- Home
- Viral News
- Birthday ದಿನ ಕೇಕ್ ಕತ್ತರಿಸಬೇಕಿದ್ದ ಮುಂಬೈನ ಈ ಸಿಇಒ 90 ಗಂಟೆ ಊಟವನ್ನೇ ಮಾಡಲಿಲ್ಲ! ಅಸಲಿ ಕಾರಣವೇನು?
Birthday ದಿನ ಕೇಕ್ ಕತ್ತರಿಸಬೇಕಿದ್ದ ಮುಂಬೈನ ಈ ಸಿಇಒ 90 ಗಂಟೆ ಊಟವನ್ನೇ ಮಾಡಲಿಲ್ಲ! ಅಸಲಿ ಕಾರಣವೇನು?
ಬರ್ತಡೇ ಎಂದರೆ ಇತ್ತೀಚೆಗೆ ಸಾಮಾನ್ಯ ಜನರು ಕೂಡ ಕೇಕ್ ಕತ್ತರಿಸಿ ಪಾರ್ಟಿ ಮಾಡ್ತಾರೆ. ಅಂತಾದ್ರಲ್ಲಿ ಮುಂಬೈನ ಖ್ಯಾತ ಉದ್ಯಮಿಯೊಬ್ಬರು ತಮ್ಮ ಬರ್ತಡೇ ದಿನವೇ ಕೇಕ್, ಪಾರ್ಟಿ ಇಲ್ಲದೆ 90 ಗಂಟೆ ಉಪವಾಸ ಮಾಡಿ ಎಲ್ಲರನ್ನೂ ಅಚ್ಚರಿ ಮೂಡಿಸಿದ್ದಾರೆ. ಉಪವಾಸ ಮಾಡಲು ಅಸಲಿ ಕಾರಣವೇನು ಗೊತ್ತಾ?

ಹುಟ್ಟುಹಬ್ಬದಂದು ಕಠಿಣ ಸವಾಲು ಸ್ವೀಕರಿಸಿದ ಮುಂಬೈ ಸಿಇಒ
ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬವೆಂದರೆ ಇಡೀ ದಿನ ಪಾರ್ಟಿ ಮೂಡ್‌ನಲ್ಲಿರ್ತಾರೆ. ದುಬಾರಿ ಹೋಟೆಲ್‌ಗಳು ಬುಕ್ ಮಾಡಿ ಗೆಳೆಯ ಗೆಳತಿಯರನ್ನ ಇನ್ವಿಟ್ ಮಾಡಿ ತಿಂದುಂಡು ಎಂಜಾಯ್ ಮಾಡ್ತಾರೆ. ಕೆಲವರು ಬರ್ತಡೇಗೆ ಪ್ರವಾಸಕ್ಕೆ ಹೊರಡುತ್ತಾರೆ. ಬರ್ತಡೇ ದಿನ ಯಾರಾದರೂ ಉಪವಾಸ ಮಾಡುತ್ತಿದ್ದೇನೆ ಎಂದರೆ ಹೇಗಿರುತ್ತೆ? 'ಲೋ ಮಚ್ಚಾ ಬರ್ತಡೇ ಅಂದ್ರೇನೆ ಪಾರ್ಟಿ ಕಣೋ, ಇವನೊಳ್ಳೆ ಉಪವಾಸ ಮಾಡ್ತಾನೇ' ಅಂತಾ ಎಷ್ಟು ಜನ ಗೆಳೆಯರು ಹಂಗಿಸಲಿಕ್ಕಿಲ್ಲ? ಹೌದು ಹುಟ್ಟುಹಬ್ಬ ಎಂದರೆ ಪಾರ್ಟಿ!
