಆದರೂ ಯಾವುದೇ ತನಿಖೆಯನ್ನು ಶುರು ಮಾಡಿಲ್ಲ.
ಆ ಅಪ್ರಾಪ್ತೆಗೆ ಸಕಾಲದಲ್ಲಿ ನ್ಯಾಯ ಒದಗಿಸಬೇಕಾಗಿದೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಯೋಗ ಹಾಗೂ ಪೊಲೀಸ್ ಇಲಾಖೆ ಆದ್ಯ ಕರ್ತವ್ಯವಾಗಿದೆ. ಸಂಬಂಧಪಟ್ಟವರು ಕೂಡಲೇ ಕಾರ್ಯ ಪ್ರವೃತರಾಗಿ ಕೋರ್ಟ್ ಪರವಾನಿಗೆ ತೆಗೆದುಕೊಂಡು ಪೋಕ್ಸೋ ಕಾಯ್ದೆ 2012, ಜೆಜೆ ಕಾಯ್ದೆ, ಬಿಎನ್ ಎಸ್ ಕಾಯ್ದೆ ಅಡಿ ಕೇಸ್ ಹಾಕಿ ಕೋರ್ಟ್ ಗೆ ಸಲ್ಲಿಸಲು ಮುಂದಾಗಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಆಗ್ರಹ ಮಾಡಿದ್ದಾರೆ.