ಆದರೆ ಇದಕ್ಕೆ ತದ್ವಿರುದ್ಧವಾಗಿ ಇಲ್ಲೊಬ್ಬ ವ್ಯಕ್ತಿ ತನ್ನ ಹುಟ್ಟುಹಬ್ಬದ ದಿನದಂದು 92 ಗಂಟೆಗಳ ಕಾಲ ಉಪವಾಸ ಮಾಡಿ ಎಲ್ಲರನ್ನೂ ಅಚ್ಚರಿ ಪಡುವಂತೆ ಮಾಡಿದ್ದಾನೆ. ಅಂದಹಾಗೆ ಈ ವ್ಯಕ್ತಿಯೇನೂ ಸಾಮಾನ್ಯನಲ್ಲ, ದೊಡ್ಡ ಕಂಪನಿಯೊಂದರ ಸಿಇಒ! ಸಿಇಒ ಎಂದರೆ ಕೇಳಬೇಕೆ? ಬರ್ತಡೇಗೆ ಹಿಂದಿನ ದಿನವೇ ಪಾರ್ಟಿಗೆ ಸಿದ್ಧತೆ ನಡೆದಿರುತ್ತೆ. ಅಂತಾದ್ರಲ್ಲಿ ಬರ್ತಡೇ ದಿನ ಉಪವಾಸ ಮಾಡೋದಂದ್ರೇನು?
ಮುಂಬೈನ ಖ್ಯಾ ಉದ್ಯಮಿ ಬರ್ತಡೇ ದಿನವೇ 90 ಗಂಟೆ ಉಪವಾಸ!
ಹೌದು. ಆದರೂ ಮುಂಬೈನ ಈ ಖ್ಯಾತ ಉದ್ಯಮಿ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಎಲ್ಲರಿಗಿಂತ ವಿಭಿನ್ನವಾಗಿ ಆಚರಿಸಿದ್ದಾರೆ. ಅಂದರೆ ಬರ್ತಡೇ ದಿನದಂದು ಕೇಕ್ ಕತ್ತರಿಸಿಲ್ಲ, ಪಾರ್ಟಿಯನ್ನೂ ಮಾಡಿಲ್ಲ. ಬದಲಿಗೆ ಬರೋಬ್ಬರಿ 90 ಗಂಟೆಗಳ ಕಾಲ, ಅಂದರೆ ಸುಮಾರು ನಾಲ್ಕು ದಿನಗಳವರೆಗೆ ಆಹಾರ ಸೇವಿಸದೆ ಉಪವಾಸ ಮಾಡಿದ್ದಾರೆ ಎಂದರೆ ನಂಬ್ತೀರಾ? ನಿಜ. ಅವರ ಈ ವಿಭಿನ್ನ ಪ್ರಯತ್ನ, ಅನುಭವದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೀಗ ಭಾರೀ ಚರ್ಚೆ ಹುಟ್ಟುಹಾಕಿದೆ. ಹುಟ್ಟುಹಬ್ಬದಂದು ಯಾರಾದರೂ ಇಂಥ ಕಷ್ಟಪಡ್ತಾರಾ? ಅಂತಾ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ
ಬರ್ತಡೇ ದಿನ ಉಪವಾಸ ಬಿದ್ದ ಈ ಉದ್ಯಮಿ ಯಾರು?
90 ಗಂಟೆಗಳ ಉಪವಾಸದ ಚಾಲೆಂಜ್ ಪೂರ್ಣಗೊಳಿಸಿದ ಉದ್ಯಮಿ ಅಭಿಷೇಕ್ ಅಗರ್ವಾಲ್ ಅಂತಾ. ಇವರು CreditVidya ಮತ್ತು Prefr ಕಂಪನಿಗಳ ಸಿಇಒ ಆಗಿದ್ದಾರೆ. ತಮ್ಮ ಉಪವಾಸದ ಅನುಭವವನ್ನು ಲಿಂಕ್ಡ್‌ಇನ್(LinkedIn)ನಲ್ಲಿ ಹಂಚಿಕೊಂಡಿದ್ದಾರೆ. ಪ್ರತಿವರ್ಷ ಅವರು ತಮ್ಮ ಬರ್ತಡೇಗೆ ಯಾವುದಾದರೂ ಒಂದು ಸಂಕಲ್ಪ ಅಥವಾ ಸವಾಲು ತೆಗೆದುಕೊಳ್ಳುವ ಅಭ್ಯಾಸ ರೂಢಿಸಿಕೊಂಡಿದ್ದಾರಂತೆ. ಅಂತೆಯೇ ಈ ಬಾರಿ ಹಸಿವು, ಮನೋಬಲದ ಪರೀಕ್ಷೆಗೆ ಮುಂದಾಗಿದ್ದದರು. ಆಹಾರ ಸೇವಿಸದೆ ಇದ್ದಾಗ ಮನುಷ್ಯನ ದೇಹ ಮತ್ತು ಮನಸ್ಸು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅವರ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಹಾಗಾದರೆ ನಾಲ್ಕು ದಿನಗಳ ಉಪವಾಸದ ಅನುಭವ ಹೇಗಿತ್ತು>
ಅಭಿಷೇಕ್ ಹೇಳುವ ಪ್ರಕಾರ, ಉಪವಾಸದ ಮೊದಲ ದಿನ ಅವರಿಗೆ ಯಾವುದೇ ದೊಡ್ಡ ತೊಂದರೆಯಾಗಲಿಲ್ಲ. ಆದರೆ ಎರಡನೇ ದಿನ ಬರುತ್ತಿದ್ದಂತೆ ಕಷ್ಟವಾಯ್ತಂತೆ. ಇದೇ ವೇಳೆ 'ನಾನ್ಯಾಕೆ ಇಂಥ ಕಠಿಣ ಸವಾಲು ಸ್ವೀಕರಿಸಿದೆ' ಎಂದು ಚಿಂತಿಸುವಂತೆ ಮಾಡಿತಂತೆ. ಆದರೆ ಸವಾಲು ಕೈಬಿಡುವ ಪ್ರಶ್ನೆಯೇ ಇಲ್ಲ. ಆದರೂ ಹಸಿವು ತಾಳಲಾರದೆ ಫುಡ್ ಆರ್ಡರ್ ಮಾಡಲು ಜೊಮ್ಯಾಟೊ (Zomato) ಆ್ಯಪ್ ಕೂಡ ಅವರಿಗೆ ಪದೇ ಪದೆ ನೆನಪಾಗುತ್ತಿತ್ತಂತೆ.
ಮೂರನೇ ದಿನವಂತೂ ಅವರ ಮನಸ್ಸಿನಲ್ಲಿ ಒಂದು ರೀತಿಯ ಶಾಂತಿ ನೆಲೆಸಿದ ಅನುಭವವಾಗಿದೆ. ನಾಲ್ಕನೇ ದಿನ ಅವರ ಹುಟ್ಟುಹಬ್ಬವಾಗಿತ್ತು! ನಾಲ್ಕನೇ ದಿನದ ಉಪವಾಸದಂದು ಅಂದರೆ ಬರ್ತಡೇ ದಿನದಂದು ಎಂಥ ಅನುಭವ ಎಂದರೆ ಕಳೆದ ಹಲವು ತಿಂಗಳುಗಳಿಗೆ ಹೋಲಿಸಿದರೆ ಮನಸ್ಸು ಅತ್ಯಂತ ಸ್ಪಷ್ಟವಾಗಿ, ಶಾಂತವಾಗಿ ಇತ್ತು ಎಂದು ಅಭಿಷೇಕ್ ಬರೆದುಕೊಡಿದ್ದಾರೆ.
90 ಗಂಟೆಗಳ ಉಪವಾಸದ ಬಳಿಕ ಸೂಪರ್‌ಹೀರೋ ಅನುಭವ!
90 ಗಂಟೆಗಳ ಈ ಕಠಿಣ ಸವಾಲನ್ನು ಪೂರ್ಣಗೊಳಿಸಿದ ಬಳಿಕ ಅಭಿಷೇಕ್ ಅವರಿಗೆ ಮನುಷ್ಯನ ದೇಹ ಮತ್ತು ಮನಸ್ಸು ತಾವು ಊಹಿಸುವುದಕ್ಕಿಂತಲೂ ಹೆಚ್ಚಿನ ಕಷ್ಟವನ್ನು ಸಹಿಸಿಕೊಳ್ಳಬಲ್ಲದು ಎಂಬ ಅನುಭವಕ್ಕೆ ಬಂದಿದೆ. ಸವಾಲು ಮುಗಿದ ಬಳಿಕ ತಾವು ಹೆಚ್ಚು ಬಲಶಾಲಿಯಾದಂತೆ, ಸೂಪರ್‌ಹೀರೋನಂತೆ ಭಾಸವಾಯಿತು ಎಂದು ಅವರು ಹೇಳಿದ್ದಾರೆ. ಈ ಉಪವಾಸದ ಅವಧಿಯಲ್ಲಿ ವ್ಯಾಯಾಮ ಮಾಡುತ್ತಿರುವ ಕೆಲವು ಫೋಟೋಗಳನ್ನೂ ಅವರು ಹಂಚಿಕೊಂಡಿದ್ದಾರೆ.
ನೆಟಿಜನ್ ವಿಭಿನ್ನ ಪ್ರತಿಕ್ರಿಯೆ
ಇನ್ನು ಇಂಥ ವಿಷಯಳಿಗೆ ನೆಟಿಜನ್ ಸುಮ್ಮನೆ ಇರುತ್ತಾರೆಯೇ? ಅಂತೆಯೇ ಅಭಿಷೇಕ್ ಅಗರ್‌ವಾಲ್ ಅವರ ಉಪವಾಸದ ಕಠಿಣ ಸವಾಲು ಬಗ್ಗೆ ಅನೇಕರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಅವರ ಮನೋಬಲ ಮತ್ತು ದೃಢಸಂಕಲ್ಪವನ್ನು ಮೆಚ್ಚಿಕೊಂಡಿದ್ದಾರೆ. ಇಂದಿನ ಕಾಲದಲ್ಲಿ ಸ್ವತಃ ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುವುದು ದೊಡ್ಡ ಅನುಭವ. ಇದರಿಂದ ನಮ್ಮ ಸಾಮರ್ಥ್ಯದ ಬಗ್ಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು ಎಂದು ಒಬ್ಬ ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಕೆಲವರು ದೇಹದ ಮಿತಿಗಳನ್ನು ಅರಿತುಕೊಳ್ಳುವುದು ಒಳ್ಳೆಯದೇ ಆದರೂ ದೇಹದ ನೈಜ ಅಗತ್ಯಗಳ ಬಗ್ಗೆಯೂ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು ತಮ್ಮ ಹಳೆಯ ಅನುಭವವನ್ನು ಹಂಚಿಕೊಂಡಿದ್ದು, ತಾವು ಕೂಡ ಹಿಂದೆ ಎಂಟು ದಿನಗಳ ಕಾಲ ಉಪವಾಸ ಮಾಡಿದ್ದಾಗಿ ತಿಳಿಸಿದ್ದಾರೆ. ಇದರಿಂದ ತಮಗೆ ಮಾನಸಿಕ ಸ್ಪಷ್ಟತೆ ಮತ್ತು ಆಧ್ಯಾತ್ಮಿಕ ಶಾಂತಿ ದೊರಕಿತ್ತು ಎಂದು ಅವರು ಹೇಳಿದ್ದಾರೆ.
ಗಮನಿಸಿ: ದೀರ್ಘಕಾಲ ಉಪವಾಸ ಮಾಡುವುದು ಎಲ್ಲರಿಗೂ ಸುರಕ್ಷಿತವಲ್ಲ. ಇಂತಹ ಪ್ರಯತ್ನಗಳನ್ನು ವೈದ್ಯಕೀಯ ಸಲಹೆ ಇಲ್ಲದೆ ಮಾಡುವುದು ಅಪಾಯಕಾರಿ

